ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿಕಟ್ಟದ ಟೊಮೆಟೊ: ರೈತರ ಆತಂಕ

Last Updated 25 ನವೆಂಬರ್ 2017, 8:57 IST
ಅಕ್ಷರ ಗಾತ್ರ

ಕುಷ್ಟಗಿ: ಸಮೀಪದ ಹಿರೇಅರಳಿಹಳ್ಳಿ ಗ್ರಾಮದಲ್ಲಿ ಟೊಮೊಟೊ ಬೀಜೋತ್ಪಾದನೆ ಕೈಗೊಂಡ ರೈತರು ಈಗ ಗಿಡಗಳಲ್ಲಿ ಕಾಯಿಗಳಿಲ್ಲದೆ ಕೈಸುಟ್ಟುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮಾನ್ಸಾಂಟೊ ಕಂಪೆನಿ ಈ ಭಾಗದಲ್ಲಿ ವಿವಿಧ ತರಕಾರಿ ಬೀಜಗಳ ಉತ್ಪಾದನೆ ತಾಕುಗಳನ್ನು ನೀಡಿದ್ದು ಅವುಗಳಲ್ಲಿ ಟೊಮೆಟೊ ಕೂಡ ಒಂದಾಗಿದ್ದು ಗ್ರಾಮದ ಯಲ್ಲಪ್ಪ ಕುರುಬರ ಅವರು ಅಂದಾಜು 10 ಗುಂಟೆಯಲ್ಲಿ ನೆರಳುಪರದೆ, ಹನಿ ನೀರಾವರಿ ವ್ಯವಸ್ಥೆ ಒಳಗೊಂಡಂತೆ ವೈಜ್ಞಾನಿಕ ರೀತಿಯಲ್ಲಿ ಟೊಮೆಟೊ ಬೀಜೋತ್ಪಾದನೆ ಕೈಗೊಂಡಿದ್ದಾರೆ. ಆದರೆ, ಗಿಡಗಳು ದಟ್ಟವಾಗಿ ಬೆಳೆದಿದ್ದರೂ ಕಾಯಿಕಟ್ಟದ ಕಾರಣ ಅವರು ಆತಂಕಗೊಂಡಿದ್ದಾರೆ.

‘ಕೂಲಿ ಕಾರ್ಮಿಕರು, ಗೊಬ್ಬರ, ಕ್ರಿಮಿನಾಶಕ, ಹನಿ ನೀರಾವರಿ ಸೇರಿದಂತೆ ಬೀಜೋತ್ಪಾದನೆಗೆ ₹70,000 ಖರ್ಚು ತಗುಲಿದ್ದು ಕನಿಷ್ಠ ₹ 2ರಿಂದ 3 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದೆವು. ಆದರೆ ಗಿಡಗಳಲ್ಲಿ ಕಾಯಿಗಳೇ ಇಲ್ಲದಿರುವುದರಿಂದ ಮಾಡಿದ ಖರ್ಚು ಕೂಡ ಮೈಮೇಲೆ ಬಿದ್ದಿದೆ’ ಎಂದು ಅವರ ಪುತ್ರ ಮಲ್ಲಪ್ಪ ಕುರುಬರ ಹೇಳಿದರು.

‘ಕಂಪೆನಿ ಸಿಬ್ಬಂದಿ ಕಾಲಕಾಲಕ್ಕೆ ನೀಡಿದ ಸಲಹೆ ಸೂಚನೆಗಳಂತೆ ಈ ರೈತ ಬೇಸಾಯ ಕ್ರಮ ಕೈಗೊಂಡಿದ್ದಾರೆ. ಪ್ರತಿ ಎರಡು ದಿನಕ್ಕೊಮ್ಮೆ ಬೀಜೋತ್ಪಾದನೆ ತಾಕಿಗೆ ಭೇಟಿ ನೀಡಿದ್ದ ಕಂಪೆನಿಯ ಸಿಬ್ಬಂದಿ, ಈಗ ಗಿಡಗಳು ಕಾಯಿಕಟ್ಟಲಿಲ್ಲ ಎಂಬುದು ಬೆಳಕಿಗೆ ಬರುತ್ತಿದ್ದಂತೆ ಇತ್ತ ಮುಖ ಮಾಡಿಲ್ಲ. ಲಾಭ ಬೇಡ ಮಾಡಿದ ಖರ್ಚನ್ನಾದರೂ ಕೊಡಿ ಎಂದು ಮನವಿ ಮಾಡಿದರೆ ‘ಹಾನಿಯಾದರೆ ನಮಗೆ ಸಂಬಂಧವಿಲ್ಲ ’ ಎಂದು ಕೈಚೆಲ್ಲಿದ್ದಾರೆ ಎಂದು ಮಲ್ಲಪ್ಪ ಆರೋಪಿಸಿದ್ದಾರೆ.

ಒಪ್ಪಂದ ರಹಿತ: ‘ಕೊಪ್ಪಳ ಜಿಲ್ಲೆಯಲ್ಲಿ ನೂರಾರು ಬೀಜೋತ್ಪಾದನೆ ತಾಕುಗಳನ್ನು ನಿರ್ವಹಿಸುತ್ತಿರುವ ಖಾಸಗಿ ಕಂಪೆನಿಗಳು ರೈತರೊಂದಿಗೆ ಯಾವುದೆ ರೀತಿಯ ಲಿಖಿತ ಒಪ್ಪಂದ ಮಾಡಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಾಗಿ ಬೆಳೆ ಕೈಕೊಟ್ಟಾಗ ರೈತರು ಕಾನೂನಾತ್ಮಕವಾಗಿ ಪರಿಹಾರ ಪಡೆಯುವುದಕ್ಕೆ ಯಾವುದೇ ಆಧಾರಗಳು ಇರುವುದಿಲ್ಲ. ಮೇಲಾಗಿ ಬಹುರಾಷ್ಟ್ರೀಯ ಕಂಪೆನಿಗಳ ಜೊತೆಗೆ ನ್ಯಾಯಾಲಯದಲ್ಲಿ ಹೋರಾಡುವಷ್ಟು ಶಕ್ತಿಯೂ ಇರುವುದಿಲ್ಲ. ರೈತರು ಈ ಬಗ್ಗೆ ಮೊದಲೇ ಎಚ್ಚರಿಕೆ ವಹಿಸಬೇಕು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಈ ಕುರಿತು ವಿವರಿಸಿದ ಮಾನ್ಸಾಂಟೊ ಕಂಪೆನಿಯ ಸಮನ್ವಯಾಧಿಕಾರಿ ಹನುಮೇಶ, ತಮ್ಮ ವ್ಯಾಪ್ತಿಯಲ್ಲಿ 120 ತಾಕುಗಳನ್ನು ನೀಡಲಾಗಿದ್ದು ಎಲ್ಲವೂ ಮಳೆಯಿಂದ ಕಾಯಿಕಟ್ಟಿಲ್ಲ ಎಂದರು. ಆದರೆ ತಳಿ ಯಾವುದು? ಎಂದು ಕೇಳಿದರೂ ಮಾಹಿತಿ ನೀಡಲಿಲ್ಲ. ಕಂಪೆನಿ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ತೋಟಗಾರಿಕೆ ಅಧಿಕಾರಿಗೆ ದೂರು ನೀಡುವುದಾಗಿ ಮಲ್ಲಪ್ಪ ಹೇಳಿದರು

* * 

ಈ ಪ್ರಕರಣ ಬೀಜೋತ್ಪಾದನೆ ಕಾಯ್ದೆ ಅಡಿ ಬರುತ್ತದೆ. ರೈತ ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ
ಕೃಷ್ಣ ಉಕ್ಕುಂದ
ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT