ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓ ಚಳಿಯೇ, ಬೇಗ ಬಾ!

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಟ್ಟದ ಮೇಲಿನ ರಟ್ಟಿನ ಡಬ್ಬಿಗಳಲ್ಲಿ ಬೆಚ್ಚಗೆ ಪವಡಿಸಿದ್ದ ಮಂಕಿ ಕ್ಯಾಪು, ಸ್ವೆಟರ್‌, ಕಂಬಳಿ, ರಗ್ಗು... ಎಲ್ಲವನ್ನೂ ಶರ್ಲಾಕ್‌ ಹೋಮ್ಸ್‌ನಂತೆ ಪತ್ತೆಮಾಡಿ ತೆಗೆದು ಮೂರು ವಾರಗಳೇ ಗತಿಸಿದವು. ಇದುವರೆಗೆ ಅವುಗಳನ್ನು ಬಳಸುವ ಪ್ರಸಂಗವೇ ಬಂದಿಲ್ಲ ನೋಡಿ. ಅಲ್ಲಾ, ದೂಳಿನ ಹಾಸಿಗೆ ಮೇಲೆ ಕುಕ್ಕರಗಾಲಲ್ಲಿ ಕುಳಿತು, ಜೇಡರಬಲೆ ಕತ್ತರಿಸಿ, ಶೋಧಕ್ಕಾಗಿ ಸುರಿಸಿದ ಬೆವರಿಗೆ ಬೆಲೆಯೇ ಇಲ್ಲವೆ? ಈ ಪುಟ್ಟ ಮನೆ ವಾರ್ತೆಯನ್ನೇನೋ ನೀವು ಅಲಕ್ಷ್ಯ ಮಾಡಬಹುದು. ಚಳಿಯ ಸುಳಿವೇ ಇಲ್ಲದಿದ್ದರೂ ನಮ್ಮ ವಿಧಾನಮಂಡಲದ ಚಳಿಗಾಲದ ಅಧಿವೇಶನ ಅದಾಗಲೇ ಮುಗಿದುಬಿಟ್ಟಿತಲ್ಲ! ಅದಕ್ಕೆ ಚಳಿಗಾಲದ ಬದಲು ‘ತ್ರಿಶಂಕು ಕಾಲದ ಅಧಿವೇಶನ’ ಎಂದು ಹೆಸರಿಟ್ಟಿದ್ದರೆ ಚೆನ್ನಾಗಿತ್ತು. ಛೇ, ನಮ್ಮ ಆಡಳಿತ ವ್ಯವಸ್ಥೆ ಇನ್ನೂ ಕಾಂಟೆಂಪರರಿ ಆಗಿಲ್ಲ ಬಿಡಿ.

ಇನ್ನೂ ಶೌಚಾಲಯ ಕ್ರಾಂತಿ ನಡೆಯದ ಕಾಲವದು. ನಮ್ಮೂರಿನಲ್ಲಿ ಬಹಿರ್ದೆಸೆಗೆ ಚೊಂಬು ಹಿಡಿದು ಹಳ್ಳಕ್ಕೆ ಹೋಗಬೇಕಿತ್ತು. ಎಷ್ಟೇ ಬೆಚ್ಚನೆ ಬಟ್ಟೆ ಧರಿಸಿ ಬಂದರೂ ಜಾಲಿ ಮರದ ಹಿಂದೆ ಬೆತ್ತಲಾಗಲೇಬೇಕಲ್ಲ? ಅಬ್ಬಬ್ಬಾ, ಹಲ್ಲು ಕಟಕಟ ಅನ್ನುವಂತಹ ಥಂಡಿ. ಆ ಚಳಿಗಾಲ, ಅಂತಹ ಥಂಡಿಯನ್ನು ಹಿಮಾಲಯದಿಂದ ಕಡ ತಂದಿರುತ್ತಿತ್ತೇನೋ. ಬಟ್ಟೆಯಿಂದ ಹೊರಬಂದ ದೇಹದ ಭಾಗವೆಲ್ಲ ಮರಗಟ್ಟಿದಂತೆ ಭಾಸ. ಚೊಂಬಿನಲ್ಲಿ ತಂದಿದ್ದ ಬಿಸಿನೀರು ಸಹ ತಣ್ಣಗಾಗಿರುತ್ತಿತ್ತು. ಚಳಿ ಹಿಡಿದ ದೇಹಕ್ಕೆ ಒಂದಿಷ್ಟು ಸಾಂತ್ವನ ಹೇಳುತ್ತಿದ್ದುದು ಮನೆ ದಾರಿಯುದ್ದಕ್ಕೂ ಸಿಗುತ್ತಿದ್ದ ಫೈರ್‌ ಕ್ಯಾಂಪ್‌ಗಳು ಮಾತ್ರ.

ನಮ್ಮೂರಿನ ವಿಷಯವನ್ನು ಸದ್ಯ ಪಕ್ಕಕ್ಕಿಡೋಣ. ಹಿಮವನ್ನೇ ನದಿಯಾಗಿ ಹರಿಸುವ ಹಿಮಾಲಯದ ‘ಮುದ್ದಿನ ಮಗಳು’ ಕೊಲ್ಹಾಯ್‌ ಕಣಿವೆಯಲ್ಲಿ ಚಳಿಗಾಲದ ಸನ್ನಿವೇಶ ಹೇಗಿದ್ದೀತು ಎಂದು ಯೋಚಿಸೋಣ. ಹಿಮಚ್ಛಾದಿತ ಈ ಬೆಟ್ಟಗಳ ಶ್ರೇಣಿಯಲ್ಲಿ ಇಂಚಿಂಚೂ ಬಿಡದಂತೆ ಚಾರಣ ಮಾಡಿರುವ ಹಿರಿಯ ಚಿತ್ರ ನಿರ್ಮಾಪಕ ಎಂ. ಭಕ್ತವತ್ಸಲ ಅವರ ಮುಂದೊಮ್ಮೆ ಈ ಪ್ರಶ್ನೆಯನ್ನು ಇಟ್ಟಿದ್ದೆ.

‘ಚಳಿಗಾಲದ ಆ ನೋಟವನ್ನು ಕಣ್ತುಂಬಿಕೊಳ್ಳುವ ಎಷ್ಟೇ ಉತ್ಕಟ ಆಕಾಂಕ್ಷೆಯಿದ್ದರೂ ಅಂತಹ ಸಾಹಸಕ್ಕೆ ಕೈಹಾಕಲು ಸಾಧ್ಯವಿಲ್ಲ. ಭೂಮ್ಯಂತರಿಕ್ಷಗಳ ಮಧ್ಯೆ ‘ಧೋ...’ ಎಂದು ಸುರಿಯುವ ಹಿಮದ ಹೊಡೆತಕ್ಕೆ ಅಲ್ಲಿನ ಪರ್ವತಗಳು ಗಡಗಡ ನಡುಗಿ ತಾವೇ ಅದೃಶ್ಯ ಆಗಿಬಿಡುತ್ತವೆ. ಇನ್ನು ರಕ್ತಹೆಪ್ಪುಗಟ್ಟಿಸುವ ಆ ಚಳಿಯಲ್ಲಿ ಸಿಕ್ಕು ಒದ್ದಾಡುವ ನರಮನುಷ್ಯರಿಗೆ ಅವುಗಳು ಹೇಗೆತಾನೆ ಸ್ಪಂದಿಸಬೇಕು’ ಎಂದು ಕೇಳಿದ್ದರು. ಕರುಳಿಗೂ ಲಗ್ಗೆಯಿಟ್ಟು ನಡುಗಿಸುವ ಚಳಿ ಅಲ್ಲಿಯದಂತೆ.

ಐದನೇ ಕ್ಲಾಸ್‌ನಲ್ಲಿ ಓದುತ್ತಿದ್ದಾಗ ಎಂದು ನೆನಪು. ಶಿಶಿರ ಋತುವಿನಲ್ಲೇ ಶಾಲೆಯಿಂದ ಹಂಪಿ ಪ್ರವಾಸಕ್ಕೆ ಕರೆದೊಯ್ದಿದ್ದರು. ನಡುಗಿಸುತ್ತಿದ್ದ ನಸುಕಿನಲ್ಲಿ ನಮ್ಮನ್ನೆಲ್ಲ ತುಂಗಭದ್ರಾ ತೀರಕ್ಕೆ ಕರೆತಂದಿದ್ದ ಮೇಷ್ಟ್ರು, ‘ಥಂಡಿ ಜಾಸ್ತಿ ಐತಿ, ಖರೆ. ಆದ್ರ ನೀರೊಳಗ ಒಮ್ಮೆ ಮುಳುಗು ಹಾಕಿನೋಡ್ರಿ, ಅದೇ ಓಡಿ ಹೊಕ್ಕೈತಿ’ ಎಂದು ಹುರಿದುಂಬಿಸಿದ್ದರು. ನಾವೆಲ್ಲ ಅಂಗಿ ಬಿಚ್ಚಿ, ಓಡಿಹೋಗಿ ನೀರಿಗೆ ಜಿಗಿದಿದ್ದೆವು. ಮೇಷ್ಟ್ರು ಹೇಳಿದ ಮಾತು ನಿಜವಾಗಿತ್ತು. ಕೊರೆಯುವ ಚಳಿಯಲ್ಲೂ ನದಿಯೊಳಗಿನ ನೀರು ಬೆಚ್ಚಗಿತ್ತು!

ಉತ್ತರ ಕರ್ನಾಟಕದ ಹಲವು ಗ್ರಾಮಗಳಲ್ಲಿ ಈ ಚಳಿಗಾಲದಲ್ಲೇ ಹನುಮಂತ ದೇವರಿಗೆ ಕಾರ್ತಿಕ ಸೇವೆ. ಮದುವೆಯನ್ನೇ ಆಗದ ಹನುಮಪ್ಪನನ್ನು ಬೆಚ್ಚಗಿಡಲು ಆತನ ಮೈಗೆ ಭಕ್ತರಿಂದ ರಂಜಕದ (ಕೆಂಪು ಮೆಣಸಿನಕಾಯಿ ಚಟ್ನಿ) ಲೇಪನ! ಹನುಮಪ್ಪನ ದೇಹವನ್ನು ಬೆಚ್ಚಗಾಗಿಸಿ ಬಂದ ಆ ಚಟ್ನಿಯೇ ಪೂಜೆ ಮುಗಿದ ಮೇಲೆ ಊಟಕ್ಕೆ ಕುಳಿತ ಭಕ್ತರಿಗೆ ಪ್ರಸಾದ. ಹುಬ್ಬಳ್ಳಿ ಬಳಿಯಿರುವ ಬುಡರಸಿಂಗಿ ಗುಡಿಯಲ್ಲಿ ಹಾಗೆ ಪ್ರಸಾದದ ರೂಪವಾಗಿ ಸಿಕ್ಕ ರಂಜಕ ತಿಂದು, ಖಾರ ಸಹಿಸಲಾಗದೆ ಕಣ್ಣೀರು ಸುರಿಸಿದ ನೆನಪು.

ಹಳ್ಳಿಗಳಲ್ಲಿ ಭಟ್ಟರ ಮನೆಗಳ ಹುಡುಗರು ಕಾರ್ತಿಕ ಪೂಜೆಗಾಗಿ ಒದ್ದೆ ಪಂಚೆಯಲ್ಲಿ ನಡುಗುತ್ತಾ ಕೆರೆಯಿಂದ ಮಡಿನೀರು ತರುತ್ತಿದ್ದ ದೃಶ್ಯಗಳು ಈಗೀಗ ನಾಪತ್ತೆ. ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆ ತಣ್ಣೀರು ಸ್ನಾನಮಾಡಿ, ಗುಡಿ, ಗುಡಿ ಸುತ್ತುತ್ತಿದ್ದ ಅಯ್ಯಪ್ಪ ಸ್ವಾಮಿಗಳ ಸಂಖ್ಯೆಯೂ ಕಡಿಮೆ ಆಗಿಬಿಟ್ಟಿದೆಯಲ್ಲ? ಎಲ್ಲಾ ಕಾಲನ ಮಹಿಮೆ!

ದಕ್ಷಿಣ ಭಾರತದಲ್ಲಿ ನರಭಕ್ಷಕ ಹುಲಿಗಳ ಬೇಟೆಯಾಡಿದವರು ಕೆನೆತ್‌ ಅಂಡರ್ಸನ್‌. ನರಭಕ್ಷಕಗಳ ಬೇಟೆಗಾಗಿ ಚಳಿಗಾಲದಲ್ಲೂ ಅವರು ಕಾಡಿನಲ್ಲಿ ಕಟ್ಟಿದ್ದ ಮಚಾನದ ಮೇಲೆ ಇಡೀ ರಾತ್ರಿ ಕಳೆಯುತ್ತಿದ್ದರು. ಬಕೇಟ್‌ ಗಾತ್ರದ ಕಿತ್ತಲಿ ತುಂಬಾ ಚಹಾ ಒಯ್ದು ಗಂಟೆಗೊಮ್ಮೆ ಕುಡಿಯುತ್ತಿದ್ದರು. ‘ಚಹಾ ಎಂಬ ಆಪದ್ಬಾಂಧವ ಇಲ್ಲದಿದ್ದರೆ ಚಳಿರಾತ್ರಿಯನ್ನು ದೂಡುವುದೇ ಕಷ್ಟವಾಗಿತ್ತು’ ಎಂಬ ಮಾತು ಅವರು ಕೃತಿಗಳಲ್ಲಿ ಮತ್ತೆ ಮತ್ತೆ ಬರುತ್ತದೆ. ಕೆನೆತ್‌ ಅವರ ಕಾಲದಷ್ಟು ಹಿಂದಕ್ಕೆ ಹೋಗುವುದು ಬೇಡ. ಚಳಿ ಶುರುವಾದೊಡನೆ ಕಾಫಿ– ಚಹಾದ ಪ್ರಮಾಣ ನಮ್ಮ ಮನೆಯಲ್ಲೇ ಹೆಚ್ಚಾಗುವುದಲ್ಲವೆ? ಅಂದಹಾಗೆ, ಚಳಿ ಎಂದರೆ ಗುಂಡುಪ್ರಿಯರಿಗೂ ಆಹ್ಲಾದಕರ ವಾತಾವರಣ. ಹೆಚ್ಚಿನ ಪೆಗ್‌ಗಳಿಗೆ ಬೇಡಿಕೆ ಸಲ್ಲಿಸುವ ಸಮಯವಿದು. ಈ ಅವಧಿಯಲ್ಲಿ ಮದ್ಯದ ಜಿಎಸ್‌ಟಿ ದರವನ್ನು ಕಡಿತಗೊಳಿಸುವ ಮೂಲಕ ಸರ್ಕಾರ ಕೂಡ ಜನರ ಚಳಿ ಓಡಿಸುವ ಕೈಂಕರ್ಯದಲ್ಲಿ ಪಾಲ್ಗೊಳ್ಳಬೇಕಿರುವುದು ಧರ್ಮವಲ್ಲವೆ?

ಕುಡಿಯುವ ವಿಚಾರ ಬಂದಾಗ ತಿನ್ನುವ ವಿಷಯವೂ ಅದರ ಬೆನ್ನಹಿಂದೆಯೇ ಇರುತ್ತದೆ. ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ–ಸಂಡಿಗೆಗಳು ಹೆಚ್ಚಾಗಿ ಖಾಲಿಯಾಗುವ ಕಾಲವಿದು. ಮಿರ್ಚಿ–ಬಜಿ, ಖಾರ, ಕುರುಕಲು ತಿಂಡಿಗಳಿಗೂ ಈ ಸಮಯದಲ್ಲಿ ಎಲ್ಲಿಲ್ಲದ ಬೇಡಿಕೆ. ಹುಗ್ಗಿ–ಗೊಜ್ಜು ಚಳಿಗಾಲದ ಬಲು ವಿಶೇಷ ಊಟ. ಏಕೆಂದರೆ, ಚಳಿ ಹಿಡಿದ ದೇಹವನ್ನು ಬೆಚ್ಚಗಾಗಿಸುವ ಸಾಮರ್ಥ್ಯ ಅದಕ್ಕಿದೆ. ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎನ್ನುವುದೊಂದು ಗಾದೆಮಾತು. ನಮ್ಮ ಯುವಪೀಳಿಗೆ ಈ ಗಾದೆ ಮಾತನ್ನು ಹೇಗೆ ಅರ್ಥಮಾಡಿಕೊಂಡಿದೆ ಎಂದರೆ ಗಡಗಡ ನಡುಗಿಸುವಂತಹ ಚಳಿ ರಾತ್ರಿಯಲ್ಲಿ ಐಸ್‌ಕ್ರೀಂ ತಿನ್ನುತ್ತದೆ. ಆದ್ದರಿಂದಲೇ ಬೇಸಿಗೆಯಂತೆ ಚಳಿಗಾಲದಲ್ಲೂ ಐಸ್‌ಕ್ರೀಂ ಮಾರಾಟ ಹೆಚ್ಚಿರುತ್ತದಂತೆ!

ಶಿಶಿರವನ್ನು ಹಿಂಬಾಲಿಸಿಕೊಂಡು ಬರುವ ಈ ಮೂಡಣ (ಮೂಢ!) ಗಾಳಿ ಮುಖ–ಮೈ, ಕೈ–ಕಾಲು ನೋಡದೆ ಚರ್ಮವನ್ನು ಕೊರೆಯುತ್ತದಲ್ಲ. ಅದರ ಈ ಸ್ವಭಾವವೊಂದು ಸರಿಯಿಲ್ಲ ನೋಡಿ. ವ್ಯಾಸ್ಲಿನ್‌ ಎಷ್ಟು ಬಡಿದರೂ ಒಡೆದ ಚರ್ಮದಿಂದ ಕಣ್ಣೀರು ಬರಿಸುವಂತಹ ನೋವು ತಪ್ಪಿದ್ದಲ್ಲ. ಚಳಿರಾಯನಿಗೆ ಕ್ಯಾರೆ ಎನ್ನದವರೆಂದರೆ ಅದು ಹುಡುಗಿಯರು ಮಾತ್ರ. ಏಕೆಂದರೆ, ಗಡಗಡ ನಡುಗಿಸುವಂತಹ ವಾತಾವರಣ ಇದ್ದರೂ ತೋಳಿಲ್ಲದ ಬಟ್ಟೆ ಧರಿಸಲು ಅವರು ಹಿಂಜರಿಯುವುದಿಲ್ಲ. ಕುಳಿರ್ಗಾಳಿಗೆ ಒಂದಿನಿತೂ ತಡೆಯನ್ನೇ ಒಡ್ಡದೆ ಮೈತುಂಬಾ ತಣ್ಣನೆಯ ಗಾಳಿ ಹರಿದಾಡಲು ಬಿಡುವಂತಹ ಫ್ಯಾಷನ್‌ ಧಿರಿಸು ಬೇರೆ. ಸ್ವತಃ ಚಳಿಗೆ ಮೈಯೊಡ್ಡಿದರೂ ಹುಡುಗರನ್ನು ಬೆಚ್ಚಗಿಡಲು ಇದೇ ಉತ್ತಮ ಹಾದಿ ಎಂದು ಹುಡುಗಿಯರು ಭಾವಿಸಿರಬಹುದೇ?

ಚಳಿಗಾಲದಲ್ಲೇ ಬರುವ ಕಾರ್ತಿಕ ಮಾಸದಲ್ಲಿ ಮದುವೆಗಳೂ ಹೆಚ್ಚು. ಹಿಂದಿನ ಹಿರಿಯರು ಸ್ವಾನುಭವದಿಂದ ಕಲಿತ ಪಾಠದಿಂದ ಇದೇ ಅವಧಿಯಲ್ಲಿ ಹೆಚ್ಚಿನ ಮುಹೂರ್ತಗಳನ್ನು ಇಟ್ಟಿರುವರೇನೋ? ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಮದುವೆ ಇಟ್ಟುಕೊಂಡು ಆಮಂತ್ರಣ ತರುವವರಿಗೆ ಹಿರಿಯ ಸಹೋದ್ಯೋಗಿಯೊಬ್ಬರು, ‘ಒಳ್ಳೆಯ ಟೈಮಿಗೆ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದೀರಿ’ ಎಂದು ಕಣ್ಣು ಮಿಟುಕಿಸುವುದುಂಟು.

ಚಳಿ ಹೆಚ್ಚಾದಾಗ ಮನಸ್ಸು ಕಾಮಕೇಳಿಯತ್ತ ಎಳೆಯುವುದಂತೆ. ಹಿಮ ಸುರಿಯುವ ಲಿಡ್ಡರ್‌ ಕಣಿವೆಯಲ್ಲಿ ಬಯಲಲ್ಲೇ ತಬ್ಬಿಕೊಂಡು ಮುತ್ತು ನೀಡುವ, ಒಂದೇ ಹಾಸಿಗೆ ಚೀಲದಲ್ಲಿ ಮಲಗುವ, ಯುವತಿಯರ ಸಾಂಗತ್ಯದಲ್ಲಿ ಮೈಮರೆಯುವ ಚಟುವಟಿಕೆಗಳಿಗೆ ಕೊನೆ–ಮೊದಲೇ ಇಲ್ಲ ಎನ್ನುವುದು ಭಕ್ತವತ್ಸಲ ಅವರಿಂದಲೇ ಸಿಕ್ಕ ಮಾಹಿತಿ. ಹೌದು, ದೂರದ ಹಿಮಾಲಯದ ಮಾತೇಕೆ; ನಮ್ಮ ಸುತ್ತಮುತ್ತಲಿನ ಸನ್ನಿವೇಶ ಹೇಗೆ ಎಂಬ ಪ್ರಶ್ನೆಯೇ? ಶ್‌... ಇಲ್ಲಿನ ಚಳಿಗಾಲದ ಗುಪ್ತ ಚಟುವಟಿಕೆಗಳ ಕುರಿತು ಬಹಿರಂಗ ಚರ್ಚೆ ನಿಷಿದ್ಧ!

***

ನಿನ್ನ ಹೆಸರೆತ್ತಿದೊಡನೆ ಇಂತಹ ನೂರಾರು ನೆನಪುಗಳು ಸಾಲುಗಟ್ಟಿ ನಿಲ್ಲುತ್ತವೆ. ತಣ್ಣನೆಯ ಗಾಳಿ ಕಿವಿಯ ಬಳಿ ಬಂದು ಏನೋ ಪಿಸುಗುಟ್ಟಂತೆ ಆಗುತ್ತದೆ. ಗತವೈಭವ ಕಣ್ಮುಂದೆ ನಿಲ್ಲುತ್ತದೆ. ವಿಶ್ವನಾಯಕರೆಲ್ಲ ಜತೆಯಾಗಿ ನಿಂತು ಹವಾಮಾನ ವೈಪರೀತ್ಯ ಸರಿಪಡಿಸುವ ಕೆಲಸ ಮಾಡುತ್ತಿದ್ದಾರಲ್ಲ. ನಿನಗೇಕೆ ಅದರ ಉಸಾಬರಿ? ಓ ಚಳಿಯೇ, ಈಗಾಗಲೇ ತಡವಾಗಿದೆ; ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬೇಗ ಬಾ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT