ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಂತರ ಇಲ್ಲದ ಕವಿಗೋಷ್ಠಿ

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಕಲಾಮಂದಿರದ ಪರ್ಯಾಯ ವೇದಿಕೆಯಲ್ಲಿ ನಡೆದ ’ಕವಿಗೋಷ್ಠಿ–3’ ವಿವಿಧ ಕಾರಣಗಳಿಂದ ಸಹೃದಯರ ಗಮನಸೆಳೆಯಿತು.

’ಕವಿಗೋಷ್ಠಿ–3’ ಎಂದು ಸಂಘಟಕರು ಕರೆದರೂ ಅದು ಸಮ್ಮೇಳನದಲ್ಲಿ ನಡೆದ ಮೊದಲ ಕವಿಗೋಷ್ಠಿ. ರಾಜ್ಯದ ವಿವಿಧ ಭಾಗಗಳ ಹಾಗೂ ಹೊರನಾಡಿನ 47 ಕವಿಗಳು ಗೋಷ್ಠಿಯಲ್ಲಿದ್ದರು. ಕವಿಗಳ ಸಂಖ್ಯೆ ಹೆಚ್ಚಾದುದರಿಂದ, ಗೋಷ್ಠಿಯನ್ನು ಎರಡು ಭಾಗಗಳಲ್ಲಿ ನಡೆಸಲಾಯಿತು. ಅರ್ಧದಷ್ಟು ಕವಿಗಳು ಮೊದಲ ಭಾಗದಲ್ಲಿ ವೇದಿಕೆಯನ್ನು ಅಲಂಕರಿಸಿದರೆ, ಉಳಿದವರು ಎರಡನೇ ಭಾಗದಲ್ಲಿ ವೇದಿಕೆಯೇರಿದರು. ಸುಮಾರು ಮೂರೂವರೆ ತಾಸುಗಳ ಕಾಲ ನಡೆದ ಈ ಕಾವ್ಯೋತ್ಸವದಲ್ಲಿ ಇಂಟರ್ವಲ್ ಇರಲಿಲ್ಲ.

ಕೆ.ಎಸ್.ನಿಸಾರ್‌ ಅಹಮದ್, ಎಚ್‌.ಎಸ್‌.ವೆಂಕಟೇಶಮೂರ್ತಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ದೊಡ್ಡರಂಗೇಗೌಡ, ಬಿ.ಆರ್‌.ಲಕ್ಷ್ಮಣರಾವ್‌, ಮೊದಲಾದ ಹಿರಿಯ ಕವಿಗಳು ಪ್ರೇಕ್ಷಕರ ಸಾಲಿನಲ್ಲಿದ್ದುದು ಗೋಷ್ಠಿಗೆ ಮೆರುಗು ನೀಡಿತ್ತು.

ಮೋಹನ ನಾಗಮ್ಮನವರ ಆಶಯ ಭಾಷಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ’ಯಾರು ಕವಿತೆ ಕಟ್ಟಬಲ್ಲರೋ ಅವರು ಸಾಮ್ರಾಜ್ಯವನ್ನು ಕಟ್ಟಬಲ್ಲರು. ಕೆಟ್ಟ ವ್ಯವಸ್ಥೆಯನ್ನು ಕೆಡವಲೂಬಲ್ಲರು’ ಎಂದ ಅವರು, ಹೃದಯಸಂವಾದ ಇಂದಿನ ಅಗತ್ಯ ಎಂದರು.

ಆರಂಭಿಕ ಬ್ಯಾಟ್ಸ್‌ಮನ್‌ ಅಬ್ಬರಿಸುವಂತೆ ’ಕಳೆದುಹೋದ ಊರು’ ಶೀರ್ಷಿಕೆಯ ಕವಿತೆ ವಾಚನದ ಮೂಲಕ ಚಂದ್ರಶೇಖರ ವಸ್ತ್ರದ ಗೋಷ್ಠಿಗೆ ರಭಸದ ಆರಂಭ ದೊರಕಿಸಿಕೊಟ್ಟರು. ಕಾಲಪ್ರವಾಹದಲ್ಲಿ ಊರುಕೇರಿಗಳು ಚಹರೆ ಕಳೆದುಕೊಳ್ಳುತ್ತಿರುವ ವಿಷಾದವನ್ನು ಹಿಡಿದಿಡುವ ಪ್ರಯತ್ನ ಅವರದಾಗಿತ್ತು. ನಂತರ ಪದ್ಯದ ಬ್ಯಾಟನ್‌ ಕೈಗೆತ್ತಿಕೊಂಡ ಬೂವನಹಳ್ಳಿ ನಾಗರಾಜು ’ನೆಲದ ವರ್ತಮಾನ’ ಕವಿತೆಯಲ್ಲಿ, ’ಬೆರೆಯುವುದಾದರೂ ಹೇಗೆ ಹುಸಿ ಸಂಸ್ಕೃತಿಯ ವಕ್ತಾರರೊಳಗೆ’ ಎಂದು ಪ್ರಶ್ನಿಸಿದರು.

’ಹಸಿದ ಒಡಲುಗಳಿಗೆ ತುತ್ತು ನೀಡುವ ಕವಿತೆಗಳು ಬರಲಿ’ ಎನ್ನುವ ಆಶಯ ರಾಧಾಕೃಷ್ಣ ಅವರದು. ಮುರಳಿಕೃಷ್ಣ ಬೆಳಾಲು ಹುಟ್ಟಿನಿಂದ ಮಣ್ಣುಸೇರುವ ತನಕ ಸ್ವಾತಂತ್ರ್ಯವೆನ್ನುವುದು ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವುದನ್ನು ’ಮಗು’ವಿನ ರೂಪಕದ ಮೂಲಕ ಬಣ್ಣಿಸಿದರು. ’ಸಿರಿಮುಡಿಯ ಹಿಡಿದೆಳೆ
ದರೂ ಮುಡಿ ಕತ್ತರಿಸದ ನಾವು ಹೆಂಗಸರು... ಹೆಂಗಸರಷ್ಟೇ’ ಎಂದು ನಿಟ್ಟುಸಿರು ಬಿಟ್ಟಿದ್ದು ವಿಶಾಲಾ ಆರಾಧ್ಯ.

ಗೋಷ್ಠಿಯ ಕಾವು ಏರಿಸಿದ್ದು ಕೋ.ವೆಂ.ರಾಮಕೃಷ್ಣೇಗೌಡ. ’ಬೃಂದಾವನ’ ಶೀರ್ಷಿಕೆಯ ಕವಿತೆಯನ್ನವರು ಏರು ಕಂಠದಲ್ಲಿ ಹಾಡಿದರು. ’ಸೆರಗ ಮರೆಯಲಿ ಹುಡುಕು ಹುಡುಗಾಟದ ಹರೆಯ’, ’ಸಂಪ್ರದಾಯದ ಕೊಂಡಿ ಕಳಚಿವೆ, ಚೆಲುವ ಬೇಡುವ ಮನಗಳು’ ಎಂದು ಹಾಡುವ ಮೂಲಕ ಕೇಳುಗರ ಚಪ್ಪಾಳೆ ಗಿಟ್ಟಿಸಿದರು. ’ಒಲವು ಇರಲಿ ಬಾಳಿಗೆ’ ಎನ್ನುವ ಅಕಬರ ಎ. ಸನದಿ ಹಾಡುಗಾರಿಕೆಯೂ ಗಮನಸೆಳೆಯುವಂತಿತ್ತು. ಉಮಾದೇವಿ ಖಾನಾಪುರ ಅವರ ’ಎದೆಹಾಲು’ ತ್ರಿಪದಿಯ ಶೈಲಿಯಲ್ಲಿತ್ತು. ’ಬಾಟಲಿ ತರಲಿಲ್ಲ ಬಾಯಿಗೆ ಹಚ್ಚಲಿಲ್ಲ / ಹರೆಯ ಹೋದೀತೆಂದು ಹಳಹಳಿಕೆ ಮಾಡಲಿಲ್ಲ’ ಎಂದ ಅವರ ಕವಿತೆ ಮಾತೃವಾತ್ಸಲ್ಯದ ಅಭಿವ್ಯಕ್ತಿಯಂತಿತ್ತು.

’ದಂಡನಾಯಕರು ಪಿಂಡನಾಯಕರಾದರು’, ’ಬಡಾಯಿ ಬಲ್ಲವ ಲಡಾಯಿ ಬಲ್ಲನೇ ಅಯ್ಯಾ’ ಎನ್ನುವ ಎಚ್‌.ಜಿ. ಶ್ರೀಧರ್‌ ಉದ್ಗಾರ, ಬಂಡಾಯ ಸಂಘಟನೆಯ ನಾಯಕರನ್ನು ಕುಟುಕುವಂತಿತ್ತು. ’ಮಕಾಡೆ ಮಲಗಿತ್ತು ಮಾನವೀಯತೆ, ಕಾಲನ ಕಣ್ಣಂಚಿನಲ್ಲೂ ನೀರು’ ಎಂದ ತಿಪ್ಪೇರುದ್ರ ಸಂಡೂರು, ಗೌರಿ ಲಂಕೇಶ್ ಹತ್ಯೆಯನ್ನು ನೆನಪಿಸಿದರು.

ಮಿನಾರಿನಲ್ಲಿ ಅನುರಣಿಸಿದ ’ಅವಳ ಹೆಸರು’ ಸೃಷ್ಟಿಸಿದ ಅಲ್ಲೋಲಕಲ್ಲೋಲವನ್ನು, ಅದೇ ಮಿನಾರಿನಲ್ಲಿ ಪಾರಿವಾಳವಾಗಿ ಮರುಹುಟ್ಟು ಪಡೆಯುವುದನ್ನು ರೂಪಕಭಾಷೆಯಲ್ಲಿ ಹೇಳಿದ ಶಿ.ಜು. ಪಾಶರ ಕವಿತೆ, ಹೋರಾಟದ ಹಾದಿಯಲ್ಲಿ ಅನವರತ ಉಳಿಸಿಕೊಳ್ಳಬೇಕಾದ ನಂಬಿಕೆ–ಆತ್ಮವಿಶ್ವಾಸವನ್ನು ಸೂಚಿಸುವಂತಿತ್ತು.

ಊಟದ ಸಮಯ ಮೀರುತ್ತಿದ್ದರೂ, ಕಾವ್ಯರಸಿಕರು ಹಸಿವೆಯ ಕರೆಗೆ ಓಗೊಡುತ್ತಿರುವುದನ್ನು ನೋಡಿದರೂ ಕವಿಗಳು ಕಾವ್ಯ ಪರಿಮಳದ ಗುಂಗಿನಲ್ಲಿ ಊಟದ ಹಂಗು ಮೀರಿದವರಂತೆ ಕಾಣಿಸುತ್ತಿದ್ದರು. ಕುವೆಂಪು, ಕಾವೇರಿ, ವಿಶ್ವಸುಂದರಿ, ಅಕ್ಕಮಹಾದೇವಿ, ಭ್ರಷ್ಟ ನಾಯಕರು, ಆದರ್ಶದ ಮಾದರಿಗಳು, ಚರಿತ್ರೆಯ ಭೂತ, ಇತಿಹಾಸದ ತವಕತಲ್ಲಣ – ವೇದಿಕೆಯಲ್ಲಿ ಅನಾವರಣಗೊಂಡ ಕಾವ್ಯಜಗತ್ತು ಎಲ್ಲ ಎಲ್ಲೆಗಳನ್ನು ಮೀರುವಂತಿತ್ತು.

ಮ್ಯಾರಥಾನ್ ಕವಿಗೋಷ್ಠಿಯ ಅಧ್ಯಕ್ಷರು ಲತಾ ರಾಜಶೇಖರ್. ಆರು ಮಹಾಕಾವ್ಯಗಳ ಖ್ಯಾತಿಯ ಅವರು ತಮ್ಮ ಕಾವ್ಯಧಾರಣೆಗೆ ಸಂಬಂಧಿಸಿದ ತಾಳ್ಮೆಯನ್ನೇ ಗೋಷ್ಠಿ ನಡೆಸಿಕೊಡುವುದರಲ್ಲೂ ತೋರಿದರು. ಕಾರ್ಯಕ್ರಮದುದ್ದಕ್ಕೂ ಅವರು ಲವಲವಿಕೆಯಿಂದ ಇದ್ದುದು ಕವಿಗೆ ಅಗತ್ಯವಾದ ಸಾವಧಾನ ಗುಣವನ್ನು ಸೂಚಿಸುವಂತಿತ್ತು.

ಕೌಟುಂಬಿಕ ಚೌಕಟ್ಟಿನ ಆಯಾಮವಿದ್ದುದು ಕವಿಗೋಷ್ಠಿಯ ಮತ್ತೊಂದು ವಿಶೇಷ. ಕವಿತೆ ವಾಚಿಸಿದ ಅನೇಕರು ಪರಿಷತ್ತಿನ ಜಿಲ್ಲಾ–ತಾಲ್ಲೂಕು ಘಟಕಗಳಲ್ಲಿ ದುಡಿದ ಅನುಭವಿಗಳು.

47ರ ವಿಶೇಷ!

ಕವಿಗೋಷ್ಠಿಗೆ ಮುನ್ನ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿ ಅದೇ ವೇದಿಕೆಯಲ್ಲಿ ನಡೆದಿತ್ತು. ಮಕ್ಕಳ ಗೋಷ್ಠಿಯ ಆರಂಭದಲ್ಲಿ‌ ಇದ್ದ ಸಭಿಕರ ಸಂಖ್ಯೆ‌ 47. ಇದು ಆ ಗೋಷ್ಠಿಯ ನಿರೂಪಕರು ನೀಡಿದ ಲೆಕ್ಕ. ನಂತರದ ಗೋಷ್ಠಿಯಲ್ಲಿ ಇದ್ದುದು 47 ಕವಿಗಳು! ಅಧ್ಯಕ್ಷತೆ, ಆಶಯ ಭಾಷಣ, ಸ್ವಾಗತ, ವಂದನೆ, ನಿರೂಪಣೆ ಎನ್ನುವ ಬಳಗವೂ ಕವಿಗಳ ಹಿಂಡಿನ ಜೊತೆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT