ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಂಡ್ರೆ ಹೆದರಿಕೆ ಆಗಲ್ಲ

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರತಿಭೆ ಇದ್ದರೆ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಈ ಬಾಲೆಯೇ ಸಾಕ್ಷಿ. ಬೆಂಗಳೂರಿನ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಜ್ಯೋಷಿಕಾ, ದುನಿಯಾ ವಿಜಯ್ ಅಭಿನಯದ ‘ಕನಕ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಚಿತ್ರದ ನಾಯಕಿ ಮಾನ್ವಿತಾ ಹರೀಶ್ ಅವರ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಕೆ, ಉತ್ತಮ ನಟಿಯಾಗಿ ಬೆಳೆಯುವ ಭರವಸೆ ಮೂಡಿಸಿದ್ದಾಳೆ.

ಪೊಲೀಸ್‌ ಪ್ರಧಾನ ಕಚೇರಿಯ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ನರಸಿಂಹಮೂರ್ತಿ ಅವರ ಮಗಳಾದ ಜ್ಯೋಷಿಕಾ, ಬಾಲ್ಯದಿಂದಲೂ ಆಟ–ಪಾಠಗಳಲ್ಲಿ ಮುಂದು. ಶಾಲೆಯಲ್ಲಿ ನಡೆಯುವ ನೃತ್ಯ, ಅಭಿನಯದಲ್ಲಿ ಭಾಗವಹಿಸುತ್ತಲೇ ಬಂದವಳು. ಆಕೆಯ ಪ್ರತಿಭೆ ಗುರುತಿಸಿದ್ದ ನಿರ್ದೇಶಕ ಆರ್. ಚಂದ್ರು ‘ಕನಕ’ ಸಿನಿಮಾದಲ್ಲಿ ಅವಕಾಶ ನೀಡಿದ್ದರು.

ಅದನ್ನು ಚೆನ್ನಾಗಿಯೇ ಬಳಸಿಕೊಂಡ ಜ್ಯೋಷಿಕಾ ಅವರ ಅಭಿನಯ ಕಂಡ ದುನಿಯಾ ವಿಜಯ್, ತಮ್ಮ ಮುಂದಿನ ಚಿತ್ರ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದಲ್ಲಿಯೂ ಅವಕಾಶ ನೀಡಿದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಸೌಂದರ್ಯ ಮತ್ತು ಅಭಿನಯ ಪ್ರತಿಭೆಯಿಂದಾಗಿ ಹಲವು ನಿರ್ದೇಶಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.

‘ನೃತ್ಯ, ಜಿಮ್ನಾಸ್ಟಿಕ್ ಅಂದ್ರೆ ಅಚ್ಚುಮೆಚ್ಚು. ಅವುಗಳಲ್ಲಿ ನಾನು ಹೆಚ್ಚು ತೊಡಗಿಸಿಕೊಂಡಿದ್ದರಿಂದ ವೇದಿಕೆ ಹಾಗೂ ಕ್ಯಾಮೆರಾ ಮುಂದೆ ನಿಲ್ಲಲು ಭಯವಾಗುವುದಿಲ್ಲ. ಈ ಧೈರ್ಯವೇ ನನಗೆ ಸಿನಿಮಾಗಳಲ್ಲಿ ಅವಕಾಶ ಕಲ್ಪಿಸಿಕೊಟ್ಟಿತು’ ಎಂದು ಮುದ್ದಾಗಿ ಹೇಳುತ್ತಾಳೆ ಜ್ಯೋಷಿಕಾ.

‘ನಿರ್ದೇಶಕ ಚಂದ್ರು ಅವರು ಮೊದಲು ನನ್ನ ತಂದೆಯನ್ನು ಭೇಟಿಯಾಗಿದ್ದರು. ಅವರ ಬಳಿ ಹೋದಾಗ ಸಹಾಯಕರು ಆಡಿಷನ್ ತೆಗೆದುಕೊಂಡರು. ಈ ಹುಡುಗಿ ಯಾವುದೇ ಪಾತ್ರ ಕೊಟ್ಟರೂ ಮಾಡುತ್ತಾಳೆ ಎಂದು ಸಹಾಯಕರು ಹೇಳುತ್ತಿದ್ದಂತೆ, ಚಂದ್ರು ಸರ್ ನನಗೊಂದು ಪಾತ್ರ ನೀಡಿದರು’ ಎಂದು ಹೆಮ್ಮೆಯಿಂದ ಹೇಳುತ್ತಾಳೆ.

‘ಶೂಟಿಂಗ್ ವೇಳೆ ಚಂದ್ರು ಸರ್, ದುನಿಯಾ ವಿಜಯ್ ಹಾಗೂ ಮಾನ್ವಿತಾ ಅವರು ನಟನೆ ಬಗ್ಗೆ ಹೇಳಿಕೊಟ್ಟರು. ಅವರು ಹೇಳಿದಂತೆ ಅಭಿಯನಿಸಿದೆ. ಅದನ್ನು ಗಮನಿಸಿದ ವಿಜಯ್, ತನ್ನ ಮುಂದಿನ ಸಿನಿಮಾದಲ್ಲಿ ಅಭಿನಯಿಸುವಂತೆ ಹೇಳಿದ್ದಾರೆ. ಅದರಿಂದ ತುಂಬಾ ಖುಷಿಯಾಗಿದೆ. ಸಿನಿಮಾರಂಗದಲ್ಲಿ ಮುಂದುವರಿಯುವ ಆಸೆಯಿದೆ. ಲಭಿಸುವ ಅವಕಾಶ ಬಳಸಿಕೊಂಡು ತಂದೆ-ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂಬುದು ನನ್ನ ಆಸೆ’ ಎನ್ನುತ್ತಾಳೆ ಜ್ಯೋಷಿಕಾ.

‘ಕನಕ’ದಲ್ಲಿ ನನ್ನದು ಮುಗ್ಧ ಹುಡುಗಿ ಪಾತ್ರ. ನಾಯಕಿ ಹಾಗೂ ನಾಯಕ ಇಬ್ಬರೊಂದಿಗೂ ಒಡನಾಟವಿಟ್ಟುಕೊಳ್ಳುವುದು ನನ್ನ ಪಾತ್ರದ ವಿಶೇಷ. ನನ್ನ ಕೆಲಸಕ್ಕೆ ತಂದೆ ನರಸಿಂಹಮೂರ್ತಿ, ತಾಯಿ ವೆಂಕಟಲಕ್ಷ್ಮಿ ಅವರ ಸಹಕಾರ ಇದೆ. ಶೂಟಿಂಗ್ ಹೋಗಲು ರಜೆ ನೀಡುವ ಶಾಲೆಯ ಶಿಕ್ಷಕರು, ಅಂದಿನ ಪಾಠವನ್ನು ಮತ್ತೊಂದು ದಿನ ಹೇಳಿಕೊಟ್ಟು ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾಳೆ ಜ್ಯೋಷಿಕಾ.

**

ಶಿವರಾಜ್‌ ಕುಮಾರ್, ಪುನೀತ್‌ ರಾಜ್‌ಕುಮಾರ್, ಸುದೀಪ್ ಅವರ ಜತೆ ಸಣ್ಣಪಾತ್ರದಲ್ಲಾದರೂ ನಟಿಸಬೇಕು ಎಂಬುದು ನನ್ನ ಜೀವನದ ಗುರಿ. ಅದು ಆದಷ್ಟು ಬೇಗ ಈಡೇರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.
–ಜ್ಯೋಷಿಕಾ, ಯುವ ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT