ಕೊಪ್ಪಳ

ಸರ್ಕಾರಿ ಭೂಮಿಯ ಪರಿಹಾರಕ್ಕೆ ಯತ್ನ

ನವಾಬರ ಕಾಲದ ಕೊಪ್ಪಳ ಆಯಿಲ್‌ ರಿಫೈನರಿ ಮತ್ತು ಜಿನ್ನಿಂಗ್‌ ಫ್ಯಾಕ್ಟರಿಯ 77,526 ಚದರ ಯಾರ್ಡ್‌ ಭೂಮಿಯನ್ನು ಫ್ಯಾಕ್ಟರಿಯ ನಿರ್ದೇಶಕರ ಹೆಸರಿನಲ್ಲಿ ನಗರದ ಪ್ರಭಾವಿಯೊಬ್ಬರು ಕಬಳಿಸಲು ಯತ್ನಿಸಿದ್ದಾರೆ.

ಕೊಪ್ಪಳ ಆಯಿಲ್‌ ರಿಫೈನರಿ ಲಿಮಿಟೆಡ್‌ನ ಕಟ್ಟಡ

ಕೊಪ್ಪಳ: ನವಾಬರ ಕಾಲದ ಕೊಪ್ಪಳ ಆಯಿಲ್‌ ರಿಫೈನರಿ ಮತ್ತು ಜಿನ್ನಿಂಗ್‌ ಫ್ಯಾಕ್ಟರಿಯ 77,526 ಚದರ ಯಾರ್ಡ್‌ ಭೂಮಿಯನ್ನು ಫ್ಯಾಕ್ಟರಿಯ ನಿರ್ದೇಶಕರ ಹೆಸರಿನಲ್ಲಿ ನಗರದ ಪ್ರಭಾವಿಯೊಬ್ಬರು ಕಬಳಿಸಲು ಯತ್ನಿಸಿದ್ದಾರೆ. ಉಪ ವಿಭಾಗಾಧಿಕಾರಿ ಕೂಲಂಕಷ ಪರಿಶೀಲನೆಯ ಪರಿಣಾಮ ಈ ಕೃತ್ಯಕ್ಕೆ ತಡೆ ಬಿದ್ದಿದೆ.

1944ರಲ್ಲಿ ನಿರಯೂಸೂಫ್‌ ಅಲಿಖಾನ್‌ ಸಾಲಾರ್‌ಜಂಗ್‌ ಅವರು ಈ ಕಾರ್ಖಾನೆಯನ್ನು ಸ್ಥಾಪಿಸಿ ಅದನ್ನು ನಡೆಸಲು ಒಂದು ಟ್ರಸ್ಟ್‌ ರಚಿಸಿದರು. ಆ ಟ್ರಸ್ಟ್‌ಗೆ ನಗರದ ಪ್ರಮುಖರೊಬ್ಬರನ್ನು ನಿರ್ದೇಶಕನನ್ನಾಗಿ ನೇಮಿಸಿದರು. ನಿರ್ದೇಶಕರ ಮರಣಾನಂತರ ಅವರ ವಂಶಸ್ಥರು ಕಾರ್ಖಾನೆಯ ಭೂಮಿ, ಆಸ್ತಿ, ಯಂತ್ರೋಪಕರಣಗಳು ತಮ್ಮದೇ ಎಂದು ನಿರೂಪಿಸಲು ಮುಂದಾಗಿದ್ದಾರೆ. ಆದರೆ, ಉಪವಿಭಾಗಾಧಿಕಾರಿ ಗುರುದತ್‌ ಹೆಗ್ಡೆ ಅವರು ಮೂಲ ದಾಖಲಾತಿಗಳನ್ನು ಸಲ್ಲಿಸಲು ಹೇಳಿದಾಗ ಅವರ ಯತ್ನಕ್ಕೆ ತಡೆ ಬಿದ್ದಿದೆ ಎಂದು ಈ ಪ್ರಕರಣದ ಬೆನ್ನುಹತ್ತಿದ ಸಾಮಾಜಿಕ ಕಾರ್ಯಕರ್ತ ಪೀರ್‌ಸಾಬ್‌ ಬೆಳಗಟ್ಟಿ ತಿಳಿಸಿದ್ದಾರೆ.

ಪೀರ್‌ಸಾಬ್‌ ಹೇಳುವ ಪ್ರಕಾರ, 'ಫ್ಯಾಕ್ಟರಿಯ ಯಂತ್ರೋಪಕರಣ, ಕಟ್ಟಡ, ಭೂಮಿ ಸೇರಿ ಸುಮಾರು ₹100 ಕೋಟಿಗೂ ಮಿಕ್ಕಿದ ಆಸ್ತಿ ಇದೆ. ಅದರಲ್ಲಿ ಬಹುತೇಕ ಯಂತ್ರೋಪಕರಣಗಳು ನಾಪತ್ತೆಯಾಗಿವೆ. ನವಾಬರ ಆಡಳಿತ ಅಂತ್ಯಗೊಂಡ ನಂತರ ಈ ಆಸ್ತಿ ರಾಜ್ಯ ಸರ್ಕಾರಕ್ಕೆ ಸೇರಬೇಕು. ಇಲ್ಲಿ ಹಾಗಾಗದೇ ಟ್ರಸ್ಟ್‌ನ ನಿರ್ದೇಶಕರು ಇವೆಲ್ಲವೂ ತಮ್ಮದೇ ಎಂದು ಸಾಧಿಸಲು ಹೊರಟಿದ್ದಾರೆ' ಎಂದು ಆರೋಪಿಸುತ್ತಾರೆ.

ಬೆಳಕಿಗೆ ಬಂದ ಬಗೆ: ಇತ್ತೀಚೆಗೆ ರೈಲ್ವೆ ಇಲಾಖೆಯು ಹೊಸಪೇಟೆ ತಿನೈಘಾಟ್‌ ರೈಲುಹಳಿಯ ದ್ವಿಪಥ ಕಾಮಗಾರಿಗಾಗಿ ಭೂಸ್ವಾಧೀನಕ್ಕೆ ಮುಂದಾಗಿದೆ. ಅದು ಈ ಫ್ಯಾಕ್ಟರಿಯ ಪಕ್ಕದಲ್ಲೇ ಹಾದುಹೋಗುತ್ತದೆ. ಈ ಭೂಮಿಯು ತಮಗೆ ಸೇರಿದ್ದು, ಇದಕ್ಕೆ ರೈಲ್ವೆ ಇಲಾಖೆ ಪರಿಹಾರ ಕೊಡಬೇಕು ಎಂದು ‘ನಿರ್ದೇಶಕ’ರು ಅರ್ಜಿ ಸಲ್ಲಿಸಿದರು.

ಅದರಂತೆ ಕಾರ್ಖಾನೆಯ 11,938.06 ಚದರ ಮೀಟರ್‌ ಜಾಗಕ್ಕೆ ಪ್ರತಿ ಚದರ ಮೀಟರ್‌ಗೆ ₹2,500ರಂತೆ ಪಾವತಿಸಲು ರೈಲ್ವೆ ಇಲಾಖೆ ಸಮ್ಮತಿಸಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ₹6,32,71,718 ಮೊತ್ತ ’ನಿರ್ದೇಶಕ’ರ ಪಾಲಾಗುತ್ತಿತ್ತು. ಅಂದರೆ ಸರ್ಕಾರದ ಜಮೀನಿಗೆ ಸರ್ಕಾರವೇ ಖಾಸಗಿಯವರಿಗೆ ಪರಿಹಾರ ನೀಡಿ ಕೊಂಡಂತಾಗುತ್ತಿತ್ತು.

ಪೀರ್‌ಸಾಬ್‌ ಅವರು ಈ ಸಂಬಂಧ ತಕರಾರು ಅರ್ಜಿ ಸಲ್ಲಿಸಿದರು. ಉಪವಿಭಾಗಾಧಿಕಾರಿಯವರು ನ. 27ರಂದು ಅರ್ಜಿ ವಿಚಾರಣೆ ಇರಿಸಿದರು. ಅಂದು ನಿರ್ದೇಶಕರ ವಂಶಸ್ಥರು ನೋಟರಿ ವಕೀಲರ ಮೂಲಕ ದೃಢೀಕರಿಸಿದ ದಾಖಲಾತಿಗಳ ಪ್ರತಿ ನೀಡಿದರು.

ಆದರೆ, ಅದ್ಯಾವುದನ್ನೂ ಪರಿಗಣಿಸದ ಉಪವಿಭಾಗಾಧಿಕಾರಿ ಜಮೀನಿನ ಮಾಲೀಕರು ಅರ್ಜಿದಾರರೇ  ಎಂಬುದನ್ನು ನಿರೂಪಿಸುವ ದಾಖಲೆ ಕೇಳಿದರು. ಅದನ್ನು ಸಮರ್ಪ‍ಕವಾಗಿ ಒದಗಿಸಲಾಗದ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ಪಾವತಿಯಾಗಬಹುದಾದ ಸಂದರ್ಭ ತಪ್ಪಿಹೋಗಿದೆ ಎಂದು ಪೀರ್‌ಸಾಬ್‌ ಮಾಹಿತಿ ನೀಡಿದ್ದಾರೆ.

ಉರ್ದುವಿನಲ್ಲಿದ್ದ ದಾಖಲೆಗಳು
ಉರ್ದುವಿನಲ್ಲಿದ್ದ ನವಾಬರ ಕಾಲದ ದಾಖಲೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಪರಿಶೀಲಿಸಲಾಯಿತು. ಅದರ ಪ್ರಕಾರ ಹಾಲಿ ಕಾರ್ಖಾನೆಯ ಭೂಮಿಯ ಹಕ್ಕುದಾರರು ಎಂದು ಅರ್ಜಿ ಸಲ್ಲಿಸಿದವರು ಅದರ ಆಡಳಿತ ನಿರ್ದೇಶಕರ ಹುದ್ದೆಯವರೇ ವಿನಃ ಮಾಲೀಕರು ಅಲ್ಲ. ಮೇಲಾಗಿ ಅದೊಂದು 11 ಸದಸ್ಯರನ್ನೊಳಗೊಂಡ ಟ್ರಸ್ಟ್‌. ಕಾರ್ಖಾನೆ ಮೇಲೆ ಯಾರೂ ವೈಯಕ್ತಿಕ ಮಾಲೀಕತ್ವ ಹೊಂದಿಲ್ಲ. 1992ರಲ್ಲಿ ವ್ಯವಸ್ಥಾಪಕ ನಿರ್ದೇಶಕರು ಬದಲಾಗಿದ್ದಾರೆ. ಅವರ ಅವಧಿ 5 ವರ್ಷ ಮಾತ್ರ. ಆ ನಂತರ ಯಾವುದೇ ಬದಲಾವಣೆಗಳು ಆಗಿಲ್ಲ. ಕಾರ್ಖಾನೆಯೂ ಕೆಲಸ ಮಾಡುತ್ತಿಲ್ಲ. ಹೀಗಿದ್ದರೂ ಅದರ ಆಸ್ತಿಯನ್ನು ಕಬಳಿಸಲು ಕೆಲವರು ಮುಂದಾಗಿದ್ದಾರೆ ಎಂದು ಆರೋಪಿಸುತ್ತಾರೆ ಪೀರ್‌ಸಾಬ್‌.

* * 

ನನ್ನದು ಯಾರ ವಿರುದ್ಧವೂ ವೈಯಕ್ತಿಕ ಹೋರಾಟ ಅಲ್ಲ. ಸರ್ಕಾರದ ಸ್ವತ್ತು ಅದಕ್ಕೇ ಸೇರಬೇಕು. ಬೇರೆಯವರು ಹಕ್ಕು ಸಾಧಿಸಬಾರದು ಎಂಬುದು ಅಷ್ಟೇ.
ಪೀರ್‌ಸಾಬ್‌ ಬೆಳಗಟ್ಟಿ,
ಸಾಮಾಜಿಕ ಕಾರ್ಯಕರ್ತ

Comments
ಈ ವಿಭಾಗದಿಂದ ಇನ್ನಷ್ಟು
ಸಾಲಮುಕ್ತ ರೈತ ನಮ್ಮ ಗುರಿ

ಕೊಪ್ಪಳ
ಸಾಲಮುಕ್ತ ರೈತ ನಮ್ಮ ಗುರಿ

23 Apr, 2018

ಕೊಪ್ಪಳ
ಸುಗಮ ಚುನವಾಣೆಗೆ ಮತಗಟ್ಟೆ ಅಧಿಕಾರಿಗಳು ಶ್ರಮಿಸಿ

ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಗೊಂದಲ ರಹಿತವಾಗಿ ಹಾಗೂ ಸುಗಮವಾಗಿ ನಡೆಸಲು ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ...

23 Apr, 2018
‘ಸೆಕ್ಟರ್ ಅಧಿಕಾರಿಗಳು ಕಟ್ಟೆಚ್ಚರ ವಹಿಸುವುದು ಅಗತ್ಯ’

ಕೊಪ್ಪಳ
‘ಸೆಕ್ಟರ್ ಅಧಿಕಾರಿಗಳು ಕಟ್ಟೆಚ್ಚರ ವಹಿಸುವುದು ಅಗತ್ಯ’

23 Apr, 2018
‘ಮಾತಿನ ಮೂಲಕ ದೇಶ ಕಟ್ಟುವವರು ಬೇಡ’

ಕೊಪ್ಪಳ
‘ಮಾತಿನ ಮೂಲಕ ದೇಶ ಕಟ್ಟುವವರು ಬೇಡ’

22 Apr, 2018

ಕನಕಗಿರಿ
‘ಅನುಭವ ಮಂಟಪ ವಿಶ್ವಕ್ಕೆ ಮಾದರಿ’

ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಬಸವೇಶ್ವರರ ಭಾವಚಿತ್ರದ ಮೆರವಣಿಗೆ, ಉಪನ್ಯಾಸ ಹಾಗೂ ವಚನ ಸಂಗೀತ ಕಾರ್ಯಕ್ರಮ ಈಚೆಗೆ ನಡೆಯಿತು.

22 Apr, 2018