ಕೆ.ಆರ್.ನಗರ

ನನ್ನನ್ನು ಕಂಡರೆ ಕಾಂಗ್ರೆಸ್, ಜೆಡಿಎಸ್‌ಗೆ ಭಯ

ಯಾವುದೇ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಜನತೆಗೆ ತಲುಪಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜೋಡಿ ಎತ್ತುಗಳಂತೆ ಕೆಲಸ ಮಾಡಬೇಕಾಗುತ್ತದೆ

ಕೆ.ಆರ್.ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಶಾಸಕ ಸಿ.ಪಿಯೋಗೇಶ್ವರ್ ಚಾಲನೆ ನೀಡಿದರು (ಎಡಚಿತ್ರ). ಬಾಡೂಟ ಸವಿದ ಕಾರ್ಯಕರ್ತರು

ಕೆ.ಆರ್.ನಗರ: ಯಾವುದೇ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಜನತೆಗೆ ತಲುಪಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜೋಡಿ ಎತ್ತುಗಳಂತೆ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕ ಸಿ.ಪಿಯೋಗೇಶ್ವರ್ ಹೇಳಿದರು.

ಪಟ್ಟಣದ ಆದಿಶಕ್ತಿ ತೋಪಮ್ಮ ದೇವಸ್ಥಾನದ ಬಳಿ ಬಿಜೆಪಿ ಮಂಗಳ ವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾ ವೇಶದಲ್ಲಿ ಅವರು ಮಾತನಾಡಿದರು. ಮೈಸೂರು ಭಾಗದ 3–4 ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಠ ನೆಲೆಗಟ್ಟು ಹೊಂದಿಲ್ಲ. ಉತ್ತರಪ್ರದೇಶದಲ್ಲೂ ಹೀಗೆ ಇತ್ತು. ಆದರೆ, ಮೋದಿ ಅವರ ವರ್ಚಸ್ಸಿನಿಂದಾಗಿ ಇಂದು ಉತ್ತರ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲೂ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾ ಗುತ್ತದೆ ಎಂದರು.

ಮತದಾರರಲ್ಲಿ ಪರಿವರ್ತನೆ ಅಗತ್ಯವಿದೆ. ಯಾವುದೇ ಜಾತಿಗೆ ಜೋತು ಬಿದ್ದು ಅವರಿಂದ ಸಮಾಜ ಉದ್ಧಾರ ಆಗುತ್ತದೆಂಬ ಭ್ರಮೆ ಬೇಡ. ಎಚ್.ಡಿ.ದೇವೇಗೌಡರ ಕುಟುಂಬ ಎದುರಿಸಿಯೇ ಎಲ್ಲ ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ. ನಾನು ಚುನಾವಣೆಗೆ ನಿಂತುಕೊಂಡರೆ ಕಾಂಗ್ರೆಸ್– ಜೆಡಿಎಸ್ ಹೆಸರಿಲ್ಲದಂತಾಗುತ್ತದೆ. ನನ್ನನ್ನು ಕಂಡರೆ ಅವರಿಗೆ ಭಯವಾಗಿದೆ. ಇದರಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು.

ಮುಖಂಡ ಹೊಸಹಳ್ಳಿ ವೆಂಕಟೇಶ್ ಮಾತನಾಡಿ, ಕಳೆದ 10 ವರ್ಷಗಳಿಂದ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದೆ. ಕಾಮಗಾರಿಗಳು ಕಳಪೆಯಾಗಿದ್ದರೂ ಕಾಂಗ್ರೆಸ್ ಮುಖಂಡರು ಪ್ರಶ್ನಿಸುವುದಿಲ್ಲ. ಇದರಿಂದ ತಾಲ್ಲೂಕಿನಲ್ಲಿ ಜೆಡಿಎಸ್–ಕಾಂಗ್ರೆಸ್ ಒಡಂಬಡಿಕೆ ರಾಜಕಾರಣ ಮಾಡಿಕೊಂಡು ಬರುತ್ತಿವೆ ಎಂದು ಆರೋಪಿಸಿದರು.

ಬಿಜೆಪಿಗೆ ಬಂದವರೆಲ್ಲ ಪಲಾಯನ ಮಾಡುತ್ತಾರೆ. ತಾಲ್ಲೂಕಿನಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ವ್ಯವಸ್ಥಿತವಾಗಿ ಹಣೆಪಟ್ಟಿ ಕಟ್ಟಿಕೊಂಡು ಬರಲಾಗುತ್ತಿದೆ. ಈಗಾಗಲೇ ಬಿಜೆಪಿಗೆ ಹಲವರು ಬಂದು ಹೋಗಿದ್ದಾರೆ. ಅವರಂತೆ ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಚುನಾವಣೆ ಸಂದರ್ಭದಲ್ಲಿ ಮಾಡುವ ಅಪಪ್ರಚಾರಕ್ಕೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಬಿಜೆಪಿ ಜಿಲ್ಲಾ ಘಟಕ (ಗ್ರಾಮಾಂತರ)ದ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಘಟಕ ಅಧ್ಯಕ್ಷ ಕೆ.ಸಿ.ಶಿವಕುಮಾರ್ ಮಾತನಾಡಿದರು.

ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಳಿನಾಕ್ಷಿ ವೆಂಕಟೇಶ್, ಮುಖಂಡರಾದ ಡಾ.ಭಾರತೀ ಶಂಕರ್, ಬಿ.ಎಲ್.ರಘು, ಉಮಾಶಂಕರ್, ಬೋರೇಗೌಡ, ಬಸವೇಗೌಡ, ಜಾಬಗೆರೆ ರಮೇಶ್, ಸಂತೋಷ್, ಶಂಕರ್, ಕುಪ್ಪೆ ಪ್ರಕಾಶ್, ಕಗ್ಗುಂಡಿ ಕುಮಾರ್, ಅರ್ಜುನಹಳ್ಳಿ ಸಂಪತ್ ಕುಮಾರ್, ಬಿ.ಇ.ಯೋಗಾನಂದ, ಸಿ.ವಿ.ಗುಡಿ ಜಗದೀಶ್, ಸಾ.ರಾ.ರಮೇಶ್, ಭೈರನಾಯಕ, ದಾಕ್ಷಾಯಣಿ ಸೇರಿದಂತೆ ಇತರರು ಇದ್ದರು.

ಬಾಡೂಟ ಸವಿದ ಕಾರ್ಯಕರ್ತರು
ಪಕ್ಷದ ಕಾರ್ಯಕರ್ತರಿಗೆ ಬಾದೂಟ ಏರ್ಪಡಿಸಲಾಗಿತ್ತು. 101 ಕುರಿ, ಕೋಳಿ ಮಾಂಸದ ಖಾದ್ಯ, ಮುದ್ದೆ, ಅನ್ನ, ಸಾರು ಸಿದ್ಧಪಡಿಸಲಾಗಿತ್ತು.ಮಾಂಸಹಾರಿಗಳು ಮತ್ತು ಸಸ್ಯಹಾರಿಗಳಿಗಾಗಿ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 7 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಊಟ ಸವಿದರು.

* * 

ಭವಿಷ್ಯದ ದೃಷ್ಠಿಯಿಂದ ರಾಜ್ಯದಲ್ಲಿ ಬಿಜೆಪಿ ಆಡಳಿತ ಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಒಟ್ಟಾಗಿ ಇದ್ದರೆ ಅಭಿವೃದ್ಧಿಯಾಗುತ್ತದೆ
ಸಿ.ಪಿ.ಯೋಗೇಶ್ವರ್, ಶಾಸಕ

Comments
ಈ ವಿಭಾಗದಿಂದ ಇನ್ನಷ್ಟು

ಮೈಸೂರು
ನೈರುತ್ಯ ರೈಲ್ವೆಗೆ ₹ 37 ಸಾವಿರ ದಂಡ

ಟಿಕೆಟ್ ಇದ್ದರೂ ಉಜ್ಜಯಿನಿಯಿಂದ ಮೈಸೂರಿಗೆ ರೈಲಿನಲ್ಲಿ ನಗರದ ಕುಟುಂಬವೊಂದು ನಿಂತು ಪ್ರಯಾಣ ಮಾಡಬೇಕಾಗಿ ಬಂದ ಕಾರಣ ನೈರುತ್ಯ ರೈಲ್ವೆಗೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ...

22 Jan, 2018
29 ಕೆರೆಗೆ ನೀರು ತುಂಬಿಸಲು ₹ 79 ಕೋಟಿ; ಸಂಸದ

ಎಚ್.ಡಿ.ಕೋಟೆ
29 ಕೆರೆಗೆ ನೀರು ತುಂಬಿಸಲು ₹ 79 ಕೋಟಿ; ಸಂಸದ

21 Jan, 2018

ತಲಕಾಡು
ಮುಡುಕುತೊರೆ ಜಾತ್ರೆ ಆರಂಭ

‘12 ಸ್ಥಳಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಹೆಚ್ಚು ಜನರು ಬರುವ ನಿರೀಕ್ಷೆ ಇರುವುದರಿಂದ 20ರಿಂದ 22 ಪ್ರದೇಶದಲ್ಲಿ ಅಳವಡಿಸಲು ಆಲೋಚಿಸಲಾಗಿದೆ’

21 Jan, 2018
ಮತ್ತೆ ಮೈಕೊಡವಿ ನಿಂತ ನಾಯಕರು

ಮೈಸೂರು
ಮತ್ತೆ ಮೈಕೊಡವಿ ನಿಂತ ನಾಯಕರು

20 Jan, 2018

ಮೈಸೂರು
ಕಸದ ತೊಟ್ಟಿಯಲ್ಲಿ 12 ಮಾನವ ತಲೆಬುರುಡೆ ಪತ್ತೆ!

‘ತಲೆಬುರುಡೆಗಳ ರಾಶಿ ಸುರಿದಿರುವುದರ ಹಿಂದಿನ ಕಾರಣ ತಿಳಿದಿಲ್ಲ. ಮಾಟ ಮಂತ್ರ ಮಾಡಿಸುವವರು ಸುರಿದಿರಬಹುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನಕ್ಕಾಗಿ ಬುರುಡೆಗಳನ್ನು ಕೆಲವರು ನೀಡುತ್ತಾರೆ.

20 Jan, 2018