ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರು ಜಾಗೃತರಾಗದಿದ್ದರೆ ಸಂವಿಧಾನಕ್ಕೆ ಆಪತ್ತು

Last Updated 29 ನವೆಂಬರ್ 2017, 7:09 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಜಾಗೃತರಾಗದಿದ್ದರೆ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಆಪತ್ತು ಕಾದಿದೆ. ಧರ್ಮ ಸಂಸತ್ ಮೂಲಕ ಈ ನಿಟ್ಟಿನಲ್ಲಿ ಸಂಚು ನಡೆಯುತ್ತಿದ್ದು, ಸರ್ಕಾರದ ಮೇಲೆ ಪ್ರಭಾವ ಬೀರುವ ವಾತಾವರಣ ಸೃಷ್ಟಿಸಲಾಗುತ್ತಿದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಎಚ್ಚರಿಕೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಮಂಗಳವಾರ ಇಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜಯಂತಿ ಮತ್ತು ಸಂವಿಧಾನದ ಆಶಯಗಳ ಸಾಕಾರದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಡಾ.ಅಂಬೇಡ್ಕರ್ ಇಡೀ ಜಗತ್ತಿನ ಪಾಲಿಗೆ ಜ್ಞಾನದ ಬೆಳಕು. ವಿಶ್ವಸಂಸ್ಥೆ ಅವರ ಜಯಂತಿಯನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಅವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ, ಕೋಮುವಾದಿಗಳು ಸಂವಿಧಾನದಲ್ಲಿ ಬದಲಾವಣೆ ತರಲು ಯತ್ನಿಸುತ್ತಿದ್ದಾರೆ. ಸಂವಿಧಾನ ಅವರೊಬ್ಬರೇ ಬರೆದಿಲ್ಲ ಎಂದು ಉಡುಪಿಯ ಪೇಜಾವರ ಸ್ವಾಮೀಜಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳಿಸುವ ಹುನ್ನಾರ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಸಮಾನತೆ ತೊಡೆದು ಹಾಕಿ ಸ್ಥಿರ ಅಭಿವೃದ್ಧಿ ತರುವುದು ಬಾಬಾ ಸಾಹೇಬರ ಕನಸಾಗಿತ್ತು. ಬುದ್ಧ, ಬಸವಣ್ಣ, ಅಂಬೇಡ್ಕರ್ ಮೂವರೂ ತುಳತಕ್ಕೊಳಗಾದವರನ್ನು ಮೇಲೆತ್ತಲು ಪ್ರಯತ್ನಿಸಿದರು. ದಲಿತರು, ಹಿಂದುಳಿದವರು, ವಿದ್ಯೆ, ಉದ್ಯೋಗ, ಅಧಿಕಾರ ಪಡೆದು ನಿರ್ಣಾಯಕ ಸ್ಥಾನ ಹೊಂದದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ಕನಸು ನನಸಾಗಿಸಲು ಪ್ರಯತ್ನಿಸಬೇಕು. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಡಾ.ಅಂಬೇಡ್ಕರ್ ಶೋಷಿತರ ಧ್ವನಿ ಆಗಿದ್ದಾರೆ. ಇಂದಿಗೂ ಜಾತಿ, ಧರ್ಮದ ಶೋಷಣೆ ನಿಂತಿಲ್ಲ. ದಲಿತರು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದಾರೆ. ಈ ಪರಿಸ್ಥಿತಿ ಹೋಗಬೇಕು. ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿ ಬಡವರ, ದಮನಿತರ ವಿಕಾಸಕ್ಕೆ ಪ್ರಯತ್ನಿಸುತ್ತಿದೆ’ ಎಂದರು.

ಹಿರಿಯ ದಲಿತ ಹೋರಾಟಗಾರ ಜೋಗೇಂದ್ರ ಕವಾಡೆ ಮಾತನಾಡಿ, ‘ಬಾಬಾಸಾಹೇಬ್ ಅವರು ಹಿಂದೂ ಧರ್ಮದಲ್ಲಿ ತಮ್ಮ ಉದ್ಧಾರ ಸಾಧ್ಯವಿಲ್ಲ ಎಂದು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಆದ್ದರಿಂದ ಬೌದ್ಧ ಧರ್ಮಕ್ಕೆ ಮತಾಂತರ ವಾಗಿ ಆ ಧರ್ಮವನ್ನು ಪಾಲಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಕೆಪಿಸಿಸಿ ಕಾರ್ಯದರ್ಶಿ ಬಿ.ನಾರಾಯಣರಾವ್, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ಡಿ.ಜಿ.ಸಾಗರ, ಜಿಲ್ಲಾ ಘಟಕದ ಸಂಚಾಲಕ ಮಾರುತಿ ಬೌದ್ಧೆ, ತಾಲ್ಲೂಕು ಸಂಚಾಲಕ ವಾಮನ ಮೈಸಲಗೆ, ರಮೇಶ ಉಮಾಪುರೆ ಮಾತನಾಡಿದರು.

ಶಾಸಕ ರಹೀಂಖಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಬಾಬು ಹೊನ್ನಾನಾಯಕ್, ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದ ನಿರ್ದೇಶಕ ಅರ್ಜುನ ಕನಕ, ಆನಂದ ದೇವಪ್ಪ, ದಿಲೀಪ ಸಿಂಧೆ, ಶಿವರಾಜ ನರಶೆಟ್ಟಿ, ಯಶೋದಾ ರಾಠೋಡ, ಅರುಣಕುಮಾರ ಪಾಟೀಲ, ಮಲ್ಲಿಕಾರ್ಜುನ ಮಾಲೆ, ಅಶೋಕ ಗಾಯಕವಾಡ, ಸಂಜೀವ ಗಾಯಕವಾಡ, ಅಂಬಣ್ಣ ಘಾಂಗ್ರೆ, ಫರ್ನಾಂಡಿಸ್ ಹಿಪ್ಪಳಗಾಂವ, ಪಂಕಜ್ ಸೂರ್ಯವಂಶಿ, ಸುಭಾಷ ಹಿರೇನಾಗಾಂವ, ನಾಗಣ್ಣ ಘಾಂಗ್ರೆ, ಅರ್ಜುನ ಭೋಸ್ಲೆ ಪಾಲ್ಗೊಂಡಿದ್ದರು.

* * 

ಅಂಬೇಡ್ಕರ್ ಅವರು ಮನುವಾದಿ ಕಂಸರ ದಮನಕ್ಕಾಗಿ ಹುಟ್ಟಿದ್ದರು. ಜಾತಿ ವ್ಯವಸ್ಥೆ, ಮೂಢನಂಬಿಕೆ ಅಳಿಯದಿದ್ದರೆ ಉದ್ಧಾರವಿಲ್ಲ.
ಜೋಗೇಂದ್ರ ಕವಾಡೆ ಹಿರಿಯ ದಲಿತ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT