ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗುತ್ತಿ: ನಾಯಿಗಳ ಮಾರಣಹೋಮ

Last Updated 29 ನವೆಂಬರ್ 2017, 7:24 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಬೆಳಗುತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 90 ನಾಯಿಗಳನ್ನು ಕೊಂದು ಸಾಮೂಹಿಕವಾಗಿ ಮಣ್ಣಿನಲ್ಲಿ ಹೂತು ಹಾಕಲಾಗಿದೆ.ಬೆಳಗುತ್ತಿ ಹಾಗೂ ಮಲ್ಲಿಗೇನಹಳ್ಳಿ ಗ್ರಾಮದ ಬೀದಿಗಳಲ್ಲಿ ನಾಯಿಗಳು ದನ–ಕರುಗಳಿಗೆ, ಕುರಿಗಳಿಗೆ ಹಾಗೂ ಮಕ್ಕಳ ಮೇಲೆ ದಾಳಿ ಮಾಡುತ್ತವೆ ಎಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಬೆಳಗುತ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒ ಸಾಮಾನ್ಯ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಗ್ರಾಮಗಳಲ್ಲಿ ಓಡಾಡುತ್ತಿದ್ದ ನಾಯಿಗಳನ್ನು ಸೆರೆ ಹಿಡಿದು ಕೊಂದು ಹೂತಿದ್ದಾರೆ. ಈ ಕೃತ್ಯಕ್ಕೆ ಪ್ರಾಣಿ ಪ್ರಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದ ಬೆಂಗಳೂರಿನ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ ದ ಅಧಿಕಾರಿ ಹರೀಶ್, ಮಂಗಳವಾರ ಬೆಳಗುತ್ತಿಗೆ ಭೇಟಿ ನೀಡಿದರು. ಬಳಿಕ ಗ್ರಾಮ ಪಂಚಾಯ್ತಿ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಲವರ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನ್ಯಾಮತಿ ಪೊಲೀಸರು ಐಪಿಸಿ 428, 429 (ಪ್ರಿವೆನ್‌ಷನ್ ಆಫ್ ಕ್ರೂಯಾಲಿಟಿ ಟು ಅನಿಮಲ್ಸ್ ಆ್ಯಕ್ಟ್‌ ಪ್ರಕಾರ ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಹರೀಶ್ ಸುದ್ದಿಗಾರರ ಜತೆ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದರು.

ಬೀದಿನಾಯಿಗಳು ಹೆಚ್ಚಾದರೆ ಅವುಗಳ ಸಂತಾನ ಶಕ್ತಿ ಹರಣ ಮಾಡಿಸಬೇಕು. ನಾಯಿಗಳನ್ನು ಕೊಲ್ಲುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ ಎಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ ‘ಪ್ರಜಾವಾಣಿ’ ಜತೆ ಮಾತನಾಡಿ, ಬೀದಿ ನಾಯಿಗಳ ಕಾಟ ಹೆಚ್ಚಾಗಿತ್ತು. ವಾಹನಗಳಿಗೆ ಅಡ್ಡ ಬರುವುದು, ಮಕ್ಕಳಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದವು. ದೂರು ಬಂದಿದ್ದರಿಂದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬೀದಿನಾಯಿಗಳನ್ನು ಹಿಡಿಸಲಾಯಿತು ಎಂದರು.

ಸುಮಾರು 59 ನಾಯಿಗಳಿಗೆ ರೋಗ ಮತ್ತು ಹುಚ್ಚು ಹಿಡಿದಿತ್ತು. ಅಂತಹ ನಾಯಿಗಳನ್ನು ಹಿಡಿಯಲು ಬಂದವರು ಅವುಗಳನ್ನು ಸಾಯಿಸಿದ್ದು, ಗ್ರಾಮದಿಂದ ಹೊರಗೆ ಸಾಗಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT