ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಗಳ ನಗರಿಯಾದ ಬೆಂಗಳೂರು: ಆತಂಕಕಾರಿ

Last Updated 1 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಾವೆಲ್ಲ ಹೆಮ್ಮೆ ಪಡುವ ಬೆಂಗಳೂರಿಗೆ ಈಗ ‘ಅಪರಾಧ ನಗರಿ’ ಎಂಬ ಕಳಂಕ ಹೊಸದಾಗಿ ಅಂಟಿಕೊಂಡಿದೆ. ದೇಶದ 19 ಮೆಟ್ರೊಪಾಲಿಟನ್‌ ನಗರಗಳ ಪೈಕಿ ಅಪರಾಧಗಳ ಪಟ್ಟಿಯಲ್ಲಿ ಇದಕ್ಕೆ ಎರಡನೇ ಸ್ಥಾನ. ಭೂಗತ ಪಾತಕಿಗಳು ಮತ್ತು ಅಪರಾಧಿಗಳು ಹೆಚ್ಚು ಕ್ರಿಯಾಶೀಲರಾಗಿರುವ ಮುಂಬೈ ಮಹಾನಗರವೇ ನಮ್ಮ ನಂತರ ಮೂರನೇ ಸ್ಥಾನದಲ್ಲಿದೆ. ಹಾಗಿದ್ದರೆ, ಅಪರಾಧ ತಡೆ ಕಾನೂನುಗಳ ಪರಿಪಾಲನೆಯ ವಿಷಯದಲ್ಲಿ ಮುಂಬೈ ನಿವಾಸಿಗಳಿಗಿಂತ ನಾವು ಹಿಂದಿದ್ದೇವೆ ಎಂದಾಯಿತು. ಬೆಂಗಳೂರಿನಲ್ಲಿ 2016ನೇ ಸಾಲಿನಲ್ಲಿ ಕೊಲೆ, ಸುಲಿಗೆ, ಕಳ್ಳತನ, ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ– ದೌರ್ಜನ್ಯ, ಅಪಹರಣ... ಹೀಗೆ ಭಾರತೀಯ ದಂಡ ಸಂಹಿತೆಯಡಿ (ಐಪಿಸಿ) ಶಿಕ್ಷಾರ್ಹ ಅಪರಾಧಗಳ 46 ಸಾವಿರ ಪ್ರಕರಣಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ತಿಳಿಸಿದೆ. ಮುಂಬೈಯಲ್ಲಿ ಈ ಸಂಖ್ಯೆ ಸುಮಾರು 40 ಸಾವಿರ. ಬೆಂಗಳೂರಿಗೆ ಹೋಲಿಸಿದರೆ ದೆಹಲಿಯಲ್ಲಿ ಅಪರಾಧಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ ಎಂದು ನಮ್ಮಷ್ಟಕ್ಕೆ ನಾವೇ ಸಮಾಧಾನ ಹೇಳಿಕೊಳ್ಳುವ ಸ್ಥಿತಿಯಂತೂ ಇದಲ್ಲ.

ಬೆಂಗಳೂರು ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇಡೀ ವಿಶ್ವದ ಗಮನವನ್ನೇ ಸೆಳೆದಿದೆ. ದೇಶ ವಿದೇಶಗಳ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ವಿವಿಧ ರಾಜ್ಯಗಳ ಲಕ್ಷಾಂತರ ಜನರಿಗೆ ಬದುಕು ಕಲ್ಪಿಸಿದೆ. ಕೌಶಲ ಇಲ್ಲದೇ ಇದ್ದರೂ ಬೆಂಗಳೂರಿನಲ್ಲಿ ಉದ್ಯೋಗಕ್ಕೇನೂ ಬರ ಇಲ್ಲ. ತಮಗೆ ತಿಳಿದಿರುವ ಕೆಲಸ ಮಾಡಿ ಜೀವನ ಸಾಗಿಸಬಹುದು. ವಾಹನ ದಟ್ಟಣೆ, ಸಂಚಾರ ಸಮಸ್ಯೆ ಇದೆ ಎನ್ನುವುದನ್ನು ಬಿಟ್ಟರೆ ಹವೆ, ನೀರು, ವಸತಿ, ಜೀವನ ನಿರ್ವಹಣೆ... ಹೀಗೆ ಎಲ್ಲವೂ ಅನುಕೂಲಕರವಾಗಿವೆ. ಅದರಿಂದಾಗಿ ಹೆಚ್ಚು ಹೆಚ್ಚು ಜನ ಇಲ್ಲಿಗೆ ಬರುತ್ತಿದ್ದಾರೆ. ದೇಶಿ, ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ. ಇದರಿಂದ ವ್ಯಾಪಾರ, ವಾಣಿಜ್ಯ, ಸೇವಾ ವಲಯಗಳು ಬೆಳೆಯುತ್ತಿವೆ. ಆರ್ಥಿಕತೆಗೂ ಲಾಭ ಇದೆ. ಆದರೆ ಏರುಗತಿಯಲ್ಲಿರುವ ಅಪರಾಧ ಪ್ರಕರಣಗಳು ಈ ಎಲ್ಲ ಲಾಭ, ಅನುಕೂಲಗಳನ್ನು ತಿರುವುಮುರುವು ಮಾಡಬಲ್ಲವು. ಇದು ಈ ನಗರದ ಖ್ಯಾತಿಗೆ ಕಪ್ಪುಚುಕ್ಕಿಯಾದೀತು. ಒಮ್ಮೆ ಅಪಖ್ಯಾತಿ ಅಂಟಿಕೊಂಡರೆ ಸರಿಪಡಿಸುವುದು ಕಷ್ಟ.

ಆದ್ದರಿಂದ, ಅಪರಾಧಗಳನ್ನು ನಿಯಂತ್ರಿಸುವುದು ಸರ್ಕಾರದ ಆದ್ಯತೆಯಾಗಬೇಕು. ಆದರೆ ಅದಕ್ಕೆ ಬಲವಾದ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿ ಬೇಕು. ಕಾನೂನುಬದ್ಧವಾಗಿ ಕೆಲಸ ಮಾಡಲು ಪೊಲೀಸರಿಗೆ ಮುಕ್ತ ಅವಕಾಶ ಕೊಡಬೇಕು. ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್‌ ವ್ಯವಸ್ಥೆಯನ್ನು ರಕ್ಷಿಸಬೇಕು. ಅಷ್ಟೇ ಅಲ್ಲ; ಕೆಳಹಂತದ ಪೊಲೀಸ್‌ ಸಿಬ್ಬಂದಿಯನ್ನು ಮೇಲಧಿಕಾರಿಗಳ ದರ್ಪ, ಕಿರುಕುಳದಿಂದಲೂ ಕಾಪಾಡಬೇಕು. ಅದೇ ರೀತಿ ನಾಗರಿಕರ ಮೇಲೆ ಪೊಲೀಸ್‌ ದಬ್ಬಾಳಿಕೆಗೂ ಅವಕಾಶ ಇರಬಾರದು. ಈ ಎಲ್ಲ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ಪೊಲೀಸ್‌ ವ್ಯವಸ್ಥೆ ಸುಧಾರಣೆಗೆ ಸುಪ್ರೀಂ ಕೋರ್ಟ್ 11 ವರ್ಷಗಳಷ್ಟು ಹಿಂದೆಯೇ ಏಳು ಅಂಶಗಳ ನಿರ್ದೇಶನವನ್ನು ನೀಡಿತ್ತು. ಅದನ್ನು ನಮ್ಮ ರಾಜ್ಯ ಸರ್ಕಾರ ಇನ್ನೂ ಪೂರ್ಣವಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿಲ್ಲ.

ಪೊಲೀಸರ ಕಾರ್ಯ ನಿರ್ವಹಣೆಯಲ್ಲಿ ಸರ್ಕಾರದ ಅನಗತ್ಯ ಒತ್ತಡ ತಪ್ಪಿಸಲು ‘ರಾಜ್ಯ ಭದ್ರತಾ ಆಯೋಗ’ ರಚಿಸಬೇಕು, ಡಿಜಿಪಿ ಮಾತ್ರವಲ್ಲದೆ ಜಿಲ್ಲಾ ಪೊಲೀಸ್‌ ಮುಖ್ಯಸ್ಥ ಮತ್ತು ಠಾಣಾಧಿಕಾರಿಯನ್ನು 2 ವರ್ಷಕ್ಕೆ ಮುನ್ನ ವರ್ಗಾಯಿಸಬಾರದು ಎಂಬ ಪ್ರಮುಖ ಸೂಚನೆಗಳು ಕಾಗದದ ಮೇಲೆಯೇ ಇವೆ. ಪೊಲೀಸ್‌ ಸಿಬ್ಬಂದಿ ಮಂಡಳಿ ರಚನೆಯಾಗಿದ್ದರೂ ಅದು ಹೆಸರಿಗಷ್ಟೇ ಎನ್ನುವಂತಾಗಿದ್ದು, ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿಂತಿಲ್ಲ. ಪೊಲೀಸ್‌ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಧರ್ಮವೀರ ಸಮಿತಿ ನೀಡಿದ್ದ ಶಿಫಾರಸುಗಳನ್ನು ಸರ್ಕಾರ ಮರೆತೇಬಿಟ್ಟಿದೆ. ‘ಪೊಲೀಸರ ಸ್ಥಿತಿ ಫುಟ್‌ಬಾಲ್‌ನಂತೆ ಆಗಿದೆ’ ಎಂದು ಪಿ. ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ ಕನಿಕರ ವ್ಯಕ್ತಪಡಿಸಿದ್ದರು. ಆ ಸ್ಥಿತಿ ಈಗಲೂ ಬದಲಾಗಿಲ್ಲ. ತಮ್ಮ ಶೋಷಣೆಯ ವಿರುದ್ಧ ಕಳೆದ ವರ್ಷ ಕಾನ್‌ಸ್ಟೆಬಲ್‌ಗಳು ಸಿಡಿದೆದ್ದಿದ್ದರು. ಆಗ ಕೆಳಹಂತದ ಸಿಬ್ಬಂದಿಯಲ್ಲಿ ತೀವ್ರ ಅಸಮಾಧಾನ ಮೂಡಿಸಿರುವ ಆರ್ಡರ್ಲಿ ವ್ಯವಸ್ಥೆ ರದ್ದು ಮಾಡುವುದಾಗಿ, ಕಡ್ಡಾಯವಾಗಿ ವಾರದ ರಜೆ ಕೊಡುವುದಾಗಿ ಸರ್ಕಾರ ಅವರಿಗೆ ಭರವಸೆ ಕೊಟ್ಟಿತ್ತು. ಇವೆರಡೂ ಇನ್ನೂ ಪೂರ್ಣ ಅನುಷ್ಠಾನವಾಗಿಲ್ಲ. ಪೊಲೀಸ್‌ ಬಲದ ದುರುಪಯೋಗವೂ ಹೆಚ್ಚಿದೆ. ಇದರಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿದಿದ್ದರೆ ಅದು ಸ್ವಾಭಾವಿಕ. ಅದು ಅವರ ದಕ್ಷತೆ, ಕರ್ತವ್ಯದ ಮೇಲೂ ಪರಿಣಾಮ ಬೀರುತ್ತದೆ. ಅದರ ಫಲವೇ ಅಪರಾಧಗಳ ಹೆಚ್ಚಳ. ಪೊಲೀಸರು ಮನಸ್ಸು ಮಾಡಿದರೆ ಇವುಗಳಲ್ಲಿ ಕೆಲವನ್ನಾದರೂ ತಡೆಯಲು ಸಾಧ್ಯ. ಆದ್ದರಿಂದ ಅಪರಾಧ ನಿಯಂತ್ರಣಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಕರ್ತವ್ಯ. ಈಗಲಾದರೂ ಅದು ಕಣ್ಣು ತೆರೆದೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT