ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದವರ ಮೊಗದಲ್ಲಿ ಮುಗುಳ್ನಗೆ ಮೂಡಿಸುವ ಹಸೀನಾ

Last Updated 2 ಡಿಸೆಂಬರ್ 2017, 9:55 IST
ಅಕ್ಷರ ಗಾತ್ರ

ಹಾವೇರಿ: ಅಪೌಷ್ಟಿಕ ಮಕ್ಕಳು, ಅಂಗವಿಕಲರು, ಕೊಳೆಗೇರಿ ನಿವಾಸಿಗಳು, ಬೀದಿ ಮಕ್ಕಳು, ಬಾಲಕಾರ್ಮಿಕರು, ನಿರ್ಗತಿಕರು, ವೃದ್ಧರು ಸೇರಿದಂತೆ ನೊಂದವರ ಹಕ್ಕು ಮತ್ತು ಸೌಲಭ್ಯಗಳ ಹೋರಾಟಗಳಲ್ಲೊಬ್ಬರು ವಾಮನ ಮೂರ್ತಿಯಂತೆ ಸಕ್ರಿಯರಾಗಿತ್ತಾರೆ. ನೊಂದವರನ್ನು ಸಂಘಟಿಸುತ್ತಾ, ಅಧಿಕಾರಿಗಳ ಜೊತೆ ಚರ್ಚಿಸುತ್ತಾ, ಜಾಗೃತಿ ಮೂಡಿಸುತ್ತಾ ನೊಂದವರ ಬಾಳಿನಲ್ಲಿ ಮುಗುಳ್ನಗೆ ಮೂಡಿಸಲು ಯತ್ನಿಸುತ್ತಾರೆ. ಅವರೇ, ಹಸೀನಾ ಅಬ್ದುಲ್‌ ಘನಿಸಾಬ್ ಹೆಡಿಯಾಲ.

ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಆಲದಗೇರಿಯ ಹಸೀನಾ ಹೆಡಿಯಾಲ, ಹುಟ್ಟು ಅಂಗವಿಕಲರು. ‘ಡಿ’ ವಿಟಮಿನ್‌ ಕೊರತೆಯಿಂದಾಗಿ ಕಾಲುಗಳು ಸೊಟ್ಟಗಾಗಿವೆ. ನಾಲ್ಕನೇ ವರ್ಷದಲ್ಲೇ ತಾಯಿಯನ್ನು ಕಳೆದುಕೊಂಡು, ಮಲತಾಯಿಯ ಶೋಷಣೆಯಲ್ಲಿ ಬದುಕು ಕಂಡವರು. ಮನೆಗೆಲಸ, ಹೊಲದ ಕೆಲಸ, ಆಡು–ಕೋಳಿ ಸಾಕಣೆ ಮಾಡಿಕೊಂಡು ಪಿ.ಯು.ಸಿ.ವರೆಗೆ ವಿಧ್ಯಾಭ್ಯಾಸ ಮಾಡಿದರು. ಅಣ್ಣಂದಿರ ಮದುವೆಯ ಬಳಿಕ, ಅಣ್ಣ ಅತ್ತಿಗೆ ಮನೆ ಸೇರಿದರೆ, ಅಪ್ಪ ಮಲತಾಯಿ ತವರು ಸೇರಿದರು. ಅಂಗವೈಕಲ್ಯದ ಕಾರಣ ಹಸೀನಾಗೆ ಮದುವೆ ಭಾಗ್ಯ ಒಲಿದು ಬರಲಿಲ್ಲ. ಬದುಕು ಒಂಟಿಯಾಯಿತು.

‘ಸಂದಿಗ್ಧ ಸ್ಥಿತಿಯಲ್ಲಿ ನಾನು ದಾವಣಗೆರೆಯ ಅಕ್ಕನ ಮನೆ ಸೇರಿಕೊಂಡೆ. ಅಲ್ಲಿಯೂ ಕಷ್ಟಗಳು ಬೆಂಬಿಡಲಿಲ್ಲ. ಆಗ, ವಿಶ್ವ ಮಾನವ ಮಂಟಪದ ಆವರೆಗೆರೆ ರುದ್ರಮುನಿ ಪರಿಚಯವಾದರು. ಅವರು, ಶ್ರೀ ವಾಣಿ ಮಹಿಳಾ ಸಮಾಜದ ಮೂಲಕ ಬಡಮಕ್ಕಳಿಗೆ ಟೈಪಿಂಗ್ ಕಲಿಸುತ್ತಿದ್ದ ಕೆ.ಪಿ. ಸುನಂದಾ ಅವರನ್ನು ಪರಿಚಯಿಸಿದರು. ಸುನಂದಾ ಎರಡು ವರ್ಷ ಟೈಪಿಂಗ್ ತರಬೇತಿ ನೀಡಿದರು’ ಎಂದು ಹಸೀನಾ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.

‘ನೀವು ಪ್ರವಾಸೋದ್ಯಮದಲ್ಲಿ ಡಿಪ್ಲೊಮಾ ಮಾಡಿದರೆ, ಅಂಗವಿಕಲ ಕೋಟಾದಲ್ಲಿ ಉದ್ಯೋಗ ಸಿಗಬಹುದು’ ಎಂದು ರಾಜ್ಯ ಅಂಗವಿಕಲರ ಒಕ್ಕೂಟದ ಸುರೇಶ ಕುಷ್ಟಗಿ ಸಲಹೆ ನೀಡಿದರು. ಅದರಂತೆ, ಶಿವಮೊಗ್ಗದ ಸಾಗರ ತಾಲ್ಲೂಕಿನಲ್ಲಿ ಡಿಪ್ಲೊಮಾ ಕೋರ್ಸ್ ಸೇರಿಕೊಂಡೆ. ಅಲ್ಲಿನ ಲಿಂಗನಮಕ್ಕಿ ಹಿನ್ನೀರಿನಲ್ಲಿ ಈಜು, ಬೋಟಿಂಗ್, ಹಾವು ಹಿಡಿಯುವುದು ಹಾಗೂ ಚಾರಣ ಕಲೆಗಳನ್ನು ಕಲಿತೆ. ಇದು ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಆದರೆ, ಕೋರ್ಸ್‌ನ ಪ್ರಮಾಣಪತ್ರವನ್ನು ತಮ್ಮಲ್ಲೇ ಇರಿಸಿಕೊಂಡ ಸಂಸ್ಥೆಯವರು, ನನ್ನನ್ನು ಅಲ್ಲೇ ದುಡಿಸಿಕೊಂಡರು. ಅಲ್ಲೂ ಶೋಷಣೆ ಮುಂದುವರಿಯಿತು’ ಎಂದು ನೋವಿನಿಂದ ನುಡಿದರು.

‘ಪ್ರವಾಸಿಗರಿಗೆ ದೋಣಿ ವಿಹಾರ ಮತ್ತು ಕೋರ್ಸ್‌ ಕುರಿತು ಮಾಹಿತಿ ನೀಡಬೇಕಿತ್ತು. ರಾತ್ರಿ ನಡುಗಡ್ಡೆಯಲ್ಲಿ ಟೆಂಟ್ ಹಾಕಿ, ಫೈಯರ್ ಕ್ಯಾಂಪ್ ಹಾಕಿ ಕೊಡಬೇಕಿತ್ತು. ಬಳಿಕ, ರಾತ್ರಿಯಿಡೀ ಒದ್ದೆ ಬಟ್ಟೆಯಲ್ಲೇ ಹೊರಗೆ ಕಾವಲು ಕಾಯಬೇಕಿತ್ತು. ಬದುಕು, ಅಕ್ಷರಶಃ ಅರಣ್ಯರೋದನವಾಗಿತ್ತು’ ಎಂದು ಕಷ್ಟದ ದಿನಗಳನ್ನು ತಿಳಿಸಿದರು.

‘ಪ್ರತಿದಿನ 200ರಿಂದ 300 ಚಪಾತಿ ಲಟ್ಟಿಸಿ, ಅಡುಗೆ ಮಾಡಬೇಕಿತ್ತು. ಇದನ್ನು ಕಂಡ ಆವರಗೆರೆ ರುದ್ರಮನಿ ಸರ್, ವಾಪಸ್‌ ದಾವಣಗೆರೆಗೆ ಕರೆದುಕೊಂಡು ಬಂದರು. ಬಳಿಕ, ಕಂಪ್ಯೂಟರ್‌ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿಸಿದರು’ ಎಂದು ಅಲ್ಲಿಂದ ಬಿಡುಗಡೆಗೊಂಡ ಕ್ಷಣವನ್ನು ನೆನಪಿಸಿ ನಿಟ್ಟುಸಿರು ಬಿಟ್ಟರು.

ಬದಲಾದ ಬದುಕು: 2006ರಲ್ಲಿ ಎಪಿಡಿ ಸಂಸ್ಥೆಯ (ದೈಹಿಕ ಅಂಗವಿಕಲರ ಸಂಸ್ಥೆಯಲ್ಲಿ) ಸಂದರ್ಶನ ಎದುರಿಸಿದ ಹಸೀನಾ, ಆಯ್ಕೆಯಾದರು. ಅಲ್ಲಿ, ಅಂಗವಿಕಲ ಮಕ್ಕಳನ್ನು ಗುರುತಿಸಿ ಸಂಘ ರಚಿಸುವುದು, ಶಾಲೆಗೆ ಸೇರಿಸುವುದು, ಸೌಲಭ್ಯಗಳನ್ನು ಕೊಡಿಸುವುದು, ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿತ್ತು. ತಿಂಗಳಿಗ ₹ 4 ಸಾವಿರ ಗೌರವಧನ ಸಿಗುತ್ತಿತ್ತು. ಸತತ ನೋವುಂಡಿದ್ದ ಹಸೀನಾ, ಇತರರ ನೋವಿಗೆ ಸ್ಪಂದಿಸುವ ಕಾಯಕದಲ್ಲಿ ನಿರತರಾದರು. ಶೋಷಣೆ ವಿರುದ್ಧದ ಹೋರಾಟದ ಸಣ್ಣ ಅರಿವು ಮೂಡಿತು.

ಇವರ ಕೆಲಸ ಗಮನಿಸಿದ ಎಪಿಡಿ ಸಂಸ್ಥೆಯು 2007ರಲ್ಲಿ ಯುರೋಪ್‌ನಲ್ಲಿ ನಡೆದ ‘ದಿ ಸ್ಟೋರಿ ಆಫ್‌ ಚೇಂಜ್’ ಸಮಾವೇಶಕ್ಕೆ ಕಳುಹಿಸಿಕೊಟ್ಟಿತು. 25 ದೇಶಗಳ ಸಾಧಕರು ಪಾಲ್ಗೊಂಡ ಸಮಾವೇಶದಲ್ಲಿ ರಾಜ್ಯದಿಂದ ಬೆಂಗಳೂರಿನ ದೇವಿಕಲಾ ಮತ್ತು ಹಸೀನಾ ಮಾತ್ರ ಪಾಲ್ಗೊಂಡಿದ್ದರು. ಆದರೆ, 2012ರಲ್ಲಿ ಆರ್ಥಿಕ ಸಮಸ್ಯೆ ಕಾರಣ ಎಪಿಡಿ ಸಂಸ್ಥೆಯು ಕೆಲಸದಿಂದ ಇವರನ್ನು ಕೈ ಬಿಟ್ಟಿತು.

ಅಷ್ಟೊತ್ತಿಗಾಗಲೇ ಹೋರಾಟದ ಬದುಕು ರೂಪಿಸಿಕೊಂಡಿದ್ದ ಹಸೀನಾ ಅವರಿಗೆ, ಮಕ್ಕಳ ಆಯೋಗದ ಸದಸ್ಯ ಮರಿಸ್ವಾಮಿ ಪರಿಚಯವಾದರು. ರಾಜ್ಯದ ಅಂಗನವಾಡಿಗಳಿಗೆ ಗುಣಮಟ್ಟವಿಲ್ಲದ ಆಹಾರ ಪೂರೈಸುತ್ತಿದ್ದ ತಮಿಳುನಾಡಿನ ಗುತ್ತಿಗೆ ಕಂಪೆನಿ ವಿರುದ್ಧ ಹೋರಾಟದಲ್ಲಿ ಹಸೀನಾ ತೊಡಗಿಸಿಕೊಂಡರು. ಹೋರಾಟ ಫಲ ನೀಡಿತು.

ರಾಯಚೂರಿನ ದೇವದುರ್ಗ ತಾಲ್ಲೂಕಿನಲ್ಲಿ ಸುಮಾರು 700 ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚುವ ಮೂಲಕ ಇವರ ತಂಡವು ಗಮನ ಸೆಳೆಯಿತು. ಅಪೌಷ್ಟಿಕ ಮಕ್ಕಳಿಗೆ ಸರ್ಕಾರದ ಮೂಲಕ ಸ್ಥಳೀಯವಾಗಿ ಬೆಳೆದ ಆಹಾರವನ್ನೇ ಕೊಡಿಸುವಲ್ಲಿ ಯಶಸ್ವಿಯಾಯಿತು. ಸರ್ಕಾರವು ಜಿಲ್ಲಾ ಕೇಂದ್ರದಲ್ಲಿ ಎನ್.ಆರ್.ಸಿ ಮತ್ತು ತಾಲ್ಲೂಕು ಕೇಂದ್ರದಲ್ಲಿ ಎಂ.ಎನ್.ಆರ್.ಸಿ.ಗಳನ್ನು ತೆರೆಯಿತು.

ಮರಳಿ ತವರಿಗೆ: 2015ರಲ್ಲಿ ಹಾವೇರಿಯ ಶಿವಾಜಿನಗರದಲ್ಲಿ ಬಾಡಿಗೆ ಮನೆ ಪಡೆದು ಕಚೇರಿ ಮಾಡಿದರು. ಮುಚ್ಚಿಹೋಗಿದ್ದ ಇಲ್ಲಿನ ಎನ್.ಆರ್.ಸಿ ಬಗ್ಗೆ ಮಾಹಿತಿ ಕಲೆ ಹಾಕಿ, ಮತ್ತೆ ಆರಂಭಿಸುವಲ್ಲಿ ಯಶಸ್ವಿಯಾದರು. ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ದಾಖಲು ಮಾಡಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ಕೇಂದ್ರ ಆರಂಭ, ಅಂಗವಿಕಲ, ಅಪೌಷ್ಟಿಕ ಮಕ್ಕಳಿಗೆ ಸಹಾಯಧನ, ಹಿರಿಯ ನಾಗರಿಕರಿಗೆ ಮಾಸಾಶನ, ನಾಗೇಂದ್ರ ಮಟ್ಟಿ ಶಾಂತಿನಗರದಲ್ಲಿ ಸುಡುಗಾಡು ಸಿದ್ಧರ ವಾಸ ಸ್ಥಳದಲ್ಲಿ ಅಂಗನವಾಡಿ, ನರೇಗಾ ಮೂಲಕ ಬಡ ಹೆಣ್ಣುಮಕ್ಕಳಿಗೆ ಜೀವನ ಕಂಡುಕೊಳ್ಳಲು ದಾರಿ, ಉದ್ಯೋಗಿನಿ ಮತ್ತಿತರ ಯೋಜನೆಗಳಲ್ಲಿ ಸಾಲ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಸಾಲ ಮತ್ತಿತರ ಸೌಲಭ್ಯ ದೊರಕಿಸಿಕೊಡುವಲ್ಲಿ ಶ್ರಮಿಸಿದರು.

‘ಕೇವಲ ಹೋರಾಟದಲ್ಲೇ ಜೀವಿಸುವುದೂ ಕಷ್ಟ. ಜೀವನಕ್ಕೊಂದು ಆದಾಯದ ಆಧಾರ ಬೇಕು. ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆಯು ಜಿಲ್ಲಾ ಸಂಚಾಲಕರಾಗಿ ಕೆಲಸ ನೀಡಿದ್ದು, ತಿಂಗಳಿಗೆ ₹ 9 ಸಾವಿರ ನೀಡುತ್ತಿದೆ. ಹಲವು ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದ್ದಾರೆ’ ಎನ್ನುವ ಹಸೀನಾ ಅವರಿಗೆ, ‘ಹಾವೇರಿಯಲ್ಲಿ ಅಂಗವಿಕಲ ಮಕ್ಕಳ ‘ಡೇ ಕೇರ್ ಸೆಂಟರ್’ ತೆರೆಯಬೇಕು ಎಂಬ ಮಹದಾಸೆ.

‘ನಮ್ಮನ್ನು ನಾವೇ ಗುರುತಿಸಿಕೊಳ್ಳಬೇಕು’ 
‘ಬಡ ಮಕ್ಕಳ, ನೊಂದವರ ಬೇಡಿಕೆಗಳನ್ನು ಮಂಡಿಸಿದಾಗ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. ಅದೇ ನನಗೆ ಸಂತೃಪ್ತಿ. ನಾವು ಅಂಗವಿಲರು, ಹೆಣ್ಣು ಎಂದು ಕುಳಿತರೆ ನಿಮ್ಮನ್ನು ಯಾರೂ ಗುರುತಿಸುವುದಿಲ್ಲ. ನಮ್ಮನ್ನು ನಾವೇ ಗುರುತಿಸಿಕೊಳ್ಳಬೇಕು. ನಮ್ಮಂತೆಯೇ ಶೋಷಣೆಗೆ ತುತ್ತಾದವರ ಪರ ಹೋರಾಡಿದಾಗ, ನಮ್ಮ ಬದುಕಿಗೂ ಸಾರ್ಥಕತೆ ಸಿಗುತ್ತದೆ’ ಎಂದು ಹಸೀನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT