ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಾಂಬೆ ಗ್ರೂಪ್ ರಕ್ತ' ದಾನ ಮಾಡಲು ಕತಾರ್‍‍ನಿಂದ ಕುವೈತ್‍ಗೆ ಪ್ರಯಾಣ ಮಾಡಿ ಗರ್ಭಿಣಿಯ ಪ್ರಾಣ ಉಳಿಸಿದ ಯುವಕ

Last Updated 2 ಡಿಸೆಂಬರ್ 2017, 14:27 IST
ಅಕ್ಷರ ಗಾತ್ರ

ದೋಹಾ: ಕುವೈತ್‍ನ ಅದಾನ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೊಳಪಡಲಿದ್ದ ಕರ್ನಾಟಕ ಮೂಲದ ಮಹಿಳೆಯೊಬ್ಬರಿಗೆ ಅಪರೂಪದ ರಕ್ತ ಎಂದೇ ಕರೆಯಲ್ಪಡುವ ಬಾಂಬೆ ಗ್ರೂಪ್ ರಕ್ತದ ಅಗತ್ಯವಿತ್ತು. ಕುವೈತ್‍ನಲ್ಲಿ ಮಹಿಳೆ ಶಸ್ತ್ರಕ್ರಿಯೆಗೊಳಪಡಬೇಕಾದರೆ ಈ ಗುಂಪಿನ ರಕ್ತದ ತುರ್ತು ಅಗತ್ಯವಿದ್ದು, ರಕ್ತ ದಾನಿಗಳಿಗಾಗಿ ಹುಡುಕಾಟ ಆರಂಭವಾಯಿತು. ಕೂಡಲೇ ಬ್ಲಡ್ ಡೋನರ್ಸ್  ಕೇರಳ- ಕುವೈತ್ ಚಾಪ್ಟೆರ್ (ಬಿಡಿಕೆ) ಎಂಬ ಗುಂಪಿನಲ್ಲಿ ಈ ಸಂದೇಶ ಶೇರ್ ಆಯಿತು. ವಾಟ್ಸ್ ಆ್ಯಪ್ ಸೇರಿದಂತೆ ಇತರ ಸಾಮಾಜಿಕ ತಾಣದಲ್ಲಿಯೂ ರಕ್ತದಾನಿಗಳಿಗಾಗಿ ಹುಡುಕಾಟ ನಡೆಯಿುತು. ಈ ಸಂದೇಶ ಕತಾರ್‍‍ನ ಅಲ್ ಅನ್ಸಾರ್ ಗ್ಯಾಲರಿಯಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ನಿದೀಶ್ ರಘುನಾಥ್ ಅವರಿಗೂ ತಲುಪಿತು.

ಬಿಡಿಕೆ - ಕತಾರ್ ಚಾಪ್ಟರ್ ಈ ಹಿಂದೆ ರಕ್ತ ಪರೀಕ್ಷೆ ಮಾಡಿದಾಗ ನಿದೀಶ್ ಅವರ ರಕ್ತದ ಗುಂಪು ಬಾಂಬೆ ಗ್ರೂಪ್ ಎಂದು ತಿಳಿದುಬಂದಿತ್ತು. ತಕ್ಷಣವೇ ನಿದೀಶ್ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ವಿಶೇಷ ಅನುಮತಿ ಪಡೆದು ಅವರನ್ನು ಆದಷ್ಟು ಬೇಗ ಕತಾರ್‍‍ಗೆ ತಲುಪಿಸುವ ವ್ಯವಸ್ಥೆಯನ್ನು ಬಿಡಿಕೆ- ಕತಾರ್ ಚಾಪ್ಟರ್ ಮಾಡಿತು.

ವೀಸಾ ಪ್ರಕ್ರಿಯೆಗಳನ್ನೆಲ್ಲ ಪೂರ್ಣಗೊಳಿಸಿ ಗುರುವಾರ ಮಧ್ಯಾಹ್ನ ನಿದೀಶ್ ಕುವೈತ್ ತಲುಪಿದರು. ರಕ್ತ ಪರೀಕ್ಷೆ ನಡೆಸಿದ ನಂತರ ಜಾಬಿರಿಯಾ ರಕ್ತ ನಿಧಿಯಲ್ಲಿ ರಕ್ತದಾನ ಮಾಡಲಾಯಿತು. ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ನಿತೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ಹೇಳಿದ್ದಾರೆ.

ಕುವೈತ್‍ನ  ಆರೋಗ್ಯ ವಿಭಾಗ ನಿದೀಶ್ ಅವರನ್ನು ಸನ್ಮಾನಿಸಿದೆ, ಶನಿವಾರ ಕತಾರ್‍‍ಗೆ ಮರಳುವ ನಿತೀಶ್‍ಗೆ ಬಿಡಿಕೆ ಚಾಪ್ಟರ್ ಸದಸ್ಯರು ಸ್ವಾಗತ ಕೋರಲಿದ್ದಾರೆ. ರಕ್ತದಾನ ಮಾಡುವ ಮೂಲಕ ನಿತೀಶ್ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಬಿಡಿಕೆ ಕತಾರ್ ಚಾಪ್ಟರ್ ಅಧ್ಯಕ್ಷ ಶಾಜಿ ವೆಟ್ಟುಕಾಟ್ಟಿಲ್ ಹೇಳಿರುವುದಾಗಿ ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ಯಾವುದಿದು ಬಾಂಬೆ ರಕ್ತ?
ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಜಿಟನ್‌, ಬಿ ಗುಂಪಿನಲ್ಲಿ ಬಿ-ಆ್ಯಂಜಿಟನ್‌, ಎಬಿಯಲ್ಲಿ ಎಬಿ-ಆ್ಯಂಜಿಟನ್‌ ಮತ್ತು ಒ ಗುಂಪಿನಲ್ಲಿ ಎಚ್‌ ಆ್ಯಂಜಿಟನ್‌ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್‌-ಆ್ಯಂಜಿಟನ್‌ ಅಂಶ ಇರುವುದಿಲ್ಲವೋ ಅಂತಹವರು ಬಾಂಬೆ ರಕ್ತದ ಗುಂಪಿನವರು ಎಂದು ಗುರುತಿಸಲಾಗುತ್ತದೆ.

ಬಾಂಬೆಯಲ್ಲಿ ಮೊದಲು ಪತ್ತೆ:
ಈ ರಕ್ತದ ಮಾದರಿ ಮೊದಲು  ಪತ್ತೆಯಾಗಿದ್ದು ಮುಂಬೈಯಲ್ಲಿ. ಹಾಗಾಗಿ ಮುಂಬೈನ ಹಳೆಯ ಹೆಸರು ಬಾಂಬೆ ಬ್ಲಡ್‌ ಎಂದು ನಾಮಕರಣ ಮಾಡಲಾಗಿದೆ. 1952ರಲ್ಲಿ ಮುಂಬೈನಲ್ಲಿ ವೈ.ಆರ್‌. ಭೇಂಡೆ ಎಂಬುವವರು ಈ ರಕ್ತದ ಗುಂಪನ್ನು ಪತ್ತೆ ಮಾಡಿದರು. ಎ, ಬಿ, ಎಬಿ ಒ ರಕ್ತ ಗುಂಪಿನಲ್ಲಿ ಪಾಸಿಟಿವ್‌ ಮತ್ತು ನೆಗೆಟಿವ್‌ ಇದ್ದಂತೆ ಬಾಂಬೆ ರಕ್ತದಲ್ಲಿಯೂ ಪಾಸಿಟಿವ್‌ ಮತ್ತು ನೆಗೆಟಿವ್‌ ಗುಂಪು ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT