ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಸಬಲೀಕರಣಕ್ಕಾಗಿ ಸಾಲ ಸೌಲಭ್ಯ: ಮನೋಹರ್

Last Updated 4 ಡಿಸೆಂಬರ್ 2017, 6:56 IST
ಅಕ್ಷರ ಗಾತ್ರ

ಬಳ್ಳಾರಿ: ‘ಜಿಲ್ಲೆಯಲ್ಲಿರುವ ಎರಡು ಸಾವಿರ ಅಂಗವಿಕಲರಿಗೆ ತಲಾ ₹ 10 ಸಾವಿರ ಸಾಲ ಸೌಲಭ್ಯ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್ ತಿಳಿಸಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಅಂಗವಿಕಲರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಜಿಲ್ಲೆಯ ಅಂಗವಿಕಲರ ಜೀವನಕ್ಕೆ ಸಹಾಯವಾಗಲೆಂದು ಸಾಲ ಸೌಲಭ್ಯ ನೀಡುವ ಚಿಂತನೆ ನಡೆದಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು. ಅರ್ಹ ಫಲಾನುಭವಿಗಳಿಗೆ ಶೀಘ್ರವೇ ಸಾಲ ಸೌಲಭ್ಯದ ಚೆಕ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ ಅಂಗವಿಕಲ ಗೋಪಿಚಂದ್ ಅವರು ರಾಜ್ಯಮಟ್ಟದ ಈಜು ಸ್ಪರ್ಧೆ ಯಲ್ಲಿ ಭಾಗವಹಿಸಿ ಇಡೀ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಹೀಗಾಗಿ, ಅವರ ಮುಂದಿನ ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ ಅಂದಾಜು ₹ 3.65 ಲಕ್ಷ ಸಹಾಯಧನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಚ್.ಗೋವಿಂದಪ್ಪ, ಜಿಂದಾಲ್ ಸಂಸ್ಥೆಯ ಅಧಿಕಾರಿಗಳಾದ ಅಜಯ್‌, ಅಮ್ರಿನ್, ಹೊಸಪೇಟೆ ಸಾಧ್ಯ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯ ಮುಖ್ಯಸ್ಥರಾದ ಸುಶಾಂತ್ ಬೋಸ, ವೀಣಾ ಅವರನ್ನು ಗಣ್ಯರು ಗೌರವಿಸಿದರು. ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್‌ ಅವರು ಸುಮಾರು 72 ಅರ್ಹ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ದ್ವಿಚಕ್ರ ಸೈಕಲ್ ವಿತರಣೆ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದನೇ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಬಿ.ಹಂದ್ರಾಳ್, ಪಾಲಿಕೆ ಸದಸ್ಯ ಬೆಣಕಲ್ ಬಸವರಾಜ, ವಕೀಲರ ಸಂಘದ ಕಾರ್ಯದರ್ಶಿ ಜಿ.ಎಂ.ರವಿರಾಜಶೇಖರ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗೇಶ ಬಿಲ್ವಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ, ಕಿವುಡ ಮತ್ತು ಮೂಗ ಶಾಲೆಯ ಮುಖ್ಯ ಶಿಕ್ಷಕ ಕೊಟ್ರಪ್ಪ, ಸ್ಮೈಲ್ ಸಂಸ್ಥೆಯ ಮುಖ್ಯಸ್ಥ ಉಮಾಪತಿಗೌಡ ಉಪಸ್ಥಿತರಿದ್ದರು

ಹಾಡು ಹಾಡಿ, ಚಿತ್ರ ಬಿಡಿಸಿ ಸಂಭ್ರಮ
ಹೊಸಪೇಟೆ: ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಇಲ್ಲಿನ ಸರ್ದಾರ್‌ ಪಟೇಲ್‌ ಶಾಲೆಯಲ್ಲಿ ಭಾನುವಾರ ಅಂಗವಿಕಲರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳಿಗೆ ಓಟದ ಸ್ಪರ್ಧೆ, ಕಪ್ಪೆ ಓಟ, ಗಾಯನ, ಚಿತ್ರಕಲೆ, ಮ್ಯೂಸಿಕಲ್‌ ಚೇರ್‌ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಪೋಷಕರಿಗೆ ಮ್ಯೂಸಿಕಲ್‌ ಚೇರ್‌, ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಹಾಗೂ ಪೋಷಕರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಸ್ಥಳೀಯ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಆನಂದ್‌ ಅವರು ಕಾರ್ಯಕ್ರಮ ಉದ್ಘಾಟಿಸಿ, ‘ಇತರೆ ಮಕ್ಕಳಂತೆ ಅಂಗವಿಕಲರಿಗೂ ಎಲ್ಲ ಸೌಲಭ್ಯ ಸಿಗಬೇಕು. ಅಂಗವಿಕಲರನ್ನು ಗುರುತಿಸಿ ಪ್ರೋತ್ಸಾಹಿಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದು ಹೇಳಿದರು.

‘ಅಂಗವಿಕಲರು ಯಾವುದೇ ಬಗೆಯ ದೂರುಗಳಿದ್ದಲ್ಲಿ ನೇರವಾಗಿ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಸಮಸ್ಯೆಯನ್ನು ಆಲಿಸಿ ಪರಿಹಾರ ಒದಗಿಸಲಾಗುವುದು’ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಶಿ ಮಾತನಾಡಿ, ‘ಅಂಗವಿಕಲರಿಗಾಗಿ ಶಿಕ್ಷಣ ಇಲಾಖೆಯಿಂದ ಸಾಧನಗಳನ್ನು ವಿತರಿಸಲಾಗಿದೆ. ಶೀಘ್ರದಲ್ಲೇ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗುವುದು. ಮಕ್ಕಳು, ಪೋಷಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಗುವುದು’ ಎಂದು ಹೇಳಿದರು. ಸ್ಥಳೀಯ ಸಿವಿಲ್‌ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಶಿವನಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಟಿ. ಗುರುರಾಜ್‌, ಬಿ.ಆರ್‌.ಪಿ. ಬಸವರಾಜ ಇದ್ದರು.

ಅಂಗವಿಕಲರಿಗೆ ಪ್ರೋತ್ಸಾಹ ಅಗತ್ಯ
ಸಂಡೂರು: ‘ಅಂಗವಿಕಲರಿಗೆ ಪಾಲಕರು, ಶಿಕ್ಷಕರು ಅಗತ್ಯ ಸಹಕಾರ ನೀಡಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಪುರಸಭೆ ಅಧ್ಯಕ್ಷ ಗಡಂಬ್ಲಿ ಚೆನ್ನಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಕಚೇರಿ ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ. ಉಮಾಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನ ಶಾಲೆಗಳಲ್ಲಿ 409 ಅಂಗವಿಕಲರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಇವರಲ್ಲಿ 65 ವಿದ್ಯಾರ್ಥಿಗಳಿಗೆ ಹತ್ತು ತಿಂಗಳವರೆಗೆ ಮಾಸಿಕ ₹250 ಸಾರಿಗೆ ಭತ್ಯೆ, 40 ವಿದ್ಯಾರ್ಥಿಗಳಿಗೆ ತಲಾ ₹250 ಬೆಂಗಾವಲು ಭತ್ಯೆ ನೀಡಲಾಗುತ್ತಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಗಂಗೂಬಾಯಿ ಚಂದ್ರನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಉಪಾಧ್ಯಕ್ಷ ಕೆ.ವಿ. ಸುರೇಶ್, ಶಿಕ್ಷಣ ಸಂಯೋಜಕ ಪಿ. ಶಿವರಾಜ್, ಮುಖ್ಯ ಶಿಕ್ಷಕ ಪದ್ಮನಾಭರಾವ್, ಎಂ.ಬಿ. ಕಂಪ್ಲಿ, ಸಿ.ಆರ್.ಪಿ. ಹುಲಿಕುಂಟೆಪ್ಪ, ಚಂದ್ರನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಗರಿಬೊಮ್ಮನಹಳ್ಳಿ: ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ವಲ್ಲಭಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ಅಂಗವಿಕಲ ವಿದ್ಯಾರ್ಥಿಗಳಿ ಗಾಗಿ ಕ್ರೀಡೆ ಮತ್ತು ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಪ್ಪೆ ಓಟ ಸ್ಪರ್ಧೆಯಲ್ಲಿ ಅಂಗವಿಕಲ ವಿದ್ಯಾರ್ಥಿಗಳು ಜಿಗಿದು ಗಮನ ಸೆಳೆದರು. ಭಾಗವಹಿಸಿದ ಎಲ್ಲರಿಗೂ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಹಲಗೇರಿ ಸುರೇಶ್ ಮಾತನಾಡಿ, ‘ತಾಲ್ಲೂಕಿನಲ್ಲಿ 359 ಅಂಗವಿಕಲ ವಿದ್ಯಾರ್ಥಿಗಳಿ ದ್ದಾರೆ. ಎಲ್ಲ ಮಕ್ಕಳಿಗೆ ಗುರುತಿನ ಚೀಟಿ ನೀಡಲಾಗಿದೆ. ಅಗತ್ಯತೆಗೆ ಅನುಗುಣವಾಗಿ ಶ್ರವಣ, ದೃಶ್ಯ ಮತ್ತು ಗಾಲಿ ಕುರ್ಚಿ ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ’ ಎಂದರು. ವಿದ್ಯಾರ್ಥಿ ಮಂಜುನಾಥಗೆ ಶ್ರವಣ ಸಾಧನ ವಿತರಿಸಲಾಯಿತು.

ಅಂಗವಿಕಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜವಳಿ ಕೊಟ್ರೇಶಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಬೋರಯ್ಯ, ಶಾಲೆಯ ಪ್ರಭಾರ ಪ್ರಾಂಶುಪಾಲ ಕೆ.ಎಸ್.ವೆಂಕಟೇಶ್, ಪ್ರೀಮಾ, ಟೀನಾ, ಮುಖ್ಯಶಿಕ್ಷಕರಾದ ವಟ್ಟಮ್ಮನಹಳ್ಳಿ ಮಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT