ಬೀದರ್

ರೈಲ್ವೆ ಕೆಳಸೇತುವೆ ರಸ್ತೆ ಡಾಂಬರೀಕರಣ

ರಸ್ತೆ ಡಾಂಬರೀಕರಣದಿಂದಾಗಿ ವಿಮಾನ ನಿಲ್ದಾಣ, ಶಾಲಾ ಕಾಲೇಜು, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಅನೇಕ ಗ್ರಾಮಗಳ ಜನರ ಸಂಚಾರಕ್ಕೆ ಅನುಕೂಲವಾಗಿ ಪರಿಣಮಿಸಿದೆ.

ಬೀದರ್‌ನ ಆದರ್ಶ ಕಾಲೊನಿಯ ರೈಲ್ವೆ ಕೆಳ ಸೇತುವೆ ಎದುರಿನ ರಸ್ತೆ ಡಾಂಬರೀಕರಣ ಮಾಡಲಾಗಿದೆ

ಬೀದರ್: ಇಲ್ಲಿಯ ಚಿದ್ರಿ– ಶಿವನಗರ ಮಾರ್ಗದಲ್ಲಿ ಇರುವ ಆದರ್ಶ ಕಾಲೊನಿಯ ರೈಲ್ವೆ ಕೆಳಸೇತುವೆ ಎದುರಿನ ರಸ್ತೆ ಡಾಂಬರೀಕರಣಗೊಂಡಿದೆ. ಕೊನೆಗೂ ವಾಯುಪಡೆ ಹಾಗೂ ಜಿಲ್ಲಾ ಆಡಳಿತದ ನಡುವಿನ ಸಂಘರ್ಷ ತಾರ್ಕಿಕ ಅಂತ್ಯ ಕಂಡಿದೆ.

ರಸ್ತೆ ಡಾಂಬರೀಕರಣದಿಂದಾಗಿ ವಿಮಾನ ನಿಲ್ದಾಣ, ಶಾಲಾ ಕಾಲೇಜು, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಅನೇಕ ಗ್ರಾಮಗಳ ಜನರ ಸಂಚಾರಕ್ಕೆ ಅನುಕೂಲವಾಗಿ ಪರಿಣಮಿಸಿದೆ. ಭಾಲ್ಕಿ, ಔರಾದ್‌ ಕಡೆಯಿಂದ ವಿಮಾನ ನಿಲ್ದಾಣ ಕಡೆಗೆ ಹೋಗುವವರಿಗೂ ದಾರಿ ಸುಗಮವಾಗಿದೆ.
ಆಡಳಿತಾಧಿಕಾರಿಗಳ ಸಂಘರ್ಷದಿಂದಾಗಿ ವಿದ್ಯಾರ್ಥಿಗಳು, ನೌಕರ ವರ್ಗದವರು ಹಾಗೂಸಾರ್ವಜನಿಕರು ನಾಲ್ಕು ವರ್ಷಗಳ ಕಾಲ ಹಿಂಸೆ ಅನುಭವಿಸಿದ್ದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಲೇ ಇದ್ದರು. ರಸ್ತೆ ಹಾವಿನಂತಿದ್ದರೂ ಸ್ವಲ್ಪ ಸಮಾಧಾನ ಉಂಟು ಮಾಡಿದೆ.

ನಗರದ ಆದರ್ಶ ಕಾಲೊನಿಯಲ್ಲಿ 2012ರಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ ಮಾಡಲಾಗಿತ್ತು. ನಗರಸಭೆಯವರು ಇಲ್ಲಿ ರಸ್ತೆ ನಿರ್ಮಾಣ ಮಾಡಲು ಆರಂಭಿಸಿದಾಗ ವಾಯುಪಡೆ ತರಬೇತಿ ಕೇಂದ್ರದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಯಾಗಿದ್ದ ಪಿ.ಸಿ.ಜಾಫರ್‌ ಅವರು ಕಂದಾಯ, ಲೋಕೋಪಯೋಗಿ ಇಲಾಖೆ ಹಾಗೂ ವಾಯುಪಡೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯೊಂದನ್ನು ರಚಿಸಿ ಸಮೀಕ್ಷೆ ನಡೆಸಿದ್ದರು. ರಸ್ತೆ ನಿರ್ಮಾಣದಲ್ಲಿ ಹೋಗುವ ಜಾಗಕ್ಕೆ ಪರ್ಯಾಯವಾಗಿ ಬೇರೆ ಕಡೆಗೆ ಜಾಗ ಕೊಡಲು ಲಿಖಿತ ಒಪ್ಪಿಗೆ ಕೊಟ್ಟಿದ್ದರು.

ಆದರ್ಶ ಕಾಲೊನಿಯಲ್ಲಿನ 31 ಗುಂಟೆ ಜಾಗ ವಾಯುಪಡೆ ತರಬೇತಿ ಕೇಂದ್ರಕ್ಕೆ ಸೇರಿದೆ. ಜಿಲ್ಲಾ ಆಡಳಿತ ಪರ್ಯಾಯ ಜಾಗ ತೋರಿಸಿದರೂ ವಾಯುಪಡೆ ಅಧಿಕಾರಿಗಳು ಒಪ್ಪಿರಲಿಲ್ಲ. ಹೀಗಾಗಿ ಜಾಗ ಹಸ್ತಾಂತರದ ಸಮಸ್ಯೆ ಜಟಿಲಗೊಂಡಿತ್ತು.

ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹಿಂದಿನ ಜಿಲ್ಲಾಧಿಕಾರಿ ಅನುರಾಗ ತಿವಾರಿ ಸೇತುವೆ ಮುಂದೆ ನಿರ್ಮಿಸಿದ್ದ ತಡೆಗೋಡೆ ತೆರವುಗೊಳಿಸುವ ಜತೆಗೆ ಸಿಂಡಿಕೇಟ್‌ ಬ್ಯಾಂಕ್‌ ವರೆಗೂ ಕಚ್ಚಾ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.

ವಾಯುಪಡೆ ಬೀದರ್‌ ಕೇಂದ್ರ ಹಾಗೂ ಬೆಂಗಳೂರಿನ ವಾಯುಪಡೆಯ ತರಬೇತಿ ವಿಭಾಗದ ಪ್ರಧಾನ ಕಚೇರಿಯ ಅಧಿಕಾರಿಗಳಿಗೆ ಜಿಲ್ಲಾ ಆಡಳಿತ 2013 ರಿಂದ ಪತ್ರ ಬರೆಯುತ್ತಲೇ ಇತ್ತು. ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ರೈಲ್ವೆ ಸಚಿವಾಲಯದ ಆಪ್ತ ಕಾರ್ಯದರ್ಶಿಗಳಿಗೂ ಪತ್ರ ಬರೆದಿತ್ತು.

‘ಜಿಲ್ಲಾ ಆಡಳಿತವು ಈಗಾಗಲೇ ವಾಯುಪಡೆಗೆ ಪರ್ಯಾಯ ಜಾಗ ಗುರುತಿಸಿ ಅವರ ಹೆಸರಲ್ಲಿ ನೋಂದಣಿ ಮಾಡಿದೆ. ವಾಯುಪಡೆ ಅಧಿಕಾರಿಗಳೂ ಒಪ್ಪಿಗೆ ಸೂಚಿಸಿದ್ದ ಕಡತ ರಕ್ಷಣಾ ಇಲಾಖೆಯ ಕಚೇರಿಯಲ್ಲಿದೆ. ದೆಹಲಿ ಕಚೇರಿಯಿಂದ ಆದೇಶ ಹೊರ ಬರುತ್ತಿದ್ದಂತೆಯೇ ವಾಯುಪಡೆ ನಗರಸಭೆಗೆ ಜಾಗ ಬಿಟ್ಟುಕೊಡಲಿದೆ’ ಎಂದು ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಹೇಳುತ್ತಾರೆ. 2013ರ ಡಿಸೆಂಬರ್ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಬಂದಿದ್ದ ವೇಳೆಯಲ್ಲಿ ರೈಲ್ವೆ ಕೆಳಸೇತುವೆ ಬಳಿ ರಸ್ತೆ ನಿರ್ಮಾಣಕ್ಕೆ ಒತ್ತುಕೊಡಲಾಯಿತು.

ಈಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ‘ಹೊಸ ರಸ್ತೆ ನಿರ್ಮಿಸಿದ ಮೇಲೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಳ್ಳಿಗಳಿಂದ ನಗರಕ್ಕೆ ಬರುತ್ತಿದ್ದವರ ಸಂಚಾರ ಸಮಸ್ಯೆ ನಿವಾರಣೆ ಆಗಿದೆ. ಆದರೆ ಕಾಲೊನಿಯ ನಿವಾಸಿಗಳ ಸಮಸ್ಯೆ ಬಗೆಹರಿದಿಲ್ಲ. ಜಿಲ್ಲಾ ಆಡಳಿತ ಕಾಲೊನಿಯಲ್ಲೂ ರಸ್ತೆ ನಿರ್ಮಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಕಾಲೊನಿ ನಿವಾಸಿ ಅಭಯಕುಮಾರ ಒತ್ತಾಯಿಸುತ್ತಾರೆ.

* * 

ಬೀದರ್‌ನ ಆದರ್ಶ ಕಾಲೊನಿ ಸದ್ಯ ನಡುಗಡ್ಡೆಯಾಗಿದೆ. ವಾಯುಪಡೆಯವರು ಒಂದು ಕಡೆ ಗೇಟ್‌ ಬಂದ್‌ ಮಾಡಿರುವ ಕಾರಣ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಅಭಯಕುಮಾರ ಆದರ್ಶ ಕಾಲೊನಿ ನಿವಾಸಿ

Comments
ಈ ವಿಭಾಗದಿಂದ ಇನ್ನಷ್ಟು

ಹುಮನಾಬಾದ್
ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

‘ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತರಬೇಕು. ಶಿಕ್ಷಣದ ಜೊತೆ ಶಿಸ್ತು ಮತ್ತು ಸಂಸ್ಕಾರವೂ ಅಷ್ಟೇ ಮುಖ್ಯ'. ...

18 Jan, 2018
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

ಬೀದರ್‌
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

18 Jan, 2018
ರಸ್ತೆ ಡಾಂಬರೀಕರಣಗೊಳಿಸಿ

ಬಸವಕಲ್ಯಾಣ
ರಸ್ತೆ ಡಾಂಬರೀಕರಣಗೊಳಿಸಿ

18 Jan, 2018
ಹಾಳುಬಿದ್ದ ಶಿಕ್ಷಕರ ವಸತಿ ಗೃಹ

ಕಮಲನಗರ
ಹಾಳುಬಿದ್ದ ಶಿಕ್ಷಕರ ವಸತಿ ಗೃಹ

17 Jan, 2018

ಔರಾದ್
16 ವಿದ್ಯಾರ್ಥಿಗಳು ಅಸ್ವಸ್ಥ

‘ಇಬ್ಬರು ಮಕ್ಕಳನ್ನು ಹೊರತುಪಡಿಸಿ ಎಲ್ಲ ಮಕ್ಕಳು ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ. ಆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ಕಳುಹಿಸಲಾಗುವುದು

17 Jan, 2018