ದಾವಣಗೆರೆ

ಮಾಧ್ಯಮವು ಸಮಾಜ, ಸಮುದಾಯದ ಸೇತುವೆಯಾಗಲಿ

ದೊಡ್ಡ ಕತ್ತಲನ್ನು ನಾಶ ಮಾಡುವಂತಹ ಶಕ್ತಿ ಮಾಧ್ಯಮ ಎಂಬ ಹಣತೆಗಿದೆ. ಹೀಗಾಗಿ ಪತ್ರಕರ್ತರ ಕಣ್ಣು, ಕಿವಿ ಹಾಗೂ ಮೂಗು ಹೆಚ್ಚು ಚುರುಕಾಗಿರಬೇಕು

ದಾವಣಗೆರೆ: ಸಮಾಜ ಮತ್ತು ಸಮುದಾಯದ ನಡುವೆ ಮಾಧ್ಯಮಗಳು ಸೇತುವೆಯಾಗಿ ಕೆಲಸ ಮಾಡಬೇಕಾದ ಅವಶ್ಯವಿದೆ ಎಂದು ಹಿರಿಯ ಪತ್ರಕರ್ತ ಜಿ.ಎನ್‌.ಮೋಹನ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು, ‘ಮಾಧ್ಯಮ ಸಾಗುತ್ತಿರುವ ದಿಕ್ಕು ಯಾವುದು?’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಟಿಆರ್‌ಪಿ ಹಾಗೂ ಪತ್ರಿಕೆಯ ಪ್ರಸರಣ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಧ್ಯಮಗಳು ಸಂಭ್ರಮದ ಸುದ್ದಿಗಳಿಗೆ ಆದ್ಯತೆ ನೀಡುತ್ತಿವೆ. ಇದರಿಂದಾಗಿ ಅಂಗನವಾಡಿ ಅಮ್ಮಂದಿರ ಹಸಿವು, ನೋವು ಹಾಗೂ ಸಂಕಟವನ್ನು ಪ್ರತಿಬಿಂಬಿಸುವಂತಹ ಅಳುಬುರಕ ಸುದ್ದಿಗಳು ಬಲಿಯಾಗುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಾಗತೀಕರಣದಿಂದಾಗಿ ಪ್ರತಿ ಕ್ಷೇತ್ರವೂ ಬದಲಾಗಿದ್ದು, ಹಣ ಪ್ರಧಾನವಾಗಿದೆ. ಮಾಧ್ಯಮ ಕ್ಷೇತ್ರ ಸೇವಾಕ್ಷೇತ್ರವಾಗಿ ಉಳಿದಿಲ್ಲ. ಉದ್ಯಮವಾಗಿ ಬೆಳೆಯುತ್ತಿದೆ. ಪತ್ರಕರ್ತರಲ್ಲಿನ ಪ್ರಶ್ನೆ ಕೇಳುವ ಮನಸ್ಸನ್ನು ಜಾಗತೀಕರಣ ಹೊಸಕಿಹಾಕಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಂಸ್ಥಿಕ ಭ್ರಷ್ಟಾಚಾರ ಬೆಳೆಯುತ್ತಿರುವುದು ಅಪಾಯಕಾರಿ ಲಕ್ಷಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭಾರತವು ಐಪಿಎಲ್‌ ಮತ್ತು ಬಿಪಿಎಲ್‌ ಎಂದು ಎರಡು ಭಾಗವಾಗಿದೆ. ರಂಗು ರಂಗಿನ ಸುದ್ದಿಗಳ ಐಪಿಎಲ್‌ ಭಾರತವು ವೇಗವಾಗಿ ಬೆಳೆಯುತ್ತಿದೆ. ಇದರ ಜತೆಯಲ್ಲಿಯೇ ಬಿಪಿಎಲ್‌ ಭಾರತವನ್ನೂ ಕೊಂಡೊಯ್ಯಬೇಕಿದೆ ಎಂದು ಪ್ರತಿಪಾಧಿಸಿದರು.

ದೊಡ್ಡ ಕತ್ತಲನ್ನು ನಾಶ ಮಾಡುವಂತಹ ಶಕ್ತಿ ಮಾಧ್ಯಮ ಎಂಬ ಹಣತೆಗಿದೆ. ಹೀಗಾಗಿ ಪತ್ರಕರ್ತರ ಕಣ್ಣು, ಕಿವಿ ಹಾಗೂ ಮೂಗು ಹೆಚ್ಚು ಚುರುಕಾಗಿರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ, ಯಾವುದೇ ಆಸೆ–ಆಮಿಷಗಳಿಗೆ ಒಳಗಾಗದೇ ನೈಜವಾದ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ಪತ್ರಕರ್ತರಿಗೆ ಸಲಹೆ ನೀಡಿದರು.

‘ದೂಡಾ’ದಿಂದ ಜಿಲ್ಲಾ ವರದಿಗಾರರ ಕೂಟದ ಭವನ ನಿರ್ಮಾಣಕ್ಕಾಗಿ ಅಗತ್ಯ ನಿವೇಶನ ಮಂಜೂರು ಮಾಡಲಾಗುವುದು. ಜತೆಗೆ ಸ್ಥಳೀಯರಿಗೆ ಅದರಲ್ಲೂ ಅರ್ಹರಿಗೆ ನಿವೇಶನ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಜಿಲ್ಲಾ ವರದಿಗಾರರ ಕೂಟದ ಭವನ ನಿರ್ಮಾಣಕ್ಕಾಗಿ ನನ್ನ ಅನುದಾನದಲ್ಲಿ ಅಗತ್ಯ ಸಹಾಯ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವ್ಯಂಗ್ಯಚಿತ್ರಕಾರ ಎಚ್‌.ಬಿ.ಮಂಜುನಾಥ, ಆಂದೋಲನ ಪ್ರಶಸ್ತಿಗೆ ಪಾತ್ರವಾದ ‘ನಗರವಾಣಿ’ ಪತ್ರಿಕೆಯ ಪರವಾಗಿ ಬಿ.ಎನ್‌.ಮಲ್ಲೇಶ್‌ ಅವರನ್ನು ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಬಸವರಾಜ ದೊಡ್ಮನಿ ಅವರನ್ನು ಇದೇ ಸಮಯದಲ್ಲಿ ಸನ್ಮಾನಿಸಲಾಯಿತು.

ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ ಅವರನ್ನೂ ವರದಿಗಾರರ ಕೂಟದಿಂದ ಗೌರವಿಸಲಾಯಿತು. ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಬಡದಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಾನಪದ ತಜ್ಞ ಎಂ.ಜಿ.ಈಶ್ವರಪ್ಪ, ಹಿರಿಯ ಲೆಕ್ಕಪರಿಶೋಧಕ ಅಥಣಿ ವೀರಣ್ಣ, ಡಿ.ಬಸವರಾಜ್, ಯಶವಂತರಾವ್‌ ಜಾಧವ್ ಹಾಗೂ ವರದಿಗಾರರ ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೂಟದ ಹಿರಿಯ ಉಪಾಧ್ಯಕ್ಷ ರವಿ ಆರುಂಡಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಕಬ್ಬೂರು ಸ್ವಾಗತಿಸಿದರು. ರಶ್ಮಿ ಪ್ರಾರ್ಥಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ದಾವಣಗೆರೆ
ಮಾಯಕೊಂಡ ನಿರೀಕ್ಷಿತ; ಜಗಳೂರು ಅನಿರೀಕ್ಷಿತ!

ದಾವಣಗೆರೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯ ಗೊಂದಲ ಮೇಲ್ನೋಟಕ್ಕೆ ಬಗೆಹರಿದಂತೆ ಕಂಡರೂ ಪಕ್ಷದಲ್ಲಿ ಅಲ್ಲಲ್ಲಿ ಅಸಮಾಧಾನದ ಹೊಗೆ ಹೊರಡುತ್ತಲೇ ಇದೆ.

24 Apr, 2018

ದಾವಣಗೆರೆ
ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಘಟಾನುಘಟಿಗಳು

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದು, ಸೋಮವಾರವೇ ಜಿಲ್ಲೆಯ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

24 Apr, 2018

ದಾವಣಗೆರೆ
ದಾವಣಗೆರೆ: 31 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 31 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

24 Apr, 2018

ಸಂತೇಬೆನ್ನೂರು
ಸಂಸ್ಕೃತಿ ಅಂತರಂಗದ ಅರಿವಿನ ಬೆಳಕು

ಸಂಸ್ಕೃತಿ ಅಂತರಂಗದ ಅರಿವಿನ ಬೆಳಕು. ಮಕ್ಕಳಲ್ಲಿ ಲೋಕ ಶಿಕ್ಷಣದ ಮೂಲಕ ಬೆಳಕನ್ನು ಮೂಡಿಸಲು ಬೇಸಿಗೆ ಶಿಬಿರಗಳು ಪೂರಕ ಎಂದು ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ...

23 Apr, 2018

ಜಗಳೂರು
ಜಗಳೂರಿಗೆ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಲಯ

ಜಗಳೂರು ತಾಲ್ಲೂಕಿನ ಬಹುದಿನಗಳ ಬೇಡಿಕೆಯಾಗಿರುವ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್...

23 Apr, 2018