ಕೋಲಾರ

ಭೂಸ್ವಾಧೀನಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ರೈತರ ವಿರೋಧ

‘ಕಚೇರಿಯು ಬೆಂಗಳೂರಿಗೆ ಸ್ಥಳಾಂತರವಾದರೆ ಜಿಲ್ಲೆಯ ರೈತರಿಗೆ ಸಮಸ್ಯೆಯಾಗುತ್ತದೆ. ಅಧಿಕಾರಿಗಳು ಭೂಪರಿಹಾರಕ್ಕಾಗಿ ರೈತರನ್ನು ಬೆಂಗಳೂರಿಗೆ ಅಲೆದಾಡಿಸಿ ದಲ್ಲಾಳಿಗಳ ಮೂಲಕ ಲಂಚ ಪಡೆಯುವ ಹುನ್ನಾರ ಮಾಡಿದ್ದಾರೆ

ಕೋಲಾರ: ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದಲ್ಲಿ ಸೋಮವಾರ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡ ಸಂದರ್ಭದಲ್ಲಿ ಭೂಪರಿಹಾರ ಕಲ್ಪಿಸಲು ಮತ್ತು ರೈತರ ಕಷ್ಟಗಳಿಗೆ ಸ್ಪಂದಿಸಲು ಕೋಲಾರದಲ್ಲೇ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಇರುವುದರಿಂದ ಅನುಕೂಲವಾಗಿತ್ತು. ಆದರೆ, ಅಧಿಕಾರಿಗಳು ವೈಯಕ್ತಿಕ ಲಾಭಕ್ಕೆ ಮತ್ತು ದಲ್ಲಾಳಿಗಳ ಹಿತಕ್ಕಾಗಿ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಿದರು.

‘ಕಚೇರಿಯು ಬೆಂಗಳೂರಿಗೆ ಸ್ಥಳಾಂತರವಾದರೆ ಜಿಲ್ಲೆಯ ರೈತರಿಗೆ ಸಮಸ್ಯೆಯಾಗುತ್ತದೆ. ಅಧಿಕಾರಿಗಳು ಭೂಪರಿಹಾರಕ್ಕಾಗಿ ರೈತರನ್ನು ಬೆಂಗಳೂರಿಗೆ ಅಲೆದಾಡಿಸಿ ದಲ್ಲಾಳಿಗಳ ಮೂಲಕ ಲಂಚ ಪಡೆಯುವ ಹುನ್ನಾರ ಮಾಡಿದ್ದಾರೆ. ಸ್ಥಳೀಯ ರೈತರು ಹಾಗೂ ರೈತ ಮುಖಂಡರೊಂದಿಗೆ ಚರ್ಚೆ ನಡೆಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಕೊಟ್ಟಿರುವ ಜಿಲ್ಲೆಯ ರೈತರು ಭೂಪರಿಹಾರಕ್ಕಾಗಿ ನ್ಯಾಯಾಲಯ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ವರ್ಷಾನುಗಟ್ಟಲೇ ಅಲೆಯುತ್ತಿದ್ದಾರೆ. ದಲ್ಲಾಳಿಗಳ ಜತೆ ಶಾಮೀಲಾಗಿರುವ ಅಧಿಕಾರಿಗಳು ಭೂಪರಿಹಾರ ಕೊಡದೆ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಚೇರಿ ಸ್ಥಳಾಂತರವಾದರೆ ರೈತರ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ ಎಂದು ಹೇಳಿದರು.

ಹೆದ್ದಾರಿ ಬಂದ್‌: ಕಚೇರಿಯನ್ನು ಕೋಲಾರದಲ್ಲೇ ಮುಂದುವರಿಸಬೇಕು. ಕಚೇರಿಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಭೂಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ನಾಗರಾಜಗೌಡ, ಫಾರೂಕ್‌ ಪಾಷಾ, ರಂಜಿತ್ ಕುಮಾರ್, ಉಮಾಗೌಡ, ವಿಜಯಪಾಲ್, ಮಂಜು, ವೆಂಕಟೇಶ್, ಭರತ್, ಕೃಷ್ಣೇಗೌಡ, ನಾರಾಯಣಸ್ವಾಮಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ನಗರವಾಸಿಗಳ ವರ್ತುಲ ರಸ್ತೆಯ ಕನಸಿಗೆ ಜೀವ

ಕೋಲಾರ
ನಗರವಾಸಿಗಳ ವರ್ತುಲ ರಸ್ತೆಯ ಕನಸಿಗೆ ಜೀವ

22 Jan, 2018
ನೂತನ ಕೆಜಿಎಫ್‌ ತಾಲ್ಲೂಕಿಗೆ ಕೆ.ಸಿ.ರೆಡ್ಡಿ ಹೆಸರು

ಕೋಲಾರ
ನೂತನ ಕೆಜಿಎಫ್‌ ತಾಲ್ಲೂಕಿಗೆ ಕೆ.ಸಿ.ರೆಡ್ಡಿ ಹೆಸರು

20 Jan, 2018
ಮಾವಿನ ಮಡಿಲಲ್ಲಿ ಉಗನಿ ಹೂ ಹಬ್ಬ

ಕೋಲಾರ
ಮಾವಿನ ಮಡಿಲಲ್ಲಿ ಉಗನಿ ಹೂ ಹಬ್ಬ

20 Jan, 2018
21 ನಾಮನಿರ್ದೇಶಿತ ಸದಸ್ಯರಿಗೆ ಸಾಮೂಹಿಕ ಕೋಕ್‌

ಕೋಲಾರ
21 ನಾಮನಿರ್ದೇಶಿತ ಸದಸ್ಯರಿಗೆ ಸಾಮೂಹಿಕ ಕೋಕ್‌

19 Jan, 2018

ಕೋಲಾರ
ಅಕ್ಷರ ದಾಸೋಹ ಯೋಜನೆಯಲ್ಲಿ ರಾಜ್ಯ ಪ್ರಥಮ

‘ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಅಕ್ಷರ ದಾಸೋಹ ಹಾಗೂ ಕ್ಷೀರಭಾಗ್ಯ ಯೋಜನೆ ಮುಖ್ಯವಾಗಿವೆ’

19 Jan, 2018