ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಮಟ್ಟದ ಶಿಕ್ಷಣ ಆದ್ಯತೆ ಆಗಬೇಕು’

Last Updated 6 ಡಿಸೆಂಬರ್ 2017, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಡಾ ಡಿ.ಎಂ. ನಂಜುಂಡಪ್ಪ ವರದಿ ಬರುವವರೆಗೂ ನಮ್ಮ ಭಾಗದಲ್ಲಿ ಸರ್ಕಾರಿ ಕಾಲೇಜು ಇರಲಿಲ್ಲ. ಆಗ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರವಹಿಸಿದ್ದವು. ಹಾಗಾಗಿ ಸರ್ಕಾರಿ ಶಾಲೆಗಳು ಉಳಿಯಬೇಕು ಎನ್ನುವುದು ನಮ್ಮ ಧ್ಯೇಯವಾಗದೆ, ಪ್ರತಿ ವ್ಯಕ್ತಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ಆದ್ಯತೆ ಆಗಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ ಅವರು ಅಭಿಪ್ರಾಯಪಟ್ಟರು.

ಸೆಲ್ಕೊ ಸೋಲಾರ್‌ ಪ್ರೈವೇಟ್‌ ಲಿಮಿಟೆಡ್‌ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿಜಿಟಲ್‌ ಶಿಕ್ಷಣ ‘ಇ–ಶಾಲಾ’ಗೆ ಸಾವಿರದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಸವಾಲಾಗಿದೆ. ಇದನ್ನು ಸರ್ಕಾರ ಮಾತ್ರ ಎದುರಿಸಲು ಸಾಧ್ಯವಿಲ್ಲ. ಸಾರ್ವಜನಿಕರೂ ಇದಕ್ಕೆ ಕೈಜೋಡಿಸಬೇಕು’ ಎಂದರು.

‘ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗದಿರುವುದಕ್ಕೆ ಶಿಕ್ಷಕರನ್ನು ಗುರಿ ಮಾಡುವುದು ಸರಿಯಲ್ಲ. ನನ್ನ ಮತ ಕ್ಷೇತ್ರದಲ್ಲಿಯೇ ಕೆಲವು ಶಾಲೆಗಳಲ್ಲಿ ಇಂಗ್ಲಿಷ್‌ ಭಾಷಾ ಶಿಕ್ಷಕರಿಲ್ಲ, ಇನ್ನೂ ಕೆಲವು ಶಾಲೆಗಳಲ್ಲಿ ಇಂಗ್ಲಿಷ್‌ ಶಿಕ್ಷಕ ಹುದ್ದೆಯೇ ಇಲ್ಲ. ಅನೇಕ ಶಾಲಾ ಶಿಕ್ಷಕರಿಗೆ ತರಬೇತಿಯ ಅಗತ್ಯವಿದೆ. ಇದೆಲ್ಲದರ ಜೊತೆಗೆ ಶಿಕ್ಷಕರಿಗೆ ಬೋಧಕೇತರ ಕೆಲಸಗಳ ಹೊರೆ. ಪರಿಸ್ಥಿತಿ ಹೀಗಿದ್ದಾಗ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಶಿಕ್ಷಕರಿಲ್ಲದಿದ್ದಾಗ ಮಕ್ಕಳಿಗೆ ತರಗತಿಗಳು ತಪ್ಪಬಾರದೆಂದು, ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ಸಿಗಬೇಕೆಂದು ಇ–ಶಾಲಾ ಕಾರ್ಯಕ್ರಮ ಅಳವಡಿಸಲು ಸಮ್ಮತಿಸಿದೆ. ಶಾಸಕರ ನಿಧಿಯಿಂದ ಒಂದು ಸರ್ಕಾರಿ ಶಾಲೆ, ಒಂದು ಅನುದಾನಿತ ಶಾಲೆ ಹಾಗೂ ಒಂದು ಅನುದಾನ ರಹಿತ ಶಾಲೆಗೆ ಇ–ಶಾಲಾ ಕಿಟ್‌ ಕೊಡುಗೆ ನೀಡಿದ್ದೇನೆ. ಬಹಳ ಉಪಯೋಗಕಾರಿಯಾಗಿದ್ದು, ಎಲ್ಲಾ ಶಾಲೆಗೂ ವಿಸ್ತರಿಸುವ ಆಲೋಚನೆ ಇದೆ’ ಎಂದು ವಿವರಿಸಿದರು.

ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್ ಹೆಗ್ಡೆ, ‘ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಮ್ಮ ಕಾಲದಲ್ಲಿ ಜೈಲಿಗೆ ಹೋಗಿ ಬಂದ ವ್ಯಕ್ತಿಯನ್ನು ಸಮಾಜ ಬಹಿಷ್ಕರಿಸುತ್ತಿತ್ತು. ಆದರೆ, ಈಗ ಜೈಲಿಗೆ ಹೋಗಿದ್ದವರು ಹೊರಬರುವಾಗ ಅವರನ್ನು ಸ್ವಾಗತಿಸಲು ನೂರು ಮಂದಿ ಹೋಗಿರುತ್ತಾರೆ. ಈ ರೀತಿ ಭ್ರಷ್ಟ ವ್ಯವಸ್ಥೆ ನಮ್ಮ ಎದುರಿಗಿದೆ. ಇದನ್ನು ಬದಲಿಸುವ ಜವಾಬ್ದಾರಿ ಯುವಜನಾಂಗದ ಮೇಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಮೆಂಡಾ ಪ್ರತಿಷ್ಠಾನದ ಸಂಸ್ಥಾಪಕ ಅರ್ಜುನ್‌ ಮೆಂಡಾ ಅವರಿಗೆ ‘ವಿದ್ಯಾ ಪೋಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, ವಿವಿಧ ಶಾಲೆಯ 21 ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು.

ಸೆಲ್ಕೊ ಪ್ರತಿಷ್ಠಾನ, ಮೆಂಡಾ ಪ್ರತಿಷ್ಠಾನ, ಸೆಲ್ಕೊ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಸಿ.ಎಲ್‌ ಟ್ರಸ್ಟ್‌ ಜಂಟಿಯಾಗಿ ಪ್ರಾರಂಭಿಸಿರುವ ಡಿಜಿಟಲ್‌ ಶಿಕ್ಷಣ ಕಾರ್ಯಕ್ರಮ ‘ಇ–ಶಾಲಾ’ ರಾಜ್ಯದ 30 ಜಿಲ್ಲೆಗಳಿಗೂ ತಲುಪಿದ್ದು, 1,000 ಶಾಲೆಗಳು ಇದರ ಉಪಯೋಗ ಪಡೆಯುತ್ತಿವೆ. ಒಟ್ಟು 1,60,887 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. 200ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT