ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಾತಾಳಕ್ಕಿಳಿದ ಗಂಗೆ

ಆತಂಕ ತಂದಿತ್ತ ಅಂತರ್ಜಲ ಕುಸಿತ

ಇದೀಗ ಬೆಳ್ತಂಗಡಿ ಮತ್ತು ಪುತ್ತೂರು ತಾಲ್ಲೂಕುಗಳು ಅಪಾಯದ ಅಂಚಿಗೆ ತಲುಪಿದ್ದು, ಬೆಳ್ತಂಗಡಿ ತಾಲ್ಲೂಕಿನಲ್ಲಿ ನೀರಿಗಾಗಿ 700 ಅಡಿ ಕೊಳವೆಬಾವಿ ಕೊರೆದಿರುವುದು ಇದುವರೆಗಿನ ದಾಖಲೆಯಾಗಿ ಪರಿಣಮಿಸಿದೆ.

ಪಾತಾಳಕ್ಕೆ ಇಳಿದಿರುವ ಅಂತರ್ಜಲ (ಸಾಂದರ್ಭಿಕ ಚಿತ್ರ)

ಮಂಗಳೂರು: ಮಳೆಗಾಲದಲ್ಲಿ 3400 ಮಿ.ಮೀ. ಮಳೆ ಸುರಿಯುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಂತರ್ಜಲ ಆತಂಕವನ್ನು ತಂದಿದೆ. ಮಳೆಯ ನೀರೆಲ್ಲ ಸರಾಗವಾಗಿ ಹರಿದು ಸಮುದ್ರ ಸೇರುತ್ತಿದ್ದು, ಮಿತಿಮೀರಿ ಕೊಳವೆ ಬಾವಿಗಳನ್ನು ಕೊರೆಯುತ್ತಿರುವುದು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ.

ಇದೀಗ ಬೆಳ್ತಂಗಡಿ ಮತ್ತು ಪುತ್ತೂರು ತಾಲ್ಲೂಕುಗಳು ಅಪಾಯದ ಅಂಚಿಗೆ ತಲುಪಿದ್ದು, ಬೆಳ್ತಂಗಡಿ ತಾಲ್ಲೂಕಿನಲ್ಲಿ ನೀರಿಗಾಗಿ 700 ಅಡಿ ಕೊಳವೆಬಾವಿ ಕೊರೆದಿರುವುದು ಇದುವರೆಗಿನ ದಾಖಲೆಯಾಗಿ ಪರಿಣಮಿಸಿದೆ.

ಕುಸಿಯುತ್ತಲೇ ಸಾಗಿದ ಅಂತರ್ಜಲ: ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. ಹೀಗಾಗಿ ಪ್ರತಿ ವರ್ಷವೂ ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವುದಕ್ಕಾಗಿಯೇ ವಿಶೇಷ ಅಭಿಯಾನ ನಡೆಸುವ ಅನಿವಾರ್ಯತೆ ಎದುರಿಸುವಂತಾಗಿದೆ.

2000ರಲ್ಲಿ ಬಂಟ್ವಾಳ ತಾಲ್ಲೂಕಿನಲ್ಲಿ 8.15 ಮೀ. ಇದ್ದರೆ 2014ರಲ್ಲಿ 12.18 ಮೀ., ಬೆಳ್ತಂಗಡಿ ತಾಲ್ಲೂಕಿನಲ್ಲಿ 2004ರಲ್ಲಿ 8.40 ಮೀ., 2014ರಲ್ಲಿ 9.80 ಮೀ., ಮಂಗಳೂರು ತಾಲ್ಲೂಕಿನಲ್ಲಿ 2004ರಲ್ಲಿ 9.78 ಮೀ. ಇದ್ದರೆ 2014ರಲ್ಲಿ 17.40 ಮೀ.ಗೆ ಇಳಿದಿದೆ. ಪುತ್ತೂರು ತಾಲ್ಲೂಕಿನಲ್ಲಿ 2004ರಲ್ಲಿ 7.44 ಮೀ. ಇದ್ದರೆ, 2014ರಲ್ಲಿ 10.84 ಮೀ.ಗೆ ಇಳಿದಿದೆ. ಸುಳ್ಯ ತಾಲ್ಲೂಕಿನಲ್ಲಿ 2004ರಲ್ಲಿ 9.12 ಮೀ. ಇದ್ದರೆ 2014ರಲ್ಲಿ 11.69 ಮೀ.ಗೆ ಇಳಿದಿದೆ ಎನ್ನುವುದು ಅಧಿಕಾರಿಗಳೇ ನೀಡುವ ವಿವರಣೆ.

2015ನೇ ಸಾಲಿನ ಅಧ್ಯಯನದಂತೆ ಸೆಪ್ಟೆಂಬರ್‌ನಲ್ಲಿ ನೀರಿನ ಮಟ್ಟ ಬಂಟ್ವಾಳ ತಾಲ್ಲೂಕಿನಲ್ಲಿ 7.17 ಮೀ., ಬೆಳ್ತಂಗಡಿಯಲ್ಲಿ 6.27 ಮೀ., ಮಂಗಳೂರಿನಲ್ಲಿ 8.68 ಮೀ. ಪುತ್ತೂರಿನಲ್ಲಿ 5.02 ಮೀ. ಹಾಗೂ ಸುಳ್ಯದಲ್ಲಿ 8.10 ಮೀಟರ್‌ ಅಂತರ್ಜಲ ಮಟ್ಟ ದಾಖಲಾಗಿತ್ತು.

ಕೊಳವೆಬಾವಿಗೆ ನಿಷೇಧ: ಅಂತರ್ಜಲ ಮಟ್ಟ ಕುಸಿತವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ನಿವಾರಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಿ, ಕಳೆದ ವರ್ಷ ಸರ್ಕಾರ ಆದೇಶ ಹೊರಡಿಸಿತ್ತು. ಈ ಪೈಕಿ ದಕ್ಷಿಣ ಕನ್ನಡ ಪುತ್ತೂರು ತಾಲ್ಲೂಕಿನಲ್ಲಿ ಕೊಳವೆಬಾವಿ ಬಾವಿ ಕೊರೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.

ಈ ವರ್ಷವೂ ನೀರಿನ ಇಂಗುವಿಕೆಗೆ ಆದ್ಯತೆ ನೀಡದೇ ಇದ್ದಲ್ಲಿ, ಮತ್ತೆ ಇಂತಹ ಪರಿಸ್ಥಿತಿ ನಿರ್ಮಾಣ ಆಗಲಿದೆ ಎನ್ನುವ ಆತಂಕವೂ ಅಧಿಕಾರಿಗಳನ್ನು ಕಾಡುತ್ತಿದೆ. ಡಿಸೆಂಬರ್‌ ಅಂತ್ಯದಿಂದಲೇ ಕಿಂಡಿ ಅಣೆಕಟ್ಟೆಗಳಿಗೆ ಹಲಗೆ ಹಾಕುವ ಮೂಲಕ ನೀರು ಇಂಗಿಸುವ ಕಾರ್ಯವನ್ನು ಆರಂಭಿಸಬೇಕಾಗಿದೆ. ಕೆಲವೆಡೆ ಹಲಗೆ ಇಲ್ಲದೇ ಇರುವುದರಿಂದ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

‘ಎರಡು ವರ್ಷಗಳಿಂದ ಬೇಸಿಗೆಯಲ್ಲಿ ನೀರಿನ ತೊಂದರೆ ಅನುಭವಿಸುವಂತಾಗಿದೆ. ಅಡಿಕೆ, ತೆಂಗು ಸೇರಿದಂತೆ ಈ ಭಾಗದ ಬಹುತೇಕ ಕೃಷಿಗೆ ನೀರಿನ ಅಭಾವ ಎದುರಾಗಿದೆ. ಈ ವರ್ಷವಾದರೂ, ಆಡಳಿತ ವ್ಯವಸ್ಥೆ ನೀರಿನ ನಿರ್ವಹಣೆಗೆ ಈಗಿನಿಂದಲೇ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರವಿಕಿರಣ ಪುಣಚ ಆಗ್ರಹಿಸಿದ್ದಾರೆ.

**

ಸಾಂಪ್ರದಾಯಿಕ ಕಟ್ಟ ನಿರ್ಮಾಣ

ಜಿಲ್ಲೆಯ ಅಂತರ್ಜಲ ವೃದ್ಧಿಗೆ ಈಗಾಗಲೇ ಸಾವಿರ ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಆರಂಭಿಸಲಾಗಿದೆ. ಇದಕ್ಕೆ ಪೂರಕವಾಗಿ ಸಾಂಪ್ರದಾಯಿಕ ಕಟ್ಟ ನಿರ್ಮಾಣಕ್ಕೂ ಇದೀಗ ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸಿದೆ.

ಪುತ್ತೂರು ತಾಲ್ಲೂಕಿನ ಮರಿಕೆಯಲ್ಲಿ ಪ್ರಗತಿಪರ ರೈತರೊಬ್ಬರು ನಿರ್ಮಿಸಿರುವ ಕಟ್ಟದ ಕುರಿತು ಅಧ್ಯಯನ ನಡೆಸಿ, ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಅದನ್ನು ಇಲಾಖೆಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಎಂ.ಆರ್‌. ರವಿ ತಿಳಿಸಿದ್ದಾರೆ.

ಮರಿಕೆ ಕಟ್ಟದಂತೆ ಇನ್ನುಳಿದ ಕಡೆಗಳಲ್ಲೂ ಕಟ್ಟ ನಿರ್ಮಾಣಕ್ಕೆ ಈಗಾಗಲೇ 500 ಅರ್ಜಿಗಳು ಬಂದಿವೆ. ಪ್ರಸ್ತಾವನೆಗೆ ಕುರಿತು ಇನ್ನೂ ಮಂಜೂರಾತಿ ದೊರೆತಿಲ್ಲ. ಇದಕ್ಕೆ ಅನುಮತಿ ಸಿಕ್ಕಲ್ಲಿ, ಕಟ್ಟಗಳ ನಿರ್ಮಾಣ ಮಾಡಿ, ಡಿಸೆಂಬರ್‌ ಅಂತ್ಯದಿಂದ ನೀರು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

**

ಜಿಲ್ಲೆಯಲ್ಲಿ ಸಾವಿರ ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಆರಂಭಿಸಲಾಗಿದ್ದು, 130 ಅಣೆಕಟ್ಟೆಗಳು ಪೂರ್ಣವಾಗಿವೆ. ಇದರಲ್ಲಿ ನೀರು ನಿಲ್ಲಿಸಲಾಗಿದೆ.
ಡಾ.ಎಂ.ಆರ್‌. ರವಿ
ಜಿಲ್ಲಾ ಪಂಚಾಯಿತಿ ಸಿಇಒ

**

ನೀರು ಸಂಗ್ರಹಕ್ಕಾಗಿ ಸನ್ನದ್ಧವಾದ ಕಿಂಡಿ ಅಣೆಕಟ್ಟೆಗಳು 350

ಯೋಜನೆಗಾಗಿ ಬಳಕೆಯಾಗುತ್ತಿರುವ ಒಟ್ಟು ಅನುದಾನ ₹ 43 ಕೋಟಿ

ಸಾವಿರ ಕಿಂಡಿ ಅಣೆಕಟ್ಟೆಗಳಲ್ಲಿ 291 ಕೋಟಿ ಲೀಟರ್ ನೀರು ಸಂಗ್ರಹ

 

Comments
ಈ ವಿಭಾಗದಿಂದ ಇನ್ನಷ್ಟು

ಕೆ.ಆರ್.ನಗರ
‘ಬದ್ಧತೆ ಇಲ್ಲದ ಯೋಜನೆ’

2006ರ ನಂತರ ನೇಮಕಗೊಂಡ ನೌಕರರಿಗೆ ಈ ಯೋಜನೆಯಲ್ಲಿ ಕೆಲವು ನ್ಯೂನತೆ ಉಂಟಾಗಿವೆ. ಟ್ರ‌ಸ್ಟ್ ಮ್ಯಾನೇಜ್‌ಮೆಂಟ್ ನಿರ್ವಹಿಸುವ ಇದರ ಆರ್ಥಿಕ ನಿರ್ವಹಣೆಯಲ್ಲಿ ಯಾವುದೇ ಬದ್ಧತೆ ಇಲ್ಲದೇ...

19 Jan, 2018

ಮಂಗಳೂರು
ಆಡಳಿತ ಪಕ್ಷ–ಪ್ರತಿಪಕ್ಷಗಳ ಮಧ್ಯೆ ವಾಕ್ಸಮರ

ಸರ್ಕಾರದಿಂದ ಕೇವಲ 900 ವಿದ್ಯಾರ್ಥಿಗಳಿಗೆ ಮಾತ್ರ ಬಿಸಿಯೂಟ ಪೂರೈಸಲಾಗುತ್ತಿದೆ. ಕಲ್ಲಡ್ಕ ಶಾಲೆಯಲ್ಲಿ 3,500 ವಿದ್ಯಾರ್ಥಿಗಳಿದ್ದಾರೆ. ಎಲ್ಲರಿಗೂ ಬಿಸಿಯೂಟ ಒದಗಿಸುವಂತೆ ನಿರ್ಣಯ ಕೈಗೊಳ್ಳಬೇಕು

19 Jan, 2018

ಉಪ್ಪಿನಂಗಡಿ
ಶಿರಾಡಿ ಘಾಟ್ ರಸ್ತೆ ಕಾಂಕ್ರಿಟೀಕರಣ: ಸಿದ್ಧತೆ ಪೂರ್ಣ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ ಕಾಂಕ್ರೀಟ್ ರಸ್ತೆ 2ನೇ ಹಂತದ ಕಾಮಗಾರಿಗೆ 2015ರಲ್ಲಿ ₹85.28 ಕೋಟಿ ಮಂಜೂರು ಆಗಿತ್ತು ...

19 Jan, 2018

ಕಾಸರಗೋಡು
ಕಾಸರಗೋಡಿನಲ್ಲಿ ಭಾಷಾ ಉತ್ಸವ: ಶಿಫಾರಸು

'ಎಲ್ಲಾ ಭಾಷೆಗಳ ಪರಿ ಪೋಷಣೆಗೆ ಅಗತ್ಯವಾದ ಸಾಹಿತ್ಯ -ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆ ಯಬೇಕು. ಇಲ್ಲಿಗೆ ಪ್ರತ್ಯೇಕವಾದ ಯುವಜನ ನೀತಿಯನ್ನು ರಚಿಸಬೇಕಾಗಿದೆ'.

18 Jan, 2018
ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

ಮಂಗಳೂರು
ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

18 Jan, 2018