ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೂ ‘ಆರೋಗ್ಯ ಭಾಗ್ಯ’ ನೀಡಿ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಗೆ,
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು,
ಮುಖ್ಯಮಂತ್ರಿ,
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು–01

ಇಂದ,
ಅಧ್ಯಕ್ಷರು/ಸದಸ್ಯರು
ಬೆಂಗಳೂರು ಮಹಾನಗರ ರಸ್ತೆಗಳ ಸಂಘ,
ಅಂಬೇಡ್ಕರ್‌ ವೀದಿ, ಬೆಂಗಳೂರು–01

ವಿಷಯ: ಆರೋಗ್ಯ ಭಾಗ್ಯ ನೀಡುವ ಕುರಿತು

ಸನ್ಮಾನ್ಯರೇ,
ತಪ್ಪು ತಿಳ್ಕೋಬೇಡಿ; ನಮ್ಮ ಸಹನೆಯ ಕಟ್ಟೆ ಒಡೆದುಹೋಗಿದೆ. ತುಂಬಾ ನೋವಿನಿಂದ ಈ ಪತ್ರ ಬರೆಯುತ್ತಿದ್ದೇವೆ. ಬೆಂಗಳೂರು ಮಹಾನಗರದಲ್ಲಿ ನಾವು, ಅಂದರೆ ರಸ್ತೆಗಳು, ಒಟ್ಟು 14 ಸಾವಿರ ಮಂದಿ ಇದ್ದೇವೆ. ಆದರೆ, ನಮಗೆ ಓಟಿನ ಅಧಿಕಾರ ಇಲ್ಲ ನೋಡಿ, ಅದಕ್ಕೇ ನಾವೆಂದರೆ ರಾಜಕಾರಣಿಗಳಿಗೆ ನಿರ್ಲಕ್ಷ್ಯ. ಅದು ಎಷ್ಟೊಂದು ನಿರ್ಲಕ್ಷ್ಯವೆಂದರೆ ನಮ್ಮ ಸ್ಥಿತಿ ಹದಗೆಟ್ಟಷ್ಟೂ ಅವರಿಗೆ ಹಬ್ಬ. ನಾವು ಅವರ ಪಾಲಿಗೆ ಒಂದು ರೀತಿಯಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಗಳಿದ್ದಂತೆ. ಬಿಬಿಎಂಪಿಯಲ್ಲಿ ನಡೆದ ಹಳೇ ಕಲ್ಲು, ಹೊಸ ಬಿಲ್ಲಿನ ಕರಾಮತ್ತು ನಮಗೇನು ಗೊತ್ತಿಲ್ಲ ಅಂದುಕೊಂಡಿದ್ದೀರಾ?

ನಮ್ಮೆಲ್ಲರ ಮೇಲೆ ಗುಂಡಿಗಳೆಂಬ ಗಾಯಗಳಾಗಿದ್ದರೂ ಜಂಪ್‌ ಹೊಡೆಯದಂತಹ ಹೊಸ ನಮೂನೆಯ ಗಾಡಿಗಳ ಮೇಲೆ ಓಡಾಡುವ ನಗರದ ಶಾಸಕರ ಮೇಲೆ ನಮಗೆ ಕೆಂಡದಂತಹ ಕೋಪ. ನಮ್ಮ ಸ್ಥಿತಿ ಸುಧಾರಿಸಲು ಅವರು ಪ್ರಯತ್ನವನ್ನೇ ಮಾಡುತ್ತಿಲ್ಲ. ಗುಂಡಿಗಳಲ್ಲಿ ಬಿದ್ದು ವಾಹನ ಸವಾರರು ಜೀವ ಕಳೆದುಕೊಂಡರೆ ಈ ಮಾಧ್ಯಮದವರು ನಮಗೆ ಕೊಲೆಗಾರನ ಪಟ್ಟ ಕಟ್ಟುತ್ತಾರೆ. ‘ಯಮಸ್ವರೂಪಿ ರಸ್ತೆಗಳು’ ಅಂತ ನಮಗೆ ಹೆಸರು ಕೊಡುತ್ತಾರಲ್ಲ; ಇವರೇನು ಮನುಷ್ಯರೇನ್ರಿ? ನಾವೇ ಇಂತಹ ಸ್ಥಿತಿಯನ್ನು ತಂದುಕೊಂಡಿದ್ದು? ತಪ್ಪಿತಸ್ಥರಿಗೆ ಜಾಡಿಸೋದು ಬಿಟ್ಟು ನಮ್ಮನ್ನೇ ಖಳನಾಯಕರಂತೆ ಚಿತ್ರಿಸಿದರೆ ಎಷ್ಟು ದಿನ ಸಹಿಸೋದು?

ರೀ ಸೋಮಿ, ನೀವು ಮೆಟ್ರೊ ರೈಲನ್ನು ನಗರದ ಎಲ್ಲ ಕಡೆಗೂ ಬಿಟ್ಟಿಲ್ಲ. ನಮ್ಮನ್ನು ಚಿಂತಾಜನಕ ಸ್ಥಿತಿಯಲ್ಲಿ ಉಳಿಸಿದರೆ ಎಲ್ಲಾ ಜನ ಮೆಟ್ರೊದಲ್ಲೇ ಓಡಾಡ್ತಾರೆ ಎಂಬ ಭ್ರಮೆ ಬೇಡ. ಯೋಗದ ದಿನ ವಿಧಾನಸೌಧದ ಮುಂದೆ ಕಣ್ಮುಚ್ಚಿಕೊಂಡು ಕುಳಿತು ಧ್ಯಾನ ಮಾಡಿದ್ದಿರಲ್ಲ? ಹಾಗೇ ತುಸುಹೊತ್ತು ಕಣ್ಮುಚ್ಚಿಕೊಂಡು ಕಲ್ಪಿಸಿಕೊಂಡು ನೋಡಿ; ನಾವುಗಳಿಲ್ಲದ ಈ ನಗರ ಬದುಕಿರಲು ಸಾಧ್ಯವೇ ಎಂದು.

ನಮ್ಮ ಮೇಲೆ ಎಂತಹ ಸಾಮರ್ಥ್ಯದ ವಾಹನವನ್ನು ಓಡಿಸಲು ಬಿಟ್ಟರೂ ಗಂಟೆಗೆ ಹತ್ತೇ ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಅಂತಾರೆ ಸಾರಿಗೆತಜ್ಞರು. ಸಿಲ್ಕ್‌ ಬೋರ್ಡ್‌ ಸುತ್ತಲಿರುವ ನಮ್ಮ ಬಾಂಧವರನ್ನು ಜಗತ್ತಿನ ಅತಿದೊಡ್ಡ ಪಾರ್ಕಿಂಗ್‌ ಲಾಟ್‌ಗಳು ಎಂದು ಕುಹಕದಿಂದ ಕರೀತಾರೆ. ಏಕೆಂದರೆ, ಅಲ್ಲಿ ವಾಹನಗಳು ಗಂಟೆಗಟ್ಟಲೆ ನಿಂತಲ್ಲೇ ನಿಲ್ಲುತ್ತವೆ. ನಿತ್ಯ 20 ಲಕ್ಷ ಮಂದಿ ಹದಿನೈದೇ ನಿಮಿಷ ತಡವಾಗಿ ಆಫೀಸ್‌ಗೆ ಹೋದರೆ 50 ಸಾವಿರ ಮಾನವ ಗಂಟೆಗಳು ವ್ಯರ್ಥವಾಗಿ ಹೋಗುತ್ತವೆ. ಅದರಿಂದ ಆಗುವ ನಷ್ಟವನ್ನು ನೀವೇ ಲೆಕ್ಕ ಹಾಕ್ಕೊಳ್ಳಿ ಸೋಮಿ.

ನಮಗೆ ಒಂಥರಾ ಬೊಜ್ಜಿನ ಕಾಯಿಲೆ ಹಿಡಿದುಬಿಟ್ಟಿದೆ. ಕಳಪೆ ಕಾಮಗಾರಿಯಿಂದ ಪ್ರತಿವರ್ಷ ಜಲ್ಲಿ, ಡಾಂಬರು ಉಂಡು, ಉಂಡು, ಪಿಜ್ಜಾ–ಬರ್ಗರ್‌ ತಿಂದು ಊದಿಕೊಂಡ ಮಕ್ಕಳಂತೆ ನಮ್ಮ ಸ್ಥಿತಿ ಆಗಿದೆ. ವರ್ಷ ಕಳೆದಂತೆ ನಾವು ಡುಮ್ಮಣ್ಣರಾಗುತ್ತಿದ್ದೇವೆಯೇ ಹೊರತು ಜಟ್ಟಿಗಳಂತೆ ಗಟ್ಟಿಗರಾಗುತ್ತಿಲ್ಲ.

ನಮ್ಮ ಮೇಲಿನ ಗುಂಡಿಗಳನ್ನು ಮುಚ್ಚಲು ಅದೇನೋ ಪೈಥಾನ್‌ ಎಂಬ ಯಂತ್ರ ಬಂದಿದೆ. ಆದರೆ, ಅದು ನಮ್ಮ ಪಾಲಿಗೆ ಸೈತಾನನಾಗಿ ಕಾಡುತ್ತಿದೆ. ಬಿಬಿಎಂಪಿ ಎಂಜಿನಿಯರ್‌ಗಳು ಕೊಡುವ ಲೆಕ್ಕವನ್ನು ಒಮ್ಮೆ ನೋಡಿ. ನಮ್ಮ ಮೇಲೆ ಬಿದ್ದಿರುವ ಗುಂಡಿಗಳಿಗಿಂತ ಹೆಚ್ಚಿನವುಗಳನ್ನು ಅವರು ಮುಚ್ಚಿದ್ದಾರಂತೆ. ಹಾಗಿದ್ದೂ ನಮ್ಮ ಮೇಲೆ ಆಗಿರುವ ಗಾಯಗಳು ಹಾಗೇ ಉಳಿದುಕೊಂಡಿವೆ. ಗುಂಡಿಗಳು ಹಣವನ್ನು ಗುಳುಂ ಮಾಡಿ ಹಾಗೇ ಕೂತಿರುವುದು ಜಗತ್ತಿನ ಎಂಟನೇ ಅದ್ಭುತವಲ್ಲವೇ?

ಜಲಮಂಡಳಿ, ಬೆಸ್ಕಾಂ, ಟೆಲಿಫೋನ್‌ ಸೇವಾ ಕಂಪನಿ... ಎಲ್ಲರಿಗೂ ನಮ್ಮ ಒಡಲಲ್ಲೇ ಜಾಗ ಬೇಕು. ಮುಂದ್‌ ಮುಂದ ಬಿಬಿಎಂಪಿಯವರು ಡಾಂಬರು ಹಾಕ್ತಾ ಹೋಗ್ತಾರೆ. ಹಿಂದ್‌ ಹಿಂದ ಜಲಮಂಡಳಿಯವರು ಲೆಕ್ಕಕ್ಕೆ ಸಿಗದಂತೆ ನಮ್ಮ ಕರುಳನ್ನು ಬಗಿಯುತ್ತಾ ಬರ್ತಾರೆ. ಅಪ್ಪಿ–ತಪ್ಪಿ ಅವ್ರು ಬಿಟ್ಟರೂ ಬೆಸ್ಕಾಂನವ್ರು ಬಿಡಲ್ಲ. ಟೆಲಿಫೋನ್‌ ಕಂಪನಿಯವ್ರು ನಮ್ಮ ಹೊಟ್ಟೆಯನ್ನು ಕುಯ್ದಿದ್ದೇ ಗೊತ್ತಾಗಲ್ಲ; ಅಷ್ಟು ಸದ್ದಿಲ್ಲದಂತೆ ಕೆಲಸ ಮಾಡ್ತಾರೆ.

ರಸ್ತೆ ಇತಿಹಾಸ ರೂಪಿಸಿ ಅಂತ ಎಷ್ಟೋ ಸ್ವಯಂಸೇವಾ ಸಂಸ್ಥೆಗಳು ಬಾಯಿ ಬಾಯಿ ಬಡ್ಕೊಂಡ್ರೂ ಈ ಎಂಜಿನಿಯರ್‌ಗಳು ಕಿವಿಗೆ ಹಾಕ್ಕೊಳ್ಲಿಲ್ಲ. ಯಾವಾಗ, ಏನು ಕಾಮಗಾರಿ ನಡೆದಿದೆ, ದುಡ್ಡು ಎಷ್ಟು ಖರ್ಚಾಗಿದೆ ಎಂಬ ವಿವರ ಇದರಲ್ಲಿ ಗೊತ್ತಾಗುತ್ತೆ. ಕಾಟಾಚಾರಕ್ಕೆ ಏನೋ ಒಂದು ವ್ಯವಸ್ಥೆ ರೂಪಿಸಿ, ಎಲ್ಲ ವಿವರ ಕತ್ತಲಲ್ಲಿಟ್ಟ ತಿಮಿಂಗಲಗಳ ಮೇಲೆ ಒಮ್ಮೆ ಬಲೆ ಬೀಸಿ ಸೋಮಿ.

ಈ ಫ್ಲೈಓವರ್‌ ಮಾಡ್ತೀರಲ್ಲ, ಅಲ್ಲಿ ಪುರ್ರಂತ ಮೇಲೇರಿ ಇಳಿಯುವ ವಾಹನಗಳು, ಇಳಿದ ಜಾಗದಲ್ಲೇ ನಿಲ್ಲುವಂತಾದರೆ ಏನು ಪ್ರಯೋಜನ? ನಮ್ಮ ಸ್ಥಿತಿ ಸುಧಾರಿಸದಿದ್ದರೆ ನೀವು ಎಷ್ಟು ಫ್ಲೈಓವರ್‌ ಕಟ್ಟಿದ್ರೂ ಅಷ್ಟೇ. ಕೈಮುಗಿದು ಕೇಳ್ಕೋತೀವಿ. ನಮ್ಮನ್ನು ಪಾರ್ಕಿಂಗ್‌ ಲಾಟ್‌ಗಳಾಗಿ ಬದಲಾಯಿಸಬೇಡಿ.

ಅಮ್ಮಮ್ಮಾ, ಹೇಳಬಾರ್ದು. ಆದ್ರೆ ಬೇರೆ ದಾರಿಯಿಲ್ಲ. ನಮ್ಮ ಮೇಲೆ ಹುಣ್ಣಿನಂತಿವೆ ಈ ಮ್ಯಾನ್‌ಹೋಲ್‌ಗಳು. ಗಾಯ ಒಡೆದು ಕೀವು ಸೋರುವಂತೆ ಅವುಗಳಿಂದ ಕೊಳಕು ಹರಿದು ಬರುತ್ತದೆ. ನೀವೇನೋ ಮೂಗು ಮುಚ್ಕೊಂಡು ಓಡಿ ಹೋಗ್ತೀರಿ. ನಾವೇನು ಮಾಡೋಣ?

ಕಾಮಗಾರಿಗೆ ಪೂಜೆ ಸಲ್ಲಿಸುವ ನೆಪದಲ್ಲಿ ಹಲ್ಕಿರಿದು ಫೋಟೊಕ್ಕೆ ಪೋಸು ಕೊಡ್ತಾರಲ್ಲ, ಅವರಿಗೆ ಕೆಲಸದ ಗುಣಮಟ್ಟದಲ್ಲಿ ರಾಜಿಯಾಗದಂತೆ ತುಸು ಕಿವಿಹಿಂಡಿ ಸೋಮಿ. ಬೇರೆ ನಗರದಲ್ಲಿ ನಮ್ಮ ಬಾಂಧವರಿಗೆ ಎಷ್ಟು ದುಡ್ಡು ಖರ್ಚು ಮಾಡ್ತಾರೆ ಅಂತ ನಾವು ದಾಖಲೆ ತರಿಸಿಕೊಂಡಿದ್ದೇವೆ. ಎಲ್ಲೂ ಈ ಊರಿನಷ್ಟು ಹಣ ಖರ್ಚು ಮಾಡಲ್ಲ. ಆದ್ರೆ, ನಮ್ಮಷ್ಟು ಹದಗೆಟ್ಟ ಸ್ಥಿತಿ ಬೇರೆಲ್ಲೂ ಇಲ್ಲ. ಬಿಬಿಎಂಪಿ ಯಾವುದೇ ಕಪಾಟು ತೆಗೆದರೂ ಹಗರಣಗಳ ಅಸ್ಥಿ ಪಂಜರಗಳೇ ಬೀಳುತ್ತವೆ.

ನಮಗೇನು ಮಕ್ಕಳೇ, ಮರಿಗಳೇ? ಸಮಾಧಿಯಾಗಿ ನಮ್ಮ ಮೇಲೆ ಕಟ್ಟಡ ಎದ್ದರೂ ಯಾರೂ ಕೇಳೋರಿಲ್ಲ. ಸಾಮಾಜಿಕ ನ್ಯಾಯದ ಪ್ರತಿಪಾದಕರು ನೀವು; ಎಲ್ಲ ಸಮಾಜಗಳಿಗೂ ಬೇಕಾದೋರು ನಾವು. ನಮ್ಮನ್ನು ಸುಸ್ಥಿತಿಯಲ್ಲಿ ಇಡುವಂತೆ ಕೇಳ್ತಿರೋದು ನಮಗಾಗಿ ಅಲ್ಲ. ನಿಮಗಾಗಿ, ನಿಮ್ಮ ಜನಗಳಿಗಾಗಿ, ತಿಳ್ಕಳ್ಳಿ. ಟೆಂಡರ್‌ ಶ್ಯೂರ್‌ ಏನೋ ಒಳ್ಳೆಯ ಯೋಜನೆಯೇ. ನಮ್‌ ಸ್ಥಿತೀನೂ ಚೆನ್ನಾಗಿರುತ್ತೆ. ಪಾದಚಾರಿಗಳಿಗೂ ಅಷ್ಟೇ ಒಳ್ಳೆಯ ಫುಟ್‌ಪಾತ್‌ ಇರುತ್ತೆ. ಗುಣಮಟ್ಟದಲ್ಲಿ ರಾಜಿ ಇಲ್ದಂಗೆ ಅದನ್ನು ಜಾರಿಗೊಳಿಸಿದರೆ ಜನ ನಿಮ್ಮ ಫೋಟೊ ಇಟ್ಟು ಪೂಜೆ ಮಾಡ್ತಾರೆ. ತಿಳಿದೋರಿಗೆ ಹೆಚ್ಚಿಗೆ ಹೇಳೋದು ಏನಿದೆ?

ನಿಮ್ಮಿಂದ ಆರೋಗ್ಯ ಭಾಗ್ಯದ ನಿರೀಕ್ಷೆಯಲ್ಲಿ...

ಇಂತಿ ನಿಮ್ಮ

ಅಂಬೇಡ್ಕರ್‌ ವೀದಿ, ರಾಜಭವನ ರಸ್ತೆ, ಅರಮನೆ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಕ್ವೀನ್ಸ್‌ ರಸ್ತೆ, ಜೆ.ಸಿ. ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ನೃಪತುಂಗ ರಸ್ತೆ, ಹಳೇ ಮದ್ರಾಸ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ಅವೆನ್ಯೂ ರಸ್ತೆ, ಶೇಷಾದ್ರಿ ರಸ್ತೆ, ಪಂಪ ಮಹಾಕವಿ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ ಸೇರಿದಂತೆ 14 ಸಾವಿರ ರಸ್ತೆಗಳ ಸಹಿಗಳಿವೆ

ಪ್ರತಿಗಳು: ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್‌, ನಗರದ ಎಲ್ಲ ಶಾಸಕರು ಹಾಗೂ ಕಾರ್ಪೊರೇಟರ್‌ಗಳಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT