ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ, ಕಾಂಗ್ರೆಸ್ ಅಮಾಯಕರನ್ನು ಬಲಿ ಪಡೆಯುತ್ತಿವೆ’

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಮತ್ತು ಕಾಂಗ್ರೆಸ್ ಸಣ್ಣ ಗಲಾಟೆಗಳನ್ನು ದೊಡ್ಡದು ಮಾಡಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿವೆ. ಈ ಬಗ್ಗೆ ಹಿಂದೂಗಳು, ಮುಸಲ್ಮಾನರು ಎಚ್ಚರಿಕೆಯಿಂದ ಇರಬೇಕು’ ಎಂದು ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ಮಂಡ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಹತ್ಯೆಗಳು ಆಗಿವೆ. ಇತ್ತೀಚೆಗೆ ನಗರದಲ್ಲಿ ಮಾಜಿ ಕಾರ್ಪೊರೇಟರ್ ಕೊಲೆ ಮಾಡಲಾಯಿತು. ಹಾಗೆಂದು ನಾನು ಬೀದಿಗೆ ಇಳಿದು ಬಸ್‌ಗಳಿಗೆ ಬೆಂಕಿ ಹಚ್ಚಿದರೆ ಯಾವ ಸಂದೇಶ ಹೋಗುತ್ತದೆ. ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ತಿಳಿಸಿದರು.

‘ಹೊನ್ನಾವರದಲ್ಲಿ ನಡೆದ ಪರೇಶ ಮೇಸ್ತ ಎಂಬ ಯುವಕನ ಸಾವಿನ ಪ್ರಕರಣ ಉಪಯೋಗಿಸಿಕೊಂಡು ಬಿಜೆಪಿ ಅಲ್ಲಿನ ವಾತಾವರಣ ಕಲುಷಿತ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಜಿಲ್ಲೆಯಲ್ಲಿದ್ದಾಗಲೇ ಘಟನೆ ನಡೆದಿದೆ. ಯುವಕ ಮೃತಪಟ್ಟಿರುವುದಕ್ಕೆ ಕಾರಣ ಇನ್ನೂ ಗೊತ್ತಾಗಿಲ್ಲ. ಹಲ್ಲೆ ನಡೆದಿರುವ ಬಗ್ಗೆ ಯಾವುದೇ ಗುರುತುಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಸಂಸದರು ಅಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಇಂತಹ ಯಾವುದೇ ಘಟನೆಗಳು ನಡೆದಾಗ 24 ತಾಸಿನಲ್ಲಿ ಬಂದೋಬಸ್ತ್‌ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ನಿತ್ಯ ಪ್ರತಿಭಟನೆ, ಬಂದ್ ನಡೆಯುತ್ತಿವೆ. ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರವೂ ವಿಫಲವಾಗಿದೆ. ಐಜಿಪಿ ಶ್ರೇಣಿಯ ಅಧಿಕಾರಿ ವಾಹನಕ್ಕೆ ಬೆಂಕಿಹಚ್ಚಿ ಅವರನ್ನೇ ಜೀವಂತ ಸುಡುವ ಹಂತಕ್ಕೆ ಪ್ರತಿಭಟನೆ ಹೋಗಿದೆ. ಸಿದ್ದರಾಮಯ್ಯನವರಿಗೆ ಆಡಳಿತದಲ್ಲಿ ಬಿಗಿತಪ್ಪಿರುವುದು ಇದರಿಂದ ಗೊತ್ತಾಗುತ್ತದೆ ಎಂದು ಟೀಕಿಸಿದರು.

ಬಿಜೆಪಿ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಮುಂಚೆ ಮುಜಫ್ಫರ್‌ನಗರದಲ್ಲಿ ಹಿಂದೂ ಮುಸ್ಲಿಮರ ಮಧ್ಯೆ ಕೋಮು ಸಾಮರಸ್ಯ ಹಾಳು ಮಾಡಿ ಹಲವರ ಸಾವಿಗೆ ಕಾರಣವಾಯಿತು. ಈ ಮೂಲಕ ಚುನಾವಣಾ ವೇದಿಕೆ ಸಿದ್ಧಪಡಿಸಿಕೊಂಡಿತು. ಆದೇ ಮಾದರಿಯನ್ನು ಇಲ್ಲೂ ಮಾಡಲು ಹೊರಟಿದೆ ಎಂದು ಕುಮಾರಸ್ವಾಮಿ ಆರೋ‍ಪಿಸಿದರು.

ಪರಿಶಿಷ್ಟರ ಸಮಾವೇಶ ಇಂದು
‘ಜೆಡಿಎಸ್‌ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶವನ್ನು ಅರಮನೆ ಮೈದಾನದಲ್ಲಿ ಬುಧವಾರ (ನ.13) ಹಮ್ಮಿಕೊಳ್ಳಲಾಗಿದ್ದು,  ಒಂದು ಲಕ್ಷಕ್ಕೂ ಹೆಚ್ಚಿನ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಕುಮಾರಸ್ವಾಮಿ ಹೇಳಿದರು.

ಪಕ್ಷವನ್ನು ಸದೃಢಗೊಳಿಸಲು ಮತ್ತು ಜನರ ವಿಶ್ವಾಸ ಗಳಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಈಗಾಗಲೇ ಅಲ್ಪಸಂಖ್ಯಾತರ ಸಮಾವೇಶ ನಡೆಸಲಾಗಿದೆ. ದಲಿತರ ಸಮಾವೇಶ ಮುಗಿದ ಬಳಿಕ ಮಹಿಳಾ ಸಮಾವೇಶ, ಯುವಕರ ಸಮಾವೇಶ, ರೈತರ ಸಮಾವೇಶ, ಹಿಂದುಳಿದ ವರ್ಗದವರ ಸಮಾವೇಶ ನಡೆಸಲಾಗುವುದು. ಇವೆಲ್ಲವೂ ಜ.15ರೊಳಗೆ ಪೂರ್ಣಗೊಳ್ಳುತ್ತವೆ ಎಂದರು.

ಜ.9ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ‘ಜನತಾದಳದ ನಡಿಗೆ ಸೌಹಾರ್ದತೆ ಕಡೆಗೆ’ ಹಮ್ಮಿಕೊಳ್ಳಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಪಕ್ಷಗಳು ಕೋಮು ಸಾಮರಸ್ಯ ಹಾಳು ಮಾಡುತ್ತಿರುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT