ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಪಾಟೀಲ ವಿರುದ್ಧ ಪ್ರತಿಭಟನೆ

Last Updated 13 ಡಿಸೆಂಬರ್ 2017, 9:05 IST
ಅಕ್ಷರ ಗಾತ್ರ

ಬೆಳಗಾವಿ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಗಡಿ ವಿವಾದ ತೀರ್ಪು ಮರಾಠಿಗರ ಪರವಾಗಿ ಬರಲಿ ಎಂದು ಹೇಳಿಕೆ ನೀಡಿರುವ ಶಾಸಕ ಸಂಜಯ ಪಾಟೀಲ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಅವರು, ಶಾಸಕರ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಜಯ ಪಾಟೀಲ ಈಚೆಗೆ ಬೆಳಗುಂದಿ ಗ್ರಾಮದಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶಾಸಕನಾಗಿ ಬಂದಿಲ್ಲ, ಮರಾಠಿಗನಾಗಿ ಬಂದಿದ್ದೇನೆ. ಮರಾಠಿ ಜನರ ಇಚ್ಛೆಯಂತೆ ನ್ಯಾಯಾಲಯದ ತೀರ್ಪು ಬರಲಿ ಎಂದು ಹಾರೈಸುವೆ ಎಂದು ಹೇಳಿದ್ದರು. ಈ ಮೂಲಕ ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯು ಎಂದೆಂದಿಗೂ ಕರ್ನಾಟಕಕ್ಕೆ ಸೇರಿದೆ. ಸುಪ್ರೀಂ ಕೋರ್ಟ್‌ನ ತೀರ್ಪು ಕೂಡ ನಮ್ಮ ಪರವಾಗಿ ಬರಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದು ಹೇಳುವ ಮೂಲಕ ಈ ನೆಲದಲ್ಲಿ ವಾಸಿಸುತ್ತಿರುವ ಶಾಸಕರು ಮಹಾರಾಷ್ಟ್ರದ ಪರ ಮಾತನಾಡುವ ಮೂಲಕ ನಾಡದ್ರೋಹದ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಅವರ ಪಕ್ಷದ ಬಿಜೆಪಿ ಮುಖಂಡರು ಕಠಿಣ ಕ್ರಮಕೈಗೊಳ್ಳಬೇಕು ಎಂದರು.

ಸಂಜಯ ಅವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಅವರ ವಿರುದ್ಧ ಕನ್ನಡ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇತ್ತೀಚೆಗೆ ಕಾಂಗ್ರೆಸ್ಸಿನ ಲಕ್ಷ್ಮೀ ಹೆಬ್ಬಾಳಕರ ಅವರು ಕೂಡ ಮರಾಠಿಗರ ಪರ ಘೋಷಣೆಗಳನ್ನು ಕೂಗಿದ್ದರು. ಇವರ ವಿರುದ್ಧವೂ ಅವರ ಪಕ್ಷದ ಮುಖಂಡರು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸುರೇಶ ಗವನ್ನವರ, ದೇವೇಂದ್ರ ತಳವಾರ, ಬಾಬು ಜಡಗಿ, ದೀಪಕ ಗುಡಗನಟ್ಟಿ, ಬಸವರಾಜ ಅಡವಳ್ಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT