ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು ಕೊಡಿ, ಚರಂಡಿ ಸ್ವಚ್ಛಗೊಳಿಸಿ

Last Updated 13 ಡಿಸೆಂಬರ್ 2017, 9:52 IST
ಅಕ್ಷರ ಗಾತ್ರ

ಹೊಸದುರ್ಗ: ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಚರಂಡಿ ಸ್ವಚ್ಛತೆ ಕಾಪಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಅಭಿವೃದ್ಧಿ ಪಡಿಸಬೇಕು....

ಹೀಗೆ ಪಟ್ಟಣದ ಪುರಸಭೆ ಸಭಾಂಗಣ ದಲ್ಲಿ ಪುರಸಭೆ ಅಧ್ಯಕ್ಷ ಕೆ.ವಿ.ಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 2018–19ನೇ ಸಾಲಿನ ಆಯವ್ಯಯ ಮಂಡನೆಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು.

ಮಾಜಿ ಶಾಸಕ ಇಲ್ಕಲ್‌ ವಿಜಯಕುಮಾರ್‌ ಮಾತನಾಡಿ, ‘ಕಳೆದ ವರ್ಷದ ಆಯವ್ಯಯ ಮಂಡನೆ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ನೀಡಿದ್ದ ಸಲಹೆ ಎಷ್ಟು ಕಾರ್ಯಗತಗೊಂಡಿದೆ, ಉತ್ತರ ಕೊಡಿ, ಎಂದು ಕೇಳಿದ ಅವರು, ‘ಮುಕ್ತಿಧಾಮದ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು. ಪುರಸಭೆ ಆದಾಯ ಹೆಚ್ಚಿಸಿಕೊಳ್ಳುವ ಕೆಲಸಕ್ಕೆ ಆದ್ಯತೆ ನೀಡಿ’ ಎಂದು ಸಲಹೆ ನೀಡಿದರು.

ಜಂತಿಕೊಳಲು ರಾಜಣ್ಣ ಮಾತನಾಡಿ, ‘ಸರ್ಕಾರದಿಂದ ಬರುವ ಕೋಟ್ಯಂತರ ಅನುದಾನದಿಂದ ನಡೆಯುವ ಕಾಮಗಾರಿಗಳು ಶಾಶ್ವತ ವಾಗಿ ಉಳಿಯಬೇಕು. ಆದರೆ ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕಳಪೆಯಾಗಿವೆ. ಕಾಂಕ್ರೀಟ್‌ ರಸ್ತೆಗಳು ಮೂರು ತಿಂಗಳಿಗೆ ಕಿತ್ತುಹೋಗುತ್ತಿವೆ. ಪರಿಸ್ಥಿತಿ ಹೀಗಾದರೆ ಕಾಮಗಾರಿ ಏಕೆ ಮಾಡಬೇಕು ಎಂದು ಪ್ರಶ್ನಿಸಿದ ಅವರು, ವಿಜಯನಗರ ಬಡಾವಣೆಯಲ್ಲಿ ಉಳ್ಳವರ ಮನೆ ಬಳಿ ಚರಂಡಿ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ’ ಎಂದು ಟೀಕಿಸಿದರು.

ಬಿ.ಪಿ.ಓಂಕಾರಪ್ಪ ಮಾತನಾಡಿ, ‘2ನೇ ವಾರ್ಡ್‌ನಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಶಾಲಾ ಮಕ್ಕಳು ಭೀತಿಯಿಂದ ತಿರುಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಮುಖ್ಯರಸ್ತೆಯಲ್ಲಿ ಅಪಘಾತ ಹೆಚ್ಚಾಗುತ್ತಿದ್ದು ಸಂಚಾರಿ ನಿಯಮ ಪಾಲನೆಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಉಬ್ಬು ನಿರ್ಮಿಸಬೇಕು. ಕಾರು ಹಾಗೂ ದ್ವಿಚಕ್ರ ವಾಹನ ಪಾರ್ಕಿಂಗ್‌ ಮಾಡಬೇಕು. ಸೂಪರ್‌ ಮಿನಿ ಮಾರುಕಟ್ಟೆ ತೆರೆಯಬೇಕು. ಬೀದಿದೀಪ ಅಳವಡಿಸಬೇಕು. ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಗೆ ನಿವೇಶನ ಕೊಡಬೇಕು. ನನೆಗುದಿಗೆ ಬಿದ್ದಿರುವ ರಸ್ತೆ ದುರಸ್ತಿ ಮಾಡಬೇಕು. ಪುರಸಭೆ ನಿವೇಶನಗಳು ಉಳ್ಳವರ ಪಾಲಾಗದಂತೆ ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

ಪತ್ರಕರ್ತರ ಭವನ ನಿರ್ಮಾಣ ಮಾಡಲು ಪಟ್ಟಣದ ಹೃದಯ ಭಾಗದಲ್ಲಿ ನಿವೇಶನ ಕೊಡಬೇಕೆಂದು ತಾಲ್ಲೂಕಿನ ಪತ್ರಕರ್ತರು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಸಿದ ಪುರಸಭೆ ಅಧ್ಯಕ್ಷ ಕೆ.ವಿ.ಸ್ವಾಮಿ, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮುಖ್ಯಾಧಿಕಾರಿ ಮಹಾಂತೇಶ್‌ ಮಾತ ನಾಡಿ, ಬೀದಿ ನಾಯಿಗಳು, ಹಂದಿಗಳು, ಬೀಡಾಡಿ ದನಗಳ ನಿಯಂತ್ರಣ ಕುರಿತು ಕಳೆದ ಕೌನ್ಸೆಲಿಂಗ್‌ ಸಭೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೋತಿಗಳ ನಿಯಂತ್ರಣಕ್ಕೆ ತಂತ್ರಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ಸವಿತಾ ರಮೇಶ್‌, ಇ.ವಿ.ಅಜ್ಜಪ್ಪ, ಮೋಹನ್‌ ಗುಜ್ಜಾರ್‌, ಇ.ವಿ.ಅಶೋಕ್‌, ಕಾಂತರಾಜು, ವಸಂತ, ಜಯಪ್ರಕಾಶ್‌, ಚಂದ್ರಶೇಖರ್‌, ತಿಪ್ಪಣ್ಣ, ರೆಹಮಾನ್‌, ಪತ್ರಕರ್ತರು ಇದ್ದರು.

* * 

ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ₹ 27 ಕೋಟಿ ಅನುದಾನ ಬಂದಿದೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಈ ಕಾರ್ಯಕ್ಕೆ ಗೊರವಿನಕಲ್ಲು ಬಳಿ 4 ಎಕರೆ ಜಾಗ ನಿಗದಿಗೊಳಿಸಲಾಗಿದೆ.
ಮಹಾಂತೇಶ್‌, ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT