ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀರುಲ್‌ ಇಸ್ಲಾಂಗೆ ಗಲ್ಲು ಶಿಕ್ಷೆ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೊಚ್ಚಿ/ ತಿರುವನಂತಪುರ: ಇಲ್ಲಿನ ಪೆರಂಬಾವೂರಿನಲ್ಲಿ ನಡೆದಿದ್ದ ಕಾನೂನು ವಿದ್ಯಾರ್ಥಿನಿ ಜಿಶಾ (30) ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೀರುಲ್‌ ಇಸ್ಲಾಂಗೆ ಎರ್ನಾಕುಲಂ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ.

ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 376ಎ (ಹಲ್ಲೆಯಿಂದಾಗಿ ಮೃತಪಡುವುದು), 376 (ಅತ್ಯಾಚಾರ), 449 (ಅತಿಕ್ರಮ ಪ್ರವೇಶ) ಮತ್ತು 342 (ಅಕ್ರಮ ಬಂಧನ) ಅಡಿ ಅಪರಾಧಗಳಿಗಾಗಿ ಕ್ರಮವಾಗಿ ಜೀವಾವಧಿ ಶಿಕ್ಷೆ, 10 ವರ್ಷಗಳ ಕಠಿಣ ಶಿಕ್ಷೆ, 7 ವರ್ಷಗಳು ಮತ್ತು 1 ವರ್ಷದ ಶಿಕ್ಷೆಯನ್ನೂ ಕೋರ್ಟ್‌ ನೀಡಿದೆ.

ಈ ಎಲ್ಲ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ಕೋರ್ಟ್‌ ಹೇಳಿದ್ದು, ಒಟ್ಟು ₹ 1 ಲಕ್ಷ ದಂಡ ಪಾವತಿಸಲು ಆದೇಶಿಸಿದೆ.

ಅಸ್ಸಾಂ ಮೂಲದ ವಲಸಿಗ ಕಾರ್ಮಿಕ ಅಮೀರುಲ್‌ ಇಸ್ಲಾಂ ತಪ್ಪಿತಸ್ಥ ಎಂದು ಎರ್ನಾಕುಲಂ ಪ್ರಧಾನ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಎನ್.ಅನಿಲ್‌ಕುಮಾರ್‌ ಮಂಗಳವಾರ ತಿಳಿಸಿದ್ದರು. ಆದರೆ, ಶಿಕ್ಷೆಯ ಪ್ರಮಾಣ ಪ್ರಕಟಿಸಿರಲಿಲ್ಲ.

‘ಅಮೀರುಲ್‌ಗೆ ತನ್ನ ಮಾತೃಭಾಷೆ ಬಿಟ್ಟರೆ ಬೇರೆ ಭಾಷೆ ತಿಳಿಯುವುದಿಲ್ಲ. ಪ್ರಕರಣದ ತನಿಖಾಧಿಕಾರಿಗಳು ಅಮೀರುಲ್‌ನನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಆದಕಾರಣ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ಅಮೀರುಲ್‌ ಪರ ವಕೀಲ ಬಿ.ಎ.ಆಲೂರ್‌ ಅವರು ಬುಧವಾರ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಧೀಶರು ಅರ್ಜಿ ವಜಾಗೊಳಿಸಿದರು.

‘ನವದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣದ ರೀತಿಯಲ್ಲಿಯೇ ಜಿಶಾ ಮೇಲೆ ಅತ್ಯಂತ ಬರ್ಬರವಾಗಿ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ. ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡಬೇಕು’ ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದರು.

‘ಅಮೀರುಲ್‌ ತಪ್ಪು ಮಾಡಿಲ್ಲ. ಅವನನ್ನು ಪ್ರಕರಣದಲ್ಲಿ ಸಿಕ್ಕಿಸಲಾಗಿದೆ. ಅಪರಾಧ ನಡೆದಿರುವುದಕ್ಕೆ ಯಾವುದೇ ಪ್ರತ್ಯಕ್ಷ ಸಾಕ್ಷ್ಯಗಳು ಇಲ್ಲ. ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಗಲ್ಲುಶಿಕ್ಷೆ ನೀಡುವಂತಿಲ್ಲ’ ಎಂದು ಅಮೀರುಲ್‌ ವಕೀಲರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ವಿವಿಧ ಆದೇಶಗಳನ್ನು ಉದಾಹರಿಸಿ ವಾದ ಮಂಡಿಸಿದರು.

ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ಅಮೀರುಲ್‌ ಇಸ್ಲಾಂಗೆ ಗಲ್ಲುಶಿಕ್ಷೆ ಘೋಷಿಸಿದರು. ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ವಕೀಲ ಬಿ.ಎ.ಆಲೂರ್‌ ಅವರು ಹೇಳಿದ್ದಾರೆ.

ತಾಯಿ ಸ್ವಾಗತ: ಜಿಶಾ ತಾಯಿ ರಾಜೇಶ್ವರಿ ಅವರು ತೀರ್ಪನ್ನು ಸ್ವಾಗತಿಸಿದ್ದು, ಕೋರ್ಟ್‌ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಘಟನೆ ವಿವರ: ಅತ್ಯಂತ ಕ್ರೂರವಾಗಿ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದ್ದ ಜಿಶಾ ಮೃತದೇಹ 2016ರ ಏಪ್ರಿಲ್‌ 28ರಲ್ಲಿ ಅವರ ಮನೆಯ ಕೊಠಡಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಮೇಲೆ 38 ಗಾಯದ ಗುರುತುಗಳು ಪತ್ತೆಯಾಗಿದ್ದವು. ಘಟನೆಯನ್ನು ಖಂಡಿಸಿ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು.

ಕೇರಳ ಎಲ್‌ಡಿಎಫ್‌ ನೇತೃತ್ವದ ಸರ್ಕಾರ ಪ್ರಕರಣದ ತನಿಖೆಗಾಗಿ ಎಡಿಜಿಪಿ ಬಿ.ಸಂಧ್ಯಾ ನಾಯಕತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು.

*
ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸರ್ಕಾರದ ನಿಲುವನ್ನು ಕೋರ್ಟ್‌ ಎತ್ತಿಹಿಡಿದಿದೆ.
-ಪಿಣರಾಯಿ ವಿಜಯನ್‌, ಕೇರಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT