ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಯುಗಾರಂಭ; ಸೋನಿಯಾ ಭಾವುಕ ವಿದಾಯ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಶತಮಾನದಷ್ಟು ಹಳೆಯದಾದ ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಶನಿವಾರ ಅಧಿಕಾರ ಸ್ವೀಕರಿಸಿದರು.

ಸತತ 19 ವರ್ಷಗಳ ಕಾಲ ಪಕ್ಷದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಸೋನಿಯಾ ಗಾಂಧಿ, ಸಾವಿರಾರು ಬೆಂಬಲಿಗರು ಮತ್ತು ಕಾರ್ಯಕರ್ತರೆದುರು ತಮ್ಮ ಪುತ್ರ ರಾಹುಲ್‌ಗೆ ಅಧಿಕಾರ ಹಸ್ತಾಂತರಿಸಿದರು.

ಅಧ್ಯಕ್ಷೆಯಾಗಿ ತಮ್ಮ ಕೊನೆಯ ಭಾಷಣ ಮಾಡಿದ ಸೋನಿಯಾ, ‘ಪುತ್ರನ ಬಗ್ಗೆ ನಾನು ಪ್ರಶಂಸೆ ವ್ಯಕ್ತಪಡಿಸುವುದು ಸರಿಯಲ್ಲ. ನೀವೆಲ್ಲ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿರುವ ರಾಹುಲ್‌, ಬದ್ಧತೆ, ಭಕ್ತಿ, ಮುಕ್ತ ಮನಸ್ಸು ಹಾಗೂ ತಾಳ್ಮೆಯೊಂದಿಗೆ ಪಕ್ಷವನ್ನು ಮುನ್ನಡೆಸುತ್ತಾನೆ ಎಂಬ ನಂಬಿಕೆ ಇದೆ’ ಎಂದರು.

‘ಬದಲಾವಣೆ ಇಂದಿನ ಅಗತ್ಯವಾಗಿದ್ದು, ಹೊಸ, ಯುವ ನಾಯಕತ್ವದಲ್ಲಿ ಕಾಂಗ್ರೆಸ್‌ ಪುನಶ್ಚೇತನಗೊಳ್ಳಲಿದೆ. ಚಿಕ್ಕಂದಿನಿಂದಲೇ ಹಿಂಸೆಯನ್ನು ಹತ್ತಿರದಿಂದ ನೋಡಿರುವ ರಾಹುಲ್‌, ರಾಜಕೀಯ ಪ್ರವೇಶಿಸಿದ ನಂತರ ವೈಯಕ್ತಿಕ ದಾಳಿಗಳನ್ನೂ ಎದುರಿಸಿದ್ದಾನೆ. ಅದೇ ಆತನಲ್ಲಿ ಧೈರ್ಯವನ್ನು ತುಂಬಿದೆ’ ಎಂದು ಹೇಳಿದರು.

ಜನರನ್ನು ಒಡೆಯಲು ರಾಜಕೀಯ ಬಳಕೆ

‘ರಾಜಕಾರಣ ಈಗ ಜನಸೇವೆವಾಗಿ, ಜನರ ಅಭ್ಯುದಯಕ್ಕಾಗಿ ಬಳಕೆಯಾಗುತ್ತಿಲ್ಲ. ಬದಲಿಗೆ, ಜನರನ್ನು ಒಡೆಯಲು, ದೋಚಲು ಬಳಕೆಯಾಗುತ್ತಿದೆ’ ಎಂದು ಎಐಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಹುಲ್‌ ಗಾಂಧಿ ದೂರಿದರು.

‘ಕಾಂಗ್ರೆಸ್‌ ಪಕ್ಷ ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ದಿದೆ. ಆದರೆ, ನಮ್ಮನ್ನಾಳುತ್ತಿರುವ ಪ್ರಧಾನಿ ನಮ್ಮನ್ನು ಹಿಂದಕ್ಕೆ ಕರೆದೊಯ್ಯುತ್ತಿದ್ದಾರೆ. ಅವರ ಕಳಪೆ ಆಡಳಿತದಿಂದಾಗಿ ದೇಶ ಹಿನ್ನಡೆ ಅನುಭವಿಸುತ್ತಿದೆ’ ಎಂದು ಟೀಕಿಸಿದ ರಾಹುಲ್‌,

‘ರಾಜಕಾರಣ ಜನರ ಸ್ವತ್ತು. ಹಿಂಸೆ ಮತ್ತು ಪಿಡುಗನ್ನು ಕಿತ್ತುಹಾಕುವಲ್ಲಿ ಜನ ಅದನ್ನೇ ಅಸ್ತ್ರವನ್ನಾಗಿ ಬಳಸಲಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆಯು ಭಾರತೀಯರನ್ನು ಜಾಗತಿಕವಾಗಿ ತಲೆತಗ್ಗಿಸುವಂತೆ ಮಾಡಿದೆ. ಈ ದೇಶಕ್ಕೆ ಅಂಟಿಕೊಂಡಿರುವ ಕಳಂಕವನ್ನು ಕಿತ್ತುಹಾಕುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಅಂತಹ ಶಕ್ತಿಗಳಿಗೆ ಜಯ ದೊರೆಯುವುದಿಲ್ಲ. ಅವರ ಶಕ್ತಿ ಎಷ್ಟೇ ಬಲವಾಗಿದ್ದರೂ ವಿರೂಪಗೊಳ್ಳುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

’ದ್ವೇಷ ಬಿತ್ತುವುದು ಅವರ ಕೆಲಸ: ಪ್ರೀತಿ ಹಂಚುವುದು ನಮ್ಮ ಕೆಲಸ‘

‘ಪಕ್ಷ ನಂಬಿದ ತತ್ವಾದರ್ಶಗಳನ್ನು ಪ್ರತಿಪಾದಿಸುವ ಕಾರ್ಯದಿಂದ ನಾವು ಎಂದಿಗೂ ಹಿಂದೆ ಸರಿಯಬಾರದು. ಜಾತಿ, ಮತ, ಧರ್ಮವನ್ನು ಮೀರಿ ಎಲ್ಲರ ಬಗ್ಗೆ ಇರುವ ಪಕ್ಷದ ಕಾಳಜಿ, ಪ್ರೀತಿಯನ್ನು ಮುಂದುವರಿಸುವ ಗುರುತರ ಹೊಣೆ ನಮ್ಮದಾಗಿದೆ’ ಎಂದು ರಾಹುಲ್‌ ಹೇಳಿದರು.

‘ಸ್ವಾರ್ಥ ಸಾಧನೆಯ, ವೈಯಕ್ತಿಕ ಹೋರಾಟಕ್ಕೆ ಹೆಸರಾಗಿರುವ ಬಿಜೆಪಿಯನ್ನು ಭ್ರಾತೃತ್ವದೊಂದಿಗೇ ನೋಡೋಣ. ದೇಶವನ್ನು ಕಾಂಗ್ರೆಸ್‌ಮುಕ್ತವನ್ನಾಗಿಸುವ ಪಣ ತೊಟ್ಟಿರುವ ಅವರ ನಡೆಯನ್ನು ನಾವು ಒಪ್ಪದಿದ್ದರೂ, ಎಲ್ಲರನ್ನೂ ಪ್ರೀತಿಸುವ ನಮ್ಮ ಮನೋಭಾವ ಹಾಗೆಯೇ ಮುಂದುವರಿಯುತ್ತದೆ. ನಾವು ದ್ವೇಷವನ್ನು ದ್ವೇಷದೊಂದಿಗೆ ಎದುರಿಸುವುದು ಬೇಡ’ ಎಂದು ಅವರು ತಿಳಿಸಿದರು.

‘ದಬ್ಬಾಳಿಕೆಯನ್ನು ವಿರೋಧಿಸಿದ ಹಿಂದಿನ ಪೀಳಿಗೆಯ ತ್ಯಾಗ, ಬಲಿದಾನಗಳನ್ನು ಕಂಡು 13 ವರ್ಷಗಳ ಹಿಂದೆ ರಾಜಕಾರಣ ಪ್ರವೇಶಿಸಿದ್ದೇನೆ. ದೇಶದಲ್ಲಿರುವ ಅನೇಕರಂತೆ ನಾನೂ ಒಬ್ಬ ಆದರ್ಶವಾದಿ. ಪ್ರಸ್ತುತ ರಾಜಕಾರಣ ನಮ್ಮ ಭ್ರಮನಿರಸನಕ್ಕೆ ಕಾರಣವಾಗಿದೆ. ಅದಕ್ಕೆ ನಾವು ಹಿಂಜರಿಯಬೇಕಿಲ್ಲ’ ಎಂದು ಅವರು ಕಿವಿಮಾತು ಹೇಳಿದರು.

ಸೋನಿಯಾ ಭಾವುಕ ವಿದಾಯ

‘ಪಕ್ಷದ ಮುಖ್ಯಸ್ಥೆಯಾಗಿ ನಾನು ಮಾಡುತ್ತಿರುವ ಕೊನೆಯ ಭಾಷಣವಿದು. ಹೊಸ ಯುಗದಲ್ಲಿರುವ ನೀವು ಹೊಸ ನಾಯಕತ್ವ ಪಡೆಯಲಿದ್ದೀರಿ. ಹೆಚ್ಚೂಕಡಿಮೆ 20 ವರ್ಷಗಳ ಹಿಂದೆ ನೀವೆಲ್ಲರೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದಾಗ, ನಾನು ವಿಚಲಿತಳಾಗಿದ್ದೆ. ಐತಿಹಾಸಿಕವಾದ ಈ ಪಕ್ಷದ ಚುಕ್ಕಾಣಿ ಹಿಡಿಯುತ್ತೇನೆ ಎಂದು ಎಂದೆಂದೂ ಭಾವಿಸಿರಲಿಲ್ಲ. ಅದೊಂದು ಅಸಾಧಾರಣ ಮತ್ತು ಗುರುತರವಾದ ಜವಾಬ್ದಾರಿಯಾಗಿತ್ತು’ ಎಂದು ಸೋನಿಯಾ ಸ್ಮರಿಸಿಕೊಂಡರು.

‘ರಾಜಕಾರಣ ಎಂದರೆ ಏನು ಎಂಬುದನ್ನು ನಾನು ವಿವಾಹದ ನಂತರವಷ್ಟೇ ತಿಳಿದೆ. ಪಕ್ಷದ ಅಧ್ಯಕ್ಷೆಯಾಗುವವರೆಗೆ ರಾಜಕಾರಣದೊಂದಿಗಿನ ನನ್ನ ಸಂಪರ್ಕ ಸಂಪೂರ್ಣ ವೈಯಕ್ತಿಕವಾಗಿತ್ತು. ಸ್ವಾತಂತ್ರ್ಯ ಚಳವಳಿಗಾಗಿ ತನು–ಮನ– ಧನವನ್ನು ಸಮರ್ಪಿಸಿದ ಕ್ರಾಂತಿಕಾರಿ ಕುಟುಂಬಕ್ಕೆ ಸೇರಿದ್ದ ಇಂದಿರಾ ಗಾಂಧಿಯವರ ಸೊಸೆಯಾಗಿ ಬಂದ ನನ್ನನ್ನು ಅವರಂತೂ ತಮ್ಮ ಪುತ್ರಿಯಂತೆಯೇ ಕಂಡರು. ಅವರಿಂದಲೇ ನಾನು ಈ ದೇಶ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಂಡೆ. 1984ರಲ್ಲಿ ಅವರ ಹತ್ಯೆಯಾದಾಗ ಹೆತ್ತ ತಾಯಿಯನ್ನೇ ಕಳೆದುಕೊಂಡಂತಾಯಿತು. ಆ ದುರಂತ ನನ್ನ ಜೀವನದಲ್ಲಿ ಬದಲಾವಣೆಗೆ ಕಾರಣವಾಯಿತು’ ಎಂದು ಅವರು ತಮ್ಮ ಕುಟುಂಬ ಎದುರಿಸಿದ ದುರಂತದ ಕುರಿತು ವಿವರಿಸಿದರು.

‘ಪತಿ ರಾಜೀವ್‌ ಮತ್ತು ಮಕ್ಕಳನ್ನು ಸಾಧ್ಯವಾದಷ್ಟೂ ರಾಜಕೀಯದಿಂದ ದೂರ ಇರಿಸುವುದಕ್ಕೆ ಯತ್ನಿಸಿದೆ. ಆದರೆ, ಅವರು ದೇಶದ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಂಡರು. ದೊಡ್ಡ ಜವಾಬ್ದಾರಿಯೊಂದು ರಾಜೀವ್‌ ಹೆಗಲೇರಿತು. ದೇಶದ ಮೂಲೆಮೂಲೆಗೆ ತೆರಳಿದ ಅವರೊಂದಿಗೆ ನಾನೂ ಪ್ರವಾಸ ಮಾಡಿದೆ. ಜನರ ಸಮಸ್ಯೆಯ ಬಗ್ಗೆ ತಿಳಿದುಕೊಂಡೆ. ಏಳು ವರ್ಷಗಳ ನಂತರ ರಾಜೀವ್‌ ಸಹ ಹತ್ಯೆಗೊಳಗಾದರು. ಅಲ್ಲಿಗೆ ನನಗಿದ್ದ ಏಕೈಕ ಬೆಂಬಲ ದೂರವಾದಂತಾಗಿತ್ತು. ಅಲ್ಲಿಂದ ಕೆಲ ವರ್ಷ ಚಿಪ್ಪಿನೊಳಗೆ ಅವಿತಂತಿದ್ದ ನನಗೆ, ಕಾಂಗ್ರೆಸ್‌ ಪಕ್ಷ ಬಿಕ್ಕಟ್ಟು ಎದುರಿಸುತ್ತಿರುವುದು ಗಮನಕ್ಕೆ ಬಂತು. ಕೋಮುವಾದಿ ಶಕ್ತಿಗಳು ಬಲಗೊಳ್ಳುತ್ತಿರುವ ಸೂಚನೆ ದೊರೆಯಿತು. ಆಗ ಪಕ್ಷದ ಕಾರ್ಯಕರ್ತರ ಕರೆಗೆ ಓಗೊಡದಿರುವುದು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ನಾನು ದಿಟ್ಟ ನಿರ್ಧಾರ ಕೈಗೊಳ್ಳದಿದ್ದರೆ ಕುಟುಂಬ ಮಾಡಿದ ತ್ಯಾಗಕ್ಕೆ ಅರ್ಥವೇ ಇರುವುದಿಲ್ಲ ಎಂದು ನನಗೆ ಮನವರಿಕೆಯಾಯಿತು’ ಎಂದು ಸೋನಿಯಾ ನೆನಪಿಸಿಕೊಂಡರು.

‘ನನಗೆ ನೆನಪಿದೆ. ಬಹುಶಃ ಆಗ ಕಾಂಗ್ರೆಸ್‌ ‌‌‌ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ ಸರ್ಕಾರ ರಚಿಸು
ವದಂತೂ ಕನಸಿನ ಮಾತು ಎಂಬಂತಹ ಸ್ಥಿತಿಯಿತ್ತು. ಆ ಸವಾಲನ್ನು ಸ್ವೀಕರಿಸಿ ಯಶಸ್ಸನ್ನು ಗಳಿಸುವುದು ಸುಲಭದ ಮಾತಾಗಿರಲಿಲ್ಲ. ನಿಮ್ಮೆಲ್ಲರ ಶ್ರಮದ ಫಲವಾಗಿ ಒಂದರ ನಂತರ ಒಂದರಂತೆ 24 ರಾಜ್ಯಗಳಲ್ಲಿ ಸರ್ಕಾರ ರಚಿಸುವಷ್ಟರ ಮಟ್ಟಿಗೆ ಪಕ್ಷ ಪುನಃ ಚಿಗಿತುಕೊಂಡಿತು’ ಎಂದರು.

* ನನಗೆ ಪ್ರೀತಿಯನ್ನು ಧಾರೆ ಎರೆದಿರುವ ದೇಶದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು

– ಸೋನಿಯಾ ಗಾಂಧಿ 

* ಬಿಜೆಪಿ ಪಕ್ಷದವರು ದ್ವೇಷವನ್ನು ಬಿತ್ತಲಿ. ನಾವು ಪ್ರೀತಿಯನ್ನು ಹಂಚೋಣ

–ರಾಹುಲ್‌ ಗಾಂಧಿ, ಕಾಂಗ್ರೆಸ್‌ನ ನೂತನ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT