ಮನಸೆಳೆಯುವ ಗೋಡೆ ಚಿತ್ರ..

ಹೆಚ್ಚುಕಮ್ಮಿ ಅರ್ಧ ಕಿ.ಮೀ ಉದ್ದವಿರುವ ಈ ಪೇಟಿಂಗ್‌ಗಳು ಸೀತಮನಿ ಭಾಗದಿಂದ ಬರುವ ಪ್ರವಾಸಿಗರನ್ನು ಕೃಷ್ಣಾ ಉದ್ಯಾನಕ್ಕೆ ಕರೆದೊಯ್ಯುತ್ತವೆ

ಆಲಮಟ್ಟಿ ಬಲದಂಡೆ ಕಾಲುವೆಯ ಅಕ್ವಾಡೆಕ್‌ ಮೇಲೆ ಮೂಡಿ ಬಂದಿರುವ ವಿವಿಧ ಐತಿಹಾಸಿಕ ಸ್ಥಳಗಳ ಪೇಂಟಿಂಗ್‌

ಕರ್ನಾಟಕ ಇತಿಹಾಸ ಅದರಲ್ಲೂ ಉತ್ತರ ಕರ್ನಾಟಕದ ಐತಿಹಾಸಿಕ ತಾಣಗಳ ಮಹತ್ವ ಸಾರುವ ವಿವಿಧ ಚಿತ್ರಕಲೆಗಳು ಕಾಲುವೆಯ ಅಕ್ವಾಡೆಕ್‌ ಮೇಲೆ ಮೂಡಿ ಬಂದಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಹೌದು..ಇದೊಂದು ಹೊಸ ರೀತಿಯ ಕಲ್ಪನೆ.. ಬೋಳು ಬೋಳಾಗಿದ್ದ ಸೀತಮ್ಮನಗಿರಿಗೆ ಈಗ ಬಣ್ಣ ಬಣ್ಣದ ಚಿತ್ರಗಳ ಚಿತ್ತಾರದಿಂದ ಕಲರ್‌ಫುಲ್‌ ಆಗಿದೆ.

ಆಲಮಟ್ಟಿ ಜಲಾಶಯದ ಬಲಭಾಗದ ಬಾಗಲಕೋಟೆ ತಾಲ್ಲೂಕಿನ ಸೀತಮ್ಮನಗಿರಿಯಲ್ಲಿ ಹಾದು ಹೋಗಿರುವ ಆಲಮಟ್ಟಿ ಬಲದಂಡೆ ಕಾಲುವೆಗೆ ಕಟ್ಟಲಾಗಿರುವ ಅಕ್ವಾಡೆಕ್ (ಕಾಲುವೆ ಒಂದೇ ಮಟ್ಟದಲ್ಲಿ ಹೋಗಲು ಕಟ್ಟಿರುವ ಸೇತುವೆ)ಗೆ ಈ ಪೇಟಿಂಗ್‌ ಬಿಡಿಸಲಾಗಿದೆ.

ಹೆಚ್ಚುಕಮ್ಮಿ ಅರ್ಧ ಕಿ.ಮೀ ಉದ್ದವಿರುವ ಈ ಪೇಟಿಂಗ್‌ಗಳು ಸೀತಮನಿ ಭಾಗದಿಂದ ಬರುವ ಪ್ರವಾಸಿಗರನ್ನು ಕೃಷ್ಣಾ ಉದ್ಯಾನಕ್ಕೆ ಕರೆದೊಯ್ಯುತ್ತವೆ. ಪೇಟಿಂಗ್‌ ಕೆಳಭಾಗದಲ್ಲಿ ಗಾರ್ಡ್‌ನಿಂಗ್‌ ಮಾಡಿ ಹುಲ್ಲು ಬೆಳೆಸಲಾಗಿದ್ದು, ಇದರಿಂದ ಪೇಟಿಂಗ್‌ ದೂರದಿಂದ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.

ಏನಿದೆ ಇದರಲ್ಲಿ..?: ಆಲಮಟ್ಟಿ ಬಲದಂಡೆ ಕಾಲುವೆಯ ಅಕ್ವಾಡೆಕ್‌ನಲ್ಲಿ 4.5 ಮೀ ಉದ್ದ ಮತ್ತು ಅಷ್ಟೇ ಮೀಟರ್ ಅಗಲದ ಪೆನಾಲ್‌ ರೀತಿಯಿದ್ದು, ಅಂತಹ 90 ಪೆನಾಲ್‌ಗಳಲ್ಲಿ ಈ ಪೇಟಿಂಗ್ ಮಾಡಲಾಗಿದೆ.

ಬದಾಮಿ ಚಾಲುಕ್ಯರ ವಾಸ್ತುಶಿಲ್ಪ, ಗುಹಾಂತರ ದೇವಾಲಯ, ಬೃಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನ, ಬನಶಂಕರಿ ದೇವಸ್ಥಾನ, ಹೊಂಡ, ಐಹೊಳೆ ಪಟ್ಟದಕಲ್ಲಿನ ವಾಸ್ತುಶಿಲ್ಪ, ಹೊಯ್ಸಳರ ಕಾಲದ ಬೇಲೂರು, ಹಳೇಬೀಡಿನ ಶಿಲ್ಪಕಲೆ, ಶಿಲಾ ಬಾಲಿಕೆಯರು, ವಿಷ್ಣುವಿನ ವರಾಹ, ನರಸಿಂಹ, ಹಂಪಿಯ ವಿರೂಪಾಕ್ಷ ದೇವಸ್ಥಾನ, ಮುತ್ತು ರತ್ನಗಳ ವ್ಯಾಪಾರಿ ಸ್ಥಳ, ವಿಜಯ ವಿಠ್ಠಲ ದೇವಸ್ಥಾನ, ಹಂಪಿಯ ಉಗ್ರ ನರಸಿಂಹ, ಕಲ್ಲಿನ ರಥ, ಹೇಮಕೂಟ ಗುಡ್ಡ ಸೇರಿದಂತೆ ವಿವಿಧ ಚಿತ್ರಗಳು ಗಮನಸೆಳೆಯುತ್ತವೆ.

ಶ್ರವಣಬೆಳಗೊಳದ ಗೊಮ್ಮ ಟೇಶ್ವರ ಪೇಟಿಂಗ್ ಭಕ್ತಿ ಭಾವ ಮೂಡಿಸುತ್ತವೆ. ವಿಜಯಪುರದ ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ವಿವಿಧ ತಾಣಗಳು, ಬೀದರ, ಗುಲಬರ್ಗಾದ ಬಹುಮುನಿ ಸುಲ್ತಾನರ ಐತಿಹಾಸಿಕ ತಾಣಗಳ ಪೇಟಿಂಗ್ ಕೂಡಾ ಇಲ್ಲಿವೆ.

ವಾಟರ್ ಪೇಟಿಂಗ್: ಮುದ್ದೇಬಿಹಾಳ ತಾಲ್ಲೂಕಿನ ಚಲ್ಮಿ ತಾಂಡಾದ ಕಲಾವಿದ ಭೀಮಸಿಂಗ್ ಚವ್ಹಾಣ ನೇತೃತ್ವದ 9 ಜನ ಕಲಾವಿದರು ಈ ಪೇಟಿಂಗ್‌ಗಳನ್ನು ರಚಿಸಿದ್ದಾರೆ. ‘ನಾಲ್ಕು ತಿಂಗಳುಗಳ ಕಾಲ ಇಲ್ಲಿಯೇ ವಾಸವಿದ್ದು, ಈ ಚಿತ್ರಗಳನ್ನು ರಚಿಸಿದ್ದೇವೆ, ಇದು ಸವಾಲಿನ ಕೆಲಸವಾಗಿತ್ತು. ಪ್ರತಿ ಪೆನಾಲ್‌ ಚಿತ್ರದ ಸ್ಕೆಚ್ ಮಾಡಿ, ಅದನ್ನು ಅಂತಿಮಗೊಳಿಸಿದ ನಂತರವೇ ಬಣ್ಣ ತುಂಬುವ ಕಾರ್ಯ ಮಾಡುತ್ತಿದ್ದೆವು’ ಎಂದು ಕಲಾವಿದ ಭೀಮಸಿಂಗ್ ಚವ್ಹಾಣ ಹೇಳಿದರು.

ಸೇತುವೆಯ ಎತ್ತರದ ಪ್ರದೇಶದಲ್ಲಿ ಕಂಬ ಕಟ್ಟಿಕೊಂಡು ನಿಂತು ಪೇಟಿಂಗ್‌ ರಚಿಸುವುದು ಸವಾಲಿನದಾಗಿತ್ತು, ಚಿತ್ರ ಮೂಡಿ ಬಂದ ಬಗೆ ತೃಪ್ತಿ ನೀಡಿದೆ ಎಂದರು. ಏಸಿಯನ್‌ ಅಪೆಕ್ಸ್‌ ಪೇಂಟ್‌ನ ವಾಟರ್‌ಕಲರ್‌ನಲ್ಲಿ ಚಿತ್ರಗಳು ಮೂಡಿ ಬಂದಿವೆ.

₹ 8.5 ಲಕ್ಷ ವೆಚ್ಚ: ಪ್ರವಾಸಿಗರು ಚಿತ್ರಗಳನ್ನು ನೋಡುತ್ತಲೇ ಉದ್ಯಾನ ಪ್ರವೇಶಿಸಲಿ ಎನ್ನುವ ಉದ್ದೇಶದಿಂದ ಅಕ್ವಾಡೆಕ್‌ಗೆ ಪೇಂಟಿಂಗ್ ಮಾಡಿಸಲಾಯಿತು ಎನ್ನುತ್ತಾರೆ ಕೆಬಿಜೆಎನ್ಎಲ್ ಅರಣ್ಯ ಇಲಾಖೆ ವಿಭಾಗದ ಆರ್‌.ಎಫ್.ಓ ಮಹೇಶ ಪಾಟೀಲ.

ಯಾವ ಪೇಟಿಂಗ್ ಇರಬೇಕು ಎಂದು ಆಯ್ಕೆ ಮಾಡುವುದೇ ಬಹು ಸವಾಲಿನ ಕೆಲಸವಾಗಿತ್ತು. ಅಂತಿಮವಾಗಿ ಹಿರಿಯ ಅಧಿಕಾರಿಗಳ ಅಭಿಪ್ರಾಯಪಡೆದು ಶೇ 70 ರಷ್ಟು ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳ ಮಹತ್ವವನ್ನು ಸಾರುವ ಪೇಟಿಂಗ್ ಮಾಡಲು ನಿರ್ಧರಿಸಲಾಯಿತು ಎಂದು ಪಾಟೀಲ ತಿಳಿಸಿದರು.
 

 

Comments
ಈ ವಿಭಾಗದಿಂದ ಇನ್ನಷ್ಟು
ಮಾವಿನ ಕೊರತೆ; ಗಗನಕ್ಕೇರಿದ ಬೆಲೆ

ವಿಜಯಪುರ
ಮಾವಿನ ಕೊರತೆ; ಗಗನಕ್ಕೇರಿದ ಬೆಲೆ

23 Apr, 2018
ಸಂರಕ್ಷಣೆಗೆ ‘ಸಾಕ್ಷ್ಯಚಿತ್ರ’ದ ಬೆಂಬಲ; ಶಿಫಾರಸು

ಆಲಮಟ್ಟಿ
ಸಂರಕ್ಷಣೆಗೆ ‘ಸಾಕ್ಷ್ಯಚಿತ್ರ’ದ ಬೆಂಬಲ; ಶಿಫಾರಸು

23 Apr, 2018

ವಿಜಯಪುರ
ಹೊಣೆ ಹೊರಲು ಮುಖಂಡರ ಹಿಂದೇಟು?

ಮತದಾನಕ್ಕೆ 19 ದಿನವಷ್ಟೇ ಬಾಕಿ ಉಳಿದಿದೆ. ಬಹಿರಂಗ ಪ್ರಚಾರಕ್ಕೆ ಹದಿನೇಳು ದಿನ ಬಾಕಿಯಿವೆ. ಬಿಜೆಪಿ ಜಿಲ್ಲಾ ಘಟಕದಲ್ಲಿ ಬಂಡಾಯದ ಬಿಸಿ ತಾರಕಕ್ಕೇರಿದೆ. ಇಂತಹ ಹೊತ್ತಿನಲ್ಲಿ...

23 Apr, 2018

ದೇವರ ಹಿಪ್ಪರಗಿ
ಕಾಂಗ್ರೆಸ್‌ ನಾಯಕರಿಗೆ ತಕ್ಕ ಪಾಠ ಕಲಿಸಿ

ವಿಜಯಪುರ ಜಿಲ್ಲೆಯಲ್ಲಿ ಕೋಲಿ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡದೆ ಸಮುದಾಯವನ್ನು ನಿರ್ಲಕ್ಷಿಸಿ, ಕುತಂತ್ರ ರಾಜಕಾರಣಕ್ಕೆ ಮುಂದಾದ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು...

23 Apr, 2018
ಬಂಡಾಯ ಶಮನ; ಗೆಲುವಿನತ್ತ ಚಿತ್ತ...

ವಿಜಯಪುರ
ಬಂಡಾಯ ಶಮನ; ಗೆಲುವಿನತ್ತ ಚಿತ್ತ...

22 Apr, 2018