ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಮ್ಮಡದಲ್ಲಿ ಹೀಗೊಂದು ‘ಹಸಿರು ಶಾಲೆ’

Last Updated 17 ಡಿಸೆಂಬರ್ 2017, 7:00 IST
ಅಕ್ಷರ ಗಾತ್ರ

ವಿಶ್ವಜ ಕಾಡದೇವರ

ರಬಕವಿ ಬನಹಟ್ಟಿ ಸಮೀಪದ ಚಿಮ್ಮಡದ ಪ್ರಭು ದೇವರ ದೇವಸ್ಥಾನ ದಾಟಿ ಫರ್ಲಾಂಗ್‌ ದೂರ ಹೋದರೆ ಪಾಟೀಲ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೊರೆಯುತ್ತದೆ.

ಶಾಲೆಯ ಆವರಣ ಪ್ರವೇಶಿಸಿದರೆ ಎಲ್ಲ ಕಡೆಗೂ ಹಸಿರು ತುಂಬಿದ ಪರಿಸರ ಕಾಣುತ್ತದೆ. ಮಕ್ಕಳು ಹಚ್ಚ ಹಸಿರಿನ ಮಧ್ಯದಲ್ಲಿ ಆಡುತ್ತಾ, ನಲಿಯುತ್ತಾ ಕಲಿಯುತ್ತಿವೆ. ಹಾಗಾಗಿ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ‘ಹಸಿರು ಶಾಲೆ’ ಎಂದೇ ಗುರುತಿಸಿಕೊಂಡಿದೆ.

ಶಾಲೆಯ ಪರಿಸರಕ್ಕೆ ಹಸಿರು ಹೊದಿಕೆ ಹಾಸಲು ಮುಖ್ಯ ಶಿಕ್ಷಕಿ ದೀಪಾ ಮಳಲಿ ಹಾಗೂ ಅವರ ಪತಿಯೂ ಆಗಿರುವ ಸಹ ಶಿಕ್ಷಕ ಆಡಿವೆಪ್ಪಾ ಹೂಲಿ ಅವರ ಆರು ವರ್ಷಗಳ ಶ್ರಮ ಕಾರಣವಾಗಿದೆ.

2003ರಲ್ಲಿ ಮಂಜೂರಾಗಿದ ಈ ಶಾಲೆಗೆ ಸ್ಥಳೀಯರಾದ ಶಂಕರಗೌಡ ಪಾಟೀಲರು 17 ಗುಂಟೆ ಭೂಮಿ ದಾನ ಕೊಟ್ಟಿದ್ದಾರೆ. ಇಲ್ಲಿ ಒಟ್ಟು 49 ವಿದ್ಯಾರ್ಥಿಗಳು 1ರಿಂದ 5ನೇ ತರಗತಿ ಕಲಿಯುತ್ತಿದ್ದಾರೆ. ಶಾಲೆಯ ಮಕ್ಕಳು ಸಮೀಪದ ತೋಟಗಳಲ್ಲಿ ವಾಸಿಸುವ ಮಕ್ಕಳು. ಶಿಕ್ಷಣದಿಂದ ವಂಚಿತವಾಗುತ್ತಿದ್ದ ಅವರಿಗೆ ಈ ಶಾಲೆಯೇ ಓಯಸಿಸ್‌.

ಈ ಶಿಕ್ಷಕ ದಂಪತಿ ಶಿಕ್ಷಣದ ಜೊತೆಗೆ ಸರ್ಕಾರದ ಎಲ್ಲ ಯೋಜನೆಗಳ ಫಲ ದೊರೆಯುವಂತೆ ಮಾಡಿದ್ದಾರೆ. ಶಾಲೆಯ ಪರಿಸರ ಅಚ್ಚುಕಟ್ಟಾಗಿ ಇಟ್ಟಿದ್ದಾರೆ. ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರದ ಬಗ್ಗೆಯೂ ತಿಳಿವಳಿಕೆ ನೀಡುತ್ತಿದ್ದಾರೆ. ಪ್ರತಿ ತಿಂಗಳು ತಮ್ಮ ವೇತನದಲ್ಲಿ ಸ್ವಂತ ಹಣ ಬಳಸಿ ವೈವಿಧ್ಯಮಯವಾದ ಗಿಡ ಮರ, ವಿವಿಧ ಜಾತಿಯ ಹೂವು ಮತ್ತು ತರಕಾರಿಯನ್ನೂ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳ ನೆರವು ಪಡೆಯುತ್ತಿದ್ದಾರೆ. ಪ್ರತಿಯೊಂದು ಗಿಡಕ್ಕೂ ಅದು ಯಾವ ಜಾತಿಗೆ ಸೇರಿದ ಎಂಬ ಫಲಕ ಹಾಕಿದ್ದಾರೆ. ಮಕ್ಕಳಲ್ಲೂ ಕೃಷಿ ಗೌರವಿಸುವ ಗುಣ ಬೆಳೆಸಿದ್ದಾರೆ.

ಶಾಲೆಯ ಆವರಣದಲ್ಲಿ ಸರ್ವ ಧರ್ಮ ಸಮನ್ವಯ ಭವನ ನಿರ್ಮಿಸಿ ಮಕ್ಕಳಲ್ಲಿ ಭಾವೈಕ್ಯತೆ ಬಿತ್ತುತ್ತಿದ್ದಾರೆ. ಉದ್ಯಾನವನದ ನಿರ್ವಹಣೆ ಮೂಲಕ ಶ್ರಮದಾನದ ಮಹತ್ವ ಕಲಿಯುತ್ತಿದ್ದಾರೆ. ಮಹಾಲಿಂಗಪುರ ಜೆಸಿ ಸಂಸ್ಥೆ ನೀಡಿದ 100 ಕುಂಡಗಳಲ್ಲಿ ವಿವಿಧ ಜಾತಿಯ ಸಸಿ ಬೆಳೆಯಲಾಗಿದೆ. ವಿದ್ಯಾರ್ಥಿಯೊಬ್ಬರಿಗೆ ಎರಡು ಕುಂಡಗಳ ನಿರ್ವಹಣೆ ಹೊಣೆಗಾರಿಕೆ ನೀಡಲಾಗಿದೆ. ಎರೆ ಹುಳುವಿನ ಮಹತ್ವ ತಿಳಿಸಲು ಎರೆ ಹುಳು ಗೊಬ್ಬರ ತಯಾರು ಮಾಡಲಾಗುತ್ತಿದೆ.

ಜಿಲ್ಲಾ ಮಾಲಿನ್ಯ ನಿಯಂತ್ರಣಾ ಮಂಡಳಿ ಈ ಶಾಲೆಗೆ ಹಸಿರು ಪ್ರಶಸ್ತಿ ನೀಡಿದೆ. ಈ ಶಿಕ್ಷಕ ದಂಪತಿಗಳಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಮೂರು ತಿಂಗಳ ಹಿಂದೆ ಶಿಕ್ಷಕ ದಂಪತಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಯಿಸಿ ನೀರಿನ ಕೊರತೆ ನೀಗಿಸಿದ್ದಾರೆ. ‌ ಶಾಲೆಗೆ ವಿದ್ಯುತ್‌ ಸೌಲಭ್ಯ ದೊರೆತರೆ ಮಕ್ಕಳಿಗೆ ಕಂಪ್ಯೂಟರ್‌ ಜ್ಞಾನವನ್ನು ನೀಡುವುದಾಗಿ ಶಿಕ್ಷಕ ದಂಪತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT