ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಲಗಾ ಬಂದ್‌ ಬಹುತೇಕ ಯಶಸ್ವಿ

Last Updated 17 ಡಿಸೆಂಬರ್ 2017, 7:01 IST
ಅಕ್ಷರ ಗಾತ್ರ

ಚಿಕ್ಕೋಡಿ: ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರು ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಇಲ್ಲಿನ ’ಬುದ್ದ–ಅಂಬೇಡ್ಕರ ಅಭಿವೃದ್ಧಿ ಸಮಿತಿ’ ಶನಿವಾರ ಸದಲಗಾ ಬಂದ್‌ಗೆ ನೀಡಿದ್ದ ಬಂದ್‌ಗೆ ದಲಿತ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬಂದ್ ಬಹುತೇಕ ಯಶಸ್ವಿಯಾಗಿದೆ.

ಬೆಳಿಗ್ಗೆಯಿಂದಲೇ ಸದಲಗಾ ಪಟ್ಟಣದ ನಾಗರಿಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ–ಮುಗ್ಗಟ್ಟಗಳನ್ನು ಮುಚ್ಚುವ ಮೂಲಕ, ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಸಮಿತಿ ಸದಸ್ಯರು ಹಾಗೂ ವಿವಿಧ ದಲಿತ ಸಂಘಟನೆಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉಮೇಶ ಕತ್ತಿ ಅವರ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆ ಮೂಲಕ ಬಂದು ಸದಲಗಾ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಕತ್ತಿ ಅವರು, ದಲಿತರ ಬಗ್ಗೆ ಅಸಂವಿಧಾನಿಕ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕವಾಗಿ ದಲಿತರಿಗೆ ‘ಹೊಲೆಯಾ’ ಎಂದು ಕರೆಯುವ ಮೂಲಕ ದಲಿತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಕತ್ತಿ ಅವರ ವಿರುದ್ದ ಜಾತಿ ನಿಂದನೆಯಡಿ ಪ್ರಕರಣ ದಾಖಲಿಸಲು ಸ್ಪೀಕರ್‌ ಅವರು ಅನುಮತಿ ನೀಡಬೇಕು. ಈ ಬಗ್ಗೆ ದಲಿತ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಲಿತ ಮುಖಂಡರಾದ ಸಂತೋಷ ನವಲೆ, ಸಂಜಯ ಕಾಂಬಳೆ, ರಾವಸಾಹೇಬ ಮೇಲಾಳೆ, ವಿನಾಯಕ ಮಾಳಗೆ, ಹೇಮಂತ ಶಿಂಗೆ, ಶಶಿಕಾಂತ ಬೋಗಲೆ, ಗಣತಿ ಗೋಟೆ, ರಾಹುಲ ಕುರಣಿ, ಅನೀಲ ನಂದೆ, ಪ್ರಕಾಶ ದೋಣವಾಡೆ, ಸುರೇಶ ಮಾದಿಗ ಹಾಗೂ ಸಚೀನ ಮಾಳಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT