ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಯಾಕೆ ಟಿಕೆಟ್‌ ಕೊಡಲ್ಲ?

Last Updated 17 ಡಿಸೆಂಬರ್ 2017, 7:07 IST
ಅಕ್ಷರ ಗಾತ್ರ

ಬಳ್ಳಾರಿ: ‘ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ನನಗೆ ಯಾಕೆ ಟಿಕೆಟ್‌ ಕೊಡಲ್ಲ? ಮೊದಲು ಇದನ್ನು ಪಕ್ಷ ತೀರ್ಮಾನಿಸಲಿ?’ ಎಂದು ನಗರ ಕ್ಷೇತ್ರದ ಶಾಸಕ ಅನಿಲ್‌ಲಾಡ್‌ ಪ್ರತಿಪಾದಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಶನಿವಾರ ಮೆಣಸಿನಕಾಯಿ ಮಾರುಕಟ್ಟೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷದಲ್ಲಿದ್ದುಕೊಂಡು ದ್ರೋಹದ ಕೆಲಸ ಮಾಡಿಲ್ಲ. ಬಿಜೆಪಿಯೊಂದಿಗೆ ಚರ್ಚೆಯನ್ನೂ ಮಾಡಿಲ್ಲ. ನಾನು ಎಲ್ಲ ಸನ್ನಿವೇಶಗಳನ್ನೂ ಎದುರಿಸಲು ಸಿದ್ಧನಿರುವೆ, ಆದರೆ ನನ್ನದೇನಾದರೂ ತಪ್ಪಿದ್ದರೆ ಪಕ್ಷ ಮೊದಲು ಸ್ಪಷ್ಟಪಡಿಸಬೇಕು’ ಎಂದು ಪ್ರತಿಪಾದಿಸಿದರು.

‘ಹೈಕಮಾಂಡ್‌ ಮೇಲೆ ನನಗೇನೂ ಅಸಮಾಧಾನವಿಲ್ಲ. ಆದರೆ, ಬಳ್ಳಾರಿ ನಗರ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ ಎಂಬ ಊಹಾಪೋಹವನ್ನೇ ಆಧರಿಸಿ ಪೈಪೋಟಿ ಹೆಚ್ಚಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನವರೇ ಏಕೆ ಹೀಗೆ ವದಂತಿ ಹಬ್ಬಿಸುತ್ತಿದ್ದಾರೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಅನಿಲ್‌ಲಾಡ್‌ಗೆ ಟಿಕೆಟ್‌ ಸಿಗಲ್ಲ ಎಂಬ ವದಂತಿಯನ್ನು ಯಾರು, ಯಾಕೆ ಹಬ್ಬಿಸುತ್ತಿದ್ದಾರೆ? ಕಾಣಲಾರದ ಕೈಗಳು ಈ ವದಂತಿ ಹಿಂದೆ ಇವೆ’ ಎಂದರು.

‘ಮಲ್ಲಿಕಾರ್ಜುನ ಖರ್ಗೆಯವರು ನನ್ನ ನಾಯಕರು. ಅವರಿಗೆ ಈ ವಿಚಾರದ ಕುರಿತು ಮಾಹಿತಿ ನೀಡುವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಗಮನಕ್ಕೂ ತರುವೆ. ಟಿಕೆಟ್‌ ಕೊಟ್ಟರೆ ಪಕ್ಷದಲ್ಲೇ ಇರುವೆ. ನೀಡಲು ಸಾಧ್ಯವಿಲ್ಲ ಎಂದು ಹೇಳಿದರೆ ಮುಂದಿನ ನಿರ್ಧಾರ ಕೈಗೊಳ್ಳುವೆ. ಆದರೆ ಪಕ್ಷವನ್ನು ಬಿಟ್ಟುಹೋಗುವೆ ಎಂದು ಹೇಳಲು ತಯಾರಿಲ್ಲ’ ಎಂದರು.

ನಿಷ್ಠೆ ಬಿಟ್ಟುಕೊಟ್ಟಿಲ್ಲ: ‘ಯಾವುದೇ ಪಕ್ಷದಲ್ಲಿದ್ದರೂ, ನಿಷ್ಠೆಯಿಂದ ಅದನ್ನು ಕಟ್ಟುವ ಕೆಲಸ ಮಾಡಿದ್ದೇನೆ. ಪಾಲಿಕೆ, ಎಪಿಎಂಸಿಯಲ್ಲಿ ಕಾಂಗ್ರೆಸ್‌ನ ಬಲವನ್ನು ಸ್ಥಾಪಿಸಿದ್ದೇವೆ. ಆದರೆ, ಗೆದ್ದಿರುವ ಜಿಲ್ಲಾ ಪಂಚಾಯಿತಿಯನ್ನು ಉಳಿಸಿಕೊಳ್ಳಲು ನಮ್ಮದೇ ಪಕ್ಷದ ಮುಖಂಡರ ಕೈಯಲ್ಲಿ ಆಗಲಿಲ್ಲ’ ಎಂದು ದೂರಿದರು.

ಕಡೆಗಣಿಸಿದರು: ‘ಗ್ರಾಮೀಣ ಕ್ಷೇತ್ರಕ್ಕೆ 2011ರಲ್ಲಿ ಉಪಚುನಾವಣೆ ಆದ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಮಪ್ರಸಾದ್‌ ಅವರ ಪರವಾಗಿ ಹದಿನೈದು ದಿನ ಪಾದಯಾತ್ರೆ ಮಾಡಿದ್ದೆ. 2013ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಅಸುಂಡಿ ವನ್ನೂರಪ್ಪ ಪರವಾಗಿ ಮೂವತ್ತು ದಿನ ಪಾದಯಾತ್ರೆ ಮಾಡಿದ್ದೆ. ಆದರೆ ನಮ್ಮದೇ ಸರ್ಕಾರ ಬಂದ ಬಳಿಕ ನಮ್ಮನ್ನು ಕ್ಯಾರೇ ಎನ್ನಲಿಲ್ಲ. ನಾವು ಸುಮ್ಮನೇ ನೋಡುತ್ತಿದ್ದೆವು. ಏಕೆಂದರೆ ಅವರ ಬಳಿ ಹಣ ಇದೆ. ಅವರು ಚುನಾವಣೆಯನ್ನು ಎದುರಿಸಬಹುದು. ನಾವು ಹಣ ಇಲ್ಲದೆಯೂ ಚುನಾವಣೆಯನ್ನು ಎದುರಿಸುತ್ತೇವೆ. ಅದಕ್ಕೆ ಏನು ಮಾಡಬೇಕೋ ನಮಗೆ ಗೊತ್ತಿದೆ’ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT