ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಕ್ಷೇತ್ರ: ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣ

Last Updated 17 ಡಿಸೆಂಬರ್ 2017, 9:26 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ. ಮುಂದಿನ ಚುನಾವಣೆಯು ಪಕ್ಷಕ್ಕೆ ಪ್ರತಿಷ್ಠೆಯಾಗಿದೆ. ಸವಾಲುಗಳು ಹಾಗೂ ಅವಕಾಶಗಳು ಪಕ್ಷದ ಮುಂದಿದ್ದು, ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಿವಿಮಾತು ಹೇಳಿದರು.

ಎಐಸಿಸಿ ನೂತನ ಅಧ್ಯಕ್ಷ ರಾಹುಲ್‌ಗಾಂಧಿ ಪದಗ್ರಹಣದ ಕಾರಣ ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಸಹಜ. ಆದರೆ ಅದನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವಾಸ್ತವಾಂಶ ತಿಳಿಯದ ಕೆಲ ವ್ಯಕ್ತಿಗಳು ರಾಜಕೀಯ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲು, ಪರಮೇಶ್ವರ್‌ ಪಕ್ಷ ಸಂಘಟಿಸಲು ಪ್ರವಾಸ ಮಾಡುತ್ತಿದ್ದಾರೆ. ಇದನ್ನು ತಿಳಿಯದೆ ರಾಜಕೀಯ ಲಾಭಕ್ಕೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇತಿಹಾಸ ಸೃಷ್ಟಿ: ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಹುಲ್‌ ಗಾಂಧಿ ಅಧಿಕಾರ ವಹಿಸಿಕೊಂಡಿದ್ದಾರೆ. ಪಕ್ಷದಲ್ಲಿ ಇತಿಹಾಸ ಸೃಷ್ಟಿಯಾಗಿದ್ದು, ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಎದುರಿಸಲಾಗುತ್ತದೆ ಎಂದು ವಿವರಿಸಿದರು.

ಈ ಬಾರಿ ಶೇ 30ರಷ್ಟು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಅವರನ್ನು ಪಕ್ಷದತ್ತ ಹೇಗೆ ಸೆಳೆಯಬೇಕೆಂಬ ಬಗ್ಗೆ ಚಿಂತಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಜೀರ್‌ ಅಹಮ್ಮದ್‌, ಮಾಜಿ ಸಚಿವ ನಿಸಾರ್‌ ಅಹಮ್ಮದ್‌ ಹಾಗೂ ಇತರೆ ನಾಯಕರು ಚರ್ಚಿಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಅಭ್ಯರ್ಥಿ ಗುರುತಿಸಿ: ‘ಪಕ್ಷದ ನಾಯಕರ ನಡುವಿನ ಭಿನ್ನಾಭಿಪ್ರಾಯದಿಂದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರು. ಈ ಬಾರಿ ಆ ರೀತಿ ಆಗಬಾರದು. ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಯನ್ನು ಗುರುತಿಸಿ ಈ ತಿಂಗಳ ಅಂತ್ಯದೊಳಗೆ ಟಿಕೆಟ್‌ ಘೋಷಣೆ ಮಾಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಎಂ.ಎಲ್‌.ಅನಿಲ್‌ಕುಮಾರ್‌ ಒತ್ತಾಯಿಸಿದರು.

ಗೊಂದಲ ಬೇಡ: ‘ಪಕ್ಷದ ಮುಖಂಡರೆಲ್ಲಾ ಚರ್ಚಿಸಿ ಸ್ಥಳೀಯ ಶಾಸಕ ವರ್ತೂರು ಪ್ರಕಾಶ್‌ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ತೀರ್ಮಾನಿಸಿದ್ದಾರೆ. ಕೆಲವರು ತಾವೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಾಯಕರೆಲ್ಲಾ ಒಟ್ಟಾಗಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ನಂತರ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಈ ಬಗ್ಗೆ ಗೊಂದಲ ಬೇಡ’ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹೇಳಿದರು.

‘ಅಧಿಕೃತವಾಗಿ ಪಕ್ಷದ ಅಭ್ಯರ್ಥಿ ಘೋಷಣೆ ಆಗುವವರೆಗೆ ಯಾರೂ ಪ್ರಚಾರ ನಡೆಸಬಾರದು. ತಾವೇ ಅಭ್ಯರ್ಥಿಗಳು ಎಂಬಂತೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ಅಬ್ದುಲ್‌ ಸುಭಾನ್‌ ಮತ್ತು ಸೈಯದ್‌ ಜಮೀರ್‌ ಪಾಷಾ ಅವರಿಗೆ ಎಚ್ಚರಿಕೆ ನೀಡಬೇಕು’ ಎಂದು ಪಕ್ಷದ ವಕ್ತಾರ ರಾಜೇಶ್‌ಸಿಂಗ್ ಒತ್ತಾಯಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಖಜಾಂಚಿ ರಾಮ್‌ಪ್ರಸಾದ್, ಕಾರ್ಮಿಕ ಘಟಕದ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್, ಎಪಿಎಂಸಿ ನಿರ್ದೇಶಕ ಉದಯ್ ಶಂಕರ್ ಪಾಲ್ಗೊಂಡಿದ್ದರು.

* * 

ಪಕ್ಷದಿಂದ ಗೆದ್ದು ನಮ್ಮ ಕಾಂಗ್ರೆಸ್ ವೇದಿಕೆ ಹತ್ತಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಹಾಗೂ ನಾಮನಿರ್ದೇಶಿತ ಸದಸ್ಯರಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಗತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೂ ತರಲಾಗಿದೆ. ಆ ಸದಸ್ಯರಿಗೆ ಸದ್ಯದಲ್ಲೇ ಬುದ್ದಿ ಕಲಿಸುತ್ತೇವೆ
–ಕೆ.ಚಂದ್ರಾರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT