ಕಲಿಕೆ

ಓದಿಗಿರಲಿ ಟಿಪ್ಪಣಿಯ ಸಾಥ್‌

ಕೈ ಬರಹದಲ್ಲಿ ಪಾಠದ ನೋಟ್ಸ್ (ಟಿಪ್ಪಣಿ) ಮಾಡಿಕೊಳ್ಳುವ ಪದ್ಧತಿಗೆ ಪರ್ಯಾಯವೇ ಇಲ್ಲ! ಇದು ಕಲಿಕೆಯ ಪ್ರಕ್ರಿಯೆಯನ್ನು ಸುಲಭ ಮಾಡುವುದರ ಜೊತೆಗೆ, ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಮೊದಲಿಗೆ, ಪಾಠದ ನೋಟ್ಸ್ ಮಾಡಿಕೊಳ್ಳುವುದರ ಪ್ರಯೋಜನಗಳನ್ನು ಪರಿಚಯಿಸಿ, ನಂತರ ವ್ಯವಸ್ಥಿತವಾಗಿ ನೋಟ್ಸ್ ಮಾಡಿಕೊಳ್ಳುವುದು ಹೇಗೆ ಎಂಬ ಅಂಶಗಳನ್ನು ಮನದಟ್ಟು ಮಾಡಿಸುವುದೇ ಈ ಲೇಖನದ ಉದ್ದೇಶ.

ಓದಿಗಿರಲಿ ಟಿಪ್ಪಣಿಯ ಸಾಥ್‌

ಯಾವುದೇ ಪರೀಕ್ಷೆಗೆ ಸಿದ್ಧಗೊಳ್ಳುವ ಮುನ್ನ ಪುಸ್ತಕವನ್ನು ಪುಟ ಬಿಡದೇ ಓದುವುದಕ್ಕಿಂತ ಟಿಪ್ಪಣಿ (ನೋಟ್ಸ್‌) ಮಾಡಿಕೊಳ್ಳುವುದು ಉತ್ತಮ. ಇದರಿಂದ ನಿಮ್ಮ ಓದಿಗೂ ಅನುಕೂಲ. ಹೆಚ್ಚು ನೆನ‍ಪಿನಲ್ಲುಳಿಯಲು ಸಹಕಾರಿ. ವಿಷಯ ಯಾವುದೇ ಇರಲಿ ಅದನ್ನು ಚಿಕ್ಕದಾಗಿ, ಚೊಕ್ಕದಾಗಿ ನೋಟ್ಸ್ ಮಾಡಿಕೊಳ್ಳುವ ಅಭ್ಯಾಸವನ್ನು ರೂಡಿಸಿಕೊಳ್ಳಿ. 

‌ನೋಟ್ಸ್‌ನ ಪ್ರಯೋಜನ

ನಾವು ತರಗತಿಯಲ್ಲಿ ಕೇಳಿಸಿಕೊಂಡ ಅಷ್ಟೂ ಪಾಠದ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ. ತಜ್ಞರ ಪ್ರಕಾರ ಕಲಿಕಾ ಪ್ರಕ್ರಿಯೆಯಲ್ಲಿ ಕೇಳಿಸಿಕೊಳ್ಳುವುದು, ಅಭಿವ್ಯಕ್ತಿಸುವುದು, ಅಧ್ಯಯನ ಮಾಡುವುದು ಹಾಗೂ ಬರೆಯುವುದು ಪ್ರಮುಖ ಅಂಶಗಳಾಗುತ್ತವೆ. ಒಂದು ಸಮೀಕ್ಷೆಯ ಪ್ರಕಾರ ನಾವು ಓದಿದ್ದರಲ್ಲಿ ಸುಮಾರು ಶೇ.10ರಷ್ಟು ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಆದರೆ, ಕೇಳಿಸಿಕೊಂಡದ್ದರಲ್ಲಿ ಸುಮಾರು ಶೇ.20ರಷ್ಟು ನೆನಪಿನಲ್ಲಿ ಉಳಿಯುತ್ತದೆ. ಹೀಗಾಗಿ, ಕೇಳಿಸಿಕೊಂಡ ಪಾಠದ ನೋಟ್ಸ್ ಮಾಡಿಕೊಳ್ಳುವುದು ಕಲಿಕೆಗೆ ಅತ್ಯಂತ ಉಪಯುಕ್ತ. ಪಾಠದ ನೋಟ್ಸ್ ಬರೆದುಕೊಳ್ಳುವುದರಿಂದ ನೀವು ತರಗತಿಯಲ್ಲಿ ಸಕ್ರಿಯರಾಗಿರುತ್ತೀರಿ. ಕೇಳಿದ್ದನ್ನು ಅರ್ಥ ಮಾಡಿಕೊಂಡು ಮನನ ಮಾಡಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಮನಸ್ಸು ಜಾಗೃತವಾಗಿರುತ್ತದೆ.  ಎಲ್ಲಕ್ಕಿಂತ ಮುಖ್ಯವಾಗಿ ತರಗತಿಯಲ್ಲಿ ಕೇಳಿಸಿಕೊಂಡು, ಬರೆದುಕೊಂಡ ಮಾಹಿತಿಯನ್ನು ಪಠ್ಯಪುಸ್ತಕದಲ್ಲಿ ಓದಿದ್ದಕ್ಕೆ ಹೋಲಿಸಿ, ಹೊಂದಿಸಿಕೊಳ್ಳಲು ಪೂರಕವಾಗಿರುತ್ತದೆ. ನೆನಪಿಡಿ, ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಪಾಠ ಮಾಡುವ ನಿಮ್ಮ ಎಲ್ಲ ಅಧ್ಯಾಪಕರು ಪರೀಕ್ಷೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ತಮ್ಮ ಉಪನ್ಯಾಸಗಳನ್ನು ನೀಡಿರುತ್ತಾರೆ. ಹಾಗಾಗಿ, ಪ್ರತಿ ತರಗತಿಯ ಪಾಠದ ನೋಟ್ಸ್ ಮಾಡಿಕೊಳ್ಳುವುದು ಅತ್ಯಂತ ಸಮಂಜಸ.

ನೋಟ್ಸ್ ಮಾಡಿಕೊಳ್ಳುವ ವಿಧಾನ

ಕೆಲವು ವಿದ್ಯಾರ್ಥಿಗಳು ಪಾಠದಲ್ಲಿ ತಾವು ಕೇಳಿದ ಪ್ರತಿಯೊಂದು ಪದವನ್ನೂ ಬರೆದುಕೊಳ್ಳುತ್ತಾರೆ. ಆದರೆ, ಸಮರ್ಪಕವಾದ ಅಧ್ಯಯನಕ್ಕೆ ಇದು ಸೂಕ್ತ ವಿಧಾನವಲ್ಲ. ಇದರಿಂದ ವಿಷಯದ ಬಗ್ಗೆ ಗೊಂದಲ–ಗೋಜಲುಗಳು ಉಂಟಾಗಬಹುದು. ಪಠ್ಯಪುಸ್ತಕವೂ ಸೇರಿ ಬೇರಾವುದೇ ಸಾಮಗ್ರಿ ಅಧ್ಯಯನಕ್ಕೆ ದೊರಕದಿರುವ ಸಂದರ್ಭದಲ್ಲಿ ಮಾತ್ರ ಈ ವಿಧಾನ ಉಪಯೋಗಕ್ಕೆ ಬರಬಹುದು.

ಅತ್ಯಂತ ಸಮಂಜಸವಾದ ಮತ್ತು ಉಪಯುಕ್ತವಾದ ವಿಧಾನವೆಂದರೆ, ಮುಖ್ಯ ವಿಷಯಗಳನ್ನು ಸಂಕ್ಷಿಪ್ತವಾಗಿ ಬರೆದುಕೊಳ್ಳುವುದು. ಇದನ್ನು ‘ಔಟ್‌ಲೈನಿಂಗ್ ವಿಧಾನ’ ಎಂದು ಕರೆಯಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬರ್ಕ್‌ಲೀ ಎಂಬ ಶಿಕ್ಷಣತಜ್ಞ ಹೀಗೆ ಹೇಳುತ್ತಾನೆ: ’ಒಂದು ನುಡಿಗಟ್ಟಿನಲ್ಲಿ ಹೇಳಬಹುದಾದ್ದಕ್ಕೆ ಒಂದು ವಾಕ್ಯ ಬಳಸುವುದೇಕೆ? ಹಾಗೆಯೇ, ಒಂದು ಪದದಲ್ಲಿ ಹೇಳಬಹುದಾದ್ದಕ್ಕೆ ಒಂದು ನುಡಿಗಟ್ಟನ್ನು ಬಳಸುವುದೇಕೆ?’. ಈ ವಿಧಾನವನ್ನು ಅಳವಡಿಸಿಕೊಂಡಲ್ಲಿ ನೋಟ್ಸ್ ಮಾಡುವ ಪ್ರಕ್ರಿಯೆ ಸರಳ ಹಾಗೂ ಸುಲಭವಾಗುತ್ತದೆ. ಈ ವಿಧಾನಕ್ಕೆ ಸಂಬಂಧಿಸಿದಂತೆ ಕೆಲವು ಅಂಶಗಳನ್ನು ನಾವು ಈಗ ಗಮನಿಸೋಣ.

ನೋಟ್ಸ್ ಮಾಡಿಕೊಳ್ಳುವ ಹಂತಗಳು

ಮೊದಲನೆಯದಾಗಿ, ನೀವು ತರಗತಿಯಲ್ಲಿ ಪಾಠವನ್ನು ಗಮನವಿಟ್ಟು ಕೇಳಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ನಿಮ್ಮಲ್ಲಿ ಏಕಾಗ್ರತೆ ಇರಲೇಬೇಕು. ನಿಮ್ಮ ಗಮನವನ್ನು ಮುಖ್ಯ ವಿಷಯದ ಮೇಲೆ ಮಾತ್ರ ಕೇಂದ್ರೀಕರಿಸಬೇಕು. ಮಾಹಿತಿಯ ಬಗ್ಗೆ ಗಮನವಿರಲಿ, ಮಾಹಿತಿ ನೀಡುತ್ತಿರುವವರ ಅಥವಾ  ಬಳಸುತ್ತಿರುವ ವಿಧಾನದ ಬಗ್ಗೆ ಹೆಚ್ಚು ಗಮನ ಹರಿಸುವುದು ಬೇಡ. ನಿಮ್ಮ ಚಿತ್ತವನ್ನು ಬೇರೆಡೆಗೆ ಸೆಳೆಯಬಹುದಾದ ಎಲ್ಲ ಬಗೆಯ ಆಕರ್ಷಣೆಗಳಿಂದ ನೀವು ವಿಮುಖರಾಗಬೇಕು.

ನೀವು ನೋಟ್ಸ್ ಬರೆಯಲು ಪ್ರಾರಂಭಿಸುವ ಮುನ್ನ ಪುಟದಲ್ಲಿ ಆ ದಿನದ ಪಾಠದ ಶೀರ್ಷಿಕೆಯನ್ನು ಬರೆದುಕೊಳ್ಳಿ. ಪಕ್ಕದಲ್ಲಿ ದಿನಾಂಕವನ್ನು ನಮೂದಿಸಿ. ಎಡ ಭಾಗದಲ್ಲಿ ಅಗಲವಾದ ಮಾರ್ಜಿನ್ ಇರಲಿ. ಪುಟದ ತಳ ಭಾಗದಲ್ಲಿ ಕೊಂಚ ಜಾಗವನ್ನು ಬಿಟ್ಟಿರಿ. ಮಾರ್ಜಿನ್ ಜಾಗದಲ್ಲಿ ನೋಟ್ಸ್ ಓದಿದಾಗ ಏಳುವ ಪ್ರಶ್ನೆಗಳನ್ನು ಗುರುತು ಹಾಕಿಕೊಳ್ಳಿ. ಮುಂದೆ ಆ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು. ಪುಟದ ತಳ ಭಾಗದಲ್ಲಿ ಬಿಟ್ಟಿರುವ ಜಾಗವನ್ನು ಆ ಪುಟದಲ್ಲಿರುವ ಮಾಹಿತಿಯ ಸಾರಾಂಶವನ್ನು ಅಥವಾ ಪ್ರಮುಖವಾದ ತಾಂತ್ರಿಕ ಪದಗಳನ್ನು ಬರೆದುಕೊಳ್ಳಲು ಬಳಸಿ. ಈ ಎರಡು ಅಂಶಗಳನ್ನು ತರಗತಿಯ ನಂತರ ಅಥವಾ ಅಧ್ಯಯನದ ಸಮಯದಲ್ಲಿ ಮಾಡಿಕೊಳ್ಳಿ.
ನೀವು ಕೇಳಿಸಿಕೊಂಡ ಮಾಹಿತಿಯ ಮುಖ್ಯ ವಿಷಯಗಳನ್ನು ಸಂಕ್ಷೇಪಿಸಿ ಬರೆದುಕೊಳ್ಳಿ. ಅವು ಅಪೂರ್ಣ ವಾಕ್ಯದ ರೂಪದಲ್ಲಿ ಅಥವಾ ಬಿಡಿಯಾದ ಪದಗಳ ರೂಪದಲ್ಲಿದ್ದರೂ ಸರಿ. ಕಡಿಮೆ ವಿವರಣೆಯಲ್ಲಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಇದು ಅತ್ಯಂತ ಸೂಕ್ತ.

ಪ್ರತಿ ಪಾಠದ ಪ್ರತಿಯೊಂದು ಅಧ್ಯಾಯಕ್ಕೂ ಬೇರೆ ಬೇರೆ ಪುಟಗಳನ್ನು ಬಳಸಿ. ಪ್ರತಿಯೊಂದು ಪುಟಕ್ಕೂ ಪುಟ ಸಂಖ್ಯೆ ಹಾಕಿಕೊಳ್ಳಿ. ಮುಂದೆ ಪ್ರತಿ ವಿಷಯದಲ್ಲಿ ನೀವು ಮಾಡಿಕೊಂಡಿರುವ ನಿಮ್ಮ ನೋಟ್ಸ್‌ಗೆ ಪರಿವಿಡಿ ಬರೆಯಲು ಇದು ಉಪಯುಕ್ತವಾಗುತ್ತದೆ.

ಪಾಠದ ಮಧ್ಯೆ ನಿಮಗೆ ಸಂದೇಹಗಳು ಉಂಟಾದಲ್ಲಿ ಪ್ರಶ್ನೆಗಳನ್ನು ಕೇಳಿ ಕೂಡಲೇ ಬಗೆಹರಿಸಿಕೊಳ್ಳಿ. ಹೀಗೆ ಗಳಿಸಿದ ಮಾಹಿತಿಯನ್ನು ಮಾರ್ಜಿನ್ ಜಾಗದಲ್ಲಿ ಗುರುತು ಹಾಕಿಕೊಳ್ಳಿ. ಅಧ್ಯಾಪಕರು ಕಪ್ಪುಹಲಗೆಯ ಮೇಲೆ ಬರೆಯುವ ಪ್ರತಿಯೊಂದು ಮಾಹಿತಿ ಅಥವಾ ಪದವೂ ಬಹು ಮುಖ್ಯವಾದುದು. ಅದನ್ನು ನಿರ್ಲಕ್ಷಿಸಬೇಡಿ. ಚಿತ್ರಗಳಿದ್ದಲ್ಲಿ ವಿಶೇಷ ಗಮನ ಕೊಡಿ. ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡಲ್ಲಿ ನೀವು ಮಾಡಿಕೊಂಡಿರುವ ನೋಟ್ಸ್ ನಿಮ್ಮ ಅಧ್ಯಯನಕ್ಕೆ ವ್ಯಸ್ಥಿತವಾಗಿ ಸಿದ್ಧಗೊಂಡಂತೆ.

ನಿಮ್ಮ ನೋಟ್ಸ್‌ನಿಂದಲೇ ಅಧ್ಯಯನ ಮಾಡಿ

ವ್ಯವಸ್ಥಿತವಾಗಿ ಮಾಡಿಕೊಂಡ ಪ್ರತಿ ಪಾಠದ ನೋಟ್ಸ್ ಅನ್ನು ಬಿಡುವಾದಾಗ ನೀವೇ ವಿಮರ್ಶೆ ಮಾಡಿ. ಆಯಾ ವಿಷಯದ ಪಠ್ಯಪುಸ್ತಕದ ನೆರವನ್ನು ಇದಕ್ಕೆ ಬಳಸಿಕೊಳ್ಳಿ. ಇಲ್ಲವೇ ನಿಮ್ಮ ಶಾಲಾ–ಕಾಲೇಜಿನಲ್ಲಿರುವ ಗ್ರಂಥಾಲಯದ ನೆರವನ್ನು ಪಡೆದುಕೊಳ್ಳಿ. ಹೀಗೆ ವಿಮರ್ಶೆ ಮಾಡುವಾಗ ಬಿಟ್ಟುಹೋಗಿರಬಹುದಾದ ಮಾಹಿತಿಗಳನ್ನೂ, ಪರಿಚಯವಿಲ್ಲದ ಪದಗಳಿಗೆ ಸೂಕ್ತ ವಿವರಣೆಯನ್ನೂ ನೀವು ಪಡೆದುಕೊಳ್ಳಬಹುದು. ನಿಮ್ಮ ಬಳಿ ವಿವಿಧ ಬಣ್ಣದ ಹೈಲೈಟರ್ ಪೆನ್ನುಗಳು ಇದ್ದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಶೀರ್ಷಿಕೆಗಳಿಗೆ, ತಾಂತ್ರಿಕ ಪದಗಳಿಗೆ, ನಿರೂಪಣೆಗಳಿಗೆ ಹಾಗೂ ಉದಾಹರಣೆಗಳಿಗೆ ಬೇರೆ ಬೇರೆ ಬಣ್ಣಗಳಿಂದ ಹೈಲೈಟ್ ಮಾಡಿ. ಎಲ್ಲ ವಿಷಯಗಳ ಎಲ್ಲ ಅಧ್ಯಾಯಗಳಿಗೆ ಇದೇ ಪದ್ಧತಿಯನ್ನು ಬಳಸಿ. ಇದು ಸಂಬಂಧಿಸಿದ ಪದಗಳನ್ನು, ಮಾಹಿತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಹಾಯಕವಾಗುತ್ತದೆ.

ಇಲ್ಲಿ ನೀಡಲಾಗಿರುವ ಕೆಲವು ಸಲಹೆಗಳನ್ನು ನೀವು ಪಾಲಿಸಿದಲ್ಲಿ, ನೀವು ಅಧ್ಯಯನ ಮಾಡುತ್ತಿರುವ ಯಾವುದೇ ವಿಷಯದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳುವುದು ಸುಲಭವಾಗುತ್ತದೆ. ಅಷ್ಟೇ ಅಲ್ಲ, ನೀವು ಕ್ರಿಯಾಶೀಲರಾಗುವುದರ ಜೊತೆಗೆ, ನಿಮ್ಮ ಗ್ರಹಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ ಹಾಗೂ ನೆನಪಿನ ಶಕ್ತಿ ಸುಧಾರಿಸುತ್ತದೆ. ನಿಮಗೆ ಶುಭವಾಗಲಿ.

***

ನೋಟ್ಸ್ ಮಾಡಿಕೊಳ್ಳಲು ಬೇಕಾದ ಸಿದ್ಧತೆ

ನೀವು ಅಧ್ಯಯನ ಮಾಡುವ ಪ್ರತಿಯೊಂದು ವಿಷಯಕ್ಕೂ ನೋಟ್ಸ್ ಬರೆದುಕೊಳ್ಳುವುದು ಅತ್ಯವಶ್ಯ. ಒಂದೊಂದು ವಿಷಯಕ್ಕೂ ಪ್ರತ್ಯೇಕವಾದ ಪುಸ್ತಕ ಇಡುವುದು ಒಳ್ಳೆಯ ಅಭ್ಯಾಸ. ಆದರೆ, ನೋಟ್ ಪುಸ್ತಕಗಳು ಹೊರೆಯಾಗುತ್ತದೆ ಎನಿಸಿದಲ್ಲಿ ಹಾಳೆಗಳಲ್ಲಿ ನೋಟ್ಸ್ ಬರೆದುಕೊಳ್ಳಬಹುದು. ನಿಮಗಿಷ್ಟವಾದ ನೀಲಿ ಅಥವಾ ಕಪ್ಪುಬಣ್ಣದಲ್ಲಿ ಬರೆಯುವ ಪೆನ್ ಇಟ್ಟುಕೊಳ್ಳಿ. ಜೊತೆಗೆ, ಹಲವು ಇತರ ಬಣ್ಣಗಳಲ್ಲಿ ಬರೆಯುವ ಪೆನ್‌ಗಳೂ ಇರಲಿ. ಇಲ್ಲದೆ, ಮಾನಸಿಕವಾದ ಕೆಲವು ಸಿದ್ಧತೆಗಳೂ ಅತ್ಯವಶ್ಯ. ವಿಶೇಷವಾಗಿ ಏಕಾಗ್ರತೆ ಇರಬೇಕು. ಗಮನವನ್ನು ಬೇರೆಡೆಗೆ ಸೆಳೆಯುವಂತಹ ಎಲ್ಲ ಅಂಶಗಳಿಂದ ದೂರವಿರಬೇಕು.

Comments
ಈ ವಿಭಾಗದಿಂದ ಇನ್ನಷ್ಟು
ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

ಒತ್ತಡ
ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

14 Mar, 2018
‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

ನಿಮ್ಮ ಪ್ರಶ್ನೆ ನಮ್ಮ ಉತ್ತರ
‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

12 Mar, 2018
ಸಂತುಲಿತ ಶಿಕ್ಷಣದ ದಾರಿಯಲ್ಲಿ...

ಶಿಕ್ಷಣ
ಸಂತುಲಿತ ಶಿಕ್ಷಣದ ದಾರಿಯಲ್ಲಿ...

12 Mar, 2018
ಪ್ರಜಾವಾಣಿ ಕ್ವಿಜ್ 13

ಶಿಕ್ಷಣ
ಪ್ರಜಾವಾಣಿ ಕ್ವಿಜ್ 13

12 Mar, 2018
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

ಶಿಕ್ಷಣ
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

5 Mar, 2018