ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ಜೊತೆಗೆ ಪ್ರೀತಿ, ದ್ವೇಷದ ಬಾಂಧವ್ಯ

ಅದಮ್ಯ ಜೀವನೋತ್ಸಾಹ, ದುಂದುವೆಚ್ಚದ ಪ್ರವೃತ್ತಿಯೇ ವಿಜಯ್‌ ಮಲ್ಯಗೆ ಮಾರಕವಾಗಿ ಪರಿಣಮಿಸಿದೆ
Last Updated 17 ಡಿಸೆಂಬರ್ 2017, 19:46 IST
ಅಕ್ಷರ ಗಾತ್ರ

ಬ್ಯಾಂಕ್‌ಗಳ ಸಾಲ ಮರುಪಾವತಿಸದೆ ದೇಶಬಿಟ್ಟು ಓಡಿ ಹೋಗಿ, ಲಂಡನ್‌ನಲ್ಲಿ ‘ಭಾರತಕ್ಕೆ ಹಸ್ತಾಂತರ ಪ್ರಕರಣ’ದ ವಿಚಾರಣೆ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್‌ ಮಲ್ಯ ಅವರ ಜನಪ್ರಿಯತೆಗೆ ಇನಿತೂ ಕುಂದು ಉಂಟಾಗಿಲ್ಲ. ಟ್ವಿಟರ್‌ನಲ್ಲಿ ಈಗಲೂ ಅವರಿಗೆ 60 ಲಕ್ಷದಷ್ಟು ಹಿಂಬಾಲಕರಿದ್ದಾರೆ. ಮೋಹಕ ಮಹಿಳೆಯರು ಅವರನ್ನು ಕಂಡರೆ ಮುಗಿ ಬೀಳುತ್ತಾರೆ. ಅವರಿಗೆ ನಿಷ್ಠವಾಗಿರುವ ದೊಡ್ಡ ಸ್ನೇಹಿತರ ಬಳಗವು ದೇಶದಾದ್ಯಂತ ಇದೆ.

ಚುಂಬಕದಂತೆ ಸೆಳೆಯುವ ಆಕರ್ಷಕ ವ್ಯಕ್ತಿತ್ವ, ಧಾರಾಳತನ, ಮೋಜು– ರಂಜನೆಗೆ ಇನ್ನೊಂದು ಹೆಸರಾಗಿರುವ ಮಲ್ಯ ಅದಮ್ಯ ಜೀವನೋತ್ಸಾಹದ ಪ್ರತೀಕ. ವೈನ್‌, ಸಿಗಾರ್‌, ಸ್ಕಾಚ್‌ಗಳನ್ನು ಬಹುವಾಗಿ ಪ್ರೀತಿಸುವ ಅವರು, ಹಳೆಯ ಕಾರ್‌, ಕೈಗಡಿಯಾರ, ಕಲಾಕೃತಿಗಳ ಸಂಗ್ರಹಕಾರರೂ ಹೌದು. ಕುದುರೆ, ಐಪಿಎಲ್‌ ತಂಡ ಮತ್ತು ಫಾರ್ಮುಲಾ ಒನ್‌ ಮಾಲೀಕರೂ ಆಗಿದ್ದರು. ಒಟ್ಟಾರೆ ಅವರದ್ದು ಬಹು ವರ್ಣರಂಜಿತ ಬದುಕು. ತನಿಖಾ ಸಂಸ್ಥೆಗಳು ಅವರ ಮೇಲೆ ಮುಗಿ ಬಿದ್ದಿದ್ದರೂ, ಮಾಧ್ಯಮಗಳು ಅವರನ್ನು ಬೇಟೆಯಾಡುತ್ತಿದ್ದರೂ ದೊರೆಯಂತೆಯೇ ಬದುಕುತ್ತ ಅನೇಕರಲ್ಲಿ ಹೊಟ್ಟೆಕಿಚ್ಚಿಗೆ ಕಾರಣರಾಗಿದ್ದಾರೆ.

ಈ ಬೆಡಗಿನ ವ್ಯಕ್ತಿತ್ವದ ಪ್ರಭಾವಿ ಉದ್ಯಮಿ, ಲಂಡನ್‌ನಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ವಿಚಾರಣೆಗೆ ಬ್ರಿಟಿಷ್‌ ಖಾಸಗಿ ಅಂಗರಕ್ಷಕರೊಂದಿಗೆ ಅದೇ ಮೊದಲಿನ ಗತ್ತಿನಲ್ಲಿ ಹಾಜರಾಗುತ್ತಿರುವುದು ಅಚ್ಚರಿ ಮೂಡಿಸುತ್ತದೆ. ಮಾಧ್ಯಮ ಪ್ರತಿನಿಧಿಗಳು ಅವರನ್ನು ಪ್ರಚೋದಿಸಿ ಪ್ರತಿಕ್ರಿಯೆ ಪಡೆಯಲು ಹವಣಿಸಿದರೂ ಕಿಂಚಿತ್ತೂ ವಿಚಲಿತರಾಗುವುದಿಲ್ಲ. ಈ ಎಲ್ಲ ಗೌಜು ಗದ್ದಲಗಳು ನಿಜವಾದ ವಿಷಯವನ್ನು ಮರೆಮಾಚುತ್ತವೆ.

ಈ ಚಿತ್ತಾಕರ್ಷಕ ಉದ್ಯಮಿ ಈಗ ದೇಶಾಂತರದಲ್ಲಿ ಇದ್ದಾರೆ. ಅವರ ವಿಮಾನ ಯಾನ ಉದ್ದಿಮೆ ದಿವಾಳಿ ಎದ್ದಿದೆ. ಈ ಉದ್ದಿಮೆಯು ಅವರ ಸ್ವಂತ ಮಾಲೀಕತ್ವದಲ್ಲಿ ಇದ್ದ ಸಂಸ್ಥೆಯಾಗಿರಲಿಲ್ಲ. ಅದೊಂದು ಷೇರುಪೇಟೆಯಲ್ಲಿ ವಹಿವಾಟು ನಡೆಸುವ, ಸಾರ್ವಜನಿಕರಿಗೆ ಸೇರಿದ ಕಂಪೆನಿಯಾಗಿತ್ತು. ಆದರೆ, ಮಲ್ಯರ ಸಂಪೂರ್ಣ ನಿಯಂತ್ರಣದಲ್ಲಿತ್ತು. ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಸಂಸ್ಥೆಯಾಗಿದ್ದರೂ ದೇಶದ ಅನೇಕ ಕುಟುಂಬಗಳು ಇಡೀ ಉದ್ದಿಮೆಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿರುವಂತೆ, ಮಲ್ಯ ಅವರೂ ಈ ಉದ್ದಿಮೆಯನ್ನು ಖಾಸಗಿ ಕಂಪೆನಿಯನ್ನಾಗಿ ಮಾಡಿಕೊಂಡಿದ್ದರು.

ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರನ್ನು ನೇಮಿಸಿಕೊಳ್ಳುವುದು ತೋರಿಕೆಗಾಗಿ ಮಾತ್ರ. ಅದೊಂದು ಶಾಸನಾತ್ಮಕ ಅಗತ್ಯ ಈಡೇರಿಸುವ ಅಥವಾ ಪ್ರವರ್ತಕರ ಪ್ರತಿಷ್ಠೆ ಹೆಚ್ಚಿಸುವ ನಿರ್ಧಾರವಾಗಿರುತ್ತದೆ. ವಹಿವಾಟಿನಲ್ಲಿ ಪ್ರಾಮಾಣಿಕತೆ ಎತ್ತಿಹಿಡಿಯುವ, ಕಡಿಮೆ ಸಂಖ್ಯೆಯಲ್ಲಿ ಇರುವ ಪಾಲುದಾರರ ಹಿತಾಸಕ್ತಿ ರಕ್ಷಣೆ ಬಗ್ಗೆ ಈ ನಿರ್ದೇಶಕರು ತಲೆಕೆಡಿಸಿಕೊಳ್ಳುವುದಿಲ್ಲ. ನಿವೃತ್ತ ಉನ್ನತ ಅಧಿಕಾರಿಗಳಿಗೆ ಇಂತಹ ಹುದ್ದೆಗಳೆಲ್ಲ ಲಾಭದಾಯಕ
ಸ್ಥಾನಗಳಾಗಿರುತ್ತವೆಯಷ್ಟೆ.

ಇದಕ್ಕೆ ಮಲ್ಯ ಅವರೂ ಹೊರತಾಗಿರಲಿಲ್ಲ. ಕಿಂಗ್‌ಫಿಷರ್‌ ನಿರ್ದೇಶಕ ಮಂಡಳಿಯಲ್ಲಿ ಖ್ಯಾತನಾಮರ ದೊಡ್ಡ ಪಡೆಯೇ ಇತ್ತು. ಅವರಲ್ಲಿ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿವೃತ್ತ ಅಧ್ಯಕ್ಷರೂ ಇದ್ದರು. ಆದಾಗ್ಯೂ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಮಲ್ಯ ಅವರು ಈ ಸಂಸ್ಥೆಯ ಹಣವನ್ನು ತಮ್ಮ ಇತರ ಕಂಪೆನಿಗಳಿಗೆ ವರ್ಗಾಯಿಸಿದ್ದರು. ತಾವು ಹಾಕಿದ ಬಂಡವಾಳವು ಕೈತುಂಬ ಲಾಭ ತಂದುಕೊಡುವ ತನಕವೂ ಯಾವ ಪಾಲುದಾರರೂ ಈ ಬಗ್ಗೆ ಆಕ್ಷೇಪ ದಾಖಲಿಸಿರಲಿಲ್ಲ. ಮೌನ ಸಮ್ಮತಿಯ ತಿಳಿವಳಿಕೆ ಅದಾಗಿತ್ತು. ಸೆಬಿ ಮತ್ತು ಇತರ ಶಾಸನಬದ್ಧ ಸಂಸ್ಥೆಗಳು ಈ ಲೋಪಗಳನ್ನು ಗಂಭೀರವಾಗಿ ಪರಿಗಣಿಸದೆ ತಪ್ಪು ಮಾಡಿದ್ದವು. ಇಂತಹ ದುರ್ವರ್ತನೆಗಳನ್ನು ಶಿಕ್ಷಾರ್ಹಗೊಳಿಸುವ ನಿಯಮಗಳನ್ನು ಇನ್ನೂ ಬಿಗಿಗೊಳಿಸಬೇಕಾಗಿದೆ.

ಇಂತಹ ವಿದ್ಯಮಾನಗಳು ಕುಟುಂಬಗಳ ನಿಯಂತ್ರಣದಲ್ಲಿ ಇರುವ ಬೃಹತ್‌ ಉದ್ದಿಮೆ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿ ಇರುವಾಗ, ವಿಜಯ್‌ ಮಲ್ಯ ಅವರನ್ನು ಮಾತ್ರ ಪ್ರತ್ಯೇಕವಾಗಿ ಕಾಣಲಾಗುತ್ತಿದೆ. ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಮೂಲ ಸಾಲದ ಮೊತ್ತ ₹ 6,000 ಕೋಟಿ. ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗ ಪಟ್ಟಿ ಮಾಡಿರುವ ಸುಸ್ತಿದಾರ ಉದ್ಯಮಿಗಳ ಸಾಲದ ಮೊತ್ತ ₹ 50 ಸಾವಿರ ಕೋಟಿಗಳವರೆಗೆ ಇದೆ.

ಕುಟುಂಬಗಳ ನಿಯಂತ್ರಣದಲ್ಲಿ ಇರುವ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಇಂತಹ ವಿದ್ಯಮಾನಗಳು ಸಾಮಾನ್ಯವಾಗಿರುವಾಗ ಮಲ್ಯ ಅವರೊಬ್ಬರನ್ನೇ ದೋಷಿಯನ್ನಾಗಿ ಪರಿಗಣಿಸಿರುವುದು ಏಕೆ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ. ಹಾಗಿದ್ದರೆ, ಮಲ್ಯ ಅವರು ಸುಸ್ತಿದಾರರು ಎನ್ನುವ ಕಾರಣಕ್ಕಿಂತ ತಮ್ಮ ಬೆಡಗಿನ ವ್ಯಕ್ತಿತ್ವ ಮತ್ತು ದುರಹಂಕಾರದ ಸ್ವಭಾವಕ್ಕೆ ಬಲಿಪಶುವಾದರೆ ಎನ್ನುವ ಶಂಕೆ ಕಾಡುತ್ತದೆ. ಬ್ಯಾಂಕ್‌ ಸಾಲ ಬೆಟ್ಟದಂತೆ ಬೆಳೆಯುತ್ತಿದ್ದರೂ, ಸಿಬ್ಬಂದಿಗೆ ಸಂಬಳ ಬಾಕಿ ಉಳಿಸಿಕೊಂಡರೂ ಅವರ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಬಿದ್ದಿರಲಿಲ್ಲ. ‘ಬಂದದ್ದೆಲ್ಲ ಬರಲಿ ನೋಡೋಣ’ ಎನ್ನುವ ಉಡಾಫೆ ಧೋರಣೆ ತಳೆದಿದ್ದರಿಂದ ಜನರಲ್ಲಿ ಅವರ ವಿರುದ್ಧ ತೀವ್ರ ಅಸಮಾಧಾನ ಮನೆ ಮಾಡಿತ್ತು.

ಮನೆ, ಕಾರ್‌ ಮತ್ತು ವೈಯಕ್ತಿಕ ಸಾಲದ ಒಂದು ಕಂತು ಪಾವತಿಸುವುದು ತಪ್ಪಿದರೂ ನೋಟಿಸ್‌ ನೀಡುವ ಬ್ಯಾಂಕ್‌ಗಳು, ಮಲ್ಯ ಅವರ ನಿರ್ಲಜ್ಜ ವರ್ತನೆ ವಿರುದ್ಧ ಆರಂಭದಲ್ಲಿಯೇ ಕಠಿಣ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದ ಮಧ್ಯಮವರ್ಗದ ಜನರಲ್ಲಿ ಅತೃಪ್ತಿ ಮಡುಗಟ್ಟಿತ್ತು. ಕೊನೆಗೂ ಎಚ್ಚೆತ್ತುಕೊಂಡ ಬ್ಯಾಂಕ್‌ಗಳು ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳಿಗೆ ಮುಜುಗರ ಉಂಟಾಗತೊಡಗಿತು.

ಮಲ್ಯ ಅವರು ಹಠಾತ್ತಾಗಿ ನೇಪಥ್ಯಕ್ಕೆ ಸರಿದರು. ಮಲ್ಯ ಅವರ ದುಬಾರಿ ಆತಿಥ್ಯದ ಸವಿ ಉಂಡವರು, ಸ್ನೇಹಿತರ ಬಳಗದಲ್ಲಿ ಇದ್ದವರು, ಖಾಸಗಿ ವಿಮಾನ, ಹೆಲಿಕಾಪ್ಟರ್‌ಗಳಲ್ಲಿ ಜತೆಯಾಗಿ ಪ್ರಯಾಣಿಸಿದವರು, ಫಾರ್ಮುಲಾ ಒನ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡ ವಿಭಿನ್ನ ಪಕ್ಷಗಳಿಗೆ ಸೇರಿದ ಪ್ರಭಾವಿ ರಾಜಕಾರಣಿಗಳು ಇವರನ್ನು ನಡು ನೀರಿನಲ್ಲಿಯೇ ಕೈಬಿಟ್ಟರು.

ಮಲ್ಯ ಅವರ ವರ್ತನೆ ರಾಜಕೀಯವಾಗಿ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಂತೆ ಅವರೊಬ್ಬ ಅನಪೇಕ್ಷಿತ ವ್ಯಕ್ತಿ ಎಂಬಂತೆ ಎಲ್ಲರೂ ಅವರಿಂದ ದೂರ ಸರಿದರು. ಎರಡು ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಅವರು ಫುಟ್‌ಬಾಲ್‌ನಂತಾದರು. ಈ ಮದ್ಯದ ದೊರೆಯನ್ನು ರಕ್ಷಿಸಲಾಗುತ್ತಿದೆ ಎಂದು ಪರಸ್ಪರ ದೂರುತ್ತ ಈ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹವಣಿಸಿದವು.

ವಿಮಾನಯಾನ ಸಂಸ್ಥೆ ‘ಕಿಂಗ್‌ಫಿಷರ್‌ ಏರ್‌ಲೈನ್ಸ್‌’ (ಕೆಎಫ್‌ಎ) ನಷ್ಟಕ್ಕೆ ಗುರಿಯಾಗುತ್ತಿದ್ದಂತೆ ಅದು ಕಟ್ಟಿ ಬೆಳೆಸಿದ್ದ ಸಾಮ್ರಾಜ್ಯವನ್ನು ಎ‌ಲ್ಲರೂ ಮರೆತರು. ಅಂದಿನ ಯುಪಿಎ ಸರ್ಕಾರ ಮತ್ತು ಬ್ಯಾಂಕ್‌ಗಳು ‘ಈ ರಾಷ್ಟ್ರೀಯ ಸಂಪತ್ತು, ಮೂಲ ಸೌಕರ್ಯ ಮತ್ತು ಉದ್ಯೋಗಗಳನ್ನು’ ಉಳಿಸಲು ಮುಂದಾಗಬಹುದಾಗಿತ್ತು.

ಕೆಎಫ್ಎ ನಷ್ಟದ ಸುಳಿಗೆ ಸಿಲುಕಿ ತೊಂದರೆ ಆಹ್ವಾನಿಸಿಕೊಂಡಾಗ, ದಿವಾಳಿ ವಿರುದ್ಧ ರಕ್ಷಣೆ ದೊರೆಯದೆ ಹೋದಾಗ ಸರ್ಕಾರ ಮತ್ತು ಬ್ಯಾಂಕ್‌ಗಳು ತ್ವರಿತವಾಗಿ ಕಾರ್ಯೋನ್ಮುಖವಾಗಿ ಸಂಸ್ಥೆಯನ್ನು ಉಳಿಸಬಹುದಾಗಿತ್ತು. ವಿಜಯ್ ಮಲ್ಯ ಅವರನ್ನು ಆಡಳಿತ ಮಂಡಳಿಯಿಂದ ಕಿತ್ತೊಗೆದು ಸಂಸ್ಥೆಯನ್ನು ಹೊಸ ಆಡಳಿತ ಮಂಡಳಿಯ ವಶಕ್ಕೆ ಒಪ್ಪಿಸಬಹುದಾಗಿತ್ತು. ಸಾಲವನ್ನು ಷೇರುಗಳನ್ನಾಗಿ ಪರಿವರ್ತಿಸಬಹುದಾಗಿತ್ತು. ಸಂಸ್ಥೆಯನ್ನು ವೃತ್ತಿನಿರತರ ವಶಕ್ಕೆ ಒಪ್ಪಿಸಿ ಮುಂದುವರೆಸಬಹುದಾಗಿತ್ತು. ನಿಗದಿತ ಸಮಯದವರೆಗೆ ವಿದೇಶಿ ವಿಮಾನ ಯಾನ ಸಂಸ್ಥೆಯ ನಿಯಂತ್ರಣಕ್ಕೂ ಒಪ್ಪಿಸಬಹುದಾಗಿತ್ತು. ಹೀಗೆ ಪರಿಹಾರೋಪಾಯಗಳ ದೊಡ್ಡ ಪಟ್ಟಿಯೇ ಇದೆ.

ಒಂದು ವೇಳೆ ಇಂತಹ ಜಾಣತನದ ನಿರ್ಧಾರಗಳನ್ನು ಕೈಗೊಂಡಿದ್ದೇ ಆಗಿದ್ದರೆ, ಸಾವಿರಾರು ಉದ್ಯೋಗಗಳನ್ನು ಉಳಿಸಬಹುದಾಗಿತ್ತು. ಅಮೂಲ್ಯ ಸಂಪತ್ತನ್ನು ರಕ್ಷಿಸಲು ಸಾಧ್ಯವಿತ್ತು. ಇದರಿಂದ ಪ್ರಯಾಣಿಕರಿಗೂ ಸಾಕಷ್ಟು ಪ್ರಯೋಜನಗಳು ಲಭಿಸುತ್ತಿದ್ದವು. ಬ್ಯಾಂಕ್‌ಗಳೂ ತಮ್ಮ ಸಾಲವನ್ನು ಪೂರ್ಣ ಅಥವಾ ಭಾಗಶಃ ರೂಪದಲ್ಲಾದರೂ ಮರಳಿ ಪಡೆಯಲು ಅವಕಾಶ ಇತ್ತು. ಆದರೆ, ಅಂತಹ ಯಾವ ಸಾಧ್ಯತೆಯೂ ಕಾರ್ಯರೂಪಕ್ಕೆ ಬರಲಿಲ್ಲ. ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಉಳಿಸಲು ₹ 50 ಸಾವಿರ ಕೋಟಿಗೂ ಹೆಚ್ಚಿನ ನೆರವು ನೀಡಲು ಸಾಧ್ಯವಾಗುವುದಾದರೆ, ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಉಳಿಸಲು ಯಾರೊಬ್ಬರೂ ಏಕೆ ಮನಸ್ಸು ಮಾಡಲಿಲ್ಲ?

ಮಲ್ಯ ತಮ್ಮ ಅವಿವೇಕತನಕ್ಕೆ ಬೆಲೆ ತೆರಬಹುದು ಅಥವಾ ತೆರದೇ ಇರಬಹುದು. ಇಂಗ್ಲೆಂಡ್‌ನ ಕೋರ್ಟ್‌ಗಳಲ್ಲಿ ಅವರ ವಿರುದ್ಧದ ಆರೋಪಗಳು ಸಾಬೀತಾಗದಿದ್ದರೆ ಅವರು ಯಾವತ್ತೂ ಭಾರತಕ್ಕೆ ಮರಳುವುದಿಲ್ಲ. ಅವರು ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದರೂ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯೂ ಕಡಿಮೆ ಇದೆ.

ಮಲ್ಯ ಅವರಿಗಿಂತ ಹೆಚ್ಚಿನ ಗಂಭೀರ ಸ್ವರೂಪದ ಆರೋಪ ಹೊತ್ತವರನ್ನೂ ಭಾರತಕ್ಕೆ ಮರಳಿ ಕಳಿಸಿಲ್ಲ. ಇದಕ್ಕೆ, ನಮ್ಮ ಜೈಲುಗಳಲ್ಲಿನ ಭಯಾನಕ ಪರಿಸ್ಥಿತಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಕಾರಣಗಳನ್ನು ನೀಡಲಾಗಿದೆ. ಆರೋಪಿಗಳ ವಿರುದ್ಧದ ವಿಚಾರಣೆ ಪ್ರಕ್ರಿಯೆಯು ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ಭಿನ್ನವಾಗಿದೆ. ಇಂಗ್ಲೆಂಡ್‌ನಲ್ಲಿ ಮೊದಲು ಸವಿಸ್ತಾರವಾದ ತನಿಖೆ ನಡೆಸಿದ ನಂತರ ಆರೋಪಿಯನ್ನು ಬಂಧಿಸಲಾಗುತ್ತದೆ. ನಂತರ ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಿ ದೋಷಮುಕ್ತಗೊಳಿಸಲಾಗುವುದು ಇಲ್ಲವೇ ಶಿಕ್ಷೆ ವಿಧಿಸಲಾಗುವುದು. ಭಾರತದಲ್ಲಿ ಮೊದಲು ಆರೋಪಿಯನ್ನು ಬಂಧಿಸಲಾಗುತ್ತದೆ. ನಂತರ ಸುದೀರ್ಘ ತನಿಖೆ ನಡೆಸಲಾಗುವುದು. ಬಹಳ ವರ್ಷಗಳ ಕಾಯುವಿಕೆ ನಂತರ ತೀರ್ಪು ಹೊರಬೀಳುತ್ತದೆ.

ಅನೇಕರು ಮಲ್ಯ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಹೋಲಿಸುತ್ತಾರೆ. ಗೌರವಕ್ಕೆ ಅನರ್ಹರಾಗಿರುವ ಟ್ರಂಪ್‌, ಪದೇ ಪದೇ ದಿವಾಳಿ ಏಳುತ್ತಲೇ ಅಧ್ಯಕ್ಷ ಪಟ್ಟವೇರಿದ್ದಾರೆ. ಮಲ್ಯ ಅವರನ್ನು ಭಾರತೀಯರು ದುಂದುವೆಚ್ಚಗಾರ ಎಂದೇ ಪರಿಗಣಿಸಿದ್ದಾರೆ. ಮಲ್ಯರ ಈ ಪ್ರವೃತ್ತಿಯೇ ಅವರಿಗೆ ಮಾರಕವಾಗಿ ಪರಿಣಮಿಸಿತು. ನಗರಗಳ ಮಧ್ಯಮ ವರ್ಗದವರು ಅವರ ಜತೆ ಪ್ರೀತಿ– ದ್ವೇಷದ ಬಾಂಧವ್ಯ ಹೊಂದಲು ಬಯಸಿದ್ದರೆ, ಶ್ರೀಮಂತರು– ಪ್ರಭಾವಿಗಳು ಅವರ ಅಧಃಪತನವನ್ನು ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT