ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮೊಬೈಲ್ ಯುಗ ಸ್ವಾಮಿ...

Last Updated 20 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೆಲವೇ ವರ್ಷಗಳ ಹಿಂದಿನ ಮಾತು. ಯಾವುದೇ ಕಾರ್ಯಕ್ರಮ ಅಥವಾ ಪ್ರೇಕ್ಷಣೀಯ ಸ್ಥಳಕ್ಕೆ ಹೋದರೆ ಜನರು ಕ್ಯಾಮೆರಾ ಹಿಡಿದು ಬರುವ ವ್ಯಕ್ತಿಗಾಗಿ (ಛಾಯಾಗ್ರಾಹಕ) ಕಾಯುತ್ತಿದ್ದ ದಿನಗಳು ಅವುಗಳಾಗಿದ್ದವು. ಆದರೆ ಇಂದಿನ ಬದಲಾದ ದಿನಗಳಲ್ಲಿ...

ಬೆಂಗಳೂರಿನ ವಿಧಾನಸೌಧದ ಮುಂಭಾಗ, ಲಾಲ್‌ಬಾಗ್, ಟಿಪ್ಪು ಅರಮನೆ, ಅಷ್ಟೇ ಏಕೆ? ರಾಜ್ಯದ ಯಾವುದೇ ಪ್ರೇಕ್ಷಣೀಯ ಸ್ಥಳಕ್ಕೆ ಹೋದರೂ ಪ್ರವಾಸಿಗಳಿಗಾಗಿ ಕಾಯುತ್ತಿದ್ದ ಛಾಯಾಗ್ರಾಹಕರ ಸಂಖ್ಯೆ ಈಗ ಗಣನೀಯವಾಗಿ ಇಳಿದಿದೆ. ಮೊದಲಿನ ಹಾಗೆ ಫೋಟೊ ತೆಗೆಸಿ ಹಣ ಹಾಗೂ ವಿಳಾಸ ಕೊಟ್ಟು ತಮ್ಮ ಊರಿಗೆ ಹೋಗಿ ಕಾಯಬೇಕಿಲ್ಲ. ಆ ಕಾಯುವ ಸುಖ ಕಳೆದುಹೋಗಿ ವರುಷಗಳೇ ಉರುಳಿವೆ. ಈಗ ಛಾಯಾಗ್ರಾಹಕರು ಅಲ್ಲೇ ಚಿತ್ರಗಳನ್ನು ಮುದ್ರಿಸಿ ಕೊಡುತ್ತಿದ್ದರೂ ಜನರಿಗೆ ಚಿತ್ರ ತೆಗೆಸಿಕೊಳ್ಳಲು ಆಸಕ್ತಿಯಿಲ್ಲ. ಅವರಿಗೆ ಈಗೇನಿದ್ದರೂ ತಮ್ಮ ಸ್ಮಾರ್ಟ್‌ಫೋನೇ ಪ್ರಿಯ. ಅವುಗಳಲ್ಲೇ ಚಿತ್ರ ತೆಗೆದು, ಅಲ್ಲಿಂದಲೇ ಸಾಮಾಜಿಕ ಜಾಲತಾಣಗಳಿಗೆ ಹಾಕಿ, ಅದಕ್ಕೆ ಲೈಕ್ ಸಿಕ್ಕಾಗಲೇ ಖುಷಿ.

ಫೋಟೊ ಪ್ರಿಂಟ್‌ ಹಾಕಿಸಿ ಅದನ್ನು ಕಾಪಾಡಿಕೊಳ್ಳುವ ಕಿರಿಕಿರಿ ಯಾರಿಗೆ ಬೇಕು? ಜನ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಛಾಯಾಚಿತ್ರ ಸೆರೆ ಹಿಡಿಯುತ್ತಿದ್ದರೆ, ಛಾಯಾಗ್ರಹಣವನ್ನೇ ಹೊಟ್ಟೆಪಾಡು ಮಾಡಿಕೊಂಡಿರುವವರು ಅಸಹಾಯಕರಾಗಿ ನಿಂತು ನೋಡುವಂತಾಗಿದೆ.

ಸುದ್ದಿ ಮಾಧ್ಯಮಗಳಲ್ಲೂ ಈ ಸ್ಮಾರ್ಟ್‌ಫೋನ್‌ ತನ್ನ ಮಹತ್ವವನ್ನು ಸಾರುತ್ತಿದ್ದು ಮುದ್ರಣ ಇಲ್ಲವೆ ಎಲೆಕ್ಟ್ರಾನಿಕ್‌ ಮಾಧ್ಯಮದ ಛಾಯಾಗ್ರಾಹಕರು ತಾವು ತೆಗೆದ ಚಿತ್ರ, ವಿಡಿಯೊಗಳನ್ನು ಕಚೇರಿಗೆ ತಲುಪಿಸುವ ಮೊದಲೇ ಸಾರ್ವಜನಿಕರು ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿರುತ್ತಾರೆ.

ಛಾಯಾಗ್ರಾಹಕರು ಫೋಟೊ ಅಪ್‌ಲೋಡ್‌ ಮಾಡುವ ಮುನ್ನವೇ ಆ ವಿದ್ಯಮಾನ ಜನರಿಗೆ ತಲುಪಿ ಸಾಕಷ್ಟು ಸದ್ದು ಮಾಡಿರುತ್ತದೆ. ಈಗೀಗ ಪತ್ರಿಕೆಗಳ ವೆಬ್ ಆವೃತ್ತಿಗೆ ಚಿತ್ರಗಳನ್ನು ಮೊಬೈಲ್ ಫೋನ್‌ಗಳಲ್ಲೇ ಸೆರೆಹಿಡಿದು ಆ ಕ್ಷಣದಲ್ಲೇ ಕಳಿಸಲಾಗುತ್ತಿದೆ. ಟಿ.ವಿ. ಮಾಧ್ಯಮದ ವರದಿಗಾರರೇ ಸಣ್ಣಪುಟ್ಟ ಕಾರ್ಯಕ್ರಮಗಳನ್ನೂ ಶೂಟ್ ಮಾಡಿ ಕಳಿಸುತ್ತಿದ್ದಾರೆ.

ಸ್ಮಾರ್ಟ್‌ಫೋನ್‌ ಹಾಗೂ ಇಂಟರ್‌ನೆಟ್‌ ಅಗ್ಗವಾಗುತ್ತಿರುವ ಇಂದಿನ ದಿನಮಾನದಲ್ಲಿ ಎಲ್ಲಾದರೂ ಅವಘಡಗಳು ಸಂಭವಿಸಿದರೆ ಅಥವಾ ಗಲಾಟೆಗಳಾದರೆ ಜನ ಮೊದಲು ತೆಗೆಯೋದು ಮೊಬೈಲನ್ನೇ. ಅಲ್ಲಿನ ದೃಶ್ಯಗಳನ್ನು ಲೈವ್ ಮಾಡಿ ಕೆಲವೇ ಕ್ಷಣಗಳಲ್ಲಿ ಜಗತ್ತಿಗೆ ತಲುಪಿಸಿಬಿಡುತ್ತಾರೆ. ಕೆಲವೊಮ್ಮೆ ಇವು ಉಪಯೋಗಕಾರಿ ಎನಿಸಿದರೆ, ಕೆಲವು ಬಾರಿ ಮಾರಕವಾಗಿದ್ದೂ ಇದೆ.

ಭಾರತೀಯರು ಯಾವಾಗಲೂ ಛಾಯಾಚಿತ್ರ ಪ್ರಿಯರು ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಮೊಬೈಲ್‌ ಕಂಪನಿಗಳು, ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವಾಗಲೆಲ್ಲ ಅವುಗಳಲ್ಲಿ ಅಳವಡಿಸುವ ಕ್ಯಾಮೆರಾಗಳಿಗೆ ಇನ್ನಿಲ್ಲದ ಮಹತ್ವ ನೀಡುತ್ತಿವೆ.

ಪತ್ರಿಕೆಗಳಲ್ಲಿ ಬರುವ ಮೊಬೈಲ್‌ ಜಾಹೀರಾತುಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ, ಎಷ್ಟು ಕ್ಯಾಮೆರಾಗಳಿವೆ, ಅವುಗಳ ಸಾಮರ್ಥ್ಯ ಎಷ್ಟು ಎಂಬ ವಿಷಯಕ್ಕೆ ಮಹತ್ವ ಸಿಕ್ಕಿರುತ್ತದೆಯೇ ಹೊರತು ಮೊಬೈಲ್‌ನ ಪ್ರಾಥಮಿಕ ಕಾರ್ಯದ ಕುರಿತು ಒಂದು ತುಣುಕು ಮಾಹಿತಿ ಇರುವುದಿಲ್ಲ.

ಜಗತ್ತಿನಲ್ಲಿಯೇ ಅತ್ಯಂತ ವೇಗದಲ್ಲಿ ರೂಪಾಂತರ ಹೊಂದುತ್ತಿರುವ ಸ್ಮಾರ್ಟ್‌ಫೋನ್‌, ಇನ್ನಷ್ಟು ಮತ್ತಷ್ಟು ಸ್ಮಾರ್ಟ್ ಆದಂತೆಲ್ಲ ಅನೇಕ ಗ್ಯಾಜೆಟ್‌ಗಳನ್ನು ನುಂಗಿ ಇಂದು ವೃತ್ತಿಪರ ಕ್ಯಾಮೆರಾಗಳ ಅವಶ್ಯಕತೆಯನ್ನೇ ಕಡಿಮೆಗೊಳಿಸಿ ಛಾಯಾಗ್ರಹಣಕ್ಕೆ ಹೊಸ ಆಯಾಮವನ್ನೇ ತಂದುಕೊಟ್ಟಿದೆ. ಇದನ್ನು ಮನಗಂಡಿರುವ ಕ್ಯಾಮೆರಾ ತಯಾರಕರು ಕಡಿಮೆ ಭಾರದ ಮಿರರ್ ಲೆಸ್ ತಂತ್ರಜ್ಞಾನದ ನೂತನ ಆವೃತ್ತಿಗಳನ್ನು ತಂದಿದ್ದಾರೆ. ಅನೇಕ ಕೆಲಸಗಳನ್ನು ಮಾಡುವ ಜತೆಗೆ ಬೆಲೆಯಲ್ಲೂ ಕಡಿಮೆ ಇರುವ ಮೊಬೈಲ್‌, ಜನಸಾಮಾನ್ಯರಿಗೆ ಛಾಯಾಗ್ರಾಹಕರಿಂದ ಸ್ವಾತಂತ್ರ್ಯ ತಂದುಕೊಟ್ಟಿದೆ. ಇನ್ನೂ ಏನೇನು ಬದಲಾವಣೆ ತರುತ್ತದೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT