ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸಾರದೊಂದಿಗೆ ಸಾಗಿದ ಕೆಲಸದ ನೌಕೆ

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಎಲ್ಲಿ ಜಾರಿತೋ ಮನವೂ... ಎಲ್ಲೇ ಮೀರಿತೋ...’ ಹಾಡು ಸುಶ್ರಾವ್ಯವಾಗಿ ರೇಡಿಯೊದಿಂದ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. ಕೇಳುತ್ತಲೇ ಮುಖದ ಮೇಲೆ ಒಂದು ಪುಟ್ಟ ನಗು. ಅಬ್ಬಾ! ನನ್ನಿಷ್ಟದ ಹಾಡು, ಇನ್ನು ಇಂದು ದಿನ ನಿಜವಾಗ್ಲೂ ಚೆನ್ನಾಗಿರುತ್ತೆ... ಆದ್ರೆ ಆ ನನ್ನಿಷ್ಟದ ಹಾಡನ್ನು ಮೂರು ಸಾಲು ಕೇಳಿಸಿಕೊಳ್ಳಲು ನನಗೆ ಪುರುಸೊತ್ತಿಲ್ಲ. ಒಂದು ಕಡೆ ತಿಂಡಿ ಕೆಲಸ ಆಗಬೇಕು, ಮಕ್ಕಳಿಗೆ ಮನೆಯವ್ರಿಗೆ ಡಬ್ಬಿ ರೆಡಿಯಾಗ್ಬೇಕು, ಹೊರಗಡೆ ಗೇಟಿನ ಬೀಗ ತೆಗೆಯಬೇಕು, ಪೇಪರ್ ತಂದಿಡಬೇಕು – ಹೀಗೆ ಕೆಲಸಗಳ ಪಟ್ಟಿ ನಿಧಾನಕ್ಕೆ ತಲೆಯಲ್ಲಿ ಓಡಲು ಶುರುವಿಟ್ಟುಕೊಂಡಿತ್ತು. ‘ಎಲ್ಲಿ ಜಾರಿತೋ’ ಹಾಡನ್ನು ದಿನಾ ಕೇಳಿಸಿಕೊಂಡು ಕೆಲಸ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ರೇಡಿಯೊ ಆನ್ ಮಾಡುವುದಷ್ಟೆ. ಆದರೆ ಅಡುಗೆಮನೆ ಮಿಕ್ಸಿ, ಕುಕ್ಕರ್‌ ವಿಶಲ್‌, ನಲ್ಲಿಯ ನೀರಿನ ಶಬ್ದದ ನಡುವೆ ಹಾಡು ಅದೆಲ್ಲೋ ಮರೆಯಾಗಿರುತ್ತದೆ!

ಇಷ್ಟೆಲ್ಲ ಶಬ್ದಗಳ ನಡುವೆ ಮತ್ತೆ ನನ್ನೊಲವಿನ ಹಾಡಿಗೆ ಕಿವಿಗೊಡುವಷ್ಟರಲ್ಲಿ ಮತ್ತದೇ ಸಾಲು ಸಾಲು ಜಾಹೀರಾತುಗಳು. ‘ಛೇ, ಯಾವ್ ಸ್ಟೇಷನ್‌ನಲ್ಲೂ ಹಾಡು ಬರುವುದಿಲ್ಲ, ಬರೀ ಮಾತು... ಇದು ವಿವಿಧ ಭಾರತೀನಾ? ಬೇರೆ ಸ್ಟೇಷ್ಟನ್ನಾ?’ ಎಂದು ಯೋಚಿಸುತ್ತಿರುವಾಗ ಆ ಕಡೆಯಿಂದ ನಮ್ಮ ಅತ್ತೆಯ ಅಶರೀರವಾಣಿ. ಎಡಗೈನಲ್ಲಿ ಹಾಗೇ ಸ್ಟೇಷನ್ ಬದಲಾಯಿಸುತ್ತಾ, ಹಾಡಿಗಾಗಿ ತಡಕಾಡುತ್ತಾ ಇತ್ತ ಬಲಗೈನಲ್ಲಿ ಸೌಟು ಹಿಡಿದು ಅಂತೂ ಇಂತೂ ಅಡುಗೆಮನೆ ಕೆಲಸವನ್ನೆಲ್ಲಾ ಮುಗಿಸಿ, ಗಂಡ–ಮಕ್ಕಳನ್ನು ಸ್ಕೂಲಿಗೆ, ಆಫೀಸಿಗೆ ಕಳುಹಿಸಿ ಉಸ್ಸಪ್ಪಾ ಅಂತ ಪೇಪರ್ ನೋಡುವಷ್ಟರಲ್ಲಿ ಪೇಪರ್‌ನ ಪೇಜುಗಳ ಜೊತೆಯಲ್ಲಿ ಸುದ್ದಿನೂ ಚೆಲ್ಲಾಪಿಲ್ಲಿ. ಏಕೆಂದರೆ ನಾನಿರುವುದು ಒಟ್ಟು ಸಂಸಾರದಲ್ಲಿ. ಬಾಗಿಲಿಗೆ ಬಂದ ಪೇಪರನ್ನು ನಾನೇ ತಂದು ಒಳಗೆ ಇಡುತ್ತೀನಾದ್ರೂ ಅದು ನನ್ನ ಕೈ ಸೇರುವಷ್ಟರಲ್ಲಿ ಹಳೆಪೇಪರ್ ಅನ್ನೋ ಹಣೆಪಟ್ಟಿ ಕಟ್ಕೊಂಡಿರುತ್ತದೆ! ಒಮ್ಮೊಮ್ಮೆ ನನ್ನ ಕೈಗೆ ಪೇಪರ್ ಸಿಗುವುದೇ ಅನುಮಾನ.

ಮನೆಯಲ್ಲಿ ಬೇರೆಯವರು ಗರಿಗರಿಯಾದ ನ್ಯೂಸ್ ಪೇಪರನ್ನು ತಿರುವಿಹಾಕಿ ಓದುತ್ತಿದ್ದರೆ ಹೊಟ್ಟೆಯಲ್ಲಿ ಏನೋ ಸಂಕಟ. ‘ಮೊದ್ಲು ನಾನೇ ಓದ್ಬೇಕಾಗಿತ್ತು. ಎಲ್ಲ ಕೆಲ್ಸ ಮುಗಿಸಿ ಪೇಪರ್ ಓದೋಕೆ ಅಂತ ಪುರುಸೊತ್ತು ಮಾಡ್ಕೊಂಡ್ ಬರುವ ಹೊತ್ತಿಗೆ ಪೇಪರ್ ಹಿಂಗೆ ಕೈಜಾರಿ ಹೋಗಿಬಿಡೋದಾ?’ ಅಂತೂ – ಇಂತೂ ಮೆಟ್ರೋ ಪೇಜ್‌ ಕೈ ಸೇರುತ್ತೆ. ಅಷ್ಟರಲ್ಲಿ ಪೇಪರ್ ಓದೋದಾ? ಮೊಬೈಲ್‌ನಲ್ಲಿ ಬರೋ ಗುಡ್ ಮಾರ್ನಿಂಗ್‌ಗಳಿಗೆಲ್ಲ ರಿಪ್ಲೈ ಮಾಡುವುದಾ? ಎಂಬ ಮತ್ತೊಂದು ಜಿಜ್ಞಾಸೆ. ಮೊದಲು ಪೇಪರ್ ಓದೋಣ ಅಂತ ಕೈಯಲ್ಲಿ ಪೇಪರ್ ಹಿಡ್ಕೊಂಡು ಇನ್ನೂ ಐದೇ ನಿಮಿಷ ಆಗಿರುತ್ತೆ, ಅಷ್ಟರಲ್ಲಾಗಲೇ ಗಡಿಯಾರ ಒಂಬತ್ತು ಹೊಡಿಯೋ ಸೂಚನೆ ಕಾಣಿಸುತ್ತದೆ. ಮತ್ತೆ ಎದ್ದು ಓಡೋದು ಯೋಗ ತರಗತಿಗೆ. ಒಂದಿಷ್ಟು ವ್ಯಾಯಾಮ ಅಂತಾದ್ರೆ ಅದೇನೋ ಸಮಾಧಾನ ಅನ್ನೋ ನಂಬಿಕೆಯಿಂದ ಅದೇನೇ ಕೆಲಸ ಇದ್ದರೂ ದೇಹದಂಡಿಸುವುದನ್ನು ತಪ್ಪಿಸುವುದಿಲ್ಲ. ಹದಿನೈದು ವರ್ಷದಿಂದ ಹೀಗೆ ನಿರಂತರ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಒಂದು ಕೆ.ಜಿ.ನೂ ಏರುಪೇರು ಆಗಿಲ್ಲ!

ಅಂತೂ ಇಂತೂ ಎಕ್ಸ್‌ಪ್ರೆಸ್ಸ್ ಟ್ರೈನ್ ವೇಗದಲ್ಲಿ ಮನೆ ಕೆಲಸ ಎಲ್ಲಾ ಮುಗಿಸಿ, ಮನೆ ದೇವರನ್ನು ಎಬ್ಬಿಸಿ, ಅದಕ್ಕೆ ಒಂದು ದೀಪ ಅಂತ ಹಚ್ಚಿ ನಮಸ್ಕಾರ ಮಾಡುವಷ್ಟರಲ್ಲಿ ಹನ್ನೊಂದು ಆಗಿರುತ್ತದೆ. ಆಮೇಲೆ ಸ್ಟುಡಿಯೊ ಕಡೆ ಚಿತ್ತ ಎಳಿಯೋದಕ್ಕೆ ಶುರು ಆಗುತ್ತದೆ. ರೇಡಿಯೊ ಸ್ಟೇಷನ್‌ನಲ್ಲಿ ಕೆಲಸ ಮಾಡೋಕೆ ಶುರು ಮಾಡಿ ಆರೇಳು ವರ್ಷಗಳೇ ಆಗಿವೆ. ಆದರೂ ಪ್ರತಿ ಬಾರಿ, ಪ್ರತಿ ದಿನ ಅಲ್ಲಿಗೆ ಹೋಗಿ ಕುಳಿತುಕೊಳ್ಳುವಾಗಲೂ ಅದೇನೋ ಒಂಥರ ಖುಷಿ, ಸಂಭ್ರಮ. ಮಾತು ಮಾತು ಮಾತು. ಜನರ ಜೊತೆ ಮಾತನಾಡ್ಬೇಕು, ಜನರ ಜೊತೆ ಕನೆಕ್ಟ್ ಆಗ್ಬೇಕು, ಅಂದರೆ ಮೊದಲಿನಿಂದಲೂ ಹಾಗೇ. ನನ್ನ ಕಲ್ಪನೆಯ ಬುತ್ತಿಯನ್ನ ಬಿಚ್ಚಿಡುತ್ತ, ಕನಸುಗಳನ್ನು ಹಂಚಿಕೊಳ್ಳುತ್ತ, ನನ್ನ ಅನುಭವಗಳನ್ನು ಅವುಗಳ ಜೊತೆಗೆ ಸೇರಿಸುತ್ತಾ, ಮಾತನಾಡುತ್ತ ಕುಳಿತುಬಿಟ್ಟರೆ ಮನಸ್ಸು ಹಕ್ಕಿಯ ಹಾಗೆ ರೆಕ್ಕೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಬೆಳಗಿನ ಧಾವಂತಗಳೇನಿತ್ತೋ, ಟೆನ್ಷನ್‌ಗಳೇನಿತ್ತೋ – ಅವೆಲ್ಲ ಮರೆತುಹೋಗಿ ನನ್ನದೇ ಒಂದು ಪುಟ್ಟ ಪ್ರಪಂಚ ಆ ನಮ್ಮ ರೇಡಿಯೊದಲ್ಲಿ ಸೃಷ್ಟಿ ಆಗ್ಬಿಟ್ಟಿರುತ್ತದೆ. ಹೌದು, ನಾನು ಕೆಲಸ ಮಾಡೋ ರೇಡಿಯೊ ಸ್ಟೇಷನ್ ಹೆಸರು ಕೂಡ ‘ನಮ್ ರೇಡಿಯೋ’. ದೂರದರ್ಶನದಲ್ಲಿ ಸಬಿಹಾ ಬಾನು ಅಥವಾ ಅಪರ್ಣಾ ಅವರು ನ್ಯೂಸ್ ಓದೋದನ್ನು, ಅಷ್ಟೆಲ್ಲ ಆಶ್ಚರ್ಯದಿಂದ ಅಷ್ಟೇ ಅಭಿಮಾನದಿಂದ ನೋಡುತ್ತಿದ್ದಾಗ ‘ಮುಂದೊಂದು ದಿನ ನಾನೂ ಹೀಗೆ ಹೋಗಿ ಟಿವಿಯಲ್ಲಿ ನ್ಯೂಸ್ ಓದ್ಬೇಕು’ ಎಂದು ಕನಸು ಕಟ್ಟಿದ್ದೇನೋ ನಿಜ. ಆದರೆ?  ಅಂಥದ್ದೊಂದು ಕನಸು ಒಂದು ದಿನ ನನಸಾಗುತ್ತದೆ ಅನ್ನುವ ಊಹೆ ಕೂಡ ನನಗಿರಲಿಲ್ಲ. 

ಕಾಲೇಜು ದಿನಗಳಲ್ಲಿ ‘ಪೋಲೋ ಕೊಹ್ಲೋ’ನ ‘ಆಲ್‌ಕೆಮಿಸ್ಟ್’ ಅನ್ನು ಓದಿದ್ದ ನೆನಪು. ಅದರಲ್ಲಿಯ ಒಂದಷ್ಟು ಸಾಲುಗಳು ಅಚ್ಚಳಿಯದೇ ಮನಸ್ಸಿನಲ್ಲಿ ಉಳಿದುಬಿಟ್ಟಿವೆ. ನಾವು ಒಂದು ಸಾರಿ ಏನನ್ನಾದರೂ ಇಷ್ಟಪಟ್ಟರೆ ಇಡೀ ಬ್ರಹ್ಮಾಂಡವೇ ಆ ವಸ್ತುವನ್ನು ನಮಗೆ ತಲುಪಿಸುವುದಕ್ಕೆ ಹೋರಾಡುತ್ತದೆ ಎಂದು ಅವರು ಹೇಳುತ್ತಾರೆ. ಆ ಮಾತುಗಳು ನನ್ನ ಮನಸ್ಸಿನ ಮೇಲೆ ಅದೆಂಥ ಪ್ರಭಾವ ಬೀರಿತ್ತು ಅಂದರೆ, ನನ್ನ ಕನಸುಗಳೆಲ್ಲಾ ಸಾಕಾರಗೊಳ್ಳಲು ಈ ಇಡೀ ಬ್ರಹ್ಮಾಂಡ ನನ್ನ ಜೊತೆಗೇ ಪಂಥ ಕಟ್ಟಿ ನಿಂತುಬಿಟ್ಟಿದೆಯೇನೋ ಅನ್ನಿಸುವಷ್ಟು! ಕನಸುಗಳನ್ನು ನನಸಾಗಿಸೊ ದಾರಿ ನನ್ನ ಮುಂದೆ ತೆರೆದುಕೊಳ್ಳುತ್ತಾ ಹೋಯಿತು. ಮದುವೆ ಆಗಿ ಮಗ ಹುಟ್ಟಿದ ಮೇಲೆ ಚಂದನದಲ್ಲಿ ನ್ಯೂಸ್ ರೀಡರ್‌ಗೆ ಅಪ್ಲಿಕೇಷನ್ ಹಾಕಿದೆ. ಹಾಗೇ ಸುದ್ದಿ ನಿರೂಪಕಿ ಕೂಡ ಆದೆ. ಸುದ್ದಿ ನಿರೂಪಕಿ ಆಗುವುದು ದೊಡ್ಡ ವಿಷಯ ಅಲ್ಲ. ಅಲ್ಲಿ ನನ್ನದೇ ಛಾಪನ್ನು ಮೂಡಿಸಬೇಕು ಅನ್ನುವಂತಹ ಆಸೆ. ಮನೆಯಲ್ಲಿ ಏನೆಲ್ಲಾ ಕೆಲಸಗಳಿದ್ದರೂ, ಏನೆಲ್ಲಾ ವ್ಯವಸ್ಥೆಗಳನ್ನು ಮಾಡಬೇಕಾಗಿದ್ದರೂ, ಬೆಳಿಗ್ಗೆ ಮೂರು ಗಂಟೆಗೆ ಎದ್ದು, ಆ ಎಲ್ಲ ಕೆಲಸಗಳನ್ನು ಮುಗಿಸಿ,  ಆರು ಗಂಟೆಗೆ ಸ್ಟುಡಿಯೊಗೆ ಹೋಗಿ ನನ್ನ ವಾರ್ತೆ ಓದುವ ಕೆಲಸಕ್ಕೆ ಹಾಜರಾಗುತ್ತಿದ್ದೆ.

ಆದರೆ ಆ ಪುಟ್ಟ ಮಗುವನ್ನು ಅಷ್ಟು ಹೊತ್ತಿಗೇ ಬಿಟ್ಟು ಹೋಗುವಾಗ ಮನಸ್ಸಲ್ಲೇನೋ ಸಂಕಟ. ನನ್ನನ್ನು ಅಂತಹ ಸಂಕಟದಿಂದ ಪಾರು ಮಾಡಿದ್ದು ಇದೇ ನನ್ನ ತುಂಬಿದ ಮನೆಯ ಬಳಗ. ನಾನಿರುವಾಗ ನನ್ನ ಮಗನಿಗೆ ನಾನೊಬ್ಬಳೇ ತಾಯಿಯಾದರೆ, ನಾ ಹೋಗಿ ಬರುವ ಅಷ್ಟೂ ಹೊತ್ತು ಅವನಿಗೆ ಮನೆಯವರೆಲ್ಲ ತಾಯಂದಿರಾಗಿ ಇರುತ್ತಿದ್ದರು. ನನ್ನ ವೃತ್ತಿಜೀವನ ವೈಯಕ್ತಿಕ ಜೀವನ ಬೆರೆತು ಹೋಗುವುದು ಇಂಥ ಸಂದರ್ಭಗಳಲ್ಲೇ. ದೂರದರ್ಶನಕ್ಕೆ ಹೋಗುತ್ತಿದ್ದ ದಾರಿಯಲ್ಲೇ ಆಕಾಶವಾಣಿ; ಅದನ್ನು ನೋಡಿದಾಗಲೆಲ್ಲ, ನಾನೂ ಒಮ್ಮೆ ಆರ್.ಜೆ. ಆಗಬೇಕು ಅನ್ನೋ ಹಂಬಲ–ಕನಸು. ಕನಸುಗಳಿಗೆ ಕೊನೆ ಎಲ್ಲಿ! ಆ ಕನಸೂ ನನಸಾಗಿದ್ದು ‘ಕನ್ನಡ ಕಾಮನ ಬಿಲ್ಲು’ ಅನ್ನುವ ಹೆಸರಲ್ಲಿ ಆರ್.ಜೆ. ಆಗಿ, ನಾಲ್ಕು ವರ್ಷ ಅನೇಕ ರೀತಿಯ ಕಾರ್ಯಕ್ರಮಗಳನ್ನು ಕೊಡುತ್ತ, ನನ್ನೆಲ್ಲ ಮನದ ಮಾತುಗಳನ್ನು, ನನ್ನೆಲ್ಲ ಪ್ರೀತಿಯ ಕೇಳುಗರೊಂದಿಗೆ ಹಂಚಿಕೊಳ್ಳುವಂಥ ಅವಕಾಶ. ಅಲ್ಲಿಂದ ಮತ್ತೊಂದು ಹೆಜ್ಜೆ ನಿರೂಪಣೆ ಕಡೆಗೆ. ಸಿಕ್ಕಂತ ಪುಟ್ಟ ಅವಕಾಶಗಳನ್ನು ಉಪಯೋಗಿಸಿಕೊಂಡು, ಒಂದಿಷ್ಟು ಅದರ ಬಗ್ಗೆ ತಿಳಿದುಕೊಳ್ಳುತ್ತಾ ಸಾಕಷ್ಟು ಹೋಂ ವರ್ಕ್ ಮಾಡುತ್ತ ನಿರೂಪಣಾಕ್ಷೇತ್ರಕ್ಕೆ ಅಂಬೆಗಾಲಿಟ್ಟೆ.

ಬೆಳಗಿನ ಜಾವವೇ ಎದ್ದು ಮನೆಯಲೆಲ್ಲ ರೆಡಿ ಮಾಡಿ, ವಾರ್ತೆಗೆ ಹೋಗುವ ಸಂಭ್ರಮ; ಕೊನೆಯ ವಾರ್ತೆ ಓದುವುದನ್ನು ಮುಗಿಸಿ ರಾತ್ರಿ ಹನ್ನೊಂದು ಗಂಟೆಗೆ ಮನೆಗೆ ಬಂದರೂ ಮಾರನೇ ದಿನಕ್ಕೆ ಮತ್ತೆಲ್ಲ ಸಿದ್ಧ ಮಾಡ್ಕೊಳೋವಂಥ ಹುಮ್ಮಸ್ಸು. ಪ್ರೋಗ್ರಾಂಗೆ ಹಲವಾರು ಪುಸ್ತಕಗಳನ್ನು ಹುಡುಕಿ, ಎಲ್ಲರೂ ಮೆಚ್ಚುವ ಹಾಗೆ ಒಂದು ಕಾರ್ಯಕ್ರಮ ನೀಡುವ ಹಂಬಲ. ಅಂತೂ ಮನೆಯ ಎಲ್ಲಾ ಒತ್ತಡ ಮರೆತುಹೋಗಿ ಹೊರಗೆ ಹೋದಾಗ ನನ್ನದೇ ಆದಂತಹ ಮತ್ತೊಂದು ಪ್ರಪಂಚ ಸೃಷ್ಟಿಯಾಗಿಬಿಡುತ್ತದೆ.

ಮನೆ ಮತ್ತು ಕೆಲಸ – ಎರಡನ್ನೂ ಸರಿದೂಗಿಸಿಕೊಂಡು ಹೋಗುವಂತಹ, ಹೆಚ್ಚಾಗಿ ಕಷ್ಟವೂ ಆಗಿರುವಂತಹ, ಮಾಧ್ಯಮದ ಕೆಲಸ ನನಗೆ ಕಂಫರ್ಟಬಲ್ ಅನ್ನೋ ಭಾವನೆ ನೀಡುವುದರ ಜೊತೆಗೆ ತುಂಬಾ ಇಷ್ಟಾನೂ ಆಯ್ತು. ಅದರಲ್ಲೂ ನನ್ನ ಸ್ನೇಹಿತರು, ಮನೆಯವರು ನನ್ನನ್ನು ಟಿವಿನಲ್ಲಿ ನೋಡುತ್ತಲೋ ಅಥವಾ ರೇಡಿಯೊನಲ್ಲಿ ನನ್ನ ಪ್ರೋಗ್ರಾಂಗಳನ್ನು ಕೇಳುತ್ತಲೋ, ಒಂದು ಒಳ್ಳೆಯ ಕಾರ್ಯಕ್ರಮದ ನಿರೂಪಣೆ ಮಾಡಬೇಕಾದರೆ ನನ್ನೊಂದಿಗೆ ಆ ಸಂಜೆಯನ್ನು ಆಸ್ವಾದಿಸುತ್ತಲೋ, ನನ್ನ ಕೆಲಸದ ಬಗ್ಗೆ ಪ್ರೀತಿ ಅಭಿಮಾನ ತೋರಿಸುವುದನ್ನು ಕಂಡರೆ ಖುಷಿಯಾಗುತ್ತದೆ. ಒಟ್ಟಿನಲ್ಲಿ, ನಾನು ಪ್ರೀತಿಸುವ ವೃತ್ತಿ ಮತ್ತು ನನ್ನನ್ನು ಪ್ರೀತಿಸುವ ಕುಟುಂಬ – ಇವರಡರ ನಿರಾಯಾಸವಾದ ಬೆಂಬಲ ನನಗೆ ಸಿಗುತ್ತಾ ಹೋಯಿತು.

ನಾವು ನಮ್ಮ ಆದ್ಯತೆಗಳನ್ನು ಸರಿಯಾಗಿ ಗುರುತಿಸಿಕೊಂಡು, ಅದರಂತೆ ನಡೆದರೆ ಪಾಪಪ್ರಜ್ಞೆ ಕಾಡುವುದಿಲ್ಲ – ಎಂದು ಹೇಳುತ್ತಾರೆ. ಹೀಗಾಗಿಯೇ ನಾನು ನನ್ನ ವೃತ್ತಿಯ ಆದ್ಯತೆಯನ್ನೂ ಹೊಣೆಗಾರಿಕೆಯನ್ನೂ ಸವಾಲುಗಳನ್ನೂ ಸರಿಯಾಗಿ ಗುರುತಿಸಿ, ನನ್ನ ವೃತ್ತಿಗೂ ಹಾಗೇ ನನ್ನ ವೈಯುಕ್ತಿಕ ಜೀವನಕ್ಕೂ ಸಮಯವನ್ನು ಸರಿಯಾಗಿ ಕೊಡುತ್ತಿದ್ದೇನೆ ಎಂಬ ನಂಬಿಕೆ ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆ. ಅನೇಕ ಹೆಣ್ಣುಮಕ್ಕಳಿಗೆ ದ್ವಂದ್ವ ಕಾಡುವುದೇ ಇಲ್ಲೇ – ಎಲ್ಲೋ ನನ್ನ‌ ಕುಟುಂಬವನ್ನು ನಿರ್ಲಕ್ಷ್ಯ ಮಾಡುತ್ತಿ‌ದ್ದೀನೆಯೆ? ಅಥವಾ ನಾನು ನನ್ನ ವೃತ್ತಿಗೆ ನ್ಯಾಯ ಸಲ್ಲಿಸುವುದಕ್ಕೆ ಆಗ್ತಿದಿಯಾ? ಅನ್ನುವಂಥದ್ದು. ಬದುಕಿನ ಪ್ರತಿ ಕ್ಷಣವನ್ನು ಸಂಭ್ರಮಿಸುವಂಥ ಏಕಮೇವ ಉದ್ದೇಶದಿಂದ, ಮನಸ್ಸಿಗೊಪ್ಪುವ ಕೆಲಸವನ್ನು ಮಾಡುತ್ತ, ಮನೆಯವರೊಂದಿಗೂ ಬದುಕನ್ನು ಹಂಚಿಕೊಳ್ಳುತ್ತ,  ಇದೆಲ್ಲದರೊಟ್ಟಿಗೆ ನನಗಾಗಿ ಒಂದಷ್ಟು ಸಮಯವನ್ನೂ ವಿನಿಯೋಗಿಸಿಕೊಳ್ಳುತ್ತಿರುವಂಥ ಸಾರ್ಥಕತೆ ನನ್ನದು. ‘ನಾನು ಬದುಕನ್ನು ನಡೆಸುತ್ತಿರುವೆ’ – ಅನ್ನುವುದಕ್ಕಿಂತ, ‘ಬದುಕು ನನ್ನನ್ನು ತುಂಬಾ ಚೆಂದವಾಗಿ ನಡೆಸಿಕೊಳ್ಳುತ್ತಿದೆ’ ಎನ್ನುವುದೇ ನನ್ನ ಮಟ್ಟಿಗೆ ಸೂಕ್ತ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT