ಶಿವಮೊಗ್ಗ

ಮತದಾನದಿಂದ ದೂರವಿರುವುದು ದೇಶದ್ರೋಹ

‘ಪೋಷಕರ ಬೆವರಿನ ಹನಿಯಲ್ಲಿ ನಮ್ಮ ವಿದ್ಯಾಭ್ಯಾಸ ಸಾಗುತ್ತಿದೆ ಎಂಬುದನ್ನು ಅರಿಯಬೇಕು. ಅತ್ಯುನ್ನತ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಉತ್ತಮ ಅಧಿಕಾರಿಗಳಾಗಬೇಕಾದರೆ ವಿದ್ಯಾರ್ಥಿ ಹಂತದಿಂದಲೇ ತಯಾರಿ ನಡೆಸಬೇಕು

ಶಿವಮೊಗ್ಗ: ಇಂದು ವಿದ್ಯಾವಂತರೇ ಮತದಾನ ಕೇಂದ್ರಕ್ಕೆ ಬರುತ್ತಿಲ್ಲ. ಅನೇಕರು ಹಣಕ್ಕೆ ಮತ ಮಾರಿಕೊಳ್ಳುತ್ತಿದ್ದಾರೆ. ಮತದಾನದಿಂದ ದೂರ ಉಳಿಯುವುದು ದೇಶದ್ರೋಹ ಎಂದು ಡಿವಿಎಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಟಿ.ಪದ್ಮೇಗೌಡ ಅಭಿಪ್ರಾಯಪಟ್ಟರು. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಮಾವೇಶದಲ್ಲಿ ‘ಯುವಜನತೆ–ರಾಷ್ಟ್ರೀಯತೆ–ಮತದಾನ’ ವಿಷಯದ ಕುರಿತು ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಾದರೆ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಯುವ ಜನರು ಸಾಮಾಜಿಕ ಕಳಕಳಿ ಇರುವ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಯುವಕರಪಾತ್ರ ಹಿರಿದು. ಆದರೆ, ಇಂದಿನ ಯುವಕರು ಇದನ್ನು ಮರೆತು ವಿಚಿತ್ರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ.

ಇದರಿಂದ ಹೊರಬಂದು ಒಳ್ಳೆಯ ಕೆಲಸ, ಪ್ರಯತ್ನಗಳ ಕಡೆಗೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು. ಒಳ್ಳೆಯ ವಿಚಾರಗಳನ್ನಷ್ಟೇ ಸ್ವೀಕರಿಸಬೇಕು. ಜೀವನದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ದೇಶಕ್ಕೆ ಕೊಡುಗೆ ನೀಡುವತ್ತ ಸಾಗಬೇಕು ಎಂದು ಹೇಳಿದರು.

‘ಅನೇಕರು ಕೆಟ್ಟ ಕಾರ್ಯಗಳಿಗೆ ದೇವರನ್ನು ಬಳಸಿಕೊಳ್ಳುತ್ತಿದ್ದಾರೆ. ಜ್ಯೋತಿಷಿಗಳು ಜನರಲ್ಲಿ ಮೌಢ್ಯ ತುಂಬಿ ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದ್ದಾರೆ. ಯಾವುದೇ ದೇವಸ್ಥಾನ, ಪೂಜಾರಿ, ಜ್ಯೋತಿಷಿಗಳು ಸಮಸ್ಯೆಗಳನ್ನು, ಬಡತನವನ್ನು ನಿವಾರಣೆ ಮಾಡುವುದಿಲ್ಲ. ನಮ್ಮಲ್ಲಿರುವ ಶಕ್ತಿ, ಸಾಮರ್ಥ್ಯದಿಂದ ಮಾತ್ರವೇ ಉತ್ತಮ ಬದುಕು ಸಾಧ್ಯ. ಇದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಪ್ರಗತಿಯ ಕಡೆಗೆ ಹೆಜ್ಜೆ ಹಾಕಬೇಕು. ರಾಷ್ಟ್ರೀಯತೆ ಮನೋಭಾವನೆ ಮೈಗೂಡಿಸಿಕೊಂಡು ಮುನ್ನಡೆಯಬೇಕು’ ಎಂದು ಹೇಳಿದರು.

ಸಮಾವೇಶ ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾಲಯ ಎನ್‌ಎಸ್‌ಎಸ್‌ ವಿಭಾಗದ ಕಾರ್ಯಕ್ರಮ ಸಂಯೋಜನಾ ಅಧಿಕಾರಿ ಡಾ.ಕೆ.ವಿ.ಗಿರಿಧರ್, ‘ಇಂದಿನ
ಯುವಕ– ಯುವತಿಯರಲ್ಲಿ ಗುರಿಯ ಬೆನ್ನತ್ತಿ ಹೋಗುವ ಮನಸ್ಥಿತಿ ಇಲ್ಲವಾಗುತ್ತಿದೆ. ಉತ್ತಮ ಓದುಗರು ಮತ್ತು ಕೇಳುಗರು ಮಾತ್ರವೇ ಉತ್ತಮ ಭಾಷಣಕಾರರಾಗಲು, ಉತ್ತಮ ಹಂತಕ್ಕೇರಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಪೋಷಕರ ಬೆವರಿನ ಹನಿಯಲ್ಲಿ ನಮ್ಮ ವಿದ್ಯಾಭ್ಯಾಸ ಸಾಗುತ್ತಿದೆ ಎಂಬುದನ್ನು ಅರಿಯಬೇಕು. ಅತ್ಯುನ್ನತ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಉತ್ತಮ ಅಧಿಕಾರಿಗಳಾಗಬೇಕಾದರೆ ವಿದ್ಯಾರ್ಥಿ ಹಂತದಿಂದಲೇ ತಯಾರಿ ನಡೆಸಬೇಕು. ಕನಸು ಕಾಣುವುದು ಮಾತ್ರವಲ್ಲದೇ ಅದನ್ನು ಬೆನ್ನತ್ತಿ ಹೋಗಬೇಕು’ ಎಂದು ಹೇಳಿದರು.

ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಜೆಸಿಂತ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ‘ನೆಹರೂ ಯುವ ಕೇಂದ್ರವು ಯುವಕರನ್ನು ಸಂಘಟಿಸಿ ದೇಶದ ಪ್ರಗತಿಗೆ ಸಜ್ಜುಗೊಳಿಸುತ್ತಿದೆ. ಯುವಕರಿಗಾಗಿಯೇ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದು ಹೇಳಿದರು.

ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್.ತಿಮ್ಮೋಳಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜಿ.ಎಸ್‌.ಶಿವಕುಮಾರ್, ನೆಹರೂ ಯುವಕೇಂದ್ರದ ಎಂ.ಸುರೇಶ್‌, ನಾಗರಾಜ್‌ ಇದ್ದರು. ಸಮಾವೇಶದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಯುವಕ– ಯುವತಿಯರು ಭಾಗವಹಿಸಿದ್ದರು.

ನೆಹರೂ ಯುವ ಕೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕ್ರಮಬದ್ಧ ಮತದಾನದ ಶಿಕ್ಷಣ ಮತ್ತು ಮತದಾರರ ಸಹಭಾಗಿತ್ವ ಸಮಿತಿಯ ಸಹಯೋಗದಲ್ಲಿ ಈ ಸಮಾವೇಶ ಆಯೋಜಿಸಲಾಗಿತ್ತು.

* * 

‘ಬದುಕಿನ ಕಲ್ಪನೆಯಿಲ್ಲದೆ ಸೋಲು’

ಇಂದಿನ ಬಹುಪಾಲು ವಿದ್ಯಾರ್ಥಿಗಳಿಗೆ ಬದುಕಿನ ಕಲ್ಪನೆಯೇ ಇಲ್ಲವಾಗಿದೆ. ತಾವು ಆಯ್ಕೆ ಮಾಡಿಕೊಳ್ಳುವ ವಿಷಯಗಳಿಂದ ಆಗುವ ಪ್ರಯೋಜನಗಳೇನು, ಇದರಿಂದ ತಮ್ಮ ಬದುಕು ರೂಪಿತವಾಗುತ್ತದೆಯೇ ಎನ್ನುವ ಸ್ಪಷ್ಟ ಕಲ್ಪನೆಯೇ ಇಲ್ಲದೆ ಅನೇಕರು ಜೀವನದಲ್ಲಿ ಸೋಲುತ್ತಿದ್ದಾರೆ. ಮುಂದಿನ ಜೀವನದ ಕಲ್ಪನೆ ಇಟ್ಟುಕೊಂಡಾಗ ಮಾತ್ರವೇ ವಿದ್ಯಾರ್ಥಿಗಳು ಯಶಸ್ಸಿನ ಕಡೆಗೆ ಮುಖ ಮಾಡಲು ಸಾಧ್ಯ ಎಂದು ಡಾ.ಕೆ.ವಿ.ಗಿರಿಧರ್ ಸಲಹೆ ನೀಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ನಿಂತ ನೆಲೆ ಕೊನೆಗೂ ಅವರದೇ ಆಯಿತು!

ಶಿವಮೊಗ್ಗ
ನಿಂತ ನೆಲೆ ಕೊನೆಗೂ ಅವರದೇ ಆಯಿತು!

21 Jan, 2018
ಭದ್ರಾವತಿ: ವ್ಯಕ್ತಿ ಪ್ರತಿಷ್ಠೆಗೆ ಹಲವು ಸವಾಲು

ಶಿವಮೊಗ್ಗ
ಭದ್ರಾವತಿ: ವ್ಯಕ್ತಿ ಪ್ರತಿಷ್ಠೆಗೆ ಹಲವು ಸವಾಲು

20 Jan, 2018
ಸ್ವಚ್ಚ ಶಾಲೆ, ಸ್ವಚ್ಚ ಗ್ರಾಮ, ಹಸಿರು ಶಾಲೆ ಪುರಸ್ಕಾರ

ಹೊಸನಗರ
ಸ್ವಚ್ಚ ಶಾಲೆ, ಸ್ವಚ್ಚ ಗ್ರಾಮ, ಹಸಿರು ಶಾಲೆ ಪುರಸ್ಕಾರ

20 Jan, 2018

ಶಿಕಾರಿಪುರ
ವಿದೇಶಿ ಬಾನಾಡಿಗಳ ಕಲರವ

ಬಿಸಿಲು ಸಂದರ್ಭದಲ್ಲಿ ಕೆರೆಯಲ್ಲಿ ವಿಶ್ರಾಂತಿ ಪಡೆಯುವ ಹಕ್ಕಿಗಳು ಸಂಜೆ ತಮ್ಮ ಆಹಾರ ಹುಡುಕಿಕೊಂಡು ತೆರಳುತ್ತವೆ.

20 Jan, 2018
ನೂತನ ಪಿಂಚಣಿ ಯೋಜನೆ ರದ್ದುಪಡಿಸಲು ಆಗ್ರಹ

ಶಿವಮೊಗ್ಗ
ನೂತನ ಪಿಂಚಣಿ ಯೋಜನೆ ರದ್ದುಪಡಿಸಲು ಆಗ್ರಹ

19 Jan, 2018