ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ತಿನಿಸು ರುಚಿ ನೋಡಿದ ಮಲೆನಾಡಿಗರು

Last Updated 23 ಡಿಸೆಂಬರ್ 2017, 5:57 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಮೆಯ ಪೊಂಗಲ್, ಊದಲಿನ ಪಾಯಸ, ಹಾರಕದ ಮೊಸರನ್ನ, ರಾಗಿ ಖಾರ, ಬರಗಲಿನ ಮೈಸೂರು ಪಾಕ್ ತಿನಿಸುಗಳನ್ನು ಕೆಲವರು ರುಚಿ ನೋಡಿದರು. ಇನ್ನೂ ಕೆಲವರು ರಾಗಿ ಬಿಸ್ಕತ್ತು, ಸಿರಿಧಾನ್ಯಗಳನ್ನು ಖರೀದಿಸಿದರು. ಇವು ಕುವೆಂಪು ರಂಗಮಂದಿರದ ಆವರಣದಲ್ಲಿ ಎರಡು ದಿನ ಆಯೋಜನೆಗೊಂಡಿದ್ದ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಕಂಡುಬಂದ ದೃಶ್ಯಗಳು.

ಮೇಳದಲ್ಲಿ ಶಿವಮೊಗ್ಗ ನಗರ ಸೇರಿದಂತೆ ದೂರದ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ತುಮಕೂರು ಜಿಲ್ಲೆಗಳಿಂದ ಬಂದಿದ್ದ ಕೃಷಿಕರು ಒಟ್ಟು 60 ಮಳಿಗೆಗಳಲ್ಲಿ ಸಾವಯವ ಗೊಬ್ಬರ ಮತ್ತು ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು.

ಸಿರಿಧಾನ್ಯ, ಸಾವಯವ ಗೊಬ್ಬರದ ಬಗ್ಗೆ ಅರಿವು: ಕೃಷಿ ಮತ್ತು ತೋಟಗಾರಿಕೆ ಇಲಾಖೆಯು ಸಾರ್ವಜನಿಕರಿಗೆ ಸಿರಿಧಾನ್ಯಗಳ ಮತ್ತು ಸಾವಯವ ಗೊಬ್ಬರದ ಬಗ್ಗೆ ಅರಿವು ಮೂಡಿಸಲು ವಿವಿಧ ರೀತಿಯ ಭತ್ತ, ರಾಗಿ ತಳಿಗಳನ್ನು, ಸಿರಿಧಾನ್ಯಗಳನ್ನು ಪ್ರದರ್ಶನದಲ್ಲಿಡಲಾಗಿತ್ತು. ಅಲ್ಲದೆ ಸಾವಯವ ಗೊಬ್ಬರ, ಹಸಿರು ಎಲೆ ಗೊಬ್ಬರ, ಎರೆಹುಳು ಗೊಬ್ಬರ, ಜಪಾನ್ ಮಾದರಿಯ ಕಾಂಪೋಸ್ಟ್ ತಯಾರಿಕೆ ಕುರಿತ ಮಾಹಿತಿ ಚಿತ್ರಪಟಗಳನ್ನು ಇರಿಸಲಾಗಿತ್ತು.

ಜೇನು ಕೃಷಿಗೆ ಬಳಸುವ ಜೇನು ತೆಗೆಯುವ ಯಂತ್ರ, ಜೇನು ರಕ್ಷಣಾ ಉಡುಪು, ಮುಖ ಪರದೆ, ಮೇಣದ ಹಾಳೆ, ಕೈಕವಚ, ಹೊಗೆ ತಿದಿ, ಜೇನುತುಪ್ಪವನ್ನು ಪ್ರದರ್ಶಿಸಲಾಗಿತ್ತು. ಮೇಳದಲ್ಲಿ ಏನೆಲ್ಲಾ ಇದ್ದವು?: ರೈತರು ತಾವೇ ಬೆಳೆದ ಕೆಂಪು ಅಕ್ಕಿ, ಆರ್ಕ, ಕೊರಲೆ, ಸಜ್ಜೆ ಸಿರಿಧಾನ್ಯ, ಸಜ್ಜೆ ಮತ್ತು ಜೀರಿಗೆ, ರಾಗಿ ಬಿಸ್ಕೆಟ್, ರಾಗಿಯ ಚಕ್ಕುಲಿ, ಲಾಡು, ಸಜ್ಜೆ ರೊಟ್ಟಿ, ವಿವಿಧ ರೀತಿಯ ಚಟ್ನಿ ಪುಡಿಗಳು, ಜೋನಿಬೆಲ್ಲ, ಖಾರ, ಉಪ್ಪಿನಕಾಯಿಯನ್ನು ನೇರ ಮಾರಾಟ ಮಾಡಿದರು.

ವಿಶೇಷವಾಗಿ ರೈತರೊಬ್ಬರು ಸ್ವತಃ ತಯಾರಿಸಿದ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಜಾಮ್, ಲೇಹ್ಯ, ಅರಿಷ್ಟ, ನೆಲ್ಲಿ ಕ್ಯಾಂಡಿ, ನೆಲ್ಲಿ ಸುಪಾರಿ, ಹೇರ್ ಆಯಿಲ್, ಚ್ಯವನ್ ಪ್ರಾಶ್ ಪ್ರದರ್ಶನದಲ್ಲಿ ಕಂಡು ಬಂದವು. ಇವುಗಳಲ್ಲದೆ ಕೈಮಗ್ಗದ ಉತ್ಪನ್ನಗಳು, ತಿಂಡಿಗಳ ಮಳಿಗೆಗಳು ಇದ್ದವು.

ಹರಿಹರ ತಾಲ್ಲೂಕಿನ ನಿಟ್ಟೂರು ಗ್ರಾಮದ ಸರೋಜಾ ಅವರು ಎಲ್ಲಾ ಸಿರಿಧಾನ್ಯಗಳಲ್ಲಿಯೂ ಆಹಾರ ಪದಾರ್ಥ ತಯಾರಿಸಿದ್ದರು. ರಾಗಿ ಶ್ಯಾವಿಗೆ, ಸಾಮೆ ಹಪ್ಪಳ, 33 ಬಗೆಯ ಸಿರಿಧಾನ್ಯಗಳಿಂದ ತಯಾರಿಸಿದ ಪೌಡರ್ ತಯಾರಿಸಿ ತಂದಿದ್ದರು. ಈ ಭಾಗದಲ್ಲಿ ಸಿರಿಧಾನ್ಯಗಳ ಉಪಯೋಗದ ಬಗ್ಗೆ ಅರಿವು ಕಡಿಮೆ ಇರುವ ಕಾರಣ ಪದಾರ್ಥ ಕೊಂಡುಕೊಳ್ಳಲು ಆಲೋಚಿಸುತ್ತಾರೆ ಎಂಬುದು ಅವರ ಅಭಿಪ್ರಾಯ.

ಸಿರಿಧಾನ್ಯಗಳು ಸಾಕಷ್ಟು ಪೋಷಕಾಂಶ ಹೊಂದಿದ್ದು, ದೇಹದಲ್ಲಿ ನಿಧಾನವಾಗಿ ಪೋಷಕಾಂಶ ಬಿಡುಗಡೆ ಮಾಡುತ್ತವೆ. ಮಧುಮೇಹ, ರಕ್ತದೊತ್ತಡ, ಹೃದಯಾಘಾತ ನಿಯಂತ್ರಣಕ್ಕೆ ಬರುತ್ತವೆ. ಆದ್ದರಿಂದ ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಗೃಹಿಣಿ ಸುಧಾ ಹೇಳುತ್ತಾರೆ.

ಸಿರಿಧಾನ್ಯಗಳನ್ನು ಬೆಳೆಯಲು ಅಧಿಕ ಶ್ರಮ ಬೇಕು. ಇಳುವರಿ ಕಡಿಮೆ ಬರುತ್ತದೆ. ರಾಸಾಯನಿಕ ಬಳಸದೆ ಇರುವ ಕಾರಣ ಬೆಲೆ ಅಧಿಕವಾಗಿರುತ್ತದೆ. ಆದರೆ, ಸಾರ್ವಜನಿಕರಿಗೆ ಇದರ ಉಪಯೋಗಗಳ ಬಗ್ಗೆ ಹೆಚ್ಚು ತಿಳಿಸಬೇಕಿದೆ ಎಂದು ಹೂವಿನ ಹಡಗಲಿಯ ರೈತ ಕಲ್ಲಪ್ಪ ಹೇಳುತ್ತಾರೆ.

ರೈತರು ಬೆಳೆದ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೆ ನೇರ ಮಾರಾಟ ಮಾಡಿದರೆ ಕೃಷಿಕರಿಗೆ ಲಾಭವಾಗುತ್ತದೆ. ಗ್ರಾಹಕರಿಗೂ ನಷ್ಟವಾಗುವುದಿಲ್ಲ. ಆದ್ದರಿಂದ ರೈತರು ನೇರ ಮಾರಾಟ ಮಾಡಬೇಕು ಎನ್ನುತ್ತಾರೆ ಹೊಳಲ್ಕೆರೆಯ ರೈತ ಸಿದ್ದವೀರಪ್ಪ.

* * 

ಸಿರಿಧಾನ್ಯ ಮೇಳ ವೈವಿಧ್ಯದಿಂದ ಕೂಡಿತ್ತು. ಸಿರಿಧಾನ್ಯ, ರಾಗಿಯ ತಳಿಗಳನ್ನು ನಾವು ನೋಡಿರಲಿಲ್ಲ. ಇಂತಹ ಹಳೆ ತಳಿಗಳನ್ನು ರೈತರು ಉಳಿಸಬೇಕಿದೆ.
ನಟರಾಜ್, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT