ಚಿಕ್ಕಜಾಜೂರು

ಅಂತಾಪುರ: ಮುಯ್ಯಾಳಿನ ಸಹಕಾರ ಒಕ್ಕಣೆ

ಆಧುನಿಕ ಉಪಕರಣಗಳ ಆವಿಷ್ಕಾರಗಳಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ಕಣ್ಮರೆಯಾಗುತ್ತಿದೆ. ಬೆಳೆದ ಫಸಲನ್ನು ಕೊಯ್ದು ರಸ್ತೆಗಳ ಮೇಲೆಯೇ ಒಕ್ಕಣೆ ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ.

ಚಿಕ್ಕಜಾಜೂರು ಸಮೀಪದ ಅಂತಾಪುರ ಗ್ರಾಮದ ರೈತರು ಕೆರೆ ಅಂಗಳದಲ್ಲಿ ಟ್ರ್ಯಾಕ್ಟರ್‌ನಿಂದ ತುಳಿಸಿದ ಹುಲ್ಲಿನಿಂದ ರಾಗಿ ಕಾಳನ್ನು ಬೇರ್ಪಡಿಸುತ್ತಿರುವುದು

ಚಿಕ್ಕಜಾಜೂರು: ಆಧುನಿಕ ಉಪಕರಣಗಳ ಆವಿಷ್ಕಾರಗಳಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ಕಣ್ಮರೆಯಾಗುತ್ತಿದೆ. ಬೆಳೆದ ಫಸಲನ್ನು ಕೊಯ್ದು ರಸ್ತೆಗಳ ಮೇಲೆಯೇ ಒಕ್ಕಣೆ ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ.

ಇದರ ನಡುವೆಯೂ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿಯ ಕೆಲವು ಗ್ರಾಮಗಳಲ್ಲಿ ಮುಯ್ಯಾಳು ಸಹಕಾರದಿಂದ ಒಕ್ಕಣೆ ಮಾಡುವ ಅಪರೂಪದ ಚಿತ್ರಣಗಳು ಕಂಡು ಬರುತ್ತವೆ. ಅಂತಾಪುರ ಗ್ರಾಮದಲ್ಲಿ ನಾಲ್ಕು ವರ್ಷಗಳಿಂದ ಮಳೆಯಾಗದೇ ಕೆರೆಯಲ್ಲಿ ನೀರಿಲ್ಲ. ಹೀಗಾಗಿ ಗ್ರಾಮದ ರೈತರು ಕೆರೆ ಅಂಗಳವನ್ನೇ ಕಣವನ್ನಾಗಿ ಮಾಡಿಕೊಂಡು ಸುಗ್ಗಿ ಮಾಡುತ್ತಿದ್ದಾರೆ.

ಸಾಮೂಹಿಕ ಒಕ್ಕಣೆ: ಗ್ರಾಮದ ಸುಮಾರು 40 ರೈತರು ಕೆರೆ ಅಂಗಳದಲ್ಲಿ ಸಾಮೂಹಿಕ ಒಕ್ಕಣೆ ಮಾಡುತ್ತಿದ್ದಾರೆ. ವಿಶಾಲವಾದ ಕೆರೆ ಅಂಗಳದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು, ನೆಲವನ್ನು ಸಮತಟ್ಟು ಮಾಡಿದರು. ಎತ್ತುಗಳಿಂದ ನೆಲವನ್ನು ತುಳಿಸಿ, ನಂತರ ಸಗಣಿಯಿಂದ ಸಾರಿಸಿ, ಅರಲು ಕಣಗಳನ್ನು ಮಾಡಿದ್ದಾರೆ. ಕೊಯ್ಲು ಮಾಡಿದ ರಾಗಿ ಹುಲ್ಲನ್ನು ಸುತ್ತಲೂ ಹಾಕಿ, ಟ್ರ್ಯಾಕ್ಟರ್‌ಗಳಿಂದ ಹುಲ್ಲನ್ನು ತುಳಿಸುತ್ತಿದ್ದಾರೆ.

ಸಹಕಾರ ತತ್ವದಲ್ಲಿ ಒಬ್ಬರ ಹುಲ್ಲು ತುಳಿಸುವುದು ಮುಗಿದ ನಂತರ, ಕಾರ್ಮಿಕರು ಮತ್ತು ರೈತರು ಮೆರೆಗಳಿಂದ ಹುಲ್ಲನ್ನು ಕೆದರಿ, ರಾಗಿ ಕಾಳುಗಳನ್ನು ಬೇರ್ಪಡಿಸುತ್ತಿದ್ದಾರೆ. ನಂತರ, ನಂತರ ಸ್ವಲ್ಪ ಕಾಲ ಮತ್ತೊಮ್ಮೆ ಟ್ರ್ಯಾಕ್ಟರ್‌ಗಳಿಂದ ಹುಲ್ಲನ್ನು ತುಳಿಸಿ, ಅದನ್ನು ಕೊಡವಿ ಟ್ರ್ಯಾಕ್ಟರ್‌ಗೆ ತುಂಬಿ ಸಾಗಿಸಲಾಗುತ್ತಿದೆ.

ಹುಲ್ಲಿನಿಂದ ಬೇರ್ಪಟ್ಟ ರಾಗಿ ಕಾಳು ಮಿಶ್ರಿತ ತೆನೆಯ ಪುಡಿಯ ಗಾಬನ್ನು ಒಂದೆಡೆ ರಾಶಿ ಹಾಕಿ ಮಹಿಳೆಯರು ಹಾಗೂ ಪುರುಷರು ಅದನ್ನು ಗಾಳಿಗೆ ಎದುರಾಗಿ ತೂರುತ್ತಾರೆ. ಕಸ–ಕಡ್ಡಿಗಳನ್ನು ಬೇರ್ಪಡಿಸಿದ ಬಳಿಕ ರಾಗಿ ಕಾಳನ್ನು ಒಂದೆಡೆ ರಾಶಿ ಹಾಕುತ್ತಾರೆ. ಮಹಿಳಾ ಮತ್ತು ಪುರುಷ ಕೃಷಿ ಕಾರ್ಮಿಕರಿಗೆ ದಿನಕ್ಕೆ ಕ್ರಮವಾಗಿ ₹ 150 ಹಾಗೂ ₹ 350 ಕೂಲಿ ನೀಡಲಾಗುತ್ತಿದೆ.

‘ಗಂಡಸರು ಹುಲ್ಲನ್ನು ಹಾಕುವುದು, ತುಳಿಸಿದ ಹುಲ್ಲನ್ನು ಕೊಡವಿ ಕಣದಿಂದ ಹೊರಗೆ ಹಾಕುವ ಕೆಲಸ ಮಾಡುತ್ತಾರೆ. ಗಾಳಿ ಬಂದಾಗ ತೂರಿ ಕಾಳನ್ನು ಕಸಕಡ್ಡಿಗಳಿಂದ ಬೇರ್ಪಡಿಸುತ್ತೇವೆ. ಗಾಳಿ ಇದ್ದಾಗ ಮಾತ್ರ ನಮಗೆ ಕೆಲಸ. ರಾತ್ರಿ ದೀಪ ಹಾಕಿಕೊಂಡೂ ಕಾಳನ್ನು ತೂರಿಕೊಡುತ್ತೇವೆ. ಬೆಳಿಗ್ಗೆ ಮನೆಯಿಂದ ಊಟ ಮಾಡಿಕೊಂಡು ಬಂದರೆ, ಮಧ್ಯಾಹ್ನದ ಊಟವನ್ನು ರೈತರ ಮನೆಯವರು ಕೊಡುತ್ತಾರೆ’ ಎಂದು ಕೃಷಿ ಕಾರ್ಮಿಕರಾದ ಸುಶೀಲಮ್ಮ, ಪಾರಕ್ಕ, ಗೀತಮ್ಮ, ಸುಮಿತ್ರಮ್ಮ, ದಾಕ್ಷಾಯಣಮ್ಮ ಮಾಹಿತಿ ನೀಡಿದರು.

ಸಹಕಾರ ತತ್ವ: ‘ನಾವು ಕರೆಸಿಕೊಂಡ ಕೂಲಿಗಳನ್ನು ಪಕ್ಕದ ರೈತರ ಕೆಲಸಗಳಿಗೂ ಕಳುಹಿಸಿಕೊಡುತ್ತೇವೆ. ಅವರ ಕೆಲಸ ಮುಗಿದ ನಂತರ ನಮ್ಮ ಕಣಕ್ಕೆ, ನಮ್ಮ ಕೆಲಸ ಮುಗಿದ ನಂತರ ಬೇರೆ ರೈತರ ಕೆಲಸ ಮಾಡಿಕೊಡುತ್ತಾರೆ. ಹಗಲಿನಲ್ಲಿ ಒಂದಿಬ್ಬರು ರೈತರ ರಾಗಿ ತೂರುವುದು ಮುಗಿದರೆ, ರಾತ್ರಿ, ದೀಪದ ಬೆಳಕಲ್ಲಿ ಇಬ್ಬರು ಅಥವಾ ಮೂವರು ರೈತರ ರಾಗಿಯನ್ನು ತೂರುತ್ತಾರೆ. ಗ್ರಾಮದ ರೈತರು ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿರುವುದರಿಂದ ವಾರದಲ್ಲಿ ಸುಗ್ಗಿ ಮುಗಿಯಬಹುದು. ನಮ್ಮ ಗ್ರಾಮದ ರೈತರ ಸುಗ್ಗಿ ಮುಗಿದ ನಂತರ ಸಮೀಪದ ಹಿರೇಎಮ್ಮಿಗನೂರು ಗ್ರಾಮದ ರೈತರೂ ಇಲ್ಲಿಗೆ ಹುಲ್ಲನ್ನು ತಂದು ಸುಗ್ಗಿ ಮಾಡಿಕೊಳ್ಳುತ್ತಾರೆ’ ಎಂದು ರೈತರಾದ ರೇವಣ ಸಿದ್ದಪ್ಪ, ದ್ಯಾಮಳ್ಳರ ಲೋಕೇಶಪ್ಪ, ಪೂಜಾರಿ ಕರಿಬಸಪ್ಪ, ಕೆಂಚಪ್ಪರ ಬಸಪ್ಪ, ದ್ಯಾಮಣ್ಣರ ಕರಿಬಸಪ್ಪ, ಚನ್ನಾನಾಯ್ಕ, ದೇವರಾಜಪ್ಪ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಭರಮಸಾಗರ: 45.2 ಮಿಮೀ ಮಳೆ ದಾಖಲು

ಚಿತ್ರದುರ್ಗ
ಭರಮಸಾಗರ: 45.2 ಮಿಮೀ ಮಳೆ ದಾಖಲು

17 Mar, 2018

ಹೊಸದುರ್ಗ
ಹೊಸದುರ್ಗ: ಅಭಿವೃದ್ಧಿ ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಗ್ರಹ

ತಾಲ್ಲೂಕಿನಲ್ಲಿ ₹ 4,200 ಕೋಟಿ ಅಭಿವೃದ್ಧಿ ಕಾಮಗಾರಿ ಆಗಿರುವ ಬಗ್ಗೆ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಶ್ವೇತಪತ್ರ ಹೊರಡಿಸಬೇಕು ಎಂದು ಎಸ್‌ಆರ್‌ಎಸ್‌ ಫೌಡೇಷನ್‌ ಮುಖ್ಯಸ್ಥ ಎ.ಆರ್‌.ಶಮಂತ್‌...

17 Mar, 2018
ಜಟ್ಟಂಗಿ ರಾಮೇಶ್ವರ ಜಾತ್ರೆಗೆ ಸಿದ್ಧತೆ

ಮೊಳಕಾಲ್ಮುರು
ಜಟ್ಟಂಗಿ ರಾಮೇಶ್ವರ ಜಾತ್ರೆಗೆ ಸಿದ್ಧತೆ

17 Mar, 2018

ಮೊಳಕಾಲ್ಮುರು
ರಾಯಾಪುರ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ತಾಲ್ಲೂಕಿನ ರಾಯಾಪುರ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

17 Mar, 2018
ಭದ್ರಾ ಮೇಲ್ದಂಡೆಗೆ ಹಣದ ಕೊರತೆಯಿಲ್ಲ: ಸಿದ್ದರಾಮಯ್ಯ

ಚಿತ್ರದುರ್ಗ
ಭದ್ರಾ ಮೇಲ್ದಂಡೆಗೆ ಹಣದ ಕೊರತೆಯಿಲ್ಲ: ಸಿದ್ದರಾಮಯ್ಯ

16 Mar, 2018