ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಕೈಗೆ ಕಲ್ಲು ಕೊಡುವವರ ಕೈ ಮುರಿಯಬೇಕು’

Last Updated 24 ಡಿಸೆಂಬರ್ 2017, 6:31 IST
ಅಕ್ಷರ ಗಾತ್ರ

ಸಿದ್ದಾಪುರ: ‘ಉತ್ತರ ಕನ್ನಡ ಸುಸಂಸ್ಕೃತ ಜನರ ಜಿಲ್ಲೆ. ಇಲ್ಲಿಯ ಜನರು ಬಡವರಿರಬಹುದು. ಆದರೆ ಗಲಾಟೆ, ಗಲಭೆ ಮಾಡುವವರಲ್ಲ. ಮಕ್ಕಳ ಕೈಯಲ್ಲಿ ಪೆನ್‌ ಇರಬೇಕು. ಮಕ್ಕಳ ಕೈಗೆ ಕಲ್ಲು ನೀಡಬಾರದು. ಕಲ್ಲು ಕೊಡುವವರ ಕೈ ಮುರಿಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಕಲಿತ ತಾಲ್ಲೂಕಿನ ದೊಡ್ಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಶೇಷ ಶಾಲಾಭಿವೃದ್ಧಿ ಯೋಜನೆಯಡಿ ಮಂಜೂರಾದ ₹ 36.28 ಲಕ್ಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾದ ಕೊಠಡಿ ಕಾಮಗಾರಿಗಳನ್ನು ಶನಿವಾರ ಪರಿಶೀಲಿಸಿ ಮಾತನಾಡಿದ ಅವರು, ‘ಹೊಡಿ, ಬಡಿ, ಬೆಂಕಿ ಹಚ್ಚು ಎಂಬುದಕ್ಕೆ ಉತ್ತೇಜನ ನೀಡಕೂಡದು. ಈ ರೀತಿ ಮಾಡುವವರಿಗೆ ಜನರು ಉತ್ತರ ಹೇಳಬೇಕು.

ಕಾನೂನು ಕೈಗೆ ತೆಗೆದುಕೊಳ್ಳುವವರಿಗೆ ಶಿಕ್ಷೆ ಆಗಬೇಕು. ಪ್ರಗತಿ ಮಾಡಲು, ಸಾಮಾಜಿಕ ನ್ಯಾಯ ನೀಡಲು, ಬಡವರ, ರೈತರ ಪರ ಕಾರ್ಯಕ್ರಮ ಮಾಡಲು ಸಾಧ್ಯವಾಗದಿದ್ದಾಗ ಇಂತಹ ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ. ಜಾತಿ, ಜಾತಿಯ ಮಧ್ಯೆ ಮತ್ತು ಧರ್ಮ, ಧರ್ಮದ ಮಧ್ಯೆ ಬೆಂಕಿ ಹಚ್ಚಿ ಏನು ಸಾಧನೆ ಮಾಡುತ್ತೀರಿ?’ ಎಂದು ಪ್ರಶ್ನಿಸಿದರು.

‘ಎನ್‌ಡಿಎ ಸರ್ಕಾರ ದೇಶದಲ್ಲಿ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು. ಆದರೆ ದೇಶದಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ. ನಾವು (ರಾಜ್ಯ ಸರ್ಕಾರ) ಹೊಸ ಕೈಗಾರಿಕಾ ನೀತಿಯ ಅನುಸಾರ 2019ರ ಮಾರ್ಚ್‌ವರಿಗೆ 15 ಲಕ್ಷ ಉದ್ಯೋಗ ಸೃಷ್ಟಿ ಮಾಡುವದಾಗಿ ಹೇಳಿದ್ದೆವು. 2017ರ ಸೆಪ್ಟೆಂಬರ್ ವರೆಗೆ 14 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದೇವೆ’ ಎಂದರು. ‘ರಾಮಕೃಷ್ಣ ಹೆಗಡೆ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ ನಾಯಕರು. ಅವರು ದೂರದರ್ಶಿತ್ವ ಹೊಂದಿದವರಾಗಿದ್ದರು’ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಸುಮತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯ ವಿವೇಕ ಭಟ್ಟ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶ್ರೀಧರ ಭಟ್ಟ, ಸಾಮಾಜಿಕ ಕಾರ್ಯಕರ್ತರಾದ ಎಸ್.ಬಿ.ಗೌಡ ಕಲ್ಲೂರು, ಶಶಿಭೂಷಣ ಹೆಗಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ಟಿ. ನಾಯ್ಕ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ನಾಗರಾಜ, ಎಸ್‌ಡಿಎಂಸಿ ಅಧ್ಯಕ್ಷ ಕೇಶವ ಹೆಗಡೆ ಇದ್ದರು. ಡಿ.ಆರ್. ನಾಯ್ಕ ಸ್ವಾಗತಿಸಿದರು. ಎಂ.ಐ. ಹೆಗಡೆ ಸ್ವಾಗತಿಸಿದರು.

ಶಶಿಭೂಷಣ ಮನೆಗೆ ಭೇಟಿ
ಸಿದ್ದಾಪುರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಾಲ್ಲೂಕಿನ ದೊಡ್ಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯಕ್ರಮಕ್ಕೆ ಬರುವ ಮೊದಲು ಪಟ್ಟಣದಲ್ಲಿರುವ ಜೆಡಿಎಸ್ ಧುರೀಣ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಹೇಳಲಾಗಿರುವ ಶಶಿಭೂಷಣ ಹೆಗಡೆ ಅವರ ಮನೆಗೆ ಭೇಟಿ ನೀಡಿದರು.

ಈ ಬಗ್ಗೆ ದೇಶಪಾಂಡೆ ಅವರನ್ನು ಪ್ರಶ್ನೆ ಮಾಡಿದಾಗ, ‘ಇದರಲ್ಲಿ ರಾಜಕೀಯ ತರಬೇಡಿ. ನನಗೆ ರಾಜಕೀಯ ಎಂಬುದು ದಂಧೆ ಅಲ್ಲ. ಶಶಿಭೂಷಣ ಹೆಗಡೆ ಅವರ ಮನೆಯಲ್ಲಿ ಅಮ್ಮ (ಗಣೇಶ ಹೆಗಡೆ ಅವರ ಪತ್ನಿ) ಇದ್ದಾರೆ. ಶಶಿ ನನಗೆ ಮಗ ಇದ್ದ ಹಾಗೆ. ಆದ್ದರಿಂದ ಅವರನ್ನು ನೋಡಲು ಹೋಗಿದ್ದೆ. ನನಗೆ ಎಸ್‌.ಎಂ.ಕೃಷ್ಣ ಸೇರಿದಂತೆ ಹಲವು ಬೇರೆ ಪಕ್ಷಗಳ ರಾಜಕೀಯ ಧುರೀಣರೊಂದಿಗೆ ಉತ್ತಮ ಸಂಬಂಧ ಇದೆ’ ಎಂದು ಪ್ರತಿಕ್ರಿಯೆ ನೀಡಿದರು.

* * 

ನಾನು ಹಲವು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ.ಸಿದ್ದರಾಮಯ್ಯ ಒಳ್ಳೆ ಮುಖ್ಯಮಂತ್ರಿ. ರಾಜ್ಯದಲ್ಲಿ ಯಾವುದೇ ಮುಖ್ಯಮಂತ್ರಿ ಕೂಡ ಗಲಭೆ, ಗಲಾಟೆಗೆ ಉತ್ತೇಜನ ನೀಡಿಲ್ಲ.
ಆರ್.ವಿ.ದೇಶಪಾಂಡೆ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT