ದಾವಣಗೆರೆ

ಜನವರಿ 15ರ ಒಳಗೆ ಲ್ಯಾಪ್‌ಟಾಪ್‌

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ‍ಪಂಗಡದ ವಿದ್ಯಾರ್ಥಿಗಳಿಗೆ ಜನವರಿ 15ರ ಒಳಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗುವುದು

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ‍ಪಂಗಡದ ವಿದ್ಯಾರ್ಥಿಗಳಿಗೆ ಜನವರಿ 15ರ ಒಳಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು. ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಈಗಾಗಲೇ ತೀರ್ಮಾನಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ 36 ಸಾವಿರ ವಿದ್ಯಾರ್ಥಿಗಳಿಗೆ ಮೊದಲ ಹಂತವಾಗಿ ಲ್ಯಾಪ್‌ಟಾಪ್‌ ವಿತರಿಸಲಾಗುವುದು. ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಸಾಮಾನ್ಯ ವರ್ಗದ 1.50 ಲಕ್ಷ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್‌ ವಿತರಿಸಲು ನಿರ್ಧರಿಸಲಾಗಿದೆ. ವಿಶ್ವದರ್ಜೆಯ ಗುಣಮಟ್ಟದ ಪೆಂಟಿಯಮ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌ ಹೊಂದಿರುವ ಲ್ಯಾಪ್‌ಟಾಪ್‌ಗಳನ್ನೇ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್ ವಿತರಿಸುವ ಚಿಂತನೆ ಸರ್ಕಾರದ್ದು. ಈ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೆಲವು ಫ್ಯಾಸಿಸ್ಟ್ ಮನಸ್ಸುಗಳು ಈ ಯೋಜನೆಯನ್ನು ವಿರೋಧಿಸಿವೆ. ಒಳ್ಳೆಯ ಕೆಲಸ ಮಾಡುವಾಗ ಆಪಾದನೆಗಳು ಸಹಜ. ಇಂತಹ ಕೀಳುಮಟ್ಟದ ಆರೋಪಗಳಿಗೆ ಸರ್ಕಾರ ಅವಕಾಶ ಕೊಡುವುದಿಲ್ಲ. ಅನ್ಯಾಯ ಕಂಡವರು ನ್ಯಾಯಾಲಯಕ್ಕೆ ಹೋಗಬಹುದು’ ಎಂದು ತೀಕ್ಷ್ಣವಾಗಿ ನುಡಿದರು.

ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ: ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ಚಿಂತನೆ ನಡೆಸಿದೆ. ವಿದ್ಯಾರ್ಥಿನಿಯರ ಬೋಧನಾ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಮಾಹಿತಿ ನೀಡಿದರು.

‘ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಹೆಚ್ಚಿನ ರ‍್ಯಾಂಕ್‌ ಗಳಿಸಿ, ಚಿನ್ನದ ಪದಕ ಪುರಸ್ಕೃತ ವಿದ್ಯಾರ್ಥಿನಿಯರ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ. ಆದರೆ, ಸರ್ಕಾರ ಅವರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂದು ಸಲಹೆ ನೀಡಲು ಸಮಿತಿಯೊಂದನ್ನು ರಚಿಸಲಾಗುವುದು’ ಎಂದು ಹೇಳಿದರು.

ಮಲ್ಲಾಡಿಹಳ್ಳಿಯಲ್ಲಿ ವಸತಿಯುತ ಕಾಲೇಜು: ವಸತಿ ಶಾಲೆ ಮಾದರಿಯಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊದಲ ಹಂತವಾಗಿ 16 ವಸತಿಯುತ ಪ್ರಥಮ ದರ್ಜೆ ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈಗಾಗಲೇ ಕಾಲೇಜುಗಳ ಕಟ್ಟಡ ಕಾಮಗಾರಿಗೆ ತಲಾ ₹ 25 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊಳಲ್ಕೆರೆಯ ಮಲ್ಲಾಡಿಹಳ್ಳಿಯಲ್ಲಿ ವಸತಿಯುತ ಕಾಲೇಜು ಸ್ಥಾಪಿಸಲಾಗುವುದು ಎಂದರು.

ಕೌಶಲ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ: ಓದಿದವರಿಗೆಲ್ಲಾ ಉದ್ಯೋಗ ನೀಡಲು ಸಾಧ್ಯವಿಲ್ಲ. ಆದರೂ ಪದವಿಧರರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಅಲ್ಲದೇ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಕಾರದಲ್ಲಿ ದಾವಣಗೆರೆಯಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ನೀರಿನಿಂದಲೇ ದೀಪ ಬೆಳಗಿಸುವ ಪವಾಡ

ಮಾಯಕೊಂಡ
ನೀರಿನಿಂದಲೇ ದೀಪ ಬೆಳಗಿಸುವ ಪವಾಡ

20 Mar, 2018

ದಾವಣಗೆರೆ
₹ 4,549 ಕೋಟಿ ಸಾಲ ವಿತರಣೆ ಗುರಿ

ಲೀಡ್‌ ಬ್ಯಾಂಕ್‌ 2018–19ನೇ ಸಾಲಿನಲ್ಲಿ ಒಟ್ಟು ₹ 4,549.34 ಕೋಟಿ ಸಾಲ ವಿತರಣೆಯ ಗುರಿ ಹೊಂದಿದೆ ಎಂದು ಲೀಡ್‌ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಎನ್‌.ಟಿ....

20 Mar, 2018
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ

ದಾವಣಗೆರೆ
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ

19 Mar, 2018
‘ಕುಡಿಯುವ ನೀರಿಗೆ ಸರ್ಕಾರದ ಬಳಿ ಹಣವಿಲ್ಲವೇ’

ದಾವಣಗೆರೆ
‘ಕುಡಿಯುವ ನೀರಿಗೆ ಸರ್ಕಾರದ ಬಳಿ ಹಣವಿಲ್ಲವೇ’

17 Mar, 2018
ಹಣ ಚಲಾವಣೆ ಬಗ್ಗೆ ವಿಶೇಷ ನಿಗಾ ಇಡಿ

ದಾವಣಗೆರೆ
ಹಣ ಚಲಾವಣೆ ಬಗ್ಗೆ ವಿಶೇಷ ನಿಗಾ ಇಡಿ

17 Mar, 2018