ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೆ ಇಣುಕುವ ನವಿಲುಗಳು

Last Updated 25 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಈ ಊರಿನಲ್ಲಿ ಬೆಳಿಗ್ಗೆ ಕೋಳಿ ಕೂಗುತ್ತಿದ್ದಂತೆ ನವಿಲುಗಳು ಸುತ್ತಾಡಲು ಶುರು ಮಾಡುತ್ತವೆ. ಜನರನ್ನು ಕಂಡ ಕೂಡಲೇ ಗರಿಬಿಚ್ಚಿ ನಾಟ್ಯವಾಡುತ್ತವೆ. ಊರಿನಲ್ಲಿ ಮನಷ್ಯರೊಟ್ಟಿಗೇ ಒಂದಾಗಿ ಬದುಕುತ್ತಿವೆ.

ಮನುಷ್ಯ ಮತ್ತು ಪ್ರಾಣಿಗಳ ನಡುವೆ ನಿತ್ಯ ಸಂಘರ್ಷ ನಡೆಯುತ್ತಿದೆ. ಪ್ರಾಣಿಗಳ ಪಥವನ್ನು ಮನುಷ್ಯ ಆಕ್ರಮಿಸಿಕೊಂಡಿದ್ದಾನೆ. ಇದರಿಂದಾಗಿ ಪ್ರಾಣಿಗಳು ತಮ್ಮ ಅಸ್ತಿತ್ವಕ್ಕೆ ಸಂಘರ್ಷ ನಡೆಸುತ್ತಿವೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮೂತನೂರು ಗ್ರಾಮ. ಇಲ್ಲಿ ನವಿಲುಗಳು ಮನುಷ್ಯನೊಂದಿಗೆ ಬಾಂಧವ್ಯ ಬೆಳೆಸಿಕೊಂಡಿವೆ.

ಮೂತನೂರು ಕರ್ನಾಟಕ ಮತ್ತು ತಮಿಳುನಾಡಿನ ಗಡಿಯ ಗ್ರಾಮ. ಈ ಗ್ರಾಮದ ಸುತ್ತಲೂ ದಟ್ಟ ಅರಣ್ಯವಿದೆ. ಅರಣ್ಯದಲ್ಲಿ ಆನೆಗಳು, ಕರಡಿ, ಚಿರತೆ, ಕಾಡು ಹಂದಿ, ಹೆಬ್ಬಾವು ಮತ್ತು ನವಿಲುಗಳು ವಾಸಿಸುತ್ತಿವೆ.

ಆಗಾಗ ಆನೆಗಳು, ಕರಡಿ ಮತ್ತು ಕಾಡುಹಂದಿಗಳು ರೈತರ ಬೆಳೆಗಳಿಗೆ ದಾಳಿ ಮಾಡುತ್ತವೆ. ವನ್ಯ ಜೀವಿಗಳ ದಾಳಿಯಿಂದ ಬೆಳೆ ರಕ್ಷಣೆ ಮಾಡಲು ರೈತರು ಹರಸಾಹಸ ಪಡುತ್ತಾರೆ. ಈ ಪ್ರದೇಶದಲ್ಲಿ ನವಿಲುಗಳು ಹೆಚ್ಚಾಗಿ ವಾಸ ಮಾಡುತ್ತಿವೆ. ಕಾಡಿನಿಂದ ಆಗಮಿಸುವ ನವಿಲುಗಳು ರೈತರ ಹೊಲ ಗದ್ದೆಗಳಲ್ಲಿ ಆಹಾರ ಹೆಕ್ಕುತ್ತವೆ.

ಆದರೆ ಎರಡು ನವಿಲುಗಳು ಹಲವಾರು ವರ್ಷಗಳಿಂದ ಮೂತನೂರು ಗ್ರಾಮದಲ್ಲಿ ಬೀಡುಬಿಟ್ಟಿವೆ. ಈ ನವಿಲುಗಳು ಮನುಷ್ಯರೊಂದಿಗೆ ಹೊಂದಿಕೊಂಡಿವೆ.

ಸಾಮಾನ್ಯವಾಗಿ ನವಿಲುಗಳನ್ನು ಕಂಡರೆ ನಾಯಿಗಳು ದಾಳಿ ಮಾಡುತ್ತವೆ. ಆದರೆ ಮೂತನೂರು ಗ್ರಾಮದಲ್ಲಿ ನಾಯಿಗಳು ನವಿಲುಗಳ ತಂಟೆಗೆ ಹೋಗುವುದಿಲ್ಲ. ನವಿಲುಗಳನ್ನು ಕಂಡ ಕೂಡಲೇ ನಾಯಿಗಳು ಬಾಲ ಮುದುಡಿಕೊಂಡು ಹೋಗುತ್ತವೆ.

ನವಿಲುಗಳ ನಾಟ್ಯವನ್ನು ನೋಡಲು ಜನರು ಮುಗಿಬೀಳುತ್ತಾರೆ. ಈ ನವಿಲುಗಳು ನರ್ತಿಸುತ್ತಿದ್ದರೆ ಊರಿಗೇ ಕಳೆ. ನಾಟ್ಯ ಮಾಡಿದ ನಂತರ ನವಿಲುಗಳು ಯಾರದೋ ಮನೆಯ ಅಥವಾ ಅಂಗಡಿಯ ಬಾಗಿಲಲ್ಲಿ ಹೋಗಿ ನಿಲ್ಲುತ್ತವೆ. ಮನೆಯ ಅಥವಾ ಅಂಗಡಿಯರು ಕಾಳು ಹಾಕಿದರೆ ತಿನ್ನುತ್ತವೆ. ಕಾಳು ತಿಂದ ನಂತರ ಗ್ರಾಮದ ಬೀದಿಗಳಲ್ಲಿ ಗಾಂಭೀರ್ಯದಿಂದ ಸುತ್ತತ್ತವೆ. ಗ್ರಾಮದ ಬೋರ್‍ವೆಲ್ ಬಳಿ ನೀರಿನ ತೊಟ್ಟಿ ನಿರ್ಮಿಸಲಾಗಿದ್ದು, ತೊಟ್ಟಿಯಲ್ಲಿ ನೀರು ಕುಡಿಯುತ್ತವೆ. ಮತ್ತೆ ಗ್ರಾಮದಲ್ಲಿ ಸುತ್ತಾಡುತ್ತವೆ.

ಹಗಲು ವೇಳೆ ರೈತರ ಹೊಲ ಗದ್ದೆಗಳಿಗೆ ಹೋಗಿ ಆಹಾರ ಹೆಕ್ಕಿ ತಿನ್ನುತ್ತವೆ. ಮತ್ತೆ ವಾಪಸ್ಸು ಬಂದು ಗ್ರಾಮದ ಮರದ ಪೊಟರೆ ಅಥವಾ ಹುಲ್ಲಿನ ಬಣವೆಗಳಲ್ಲಿ ಮುದುಡಿ ನಿದ್ರಿಸುತ್ತವೆ.

ಬೀದಿಗಳಲ್ಲಿ ನರ್ತಿಸಿದ ನಂತರ ಕೆಲವೊಮ್ಮೆ ಮನೆಗಳ ಮೇಲೆ ಹಾರಾಡುತ್ತವೆ. ಮನೆಗಳ ಮೇಲೆ ನಿಂತು ಮತ್ತೆ ಗರಿ ಬಿಚ್ಚಿ ಕುಣಿಯುತ್ತವೆ. ಮನುಷ್ಯರ ಭಾಷೆಯನ್ನು ಮತ್ತು ಹಾವಭಾವಗಳನ್ನು ಈ ನವಿಲುಗಳು ಅರ್ಥ ಮಾಡಿಕೊಳ್ಳುತ್ತವೆ. ಪ್ರೀತಿಯಿಂದ ಕರೆದರೆ ಹತ್ತಿರ ಬಂದು ಗರಿಬಿಚ್ಚಿ ಕುಣಿಯುತ್ತವೆ. ಆಗಾಗ್ಗೆ ಮನೆಯೊಳಗೆ ಇಣುಕು ಹಾಕುತ್ತವೆ. ಗ್ರಾಮದಲ್ಲೇ ಸಹಜೀವನ ನಡೆಸುತ್ತಿವೆ.

ಸುಮಾರು ಐದು ವರ್ಷಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ ನವಿಲುಗಳು ಅರಣ್ಯದತ್ತ ಮುಖ ಮಾಡಲಿಲ್ಲ. ಗ್ರಾಮಸ್ಥರೂ ಈ ನವಿಲುಗಳೊಂದಿಗೆ ಹೊಂದಿಕೊಂಡಿದ್ದು, ಅರಣ್ಯಕ್ಕೆ ಅಟ್ಟಿಸುವ ಕೆಲಸ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT