ಚಿಂತಾಮಣಿ

ಭರ್ಜರಿ ಇಳುವರಿ: ಆದರೂ ತಪ್ಪದ ಸಂಕಷ್ಟ

ಹಲವು ವರ್ಷಗಳ ನಂತರ ತಾಲ್ಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಿ ಭೂಮಿಯಲ್ಲಿ ತೇವಾಂಶ ಅಧಿಕವಾಗಿದೆ. ಹೀಗಾಗಿ ಅವರೆಕಾಯಿ ಬೆಳೆ ಹುಲುಸಾಗಿದ್ದು ಭರ್ಜರಿ ಇಳುವರಿ ಬಂದಿದೆ.

ಚಿಂತಾಮಣಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿರುವ ಅವರೆಕಾಯಿ ರಾಶಿ

ಚಿಂತಾಮಣಿ: ಹಲವು ವರ್ಷಗಳ ನಂತರ ತಾಲ್ಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಿ ಭೂಮಿಯಲ್ಲಿ ತೇವಾಂಶ ಅಧಿಕವಾಗಿದೆ. ಹೀಗಾಗಿ ಅವರೆಕಾಯಿ ಬೆಳೆ ಹುಲುಸಾಗಿದ್ದು ಭರ್ಜರಿ ಇಳುವರಿ ಬಂದಿದೆ. ಆದರೆ ಬೆಲೆ ಕುಸಿತದಿಂದ ಈ ವರ್ಷವಾದರೂ ನಾಲ್ಕು ಕಾಸು ಸಂಪಾದಿಸಿಕೊಳ್ಳಬಹುದು ಎಂಬ ರೈತರ ಆಸೆಗೆ ತಣ್ಣೀರು ಬಿದ್ದಿದೆ. ಬೆಳೆ ಮತ್ತು ಇಳುವರಿ ಉತ್ತಮವಾಗಿದ್ದರೂ ಬೆಲೆ ಕುಸಿತ ರೈತರನ್ನು ಮತ್ತೊಮ್ಮೆ ಕಂಗೆಡಿಸಿದೆ.

ಭೂಮಿಯಲ್ಲಿ ತೇವಾಂಶವಿರುವುದು ಹಾಗೂ ಇಬ್ಬನಿ ಬೀಳುತ್ತಿರುವುದರಿಂದ ಅವರೆಕಾಯಿ ಬೆಳೆಯು ರೈತರ ಮುಖದಲ್ಲಿ ಮಂದಹಾಸ ತಂದಿತ್ತು. ನಾಲ್ಕು ಕಾಸು ಮಾಡಿಕೊಳ್ಳಬಹುದು ಎಂದು ಲಗುಬಗೆಯಿಂದ ಮಾರುಕಟ್ಟೆಗೆ ಬಂದ ರೈತರ ನಿರೀಕ್ಷೆ ಬೆಲೆ ಕುಸಿತದಿಂದ ಹುಸಿಯಾಗಿದೆ. ಪೆಚ್ಚು ಮೋರೆ ಹಾಕಿಕೊಂಡು ಹಿಂದಿರುಗಬೇಕಾಗಿದೆ.

ಕಳೆದ ವರ್ಷ ಪ್ರತಿ ಕೆ.ಜಿ. ಅವರೆಕಾಯಿಗೆ ₹ 30ರಿಂದ 40ಕ್ಕೆ ಮಾರಾಟವಾಗುತ್ತಿತ್ತು. ಈ ವರ್ಷದ ಆರಂಭದಲ್ಲಿ ₹ 40–50ವರೆಗೂ ಧಾರಣೆ ಇತ್ತು. ಆದರೆ ವಾರದ ಈಚೆಗೆ ಬೆಲೆ ತೀವ್ರವಾಗಿ ಕುಸಿದಿದೆ. ಕಾಯಿ ಕೀಳುವ ಕೂಲಿ, ಸಾಗಣೆ ವೆಚ್ಚ, ದಲ್ಲಾಳಿಗಳ ಕಮೀಷನ್‌, ನಿರ್ವಹಣೆ ಖರ್ಚು ಬಿತ್ತನೆ ಇತ್ಯಾದಿ ಖರ್ಚು ತೆಗೆದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಪರ್ಯಾಯ ವ್ಯವಸ್ಥೆ ಇಲ್ಲದೆ ಸಿಕ್ಕಷ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ರೈತ ವೆಂಕಟೇಶ್‌.

ಬೆಲೆ ಕುಸಿತದ ಲಾಭ ಗ್ರಾಹಕರಿಗಾದರೂ ಸಿಕ್ಕಿದರೆ ಸಮಾಧಾನ ಪಡಬಹುದು. ಆದರೆ ಗ್ರಾಹಕರಿಗೆ ರೈತರಿಂದ ಕಡಿಮೆ ದರಕ್ಕೆ ಪಡೆದ ಅವರೆಕಾಯಿಯನ್ನು ವ್ಯಾಪಾರಸ್ಥರು ಪ್ರತಿ ಕೆ.ಜಿಗೆ ₹ 25–30ಕ್ಕೆ ಮಾರಾಟ ಮಾಡುತ್ತಿದ್ದಾರೆ. ಒಂದೆಡೆ ರೈತರಿಗೂ ನಷ್ಟ, ಇನ್ನೊಂದೆಡೆ ಗ್ರಾಹಕರಿಗೂ ಪ್ರಯೋಜನ ಇಲ್ಲದೆ ದಳ್ಳಾಳಿಗಳು ಲಾಭ ಮಾಡಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅವರೆಕಾಯಿ ಸುಗ್ಗಿಯ ಬೆಳೆ. ಈ ಕಾಲದಲ್ಲಿ ಬೇರೆ ಯಾವುದೇ ತರಕಾರಿಯನ್ನೂ ಜನರು ಇಷ್ಟಪಡುವುದಿಲ್ಲ. ಅವರೆಕಾಯಿ ಗಾಗಿಯೇ ಬಾಯಿ ಚಪ್ಪರಿಸುತ್ತಾ ಕಾಯುತ್ತಾರೆ. ಅವರೆಕಾಳು ಹುಳಿ, ಕಾಳು ಗೊಜ್ಜು, ಈದುಕಿನಬೇಳೆ ಸಾರು ಎಂದರೆ ಬಾಯಲ್ಲಿ ನೀರೂರುತ್ತದೆ. ಅವರೆಕಾಯಿ ಇಷ್ಟಪಡುವವರಿಗೆ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದು ಕೊಂಚ ಸಮಾಧಾನ ತಂದಿದೆ.

ತಾಲ್ಲೂಕಿನಲ್ಲಿ ಅವರೆಕಾಯಿ ಬೆಳೆಯನ್ನು ರಾಗಿ ಮತ್ತು ನೆಲಗಡಲೆ, ತೊಗರಿಯೊಡನೆ ಅಕ್ಕಡಿ (ಉಪಬೆಳೆ) ಬೆಳೆಯುವುದು ರೂಢಿಯಲ್ಲಿದೆ. ಇತ್ತೀಚೆಗೆ ಕೆಲವು ರೈತರು ಟೊಮೆಟೊ ಭೂಮಿಯಲ್ಲಿಯೇ ಒಂದೆಡೆ ಅವರೆಯನ್ನು ಪ್ರತ್ಯೇಕವಾಗಿ ಬೆಳೆಯುತ್ತಿದ್ದಾರೆ. ವಾಣಿಜ್ಯ ಬೆಳೆಗೆ ನೀಡುವ ಪ್ರಾಮುಖ್ಯತೆಯನ್ನು ಇದಕ್ಕೂ ನೀಡುತ್ತಿದ್ದಾರೆ.

ರಾಗಿ, ತೊಗರಿ ಮತ್ತು ನೆಲಗಡಲೆ ಬೆಳೆಯಲ್ಲಿ 4–5 ಸಾಲುಗಳ ನಡುವೆ ಅವರೆ ಗಿಡ ಹಾಕುತ್ತಿದ್ದು, ಇದರಿಂದ ನೆಲಗಡಲೆ ಮತ್ತು ತೊಗರಿಗೆ ಕೀಟಗಳ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ರಾಗಿ ಮತ್ತು ನೆಲಗಡಲೆ ಕೊಯ್ಲಿನ ನಂತರ ಅವರೆ ಹುಲುಸಾಗಿ ಬೆಳೆಯುತ್ತದೆ. ಇದರಿಂದ ರೈತರಿಗೆ ಅನುಕೂಲ.

ಕೈವಾರ, ಕಸಬಾ, ಅಂಬಾಜಿದುರ್ಗ, ಮುರುಗಮಲ್ಲ ಹೋಬಳಿಗಳಲ್ಲಿ ರಾಗಿ ಬೆಳೆಯ ನಡುವೆ ಅವರೆ ಬೆಳೆದರೆ, ಕಡೆ ಮುಂಗಾನಹಳ್ಳಿ, ಕೆಂಚಾರ್ಲಹಳ್ಳಿ ಹೋಬಳಿಗಳಲ್ಲಿ ನೆಲಗಡಲೆ ನಡುವೆ ಬೆಳೆಯುತ್ತಾರೆ. ಇತ್ತೀಚೆಗೆ ನೀರಾವರಿಯಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಅಲ್ಲಿ ಮಾತ್ರ ಉತ್ತಮ ಇಳುವರಿ ಬರುತ್ತಿದೆ. ಕೃಷಿ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಸುಮಾರು 1600 ಹೆಕ್ಟೇರ್‌ ಪ್ರದೇಶದಲ್ಲಿ ಅವರೆ ಬಿತ್ತನೆಯಾಗಿದೆ.

ನಗರದ ಎಪಿಎಂಸಿಯಲ್ಲಿ 10 ಕೆ.ಜಿಗೆ 200 ರಿಂದ 230ರ ವರೆಗೂ ಹರಾಜಾಗುತ್ತಿದೆ. ಪ್ರತಿನಿತ್ಯ ಸುಮಾರು 10 ಟನ್‌ ಅವರೆಕಾಯಿ ಆವಕವಾಗುತ್ತದೆ. ವ್ಯಾಪಾರಿಗಳು ಚಿಲ್ಲರೆಯಾಗಿ 10 ಕೆ.ಜಿಗೆ ₹ 250 ರಿಂದ 300 ರವರೆಗೂ ಮಾರಾಟ ಮಾಡುವರು. ರೈತರಿಂದ ಕಮೀಷನ್‌ ಪಡೆಯಬಾರದು ಎಂಬ ಆದೇಶ ಗಾಳಿಗೆ ತೂರಿ ಶೇ 10ರಷ್ಟು ವಸೂಲಿ ಮಾಡುವರು. ‘ಆನೆ ಸತ್ತರೂ ಸಾವಿರ ಬದುಕಿದರೂ ಸಾವಿರ’ ಎಂಬ ನಾಣ್ನುಡಿಯಂತೆ ಬೆಳೆ ಅಧಿಕವಾಗಲಿ, ಕೊರತೆಯಾಗಲಿ ಮಧ್ಯವರ್ತಿಗಳಿಗೆ ಯಾವ ತೊಂದರೆಯೂ ಇಲ್ಲದೆ ಲಾಭ ಮಾಡಿಕೊಳ್ಳುತ್ತಾರೆ ಎಂದು ರೈತ ಸಂಘದ ಅಧ್ಯಕ್ಷ ರಘುನಾಥರೆಡ್ಡಿ ಆರೋಪಿಸುತ್ತಾರೆ.

ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ

ಅವರೆಕಾಯಿಗೆ ದಳ್ಳಾಳಿಗಳಿಲ್ಲದ ಉತ್ತಮ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು. ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ ರೈತರಿಗೆ ಮತ್ತು ಗ್ರಾಹಕರಿಗೂ ಅನುಕೂಲವಾಗುವಂತಹ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಗೋಪಿನಾಥ್‌ ಆಗ್ರಹಿಸುವರು.

* * 

ಅವರೆಕಾಯಿ ಕೀಳಲು ಕೂಲಿ, ಮಾರುಕಟ್ಟೆಗೆ ಸಾಗಿಸಲು ವೆಚ್ಚ, ಕಮೀಷನ್‌ ಮತ್ತಿತರ ಖರ್ಚುಗಳನ್ನು ಸೇರಿಸಿದರೆ ಬರಿಗೈಲಿ ವಾಪಸ್‌ ಹೋಗಬೇಕು
ನಾರಾಯಣಸ್ವಾಮಿ
ರೈತ

 

Comments
ಈ ವಿಭಾಗದಿಂದ ಇನ್ನಷ್ಟು
ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್

ಚಿಕ್ಕಬಳ್ಳಾಪುರ
ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್

17 Jan, 2018

ಚಿಕ್ಕಬಳ್ಳಾಪುರ
ದಶಮಾನೋತ್ಸವ ಲಾಂಛನ ಬಿಡುಗಡೆ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಜಿಲ್ಲಾ ದಶಮಾನೋತ್ಸವ ಲಾಂಛನ ಬಿಡುಗಡೆ ಮಾಡಿದರು.

17 Jan, 2018

ಗುಡಿಬಂಡೆ
ಚಿಕ್ಕಬಳ್ಳಾಪುರದಲ್ಲಿ ಖಾದಿ ತರಬೇತಿ ಕೇಂದ್ರ

ಗಾಂಧೀಜಿಯ ಕನಸು 1957ರಲ್ಲಿ ಖಾದಿ ಗ್ರಾಮದಿಂದ ನನಸಾಯಿತು. ಆದರೆ ಇದುವರೆಗೂ ಜಿಲ್ಲೆಯಲ್ಲಿ ಖಾದಿ ಭವನ ನಿರ್ಮಿಸಿರಲಿಲ್ಲ. ಬಜೆಟ್‍ನಲ್ಲಿ ತರಬೇತಿ ಕೇಂದ್ರ ನಿರ್ಮಿಸಲು ಅನುದಾನ ಮಂಜೂರಾಗಿದೆ. ...

17 Jan, 2018
ಕಸದ ರಾಶಿಗೆ ಕಂದಮ್ಮಗಳ ‘ಕಸಿವಿಸಿ’

ಚಿಕ್ಕಬಳ್ಳಾಪುರ
ಕಸದ ರಾಶಿಗೆ ಕಂದಮ್ಮಗಳ ‘ಕಸಿವಿಸಿ’

15 Jan, 2018
175 ಕ್ಷೇತ್ರಗಳಲ್ಲಿ ರಾಜ್ಯ ರೈತ ಸಂಘ ಸ್ಪರ್ಧೆ

ಗುಡಿಬಂಡೆ
175 ಕ್ಷೇತ್ರಗಳಲ್ಲಿ ರಾಜ್ಯ ರೈತ ಸಂಘ ಸ್ಪರ್ಧೆ

15 Jan, 2018