ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ತಂದುಕೊಟ್ಟ ಹತ್ತಿ ಚಳ್ಳಅವರೆ ಮಿಶ್ರಬೆಳೆ

Last Updated 26 ಡಿಸೆಂಬರ್ 2017, 9:48 IST
ಅಕ್ಷರ ಗಾತ್ರ

ಕುಷ್ಟಗಿ: ಇರುವ ಕಡಿಮೆ ಭೂಮಿಯಲ್ಲಿಯೇ ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಆರ್ಥಿಕ ಲಾಭ ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ತಾಲ್ಲೂಕಿನ ಅನೇಕ ರೈತರು ತೋರಿಸಿಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ತಾಲ್ಲೂಕಿನ ಶಾಖಾಪುರ ಗ್ರಾಮದ ರೈತ ರಾಮಣ್ಣ ಚೌಡ್ಕಿ ಅವರು ಮಿಶ್ರಬೆಳೆ ಬೆಳೆದು ಉತ್ತಮ ಲಾಭ ಗಳಿಸಿದ್ದಾರೆ.

ಈ ರೈತ ಆಯ್ದುಕೊಂಡಿದ್ದ ಹತ್ತಿ ಮತ್ತು ಅವರೆಕಾಯಿ ಎರಡೂ ಬೆಳೆಗಳು ಕೈ ಹಿಡಿದಿವೆ. ‘ಹತ್ತಿ ಕೊಯಿಲು ಮುಗಿದ ನಂತರ ಅವರೆಕಾಯಿ ಬಳ್ಳಿ ಬೆಳೆದಿದ್ದು ಕಳೆದ ಒಂದು ತಿಂಗಳಿನಿಂದಲೂ ಅವರೆ ಕಾಯಿ ಕಟಾವು ಮಾಡಲಾಗುತ್ತಿದೆ. ವಾರಕ್ಕೊಮ್ಮೆ ಕನಿಷ್ಠ ಎರಡು ಕ್ವಿಂಟಲ್‌ನಷ್ಟು ಅವರೆಕಾಯಿ ಪಟ್ಟಣದ ಸಂತೆಯಲ್ಲಿ ಸಗಟು ರೂಪದಲ್ಲಿ ಕನಿಷ್ಠ ₹ 3000 ದಂತೆ ಮಾರಾಟವಾಗುತ್ತಿದೆ. ಇನ್ನೂ ಎರಡು ಮೂರು ತಿಂಗಳು ಇಳುವರಿ ಬರುತ್ತದೆ. ಈ ಹಿಂದೆ ಇದಕ್ಕಿಂತಲೂ ಹೆಚ್ಚಿನ ದರದಲ್ಲಿ ಅವರೆಕಾಯಿ ಮಾರಾಟ ವಾಗಿತ್ತು. ಹತ್ತಿ ಮಾರಾಟದಿಂದ ₹ 7 ಸಾವಿರ ಕೈಗೆ ಬಂದಿದೆ’ ಎಂದು ರಾಮಣ್ಣ ಅವರ ಸಂಬಂಧಿ ರೈತ ಗ್ಯಾನಪ್ಪ ತಿಳಿಸಿದರು.

ಬೇಸಾಯ ಪದ್ಧತಿ: ಚೌಡ್ಕಿ ಅವರು ಅನುಸರಿಸಿದ ಬೇಸಾಯ ಪದ್ಧತಿ ಹೀಗಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮೊದಲು ಮೂರ್ನಾಲ್ಕು ಅಡಿ ಅಂತರದಲ್ಲಿ ಹತ್ತಿ ನಾಟಿ ಮಾಡಿ ಎರಡು ತಿಂಗಳ ನಂತರ ಅವರೆಕಾಯಿ ಬೀಜ ನಾಟಿ ಮಾಡಿದ್ದಾರೆ. ನಾಲ್ಕೈದು ತಿಂಗಳಲ್ಲಿ ಹತ್ತಿ ಬೆಳೆ ಕೈಗೆ ಬಂದಿತು. ಅಷ್ಟರಲ್ಲಿ ಬೆಳೆಯತೊಡಗಿದ ಅವರೆಬಳ್ಳಿಗೆ ಹತ್ತಿಯ ಗಿಡ ಆಸರೆಯಾಗಿದೆ. ಹತ್ತಿಯ ಗಿಡದ ಮೇಲೆಲ್ಲ ಹರಡಿರುವ ಅವರೆಬಳ್ಳಿಯಲ್ಲಿ ಕಾಯಿಗೊಂಚಲುಗಳು ಕಂಡು ಬರುತ್ತಿವೆ. ಸದ್ಯ ಚಳಿ ಇರುವುದರಿಂದ ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಇದೆ. ಅವರೆ ಬೆಳೆ ಒಂದು ವರ್ಷದವರೆಗೂ ಇಳುವರಿ ನೀಡುತ್ತದೆ ಎನ್ನುತ್ತಾರೆ ರೈತ ಚೌಡ್ಕಿ.

ಬೀಜ ಸ್ವಾವಲಂಬನೆ: ಪ್ರತಿವರ್ಷ ಬೀಜ ಈ ಬೆಳೆಯನ್ನು ಆಯ್ಕೆ ಮಾಡಿಕೊಂಡು ಬಂದಿರುವ ರೈತ ರಾಮಣ್ಣ ಪೇಟೆಗೆ ಹೋಗಿ ಬೀಜ ತರುವುದಿಲ್ಲ. ಬದಲಾಗಿ ತಮ್ಮದೇ ಜಮೀನಿನಲ್ಲಿ ಬಲಿತ ಉತ್ತಮ ಕಾಯಿಗಳನ್ನು ಬೀಜಕ್ಕಾಗಿ ತೆಗೆದಿರಿಸುತ್ತಿದ್ದು ಬೀಜದಲ್ಲಿ ಸ್ವಾವಲಂಬನೆ ಕಂಡುಕೊಂಡಿದ್ದಾರೆ.

ಎರಡೂ ಬೆಳೆ ಬೆಳೆದರೂ ಹೆಚ್ಚಿನ ಖರ್ಚು ಇರುವುದಿಲ್ಲ, ಪ್ರಾರಂಭದಲ್ಲಿ ಇತರೆ ಬೆಳೆಗಳಂತೆ ಕೊಟ್ಟಿಗೆ ಗೊಬ್ಬರ, ಸರಿಯಾದ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸಲಾಗುತ್ತಿದೆ. ಹತ್ತಿ ಮತ್ತು ಅವರೆ ಈ ಎರಡೂ ಬೆಳೆಗೆ ಪ್ರಮುಖವಾಗಿ ಕಾಡುವ ರಸ ಹೀರುವ ಕೀಟ ಹಾವಳಿ ತಡೆಯಲು ಕನಿಷ್ಠ ಪ್ರಮಾಣದಲ್ಲಿ ಪೀಡೆನಾಶಕ ಬಳಸಿ ಬಾಧೆ ನಿಯಂತ್ರಿಸುತ್ತಾರೆ. ಇದೇ ಮಾದರಿಯನ್ನು ಗ್ರಾಮದ ಇನ್ನೂ ಕೆಲ ರೈತರೂ ಅನುಸರಿಸುತ್ತಿದ್ದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT