ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆ ಪ್ರಗತಿ ಚುರುಕುಗೊಳಿಸಿ

Last Updated 27 ಡಿಸೆಂಬರ್ 2017, 9:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ಫೆಬ್ರುವರಿ ಅಂತ್ಯದೊಳಗೆ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ವಸತಿ ಯೋಜನೆಗಳ ಮಾಹಿತಿ ಪಡೆದ ಅವರು, ‘ವಸತಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಭೂಮಿ ಪಡೆದುಕೊಳ್ಳುವ ಕೆಲಸವನ್ನು ಅಧಿಕಾರಿಗಳು ಆದ್ಯತೆ ಮೆರೆಗೆ ಮಾಡಬೇಕು. ಅಂತಹ ಕೆಲಸಕ್ಕೆ ಟಪಾಲ್ ಮೊರೆ ಹೋಗುವ ಬದಲು ಸಂಬಂಧಪಟ್ಟ ಅಧಿಕಾರಿಯೇ ಖುದ್ದಾಗಿ ಕಚೇರಿಗೆ ಹೋಗಿ ಕೆಲಸ ಮಾಡಿಸಿಕೊಂಡು ಬರಬೇಕು’ ಎಂದು ಹೇಳಿದರು.

‘ಪಿಡಿಒ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಅವರು ಸಮನ್ವಯದಿಂದ ಕೆಲಸ ಮಾಡಬೇಕು. ಯಾವುದೇ ಕಚೇರಿಯಲ್ಲಿ ಕಡತ ಮುಂದೆ ಹೋಗದೆ ಇದ್ದರೆ ಸಂಬಂಧಪಟ್ಟ ಶಾಸಕರು, ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಅವರಿಂದ ಕರೆ ಮಾಡಿಸಿ ತ್ವರಿತಗತಿಯಲ್ಲಿ ಕೆಲಸವಾಗುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಅಗತ್ಯ ಜಮೀನಿನ ಕೊರತೆ ಇರುವ ಕಡೆಗಳಲ್ಲಿ ಖಾಸಗಿ ಅವರಿಂದ ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ಜಮೀನು ಖರೀದಿಸಿ ಬಡಾವಣೆ ರೂಪಿಸಿ. ಏನಾದರೂ ಸಮಸ್ಯೆಗಳಿದ್ದರೆ ಸ್ಥಳೀಯ ಶಾಸಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ. ವರ್ಷಾಂತ್ಯಕ್ಕೆ ವಸತಿ ಯೋಜನೆಗಳ ಪ್ರಗತಿಯಲ್ಲಿ ಉತ್ತಮ ಸುಧಾರಣೆ ಕಂಡುಬರಬೇಕು. ಈ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಶಾಸಕರಾದ ಎಂ.ಕೃಷ್ಣಾರೆಡ್ಡಿ, ‘ಚಿಂತಾಮಣಿ ತಾಲ್ಲೂಕಿನಲ್ಲಿ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಹಾಗೂ ಗಿರಿಜನ ಉಪ ಯೋಜನೆಯ (ಎಸ್‌ಟಿಪಿ) ₹ 8 ಕೋಟಿ ವೆಚ್ಚದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಂದು ಕಾರ್ಯಾದೇಶಕ್ಕೆ ತಲಾ ₹ 30 ಸಾವಿರದಂತೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಲಂಚ ನೀಡದವರಿಗೆ ಕೆಲಸ ಮಾಡಿ ಕೊಡುತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಂ.ರಾಜಣ್ಣ, ‘ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಲೋಕೋಪಯೋಗಿ ಅಧಿಕಾರಿಗಳು ಗುತ್ತಿಗೆದಾರರಿಂದ ಕಾಮಗಾರಿ ಮೊತ್ತದ ಶೇ3 ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬರುತ್ತಿವೆ. ಇಂತಹ ಕೆಲಸವನ್ನು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ (ಪಿಆರ್‌ಇಡಿ) ಅಧಿಕಾರಿಗಳು ಕೂಡ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಈ ಕುರಿತು ರಾಮಲಿಂಗಾರೆಡ್ಡಿ ಅವರು ಸಭೆಯಲ್ಲಿದ್ದ ಲೋಕೋಪಯೋಗಿ ಮತ್ತು ಪಿಆರ್‌ಇಡಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಆರೋಪ ನಿರಾಕರಿಸಿದರು. ಆಗ ಸಚಿವರು ಶೀಘ್ರದಲ್ಲಿಯೇ ಸಭೆ ಕರೆದು ಈ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು. ಇದೇ ವೇಳೆ ಶಾಸಕರನ್ನು ಉದ್ದೇಶಿಸಿ, ‘ಬರೀ ಆರೋಪ ಮಾಡಿದರೆ ಸಾಲದು, ಲಿಖಿತ ದೂರು ಕೊಡಿ ತನಿಖೆಗೆ ಆದೇಶಿಸುತ್ತೇನೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 29 ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಬಾಗೇಪಲ್ಲಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಿದ್ದಾರೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಫೆ.2ರಿಂದ ಜಿಲ್ಲಾ ದಶಮಾನೋತ್ಸವ

‘ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡು ಹತ್ತು ವರ್ಷಗಳನ್ನು ಪೂರೈಸಿದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಫೆಬ್ರುವರಿ 2 ರಿಂದ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದು ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ನಗರದಲ್ಲಿ ಮಂಗಳವಾರ ದಶಮಾನೋತ್ಸವ ಪೂರ್ವಭಾವಿ ಸಭೆ ನಡೆಸಿದ ಅವರು, ‘ದಶಮಾನೋತ್ಸವ ಕಾರ್ಯಕ್ರಮದ ಮೊದಲು ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಜನವರಿ 20 ರಿಂದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಫರ್ಧೆಗಳು ಏರ್ಪಡಿಸಬೇಕು. ದಶಮಾನೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕವಿಗೋಷ್ಠಿ, ವಿಚಾರ ಸಂಕೀರಣ, ವಿವಿಧ ಕಲಾ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಹೇಳಿದರು.

‘ಪ್ರತಿಯೊಂದು ಇಲಾಖೆ ವತಿಯಿಂದ ದಶಮಾನೋತ್ಸವ ಆಚರಣೆ ಸಂದರ್ಭದಲ್ಲಿ ಇಲಾಖೆಗೆ ಸಂಬಂಧಿಸಿದ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆದು, ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳ ಅರಿವು ಮೂಡಿಸಬೇಕು. ದಶಮಾನೋತ್ಸವಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲು ಮುಂದಾಗಬೇಕು’ ಎಂದರು.

ಬಿಜೆಪಿ ದೊಡ್ಡ ನಾಟಕ ಕಂಪನಿ

‘ಅಸಲಿಗೆ ಇವತ್ತು ರಾಜ್ಯದಲ್ಲಿ ಕಿತಾಪತಿ ಮಾಡುತ್ತಿರುವವರೇ ಬಿಜೆಪಿಯವರು. ಅವರದು ದೊಡ್ಡ ನಾಟಕ ಕಂಪನಿಯೇ ಇದೆ. ಅದಕ್ಕೆ ಅಮಿತ್‌ ಷಾ, ನರೇಂದ್ರ ಮೋದಿ ಅವರು ಸೂತ್ರಧಾರರು. ರಾಜ್ಯದಲ್ಲಿ ಇರುವವರೆಲ್ಲ ಪಾತ್ರಧಾರಿಗಳು. ಚುನಾವಣೆಗೊಸ್ಕರ ಏನೇನೋ ನಾಟಕವಾಡುತ್ತಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಹತ್ತಿರ ಬಂದಿರುವ ಕಾರಣಕ್ಕೆ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಅಮಿತ್ ಷಾ ಜತೆ ಕುಳಿತು ಮಹಾದಾಯಿ ವಿಚಾರ ಚರ್ಚಿಸಿ, ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ. ಅದಕ್ಕೆ ಅವರೂ ಮಾರನೇ ದಿನವೇ ಉತ್ತರ ಬರೆಯುತ್ತಾರೆ. ಇದೇ ವಿಚಾರವಾಗಿ ಹಿಂದೆ ಸಿದ್ದರಾಮಯ್ಯ ಅವರು ಪತ್ರ ಬರೆದಾಗ ಪರಿಕ್ಕರ್‌ ಅವರಿಂದ ಉತ್ತರವೇ ಬರಲಿಲ್ಲ’ ಎಂದು ಹೇಳಿದರು.

‘ಸಿಹಿ ಸುದ್ದಿ ತರಲು ಹೋದ ಯಡಿಯೂರಪ್ಪ ಅವರ ಕೈಯಲ್ಲಿ ನೀರಲ್ಲ, ಏನೂ ತರಲು ಆಗಿಲ್ಲ. ಹೀಗಾಗಿ ಅವರು ಇವತ್ತು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮಹದಾಯಿ ಯೊಜನೆಗೆ ಒತ್ತಾಯಿಸಿ 800 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರಲ್ಲಿ ಸಹಜವಾಗಿಯೇ ಇದು ಆಕ್ರೋಶ ಉಂಟು ಮಾಡಿದೆ. ತಮಗಾದ ಅನ್ಯಾಯಕ್ಕೆ ಅವರು ಬಂದ್, ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಚಿತಾವಣೆ ಮಾಡುತ್ತಿದೆ ಎನ್ನುವುದು ತಪ್ಪು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT