ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯೂ ಇಲ್ಲ, ಸಿಎಂ ಭೇಟಿಯೂ ಇಲ್ಲ !

Last Updated 27 ಡಿಸೆಂಬರ್ 2017, 9:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಎಲ್ಲಾ ರಂಗಗಳಲ್ಲಿ ಅಭಿವೃದ್ಧಿಯನ್ನೇ ಕಾಣದ ಮೊಳಕಾಲ್ಮುರು ಈಗ ವಿರೋಧಪಕ್ಷ ಶಾಸಕ ಅಧಿಕಾರದಲ್ಲಿದ್ದಾರೆ ಎಂಬ ಏಕೈಕ ಕಾರಣಕ್ಕಾಗಿ ಮುಖ್ಯಮಂತ್ರಿ ಬಳಿ ಸಮಸ್ಯೆ ಹೇಳಿಕೊಳ್ಳುವ ಭಾಗ್ಯದಿಂದಲೂ ಇಲ್ಲಿನ ಜನ ವಂಚಿರಾಗಿದ್ದಾರೆ.

‘ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ ತಾಲ್ಲೂಕಿನ ಜನರು ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ. ಯೋಜನೆಗಳ ಉದ್ಘಾಟನೆಗಾಗಿ ಡಿ. 27ರಂದು ಸ್ವತಃ ಮುಖ್ಯಮಂತ್ರಿ ಬರುತ್ತಿದ್ದಾರೆ. ತಾಲ್ಲೂಕಿನ ಮತ್ತಷ್ಟು ಸಮಸ್ಯೆಗಳನ್ನು ಮುಖ್ಯಮಂತ್ರಿ ಆಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಇದಕ್ಕೆ ವಿರುದ್ಧ ಸ್ಥಿತಿಯನ್ನು ಮೊಳಕಾಲ್ಮುರು ತಾಲ್ಲೂಕಿನ ಜನ ಎದುರಿಸುತ್ತಿದ್ದಾರೆ. ಇದಕ್ಕೆ ನಮ್ಮ ಜನ ಮಾಡಿರುವ ತಪ್ಪಾದರೂ ಏನು’ ಎಂದು ಜನಸಂಸ್ಥಾನ ವಿರೂಪಾಕ್ಷಪ್ಪ, ಸಿಪಿಐನ ಜಾಫರ್ ಫರೀಫ್‌ ಪ್ರಶ್ನಿಸುತ್ತಾರೆ.

‘ಮೊಳಕಾಲ್ಮುರು ತಾಲ್ಲೂಕಿಗೆ ಬಿಜೆಪಿ ಶಾಸಕರಿದ್ದಾರೆ ಎಂದು ಯಾವೊಬ್ಬ ಸಚಿವರೂ ಐದು ವರ್ಷದಲ್ಲಿ ಬರಲಿಲ್ಲ. ಈಗ ಮುಖ್ಯಮಂತ್ರಿ ಭೇಟಿಯಿಂದಲೂ ವಂಚಿತವಾಯಿತು. ಗೆದ್ದ ಕ್ಷೇತ್ರಗಳಿಗೆ ಮಾತ್ರ ಮುಖ್ಯಮಂತ್ರಿ ಭೇಟಿ ನೀಡುತ್ತಿದ್ದಾರೆ. ಈ ಕಾರಣ ನಮ್ಮ ತಾಲ್ಲೂಕು ವಂಚಿತವಾಯಿತು. ಇಲ್ಲಿಯೂ ಶಾಶ್ವತವಾಗಿ ಕಾಡುತ್ತಿರುವ ಹತ್ತಾರು ಜಲ್ವಂತ ಸಮಸ್ಯೆಗಳಿಗೆ. ಇವುಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಮುಖ್ಯಮಂತ್ರಿ ಭೇಟಿ ನೀಡುತ್ತಾರೆ ಎಂದರೆ ವಿರೋಧಪಕ್ಷ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ ಹಾಗೂ ಅಭಿವೃದ್ಧಿಯಾಗಿಲ್ಲ ಎಂಬ ಉತ್ತರ ಪರೋಕ್ಷವಾಗಿ ಸಿಕ್ಕಂತಾಗಿದೆ. ಆಡಳಿತಕ್ಕೆ ಬರುವ ಪಕ್ಷದ ಶಾಸಕರನ್ನೇ ಹೇಗೆ ಗುರುತಿಸಿ ಆಯ್ಕೆ ಮಾಡಬೇಕು ಎಂಬುದು ಯಕ್ಷ ಪ್ರಶ್ನೆಯಾಗದೆ’ ಎಂದು ಸುಜಯ್‌, ಲಕ್ಷ್ಮಣ, ನಿಂಗರಾಜ್‌, ಮಂಜುನಾಥ್ ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಟಿ.ನಾಗರೆಡ್ಡಿ ಮಾತನಾಡಿ, ‘ಸಿದ್ದರಾಮಯ್ಯ ಅವರು ಬರೀ ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಮುಖ್ಯಮಂತ್ರಿಯೇ ಅಥವಾ ಇಡೀ ರಾಜ್ಯಕ್ಕೆ ಎಂಬ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್‌ ಶಾಸಕರಿಗೆ ದುಪ್ಪಟ್ಟು ಅನುದಾನ ನೀಡಿದ್ದಾರೆ. ಬೇರೆ ಕ್ಷೇತ್ರಗಳಿಗೆ ಹೋದರೆ ಜನರು ಪ್ರಶ್ನೆ ಮಾಡುತ್ತಾರೆ ಎಂಬ ಭಯದಿಂದ ಭೇಟಿ ನೀಡುತ್ತಿಲ್ಲ. ಈ ಸರ್ಕಾರ ಅವಧಿಯಲ್ಲಿ ಮೊಳಕಾಲ್ಮುರು ಕ್ಷೇತ್ರಕ್ಕಂತೂ ಸಾಕಷ್ಟು ಅನ್ಯಾಯವಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹುಸಿಯಾಯಿತು: ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಮೊಳಕಾಲ್ಮುರಿನಲ್ಲಿ ಶಂಕುಸ್ಥಾಪನೆ ಮಾಡುತ್ತಾರೆ ಎಂದು ಪಕ್ಷದ ಮುಖಂಡರು ಭಾಷಣಗಳಲ್ಲಿ ಹೇಳುತ್ತಿದ್ದರು. ಈಗ ಚಳ್ಳಕೆರೆ ಕಾರ್ಯಕ್ರಮದಲ್ಲಿ ಯೋಜನೆ ಘೋಷಣೆ ಮಾಡುವ ಭರವಸೆ ಮಾತ್ರ ಸಿಕ್ಕಿದೆ ಎಂಬ ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT