‘ಮುಕ್ತ ಚರ್ಚೆ ನಡೆಯಲಿ; ಭದ್ರತೆ ಇರಲಿ’
‘ಭದ್ರತೆ ಒದಗಿಸಬೇಕು ಎಂದು ನಾವು ಕೇಳಿದರೆ, ‘‘ನಾನು ಪೊಲೀಸ್ ಅಧಿಕಾರಿ ಅಲ್ಲ. ಆ ಜವಾಬ್ದಾರಿಯೂ ನನ್ನದಲ್ಲ’’
ಗದಗ: ‘ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಡಿ.30ರಂದು ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧವಿದ್ದೇನೆ. ಆದರೆ, ಚರ್ಚೆಗೆ ಮುಕ್ತ ಅವಕಾಶ ಇರಬೇಕು. ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
‘ಚರ್ಚೆಯ ಸ್ಥಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ವಾದ ಮಂಡನೆ ಮಾಡುವವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಅವಕಾಶ ನೀಡಬಾರದು. ಚರ್ಚೆಯಲ್ಲಿ ಯಾರು ಪಾಲ್ಗೊಳ್ಳುವರು ಎಂಬ ವಿಚಾರವನ್ನು ಮೊದಲೇ ತಿಳಿಸಬೇಕು. ಹಾಗೆಯೇ, ನಾವೂ ಮುಂಚಿತವಾಗಿ ಹೆಸರನ್ನು ತಿಳಿಸುತ್ತೇವೆ. ವೀರಶೈವ–ಲಿಂಗಾಯತ ಒಂದೇ ಎನ್ನುವುದನ್ನು ಮಂಡನೆ ಮಾಡಲು ನಾವು ಸಿದ್ಧರಿದ್ದೇವೆ’ ಎಂದರು.
‘ಭದ್ರತೆ ಒದಗಿಸಬೇಕು ಎಂದು ನಾವು ಕೇಳಿದರೆ, ‘‘ನಾನು ಪೊಲೀಸ್ ಅಧಿಕಾರಿ ಅಲ್ಲ. ಆ ಜವಾಬ್ದಾರಿಯೂ ನನ್ನದಲ್ಲ’’ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ. ಅವರು ವಿಧಾನ ಪರಿಷತ್ ಸದಸ್ಯ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿನ ಮುಖಂಡರೆಂದು ನಾವು ಪ್ರಜ್ಞಾಪೂರ್ವಕವಾಗಿಯೇ ತಿಳಿದುಕೊಂಡು, ಚರ್ಚೆಯ ವೇಳೆ ಶಾಂತಿ ಕಾಪಾಡುವ ಹೊಣೆಗಾರಿಕೆ ಅವರದೆಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.