ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ಗೆ ಕ್ಷಿಪಣಿ ಮಾರಾಟ: ಆಕ್ಷೇಪ

ರಕ್ಷಣಾ ಒಪ್ಪಂದ ಉಲ್ಲಂಘಿಸಿದ ಅಮೆರಿಕ: ರಷ್ಯಾ ಆರೋಪ
Last Updated 30 ಡಿಸೆಂಬರ್ 2017, 20:15 IST
ಅಕ್ಷರ ಗಾತ್ರ

ಮಾಸ್ಕೊ: ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಜಪಾನ್‌ಗೆ ಮಾರಾಟ ಮಾಡುವ ಮೂಲಕ ಅಮೆರಿಕ ಮಹತ್ವದ ಶಸ್ತ್ರಾಸ್ತ್ರ ಒಪ್ಪಂದ ಉಲ್ಲಂಘಿಸಿದೆ ಎಂದು ರಷ್ಯಾ ಉಪ ವಿದೇಶಾಂಗ ಸಚಿವ ಸರ್ಗೈ ರ‍್ಯಾಬ್ಕೊವ್‌ ಆರೋಪಿಸಿದ್ದಾರೆ.

‘ರಷ್ಯಾದ ಪಶ್ಚಿಮ ಗಡಿಯಲ್ಲಿರುವ ರುಮೇನಿಯಾ ಮತ್ತು ಪೋಲಂಡ್‌ ಸೇನಾ ನೆಲೆಗಳಲ್ಲಿ ಅಮೆರಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸುತ್ತಿದೆ. ಇದು ಒಪ್ಪಂದಕ್ಕೆ ವಿರುದ್ಧವಾಗಿದೆ. ಈ ಬೆಳವಣಿಗೆಯನ್ನು ರಷ್ಯಾ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಸರ್ಗೈ ತಿಳಿಸಿದ್ದಾರೆ.

‘ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ನಿಯೋಜನೆಯಿಂದಾಗಿ ಎರಡೂ ದೇಶಗಳ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ ಗುರುವಾರ ಹೇಳಿದ್ದರು.

‘ಈ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಗೊಳಿಸುವ ಪ್ರಯತ್ನಕ್ಕೆ ಇದು ವಿರುದ್ಧವಾದ ನಡೆ’ ಎಂದು ತಿಳಿಸಿದ್ದರು.

ಉತ್ತರಕೊರಿಯಾದ ಅಣ್ವಸ್ತ್ರ ಮತ್ತು ಕ್ಷಿಪಣಿ ದಾಳಿಗಳ ಬೆದರಿಕೆ ಎದುರಿಸಲು ಅಮೆರಿಕ ನಿರ್ಮಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸಲು ಜಪಾನ್‌ ಸರ್ಕಾರ ಡಿಸೆಂಬರ್‌ 19ರಂದು ಒಪ್ಪಿಗೆ ನೀಡಿತ್ತು. ಕ್ಷಿಪಣಿ ವ್ಯವಸ್ಥೆ ಬಲಪಡಿಸಲು ರಕ್ಷಣಾ ಇಲಾಖೆಯ ಬಜೆಟ್‌ ಅನ್ನು ಹೆಚ್ಚಿಸಲು ಜಪಾನ್‌ ಉದ್ದೇಶಿಸಿದೆ. 900 ಕಿಲೋ ಮೀಟರ್‌ ಉದ್ದದ ಕ್ಷಿಪಣಿಗಳನ್ನು ಖರೀದಿಸಲು ಸಹ ಚಿಂತನೆ ನಡೆಸಿದೆ.

ಜಪಾನ್‌ನ ಈ ನಡೆ ಅಂತರರಾಷ್ಟ್ರೀಯ ವಿವಾದಗಳನ್ನು ಬಲಪ್ರಯೋಗದಿಂದ ಬಗೆಹರಿಸಲು ಸಾಧ್ಯವಿಲ್ಲ ಎಂಬ ತನ್ನ ಸಾಂವಿಧಾನಿಕ ನಿಲುವಿಗೆ ವಿರುದ್ಧವಾಗಿದೆ. ಹೀಗಾಗಿ, ಜಪಾನ್‌ನ ಈ ನಿಲುವು ವಿವಾದಕ್ಕೆ ಎಡೆಮಾಡಿಕೊಡಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಉತ್ತರಕೊರಿಯಾ, ಕಳೆದ ಸೆಪ್ಟೆಂಬರ್‌ನಲ್ಲಿ ಜಪಾನ್‌ನ ಹೊಕ್ಕೈದೊ ದ್ವೀಪದ ಪ್ರದೇಶದ ಮೇಲೆ ಕ್ಷಿಪಣಿ ಉಡಾವಣೆ ಮಾಡಿತ್ತು. ಇದನ್ನು ಪ್ರಧಾನಿ ಶಿಂಜೊ ಅಬೆ ತೀವ್ರವಾಗಿ ಖಂಡಿಸಿದ್ದರು. ‘ಯುದ್ಧಕ್ಕೆ ಪ್ರಚೋದನೆ ನೀಡುವ ಉತ್ತರಕೊರಿಯಾ ನಡೆಯನ್ನು ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT