ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಕ್ಕೆ ಹೊಸ ಭಾಷ್ಯ ಬರೆದ ವೇಯ್ನ್‌

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಿಯಮಗಳ ಚೌಕಟ್ಟಿನಲ್ಲಿಯೇ ಸಾಗುವ ನೃತ್ಯಕಲೆಯನ್ನು ಅರಗಿಸಿಕೊಳ್ಳಲು ದಶಕಗಳ ತಪಸ್ಸು ಬೇಕು. ನೃತ್ಯದ ಪಟ್ಟುಗಳನ್ನು ಕಲಿಯುತ್ತಾ, ಅವುಗಳ ಚೆಲುವನ್ನು ಆಸ್ವಾದಿಸುತ್ತಾ ಬೆಳೆದ ಹುಡುಗ, ಜನಪ್ರಿಯತೆ ಗಳಿಸಿದ್ದು ನೃತ್ಯದ ಚೌಕಟ್ಟು ಮೀರಿದ ನಂತರವೇ! ಸಮಕಾಲೀನ ನೃತ್ಯದ ಹೆಸರಿನಲ್ಲಿ ರ‍್ಯಾಂಡಮ್‌ ನೃತ್ಯವನ್ನು ಯುವ ಮನಸ್ಸುಗಳಲ್ಲಿ ತುಂಬಿದವರು ನೃತ್ಯ ಸಂಯೋಜಕ ವೇಯ್ನ್‌ ಮೆಕ್‌ಗ್ರೇಗರ್‌.

ಇಂಗ್ಲೆಂಡ್‌ನಲ್ಲಿ ಜನಿಸಿದ ವೇಯ್ನ್‌, ಯುನಿವರ್ಸಿಟಿ ಆಫ್‌ ಲೀಡ್ಸ್‌ನ ಬ್ರಿಟನ್‌ ಹಾಲ್‌ ಕಾಲೇಜ್‌, ನ್ಯೂಯಾರ್ಕ್‌ನ ಜೋಸ್‌ ಲಿಮನ್‌ ಸ್ಕೂಲ್‌ನಲ್ಲಿ ನೃತ್ಯ ಕಲಿತವರು. 22ನೇ ವಯಸ್ಸಿಗೇ ನೃತ್ಯ ಸಂಯೋಜಕರಾಗಿ ಗುರುತಿಸಿಕೊಂಡ ಅವರು ತಮ್ಮದೇ ಆದ ನೃತ್ಯ ಕಂಪೆನಿಯೊಂದನ್ನು ಪ್ರಾರಂಭಿಸಿದರು. ಅಂದಿನಿಂದ ವೇಯ್ನ್‌ ತಮ್ಮ ಭಾವನೆಗಳನ್ನು ನೃತ್ಯದಲ್ಲಿ ಅಭಿವ್ಯಕ್ತಪಡಿಸಲಾರಂಭಿಸಿದರು.

ಮನದಾಳದಲ್ಲಿ ಭಾವನೆಗಳ ಸಂಚಲನ ಹೇಗಿರುತ್ತದೋ, ಅದೇ ಕಲ್ಪನೆಯನ್ನಿರಿಸಿಕೊಂಡು ನೃತ್ಯ ಚಲನೆಗಳನ್ನು ಹೊಂದಿಸಿದರು. ಕಣ್ಣು ಸೋಲುವಷ್ಟು ತ್ವರಿತಗತಿಯ ಆ ಚಲನೆಗಳು ನೃತ್ಯ ಪ್ರಪಂಚದ ಹೊಸ ಆಯಾಮವನ್ನು ಪರಿಚಯಿಸಿದವು. ಹೊಸ ಪರಿಕಲ್ಪನೆಯ ನೃತ್ಯಕ್ಕೆ ವೇಯ್ನ್‌, ‘ರ‍್ಯಾಂಡಮ್‌ ಡಾನ್ಸ್’ ಎಂದೇ ಹೆಸರಿಟ್ಟರು. ಪಾಪ್‌ ಹಾಗೂ ಸಾಂಪ್ರದಾಯಿಕ ನೃತ್ಯಗಳ ನಡುವಿನ ಹೊಸ ದಾರಿಯಾಗಿ ಬೆಳೆದ ಈ ನೃತ್ಯದಿಂದಾಗಿ ವೇಯ್ನ್‌ ಜಗತ್ತಿಗೆ ಪರಿಚಿತರಾದರು.

ಅಲ್ಲಿಂದ ತಮ್ಮ ನೃತ್ಯ ಬದುಕಿನ ಗ್ರಾಫ್‌ ಏರಿಸಿಕೊಳ್ಳುತ್ತಲೇ ಸಾಗಿದ ವೇಯ್ನ್‌ ‘ರಾಯಲ್‌ ಬ್ಯಾಲೆ’ ನೃತ್ಯ ಸಂಸ್ಥೆಯಲ್ಲಿ ನೃತ್ಯ ಸಂಯೋಜಕರಾದರು. ಜಗದ್ವಿಖ್ಯಾತಿ ಪಡೆದ ‘ಹ್ಯಾರಿ ಪಾಟರ್‌’ ಸಿನಿಮಾದಲ್ಲಿ ಮೂವ್‌ಮೆಂಟ್‌ ಡೈರೆಕ್ಟರ್‌ ಆಗಿಯೂ ಮೆಚ್ಚುಗೆ ಗಳಿಸಿದರು. ವಿಭಿನ್ನ ಚಲನೆಯ ಮೂಲಕ ನೃತ್ಯ ಮಾಡುವುದು ಎಂದರೆ ನೃತ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಎಂದೇ ನಂಬಿದ್ದಾರೆ.

‘ನೃತ್ಯವನ್ನು ಯಾಕೆ ಒಂದು ಚೌಕಟ್ಟಿನಲ್ಲಿಯೇ ಇಟ್ಟು ನೋಡಬೇಕು. ಚೌಕಟ್ಟಿನಾಚೆಗೆ ಬೆಳೆಯಲು ಯಾಕೆ ಬಿಡಬಾರದು. ನನ್ನ ಪ್ರಕಾರ ನೃತ್ಯಕ್ಕೆ ಯಾವುದೇ ನಿಯಮ ಇಲ್ಲ. ಮನಸ್ಸಿನ ಭಾವನೆಗಳನ್ನು ಹೊರಹಾಕುವ ಮಾಧ್ಯಮ ಅದು. ನೃತ್ಯವು ಬದುಕಿನ ಭಾಗವಾಗಬೇಕು. ಪ್ರತಿಯೊಬ್ಬರೂ ಅವರ ಮನಸ್ಸಿನಾಳದ ಕಲ್ಪನೆಗೆ ನೃತ್ಯ ರೂಪ ನೀಡುತ್ತಾ ಸಂತೋಷ ಅನುಭವಿಸುವಂತಾಗಬೇಕು. ಅವಕಾಶಗಳ ಮೊರೆಹೋಗುತ್ತಾ ನೃತ್ಯದೊಂದಿಗೆ ಬದುಕು ಹೆಣೆದುಕೊಳ್ಳಬೇಕು’ ಎಂಬುದು ಅವರ ವಿಶ್ಲೇಷಣೆ.

ಇದೀಗ ವೇಯ್ನ್‌ ಅವರ ಕಂಪೆನಿ ಹಾಗೂ ಬೆಂಗಳೂರಿನ ಅಟ್ಟಕ್ಕಲರಿ ಸಂಸ್ಥೆ ‘ಮಿಕ್ಸ್‌ ದ ಬಾಡಿ’ ಎನ್ನುವ ಕಲ್ಪನೆಯನ್ನು ಹೊಸೆದಿವೆ. ಮಿಕ್ಸ್‌ ದ ಬಾಡಿ, ಪ್ರಪಂಚದ ನಾನಾ ಭಾಗದಲ್ಲಿರುವವರಿಗೆ ನೃತ್ಯದ ಮೂಲಕ ಸೃಜನಾತ್ಮಕವಾಗಿ ಯೋಚಿಸುವುದರ ಬಗೆಗೆ ಹೇಳಿಕೊಡುತ್ತದೆ. ಆ ಮೂಲಕ ಆಸಕ್ತರು ತಮ್ಮದೇ ಆದ ರೀತಿಯಲ್ಲಿ ನೃತ್ಯ ಮಾಡಲು ಸಾಧ್ಯವಾಗಲಿದೆ.

‘ಪ್ರತಿಯೊಬ್ಬರೂ ತಮ್ಮದೇ ನೃತ್ಯ ಶೈಲಿಯನ್ನು ರೂಢಿಸಿಕೊಳ್ಳಬೇಕು. ಅದಕ್ಕೆ ಅಗತ್ಯವಾದ ಕೌಶಲವನ್ನು ನಾವು ಮಿಕ್ಸ್‌ ದ ಬಾಡಿ ಮೂಲಕ ಹೇಳಿಕೊಡುತ್ತೇವೆ. ಆಸಕ್ತರು ಯುವಮನಸ್ಸುಗಳನ್ನು ಸ್ಫೂರ್ತಿಗೊಳಿಸುತ್ತಾ ಹೊಸ ಬಗೆಯ ನೃತ್ಯಕ್ಕೆ ಮನಸ್ಸು ತೆರೆದುಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ. ಸಮಕಾಲೀನ ನೃತ್ಯ ಇಂದಿನ ನೈಜ ಸ್ಥಿತಿಯನ್ನು ಪ್ರತಿನಿಧಿಸುವಂತಿರಬೇಕು’ ಎಂದು ವೇಯ್ನ್‌ ಅಭಿಪ್ರಾಯಪಡುತ್ತಾರೆ.

ನೃತ್ಯ ಸಂಯೋಜನೆಗೆ ವೇಯ್ನ್‌ ನೀಡುವ ವ್ಯಾಖ್ಯಾನ– ಸೃಜನಾತ್ಮಕ ಕ್ರಿಯೆ. ‘ನೃತ್ಯಾಸಕ್ತರು ಹಾಗೂ ನಾನು ಕ್ರಿಯಾತ್ಮಕವಾಗಿರಲು ಮಾಡುವ ಕೆಲಸವೇ ನೃತ್ಯ ಸಂಯೋಜನೆ. ಹೀಗಾಗಿಯೇ ನಾನು ಸಂಯೋಜಿಸಿದ ನೃತ್ಯಗಳು ವಿಭಿನ್ನವಾಗಿ, ಶಕ್ತಿಯುತವಾಗಿ, ಆಕರ್ಷಕವಾಗಿ ಇರುತ್ತವೆ. ನೋಡುವ ಕಣ್ಣುಗಳು ಹೊಸತನ್ನು ಸ್ವೀಕರಿಸಲು ಸಿದ್ಧವಾಗಿರಬೇಕು’ ಎಂಬುದು ಅವರ ನಿಲುವು.

ನೃತ್ಯ, ಸಿನಿಮಾ, ವಿಡಿಯೊಗಳು ಹೀಗೆ ಒಂದಿಲ್ಲೊಂದು ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಅವರಿಗೆ ಭಾರತೀಯ ನೃತ್ಯ ಸಂಸ್ಕೃತಿಯ ಬಗೆಗೆ ವಿಶೇಷ ಒಲವಿದೆ. ‘ಲಂಡನ್‌ನಲ್ಲಿ ಭಾರತೀಯ ಸಮಕಾಲೀನ ನೃತ್ಯಗಳನ್ನು ನೋಡಿದ್ದೇನೆ. ಈ ನಿಟ್ಟಿನಲ್ಲಿ ಕೆಲಸ ಮಾಡುವ ಅನೇಕ ಭಾರತೀಯ ಕಲಾವಿದರು ಅಲ್ಲಿದ್ದಾರೆ. ಅರ್ಫಾನ್ ಖಾನ್‌ ಅಂಥವರಲ್ಲಿ ಪ್ರಮುಖರು. ಆದರೆ ಇವುಗಳಿಂದಾಚೆ ಭಾರತೀಯ ನೃತ್ಯದ ಬಗೆಗೆ ತಿಳಿದುಕೊಳ್ಳುವ ಕುತೂಹಲ ನನಗಿದೆ’ ಎಂದು ಮನದ ಬಯಕೆಯನ್ನು ಮುಂದಿಡುತ್ತಾರೆ ವೇಯ್ನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT