ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಜಿ ಮೆಣಸು ವಾಣಿಜ್ಯ ಬೆಳೆ

ರೈತರಿಗೆ ಪ್ರೇರಣೆಯಾದ ಸಂಶೋಧನಾ ವಿದ್ಯಾರ್ಥಿ
Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಶಿರಸಿ: ಹಿತ್ತಲಲ್ಲಿ ತಾನಾಗಿಯೇ ಹುಟ್ಟಿ ಬೆಳೆದು, ಗಿಡ ತುಂಬ ಬೆಳೆಯುವ ಸೂಜಿ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ನಾಟಿ ಮಾಡಿ ಉತ್ತಮ ಬೆಳೆ ತೆಗೆದಿರುವ ಸಂಶೋಧನಾ ವಿದ್ಯಾರ್ಥಿಯೊಬ್ಬರು, ವಾಣಿಜ್ಯ ಬೆಳೆಯಾಗಿ ಬೆಳೆಯಲು ರೈತರಿಗೆ ಪ್ರೇರಣೆಯಾಗಿದ್ದಾರೆ.

ಇಲ್ಲಿನ ಅರಣ್ಯ ಕಾಲೇಜಿನ ಡೀನ್ ಎಸ್‌.ಜೆ. ಪಾಟೀಲ ಮಾರ್ಗದರ್ಶನದಲ್ಲಿ ಪಿಎಚ್‌.ಡಿ ಮಾಡುತ್ತಿರುವ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ ಸಿದ್ದಪ್ಪ ಕನ್ನೂರ, ಪ್ರಾಯೋಗಿಕ ಅಧ್ಯಯನಕ್ಕಾಗಿ ರಬ್ಬರ್‌ ಹಾಗೂ ಸೂಜಿ ಮೆಣಸಿನಕಾಯಿ ಬೆಳೆದಿದ್ದಾರೆ.

ಹರೀಶಿ ಸಮೀಪ ಹೊರಬೈಲಿನಲ್ಲಿ ನಾಲ್ಕು ಗುಂಟೆ ಜಾಗದಲ್ಲಿ 36 ರಬ್ಬರ್ ಗಿಡಗಳನ್ನು ಬೆಳೆಸಿರುವ ಅವರು, ಗಿಡಗಳ ನಡುವಿನ ಖಾಲಿ ಜಾಗದಲ್ಲಿ ಅಂದಾಜು 400 ಸೂಜಿ ಮೆಣಸಿನ ಗಿಡಗಳನ್ನು ನೆಟ್ಟಿದ್ದಾರೆ. ಐದು ತಿಂಗಳ ಬಳಿಕ ಈ ಗಿಡಗಳು ಮೈತುಂಬ ಪುಟ್ಟ ಪುಟ್ಟ ಮೆಣಸಿನಕಾಯಿಗಳನ್ನು ಹೊತ್ತು ನಿಂತಿವೆ.

‘ಸೂಜಿ ಮೆಣಸಿನ ಬೀಜ ಬಿತ್ತಿ, ಸಸಿ ಮಾಡುವ ವಿಧಾನ ಕಷ್ಟವೆಂಬ ಭಾವನೆ ರೈತರಲ್ಲಿದೆ. ಆದರೆ ಬಲಿತ ಬೀಜಗಳನ್ನು 12 ತಾಸು ನೀರಿನಲ್ಲಿ ನೆನೆಯಿಸಿ, ಬಿತ್ತಿದರೆ 20 ದಿನಗಳಿಗೆ ಅಗೆಮಡಿಯಲ್ಲಿ ಸಸಿಗಳು ಚಿಗುರೊಡೆಯುತ್ತವೆ. ಅವುಗಳನ್ನು ಪ್ರತ್ಯೇಕಿಸಿ, ನೆಲದಲ್ಲಿ ನಾಟಿ ಮಾಡಿದರೆ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ವರ್ಷಕ್ಕೆ ನಾಲ್ಕು ಬಾರಿ ಮೆಣಸಿನಕಾಯಿ ಕೊಯ್ಲು ಮಾಡಬಹುದು’ ಎನ್ನುತ್ತಾರೆ ಸಿದ್ದಪ್ಪ.

ಮೊದಲ ಕೊಯ್ಲಿನಲ್ಲಿಯೇ ತಮಗೆ 10 ಕೆ.ಜಿ.ಯಷ್ಟು ಹಸಿ ಮೆಣಸಿನಕಾಯಿ ದೊರೆತಿದ್ದು, ಒಣಗಿದ ಮೇಲೆ ಇದರ ತೂಕ ಅರ್ಧದಷ್ಟು ತಗ್ಗುತ್ತದೆ ಎನ್ನುತ್ತಾರೆ ಅವರು.

‘ಒಂದು ಗಿಡ ನಾಲ್ಕೈದು ವರ್ಷ ಫಲ ಕೊಡುತ್ತದೆ. ವಿಶೇಷ ಆರೈಕೆ, ಹೆಚ್ಚಿನ ನೀರಾವರಿ ಅಗತ್ಯವಿಲ್ಲದ ಈ ಬೆಳೆಯನ್ನು ರೈತರು ಉಪಬೆಳೆಯಾಗಿ ಬೆಳೆದುಕೊಳ್ಳಬಹುದು. ಕೊಟ್ಟಿಗೆ ಗೊಬ್ಬರ, ಎರೆಹುಳು, ಜೈವಿಕ ಗೊಬ್ಬರ, ಭೂಮಿ ಹದಗೊಳಿಸುವಿಕೆ ಎಲ್ಲ ಸೇರಿ ಅಂದಾಜು ₹ 7ಸಾವಿರ ಖರ್ಚು ತಗುಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಣ ಸೂಜಿ ಮೆಣಸು ಕೆ.ಜಿ.ಯೊಂದಕ್ಕೆ ₹ 500 ದರವಿದ್ದು, ಮೊದಲ ಕೊಯ್ಲಿನಲ್ಲೇ ₹ 2,500 ಆದಾಯ ದೊರೆತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೊರ ರಾಜ್ಯಗಳಲ್ಲಿ ಬೇಡಿಕೆ: ‘ಹಪ್ಪಳ ತಯಾರಿಸುವ ಗುಜರಾತ್, ಗೋವಾ ರಾಜ್ಯಗಳಲ್ಲಿ ಸೂಜಿ ಮೆಣಸಿಗೆ ಅಧಿಕ ಬೇಡಿಕೆಯಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲಾಗುತ್ತಿಲ್ಲ. ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ, ಕಳೆದ ವರ್ಷ ರೈತರಿಂದ 1 ಟನ್ ಸೂಜಿ ಮೆಣಸು ಖರೀದಿಸಿತ್ತು.

ಹಿತ್ತಲಲ್ಲಿ  ಹುಟ್ಟುವ ಗಿಡದಲ್ಲಿ ಏಕಗಾತ್ರದ ಕಾಯಿಗಳು ಬರುವುದಿಲ್ಲ. ಆದರೆ ಸಿದ್ದಪ್ಪ ಅವರು ನಾಟಿ ಮಾಡಿ ಬೆಳೆಸಿರುವ ಗಿಡಗಳು ಒಂದೇ ಗಾತ್ರದ ಹಣ್ಣುಗಳನ್ನು ಬಿಟ್ಟಿರುವುದು ವಿಶೇಷವಾಗಿದೆ. ಇಂತಹ ಗುಣಮಟ್ಟದ ಬೆಳೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು’ ಎಂದು ಸಂಸ್ಥೆಯ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಹೇಳುತ್ತಾರೆ.

*
ಗೃಹಿಣಿಯರು, ವೃದ್ಧರು ಹೆಚ್ಚು ಶ್ರಮವಿಲ್ಲದೇ ಹಿತ್ತಲಿನಲ್ಲಿಯೇ ಸೂಜಿ ಮೆಣಸಿನ ಗಿಡ ಬೆಳೆಸಿ, ಆದಾಯ ಪಡೆಯಬಹುದು.
-ಸಿದ್ದಪ್ಪ ಕನ್ನೂರ, ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT