ಉಡುಪಿ

ಸುಕುಮಾರ ಶೆಟ್ಟರಿಗೆ ಸಂಕಟ

ಕಳೆದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಬಿಜೆಪಿ ಮುಖಂಡ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈ ಬಾರಿ ಗೆಲ್ಲಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಟಿಕೆಟ್ ಸಹ ಅವರಿಗೇ ಸಿಗುವ ನಿರೀಕ್ಷೆ ಇದೆ.

ಸುಕುಮಾರ ಶೆಟ್ಟಿ

ಉಡುಪಿ: ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರ ಆಗಮನ ಬೈಂದೂರು ವಿಧಾನಸಭಾ ಕ್ಷೇತ್ರದ ರಾಜಕೀಯ ರಂಗೇರಲು ಕಾರಣವಾಗಿದೆ. ಟಿಕೆಟ್‌ ಯಾರಿಗೆ ಎಂಬ ಪ್ರಶ್ನೆ ಉದ್ಭವಿಸಿರುವುದರಿಂದ ಈ ಕ್ಷೇತ್ರ ಕುತೂಹಲದ ಕೇಂದ್ರವಾಗಿದೆ.

ಕಳೆದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಬಿಜೆಪಿ ಮುಖಂಡ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈ ಬಾರಿ ಗೆಲ್ಲಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಟಿಕೆಟ್ ಸಹ ಅವರಿಗೇ ಸಿಗುವ ನಿರೀಕ್ಷೆ ಇದೆ. ಆದರೆ, ಹಿರಿಯ ರಾಜಕಾರಣಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸಹ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿರುವುದು ಮರು ಲೆಕ್ಕಾಚಾರಕ್ಕೆ ಕಾರಣವಾಗಿದೆ. ಪ್ರತಿಸ್ಪರ್ಧಿಯ ಆಗಮನ ಸುಕುಮಾರ ಶೆಟ್ಟರ ಏಕಸ್ವಾಮ್ಯಕ್ಕೆ ಪೆಟ್ಟು ನೀಡಿದೆ.

ಜಯಪ್ರಕಾಶ್ ಹೆಗ್ಡೆ ಅವರು ಬೈಂದೂರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲಲ್ಲಿ ಸಭೆಗಳನ್ನು ಸಹ ಮಾಡುತ್ತಿರುವ ಸುದ್ದಿ ಇದೆ. ಹೆಗ್ಡೆ ಅವರ ಆಯ್ಕೆ ರಾಜಕೀಯವಾಗಿ ಸರಿಯಾಗಿಯೇ ಇದೆ. ಏಕೆಂದರೆ ಜಿಲ್ಲೆಯ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲದಂತಹ ಸ್ಥಿತಿ ಇದೆ. ಒಂದು ವೇಳೆ ಟಿಕೆಟ್ ಪಡೆದು ಸ್ಪರ್ಧಿಸಬೇಕಾದರೆ ಅದು ಬೈಂದೂರು ಮಾತ್ರ.

ಒಟ್ಟಾರೆ ಹೆಗ್ಡೆ ಅವರ ಓಡಾಟ ಸುಕುಮಾರ ಶೆಟ್ಟಿ ಅವರ ಸಂಕಟಕ್ಕೆ ಕಾರಣವಾಗಿದೆ. ಈ ಬಗ್ಗೆ ಅವರು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ ಎಂಬ ಸುದ್ದಿಯೂ ಇದೆ.

ಮುಖಂಡನೊಬ್ಬ ಏಕಾಏಕಿ ಹೊಸ ಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಹಿರಿಯ ಮುಖಂಡನನ್ನು ಹಿಂದಿಕ್ಕಿ ಮುನ್ನೆಲೆಗೆ ಬರಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಜಯಪ್ರಕಾಶ್ ಹೆಗ್ಡೆ ಅವರು ಕುಂದಾಪುರ ತಾಲ್ಲೂಕಿನವರೇ ಆಗಿರುವ ಕಾರಣ ಅವರಿಗೆ ಆ ಕ್ಷೇತ್ರ ಹೊಸದಲ್ಲ. ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದರು.

ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಳ್ಳುವಲ್ಲಿ ಹೆಗ್ಡೆ ಅವರ ಪರಿಶ್ರಮವೂ ಇದೆ. ಅಂದರೆ ಇಂದಿನ ಮುಂದುವರೆದ ಜಿಲ್ಲೆಗೆ ಅಡಿಪಾಯ ಹಾಕಿದ್ದವರಲ್ಲಿ ಅವರು ಪ್ರಮುಖರಾಗಿದ್ದಾರೆ. ಮೀನುಗಾರರಿಗೆ ಡೀಸೆಲ್ ಸಬ್ಸಿಡಿಯನ್ನು ಪರಿಚಯಿಸಿದ್ದು ಸಹ ಅವರೇ. ಆಗ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದರು.

ಯಾರೇ ದೂರುವಾಣಿ ಕರೆ ಮಾಡಿದರೂ ಸ್ವೀಕರಿಸಿ ಅಹವಾಲು ಕೇಳಿ ಅದನ್ನು ಪರಿಹರಿಸಲು ಯತ್ನಿಸುವ ಗುಣ ಇನ್ನೊಂದು ಸಕಾರಾತ್ಮ ಅಂಶವಾಗಿದೆ. ಇದೆಲ್ಲದರ ಪರಿಣಾಮ ಬೈಂದೂರು ಮಾತ್ರವಲ್ಲ ಇಡೀ ಜಿಲ್ಲೆಯಲ್ಲಿಯೇ ತಮ್ಮದೇ ಆದ ಬಳಗವನ್ನು ಹೆಗ್ಡೆ ಹೊಂದಿದ್ದಾರೆ. ಉಡುಪಿ– ದಕ್ಷಿಣ ಕನ್ನಡ ಜಿಲ್ಲೆ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 872 ಮೊದಲ ಆದ್ಯತೆಯ ಮತವನ್ನು ಪಡೆದಿದ್ದನ್ನು ಸ್ಮರಿಸಬಹುದು.

ಆದ್ದರಿಂದ ಅವರ ಮುಂದಿರುವ ಸವಾಲು ಟಿಕೆಟ್ ಹೊರತು ಬೆಂಬಲ ಅಲ್ಲ. ಒಮ್ಮೆ ಟಿಕೆಟ್ ಸಿಕ್ಕರೆ ಜನರ ಬೆಂಬಲು ಪಡೆಯುವ ವಿಶ್ವಾಸ ಅವರದ್ದಾಗಿದೆ ಎನ್ನುತ್ತವೆ ಮೂಲಗಳು.

ಉತ್ತಿ, ಬಿತ್ತಿ, ಪೋಷಿಸಿದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ಅಕಾಲಿಕ ಮಳೆ ಸುರಿದ ಅನುಭವ ಸುಕುಮಾರ ಶೆಟ್ಟಿ ಅವರದ್ದಾಗಿದೆ. ಆ ಭಾಗದಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಂಡಿದ್ದಾರೆ. ತನು,ಮನ,ಧನವನ್ನು ಬಿಜೆಪಿಗಾಗಿ ಸಮರ್ಪಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರೂ ಆಗಿದ್ದಾರೆ. ಆದರೆ ಟಿಕೆಟ್ ನೀಡುವುದು ಹೈಕಮಾಂಡ್ ಹೊರತು ರಾಜ್ಯ ಘಟಕ ಅಲ್ಲ ಎಂದು ಈಗಾಗಲೇ ಪಕ್ಷ ಹೇಳಿದೆ. ಅದರ ಆಧಾರದ ಮೇಲೆ ಜನಾಭಿಪ್ರಾಯ ಪಡೆಯಲು ಹೈಕಮಾಂಡ್ ಮುಂದಾದರೆ ಹೆಗ್ಡೆ ಅವರ ಪೈಪೋಟಿ ಎದುರಿಸಲೇಬೇಕಾಗುತ್ತದೆ.

ಸೋತವರ ಬದಲು ಗೆಲ್ಲುವ ಸಾಮರ್ಥ್ಯ ಇರುವ ಹೊಸ ಮುಖಗಳಿಗೆ ಮಣೆ ಹಾಕುವ ತೀರ್ಮಾನ ಮಾಡಿದರೂ ತಕ್ಕಡಿ ಯಾವ ಕಡೆ ಬೇಕಾದರೂ ತೂಗಬಹುದು. ಒಟ್ಟಾರೆ ಬೈಂದೂರು ಟಕೆಟ್ ಪಡಯೋ ಬಿಜೆಪಿ ಮುಖಂಡ ಯಾರೆಂಬ ಕುತೂಹಲ ಮೂಡಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಮುಂಬೈನಿಂದ ಬಂದವು ವಿಶೇಷ ಯಂತ್ರ

ಉಡುಪಿ
ಮುಂಬೈನಿಂದ ಬಂದವು ವಿಶೇಷ ಯಂತ್ರ

19 Jan, 2018

ಉಡುಪಿ
ಶಿಶು, ತಾಯಿ ಮರಣ ಪ್ರಮಾಣ ಇಳಿಕೆ

ರೋಗಗಳು ಹರಡದಂತೆ ತಡೆಯುವುದು ಮತ್ತು ಆರೋಗ್ಯ ಕಾಯ್ದುಕೊಳ್ಳುವುದು ಹೊಸ ಆರೋಗ್ಯ ನೀತಿಯ (2017) ಪ್ರಮುಖ ಧ್ಯೇಯವಾಗಿದೆ

19 Jan, 2018

ಉಡುಪಿ
ಕೃಷ್ಣನ ಒಲಿಸಲು ಭಕ್ತಿ, ಜ್ಞಾನ, ವೈರಾಗ್ಯ ಅಗತ್ಯ

ಶ್ರೀಕೃಷ್ಣನನ್ನು ಕಟ್ಟಿ ಹಾಕಬೇಕಾದರೆ ಮೂರು ದಾರಗಳು ಅವಶ್ಯಕ. ಭಕ್ತಿ, ಜ್ಞಾನ, ವೈರಾಗ್ಯ ಎಂಬ ದಾರಗಳಿಂದ ಕೃಷ್ಣನನ್ನು ಕಟ್ಟಿ, ಒಲಿಸಿಕೊಳ್ಳಬಹುದು ಎಂದು ಪೇಜಾವರ ಮಠದ ವಿಶ್ವೇಶ...

19 Jan, 2018
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

ಉಡುಪಿ
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

18 Jan, 2018
ಪಲಿಮಾರು ಮಠದಲ್ಲಿದೆ  800 ವರ್ಷಗಳ ಹಿಂದಿನ ಗ್ರಂಥ

ಉಡುಪಿ
ಪಲಿಮಾರು ಮಠದಲ್ಲಿದೆ 800 ವರ್ಷಗಳ ಹಿಂದಿನ ಗ್ರಂಥ

18 Jan, 2018