ಗುಂಡ್ಲುಪೇಟೆ

ಸಫಾರಿಗೆ ತೆರಳಲು ಮುಗಿಬಿದ್ದ ಪ್ರವಾಸಿಗರು

ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಒಂದು ವಾರದಿಂದ ಸುಮಾರು 5,000 ಪ್ರವಾಸಿಗರು ಆಗಮಿಸಿದ್ದು, ಅಂದಾಜು ₹8ರಿಂದ10 ಲಕ್ಷ ಆದಾಯ ಬಂದಿದೆ.

ಗುಂಡ್ಲುಪೇಟೆ: ವಾರಾಂತ್ಯ ಮತ್ತು ಹೊಸ ವರ್ಷಾಚರಣೆ ಜತೆಯಾಗಿ ಬಂದಿದ್ದರಿಂದ ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಬಂಡೀಪುರ ಉದ್ಯಾನದಲ್ಲಿನ ಸಫಾರಿ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರು ಹಾಗೂ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡಿದ್ದಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದು ಸಾಮಾನ್ಯವಾದರೂ, ಹೊಸ ವರ್ಷದ ಕಾರಣ ಜನರ ಸಂಖ್ಯೆ ದುಪ್ಪಟ್ಟಾಗಿತ್ತು.

ಚಳಿ ಮತ್ತು ಮಂಜಿನ ವಾತಾವರಣ ಇರುವುದರಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕಳೆದ ಮೂರು ದಿನಗಳಲ್ಲಿ ಸುಮಾರು 40,000ಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದರು.

ಶನಿವಾರ ವೈಕುಂಠ ಏಕಾದಶಿ, ಭಾನುವಾರದ ರಜೆ ಮತ್ತು ಸೋಮವಾರ ಹೊಸ ವರ್ಷದ ಕಾರಣ ಹೆಚ್ಚಿನ ಭಕ್ತರು ಬೆಟ್ಟಕ್ಕೆ ತೆರಳಲು ಬಂದಿದ್ದಾರೆ. ಶನಿವಾರ ಮತ್ತು ಭಾನುವಾರ ಸುಮಾರು 20,000, ಸೋಮವಾರ 20 ರಿಂದ 25,000 ಜನರು ಆಗಮಿಸಿದ್ದಾರೆ.

ಭಕ್ತರಿಗೆ ತೊಂದರೆಯಾಗದಂತೆ 15 ಬಸ್‌ಗಳು ಜತೆಗೆ 2 ಮಿನಿ ಬಸ್ ಮತ್ತು ಅರಣ್ಯ ಇಲಾಖೆಯ ವಾಹನಗಳನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗಿದೆ ಎಂದು ಪಟ್ಟಣದ ಕೆ.ಎಸ್‍.ಆರ್‌.ಟಿ.ಸಿ. ಡಿಪೊ ವ್ಯವಸ್ಥಾಪಕ ಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಒಂದು ವಾರದಿಂದ ಸುಮಾರು 5,000 ಪ್ರವಾಸಿಗರು ಆಗಮಿಸಿದ್ದು, ಅಂದಾಜು ₹8ರಿಂದ10 ಲಕ್ಷ ಆದಾಯ ಬಂದಿದೆ. ಸಫಾರಿ ಮತ್ತು ವಸತಿಗೃಹಗಳಲ್ಲಿ ತಂಗಲು ಬರುತ್ತಿರುವ ಜನರ ಸಂಖ್ಯೆ ಅಧಿಕವಾಗಿತ್ತು.

ಸಫಾರಿಗೆ ಟಿಕೆಟ್‌ ಸಿಗದ ಕೆಲವರು ನಿರಾಶೆಯಿಂದ ಮರಳಿದರು. ಹೊಸ ವರ್ಷದ ಹಿಂದಿನ ದಿನ ಅರಣ್ಯ ಇಲಾಖೆಯ ವಸತಿಗೃಹಗಳ ಬುಕಿಂಗ್‌ ಸ್ಥಗಿತಗೊಳಿಸಿದ್ದರಿಂದ ಪ್ರವಾಸಿಗರು ಖಾಸಗಿ ರೆಸಾರ್ಟ್‌ಗಳನ್ನು ಅವಲಂಬಿಸಬೇಕಾಯಿತು.

‘ಡಿ. 24ರಿಂದಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮಂಗಳವಾರದಿಂದ ಇಲ್ಲಿಗೆ ಭೇಟಿ ನೀಡುವವರ ಪ್ರಮಾಣ ಇಳಿಕೆಯಾಗಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್ ತಿಳಿಸಿದರು.

‘ವಿಶೇಷ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದರಿಂದ ಇಲಾಖೆ ಯವರು ಸೌಲಭ್ಯಗಳನ್ನು ಹೆಚ್ಚಿಸಬೇಕು. ನೂರಾರು ಕಿ.ಮೀ.ಗಳಿಂದ ಇಲ್ಲಿಗೆ ಬಂದಿರುತ್ತೇವೆ. ಸಫಾರಿಗೆ ಅವಕಾಶ ಸಿಗದಿದ್ದರೆ ತುಂಬಾ ಬೇಸರವಾಗುತ್ತದೆ. ಟ್ರಿಪ್‌ ಸಂಖ್ಯೆ ಹೆಚ್ಚಿಸಿ ಎಲ್ಲ ಪ್ರವಾಸಿಗರಿಗೂ ಸಫಾರಿಗೆ ತೆರಳುವ ವ್ಯವಸ್ಥೆ ಮಾಡಬೇಕು’ ಎಂದು ಬೆಂಗಳೂರಿನ ನಿವಾಸಿ ಡಾ. ಶಿವಾನಂದ ಒತ್ತಾಯಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

ಚಾಮರಾಜನಗರ
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

19 Jan, 2018

ಚಾಮರಾಜನಗರ
ನೂತನ ಪಿಂಚಣಿ ಯೋಜನೆ ರದ್ದತಿಗೆ ಆಗ್ರಹ

ಎನ್‌ಪಿಎಸ್‌ ಯೋಜನೆಗೆ ಒಳಪಡುವ ನೌಕರರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕ್ರಮವಹಿಸಬೇಕು. ನೌಕರರ ಹಿತ ಕಾಪಾಡಬೇಕು

19 Jan, 2018
ನಾಲೆಗೆ ನೀರು ಹರಿಸಲು ಆಗ್ರಹ

ಸಂತೇಮರಹಳ್ಳಿ
ನಾಲೆಗೆ ನೀರು ಹರಿಸಲು ಆಗ್ರಹ

18 Jan, 2018
ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

ಚಾಮರಾಜನಗರ
ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

18 Jan, 2018

ಚಾಮರಾಜನಗರ
ಸೆಸ್ಕ್‌ ಕಾರ್ಯವೈಖರಿಗೆ ಅಸಮಾಧಾನ

ಉಳುಮೆ ಮಾಡುವಾಗ ಕಂಬಗಳು ಸಡಿಲಗೊಂಡು ಈ ಅವಘಡ ಸಂಭವಿಸುತ್ತದೆ ಎಂದು ಸೆಸ್ಕ್‌ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದರು.

18 Jan, 2018