ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಸ್ವರೂಪ; ಬೇಕು ಕೇಂದ್ರದ ನಿರೂಪ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಸಮಾಜವು ಅಸಮಾನತೆ, ಅಮಾನವೀಯತೆ ಹಾಗೂ ಮೌಢ್ಯದಿಂದ ತುಂಬಿ ಹೋದಾಗ, ಸಮಾಜ ಸುಧಾರಕರು ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗುತ್ತಾರೆ. ವರ್ಣಾಶ್ರಮ ಧರ್ಮವು ರಾಜ್ಯಾಡಳಿತದಲ್ಲಿ ಪ್ರವೇಶಿಸುತ್ತಲೇ ನೆಲಮೂಲದ ಮತ್ತು ತಳಮೂಲದ ಸಮುದಾಯಗಳನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಅಂಥವರಿಗೆ ಸಾಮಾಜಿಕ ಸ್ಥಾನವನ್ನು ಕೊಡಿಸುವ ಉದ್ದೇಶದಿಂದ ಬಸವಾದಿ ಶರಣರು ಸಮಾಜ ಪರಿವರ್ತನೆ ಕೈಗೆತ್ತಿಕೊಳ್ಳುತ್ತಾರೆ. ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡುತ್ತಾರೆ. ಶರಣರು ಎತ್ತಿದ ಎಷ್ಟೋ ಪ್ರಶ್ನೆಗಳಿಗೆ ವಚನ ಕ್ರಾಂತಿಯಿಂದ ಉತ್ತರ ಸಿಕ್ಕಿದೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಲಿಂಗಾಯತರು ಮತ್ತು ಅದರೊಟ್ಟಿಗೆ ಗುರುತಿಸಿಕೊಳ್ಳುವ ನೂರಾರು ಜಾತಿಗಳನ್ನು ಇಂದಿಗೂ ಶೂದ್ರರೆಂದೇ ಪರಿಗಣಿಸಲಾಗುತ್ತಿದೆ.

ಇಂಥ ವ್ಯವಸ್ಥೆಯಿಂದ ಹೊರಬರಬೇಕೆಂದು ನಿರ್ಧರಿಸಿದ ನಾವು 2004ರಲ್ಲಿ ಧಾರ್ಮಿಕ ನೇತಾರರು, ಅನುಭಾವಿಗಳು, ಶರಣರು ಮತ್ತು ಬಸವಕೇಂದ್ರದ ಕಾರ್ಯಕರ್ತರನ್ನು ಒಳಗೊಂಡು ಹೊಸ ಚಿಂತನೆ ನಡೆಸಿದೆವು. ನಮ್ಮದು ಬಸವಧರ್ಮ ಎಂದು ಘೋಷಿಸಲಾಯಿತು. ಇದೇ ಸಂದರ್ಭದಲ್ಲಿ ಲಿಂಗಾಯತೇತರರು ಬಸವಧರ್ಮವನ್ನು ಅನುಸರಿಸಬಹುದೆಂಬ ಅಭಿಪ್ರಾಯ ವ್ಯಕ್ತವಾಯಿತು.

ಮಾಂಸಾಹಾರಿಗಳಾಗಿದ್ದವರೂ ಪರಿವರ್ತಿತರಾಗಿ ಲಿಂಗವಂತರಾಗಬಹುದೆನ್ನುವ ವಿಚಾರವನ್ನು ಮುಂದೆ ಮಾಡಿ, ಸ್ವತಂತ್ರ ಧರ್ಮದ ಆಂದೋಲನವನ್ನು ಅಂದು ಹತ್ತಿಕ್ಕಲಾಯಿತು. ಆಗ ಕೆಲವರು ಟೀಕಿಸಿದರು. ಅಂದು ನಾನೊಬ್ಬನೇ ಟೀಕೆಯ ಕೇಂದ್ರವಾಗಿದ್ದೆ. ಎರಡು ತಿಂಗಳವರೆಗೆ ಸತತವಾಗಿ ಟೀಕೆಗಳು ಕೇಳಿಬಂದವು. ಅದು ಪರಿವರ್ತನೆ ವಿರುದ್ಧ ಕೇಳಿಬಂದ ಟೀಕೆ ಆಗಿತ್ತು. ಅದನ್ನೆಲ್ಲ ಸಹಿಸಿಕೊಳ್ಳಲಾಯಿತು. ಒಂದುಕಡೆ, ಈ ಪ್ರಯತ್ನ ನಡೆಯುತ್ತಿರುವಾಗ ಕೆಲವರು ಕೈಚೆಲ್ಲಿ ಕುಳಿತರು. ಇನ್ನು ಕೆಲವರು ತಾವೇ ಸೃಷ್ಟಿಸಿಕೊಂಡ ಸಮಸ್ಯೆಯಿಂದಾಗಿ ಮೌನಕ್ಕೆ ಶರಣಾದರು. ಎಲ್ಲ ಸಮಾಜ ಸುಧಾರಕರ ನಡುವೆಯೂ ಕೆಲ ಮೂಲಭೂತವಾದಿಗಳು ಇದ್ದಾರೆ. ಅದರಂತೆ ಬಸವಣ್ಣನವರ ಭಕ್ತರಲ್ಲೂ ಮೂಲಭೂತವಾದಿಗಳು ಇದ್ದಾರೆ.

ಅಂದು ಬಸವಾದಿ ಶರಣರು ಬಿತ್ತಿದ ವಚನಗಳು ಮತ್ತು ವಿಚಾರಗಳು ಇಂದಿಗೂ ಜೀವಂತ. ಜಗತ್ತು ಇರುವವರೆಗೂ ದಾರ್ಶನಿಕರ ಚಿಂತನೆಗಳು ಜೀವಂತವಾಗಿ ಇರುತ್ತವೆ. ಯಾರು ಅವರ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೋ, ಅಂಥವರ ಮುಖಾಂತರ ಅವು ಪುನಃ ಸಂಭವಿಸುತ್ತವೆ. ಯಾರ ಮುಖಾಂತರವಾಗಿ ವಿಚಾರಗಳು ಪ್ರಯೋಗಗೊಳ್ಳುತ್ತವೋ ಅಂಥವರ ಮೇಲೆ ಸಂಪ್ರದಾಯಬದ್ಧ ಸಮಾಜವು ಹರಿಹಾಯುತ್ತದೆ.

ಹದಿನಾಲ್ಕು ವರ್ಷಗಳ ಬಳಿಕ ಸ್ವತಂತ್ರ ಧರ್ಮದ ವಿಚಾರಚಿಗುರೊಡೆಯುತ್ತಿದೆ. ಈ ನಡುವೆ ಅಂದರೆ 2014ರಲ್ಲಿ ಜೈನಧರ್ಮಕ್ಕೆ ಸ್ವತಂತ್ರಧರ್ಮದ ಸ್ಥಾನಮಾನ ದೊರಕಿದ್ದು, ಲಿಂಗಾಯತರಲ್ಲಿ ಸ್ವತಂತ್ರ ಧರ್ಮದ ಆಸೆ ಚಿಗುರಲು ಕಾರಣವಾಯಿತು.

ಭೀಮಣ್ಣ ಖಂಡ್ರೆ ಅವರ ನೇತೃತ್ವದಲ್ಲಿ ನಡೆದ ಹರಳಯ್ಯ ಮತ್ತು ಮಧುವಯ್ಯ ಸಂಸ್ಮರಣ ಮಹೋತ್ಸವದಲ್ಲಿ ಭಾಗವಹಿಸಿದ್ದ ಕೇಂದ್ರದ ಅಂದಿನ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಹಾಗೂ ಸುಶೀಲ್‍ಕುಮಾರ್ ಶಿಂಧೆ ಮತ್ತಿತರ ಗಣ್ಯರ ಮುಂದೆ ನಾನಂದು ಸ್ವತಂತ್ರ ಧರ್ಮದ ವಿಚಾರವನ್ನಿಟ್ಟೆ. ಮೊಯಿಲಿ ಅವರು, ‘ನೀವೆಲ್ಲ ಕೂಡಿಕೊಂಡು ದೆಹಲಿಗೆ ನಿಯೋಗ ತೆಗೆದುಕೊಂಡು ಬನ್ನಿ’ ಎಂದರು.

ಈ ವಿಚಾರವಾಗಿ ಮಹಾಸಭೆಯ ಪದಾಧಿಕಾರಿಗಳು ಮತ್ತಿತರರು ಕೂಡಿಕೊಂಡು ದೆಹಲಿಗೆ ಹೋಗಿ ಭೇಟಿ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿದ್ದರಿಂದ ಸ್ವತಂತ್ರ ಧರ್ಮದ ವಿಚಾರ ಸ್ಥಗಿತಗೊಂಡಿತು.

ಇತ್ತೀಚೆಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತಿತರರು ಕೂಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿ, ಸ್ವತಂತ್ರ ಧರ್ಮದ ವಿಚಾರದಲ್ಲಿ ಕೇಂದ್ರಕ್ಕೆ ಶಿಫಾರಸು ಕಳಿಸಿಕೊಡುವಂತೆ ವಿನಂತಿ ಮಾಡಿಕೊಂಡರು. ಮುಖ್ಯಮಂತ್ರಿ ಆಗ ಆಡಿದ ಮಾತಿನಿಂದ ಉಭಯ ಬಣಗಳಲ್ಲಿ ಆಶಾವಾದ ಮೂಡಿದೆ.

ಅರಮನೆಯ ಅಭಿನಂದನಾ ಕಾರ್ಯಕ್ರಮದ ಬಳಿಕ ಕೆಲವರು ರಾಜಕೀಯೇತರವಾಗಿ ಬೀದರ್‌ನಲ್ಲಿ ಬೃಹತ್ ಸಮಾವೇಶ ಸಂಘಟಿಸಿದರು. ಕೆಲ ಸ್ವಾಮೀಜಿಗಳು ಅದರಲ್ಲಿ  ಭಾಗವಹಿಸಿ ಸರ್ಕಾರದ ಗಮನ ಸೆಳೆಯಲು ಮುಂದಾದರು. ಮಾತೆ ಮಹಾದೇವಿ; ಭಾಲ್ಕಿ, ಬೆಳಗಾವಿ, ನಿಷ್ಕಲಮಂಟಪ, ಹುಲಸೂರಿನ ಅನೇಕ ಧಾರ್ಮಿಕರು ಅದರಲ್ಲಿ ಭಾಗವಹಿಸಿದ್ದರು. ಅದಕ್ಕೊಂದು ಉತ್ತಮ ಚಾಲನೆ ದೊರೆಯಿತು.

ಬಳಿಕ ಬೆಂಗಳೂರಿನ ಸಮಾಲೋಚನಾ ಸಭೆ. ಅದರಲ್ಲಿ ನಾವೆಲ್ಲ (ಚಿತ್ರದುರ್ಗ, ಗದಗ, ಇಳಕಲ್, ಭಾಲ್ಕಿ, ನಾಗನೂರು, ಹುಲಸೂರು, ತಿಪಟೂರು ಮಠಾಧೀಶರು) ಭಾಗವಹಿಸಿ, ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದೇವೆ ಮಾತ್ರವಲ್ಲ; ಬೆಂಬಲವಾಗಿ ನಿಂತಿದ್ದೇವೆ. ಬೆಳಗಾವಿ, ಕಲಬುರ್ಗಿ, ಚಿತ್ರದುರ್ಗ, ಹುಬ್ಬಳ್ಳಿ ಮತ್ತು ವಿಜಯಪುರಗಳಲ್ಲಿ ಬೃಹತ್ ಸಮಾವೇಶಗಳು ಜರುಗಿವೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ರಾಜ್ಯ ಸರ್ಕಾರವು ಆದಷ್ಟು ಬೇಗ ಕೇಂದ್ರಕ್ಕೆ ಶಿಫಾರಸು ಕಳಿಸಿಕೊಡಬೇಕೆಂದು ಹಕ್ಕೊತ್ತಾಯ ಮಾಡುತ್ತ ಬರಲಾಗಿದೆ. ಮುಖ್ಯಮಂತ್ರಿ ಆ ಕಾರ್ಯವನ್ನು ಮಾಡುತ್ತಾರೆಂಬ ನಿರೀಕ್ಷೆ ಇದೆ.

ನಮ್ಮೆಲ್ಲರ ಹೋರಾಟದ ಮೊದಲ ಫಲಶ್ರುತಿ ಎಂಬಂತೆ ರಾಜ್ಯಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿದೆ. ತಜ್ಞರು ಒಂದು ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸಬೇಕಾಗಿದೆ. ಸಮಿತಿಯಲ್ಲಿರುವವರು ಅಧ್ಯಯನಶೀಲರು ಮತ್ತು ಅನುಭವಿಗಳಾಗಿದ್ದು, ಆ ಕಾರ್ಯವನ್ನು ದಕ್ಷತೆಯಿಂದ ನೆರವೇರಿಸುತ್ತಾರೆಂಬ ಆಶಾಭಾವನೆ ಇದೆ. ಆದರೆ ಅವರು ಏಕಪಕ್ಷೀಯವಾಗಿ ನಿರ್ಣಯ ನೀಡುತ್ತಾರೆಂಬ ಅನಿಸಿಕೆಯನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಈ ಭಾವನೆ ಬರದಂತೆ
ನೋಡಿಕೊಳ್ಳುವ ನಿಟ್ಟಿನಲ್ಲಿ ಒಬ್ಬ ಮಹಿಳಾ ಪ್ರತಿನಿಧಿ ಮತ್ತು ಲಿಂಗಾಯತ- ವೀರಶೈವ ಒಂದೇ ಎನ್ನುವ ಗುಂಪಿನಿಂದ ಒಬ್ಬರನ್ನು ನೇಮಿಸಬೇಕಿತ್ತು ಎಂಬ ವಿಚಾರವೂ ವ್ಯಕ್ತವಾಗಿದೆ.

ಎಲ್ಲ ಕಾಲಕ್ಕೂ ಎಲ್ಲದನ್ನೂ ಸಮರ್ಪಕವಾಗಿ ಮಾಡಿದರೂ ಟೀಕೆ-ಟಿಪ್ಪಣಿಗಳು ಇದ್ದೇ ಇರುತ್ತವೆ. ರಾಜ್ಯ ಸರ್ಕಾರ ಈಗಷ್ಟೇ ತಜ್ಞರ ಸಮಿತಿ ನೇಮಿಸಿದೆ. ವರದಿ ಬಂದಬಳಿಕ ಪ್ರತಿಕ್ರಿಯೆ ನೀಡುವುದು ಜಾಣ್ಮೆ. ವರದಿ ಬರುವ ಮುನ್ನವೇ ಕೆಲವರು ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿರುವುದು ಸಮಂಜಸ ಅಲ್ಲ. ಹೇಳಿಕೆಗಳನ್ನು ನೀಡಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ ಸಂದರ್ಭಾನುಸಾರ ಹೇಳಿಕೆಗಳನ್ನು ನೀಡಿದಲ್ಲಿ ಹೆಚ್ಚಿನ ಗೌರವ.

ರಾಜ್ಯ ಸರ್ಕಾರ ಶಿಫಾರಸನ್ನು ಕೇಂದ್ರಕ್ಕೆ ಕಳಿಸಿಕೊಡುತ್ತದೆ. ಏನೇ ವ್ಯತ್ಯಾಸಗಳಾದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವೇ ಅಂತಿಮ ಆಗಿರುತ್ತದೆ. ಕೆಲವರ ದೃಷ್ಟಿಯಲ್ಲಿ ವರದಿಯು ಏಕಪಕ್ಷೀಯ ಆದಲ್ಲಿ ಆಗ ಏನು ಮಾಡಬಹುದು ಎಂಬ ಪ್ರಶ್ನೆ. ಒಟ್ಟಾರೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ಸಾಕು; ಒಂದೇ ಬ್ಯಾನರ್‌ನಡಿ ಒಂದಾಗಲು ಸಾಧ್ಯವಿದೆ. ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ. ಸಮಾಜವು ತನ್ಮೂಲಕ ಒಂದಾಗುತ್ತದೆ.

ಸಮಾಜವನ್ನು ವಿಭಜಿಸುತ್ತಿದ್ದಾರೆಂಬ ಆರೋಪವನ್ನು ಕೆಲವರ ಮೇಲೆ ಮಾಡುವುದಾದಲ್ಲಿ ಕೆಲವರ ಆ ಕ್ರಮವೇ ಸಮಾಜವನ್ನು ಒಂದಾಗಿಸಲು ನೆರವಾಗಲೂಬಹುದು. ಇಲ್ಲಿ ಒಂದಷ್ಟು ಔದಾರ್ಯ ಬೇಕಾಗುತ್ತದೆ. ಬಸವಣ್ಣನವರ ಮುಂದಾಳತ್ವದಲ್ಲಿ ನಡೆದಂತಹ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಸಮುದಾಯಗಳಿಗೂ ಸಂವಿಧಾನಬದ್ಧವಾದ ಸೌಲಭ್ಯಗಳು ದೊರಕುವುದಾದಲ್ಲಿ ಒಂದಷ್ಟು ಸದ್ವಿವೇಕ ಬೇಕಾಗುತ್ತದೆ. ಹಳೆಯ ಕಾಲದ ಒಂದು ಕಾಲ್ಪನಿಕ ಕಥೆ ನೆನಪಾಗುತ್ತದೆ- ಒಬ್ಬಾತ ತಪಸ್ಸಿಗೆ ಕುಳಿತನಂತೆ. ಘೋರವಾದ ತಪಸ್ಸಿಗೆ ಮೆಚ್ಚಿದ ಶಿವ- ‘ನಿನಗೇನು ವರ ಬೇಕು’ ಎಂದು ಕೇಳುತ್ತಾನೆ. ‘ನನಗೆ ಮೂರು ವರಗಳನ್ನು ಕರುಣಿಸಬೇಕು. ನನಗೊಬ್ಬ ಶತ್ರು ಇದ್ದಾನೆ. ಅವನ ಸಾವಿನ ನಂತರ ನನಗೆ ಸಾವು ಬರಲಿ’ ಎಂದು ಕೇಳಿಕೊಳ್ಳುತ್ತಾನೆ. ಶಿವನು- ‘ಹಾಗೇ ಆಗಲಿ’ ಅನ್ನುತ್ತಾನೆ.

‘ಎರಡನೆಯ ವರವೇನು’ ಎಂದು ಶಿವನು ಕೇಳಿದಾಗ ಭಕ್ತನು- ‘ನನ್ನ ವಿರೋಧಿಗೆ ಆಶೀರ್ವದಿಸುವುದಕ್ಕಿಂತ ಎರಡುಪಟ್ಟು ನನಗೆ ಆಶೀರ್ವದಿಸಬೇಕು’ ಎನ್ನುತ್ತಾನೆ. ‘ಆಗಲಿ’ ಎನ್ನುತ್ತಾನೆ ಶಿವ. ‘ನನ್ನ ವಿರೋಧಿಯ ಒಂದು ಕಣ್ಣುಹೋಗಲಿ’ ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಶಿವನಿಂದ ತಥಾಸ್ತು. ಶತ್ರುವಿನ ಒಂದು ಕಣ್ಣು ಹೋಗುವುದರೊಂದಿಗೆ ವರ ಕೇಳಿದವನ ಎರಡೂ ಕಣ್ಣು ಹೋಗುತ್ತವೆ. ‘ಶಿವ, ಇದೇನು ಮಾಡಿದೆ! ಶತ್ರುವಿನ ಒಂದು ಕಣ್ಣು ಹೋಗಲಿ ಎಂದು ಕೇಳಿದ ನನ್ನ ಎರಡೂ ಕಣ್ಣುಗಳು ಇಲ್ಲದಂತೆ ಆಶೀರ್ವದಿಸಿಬಿಟ್ಟಿರುವೆಯಲ್ಲ!’ ಎನ್ನುತ್ತಾನೆ ಕ್ರೋಧದಿಂದ. ‘ನನ್ನ ವಿರೋಧಿಗೆ ಮೊದಲು ಸಾವು ಬರಲಿ ಎಂದು ಕೇಳಿಕೊಂಡಿದ್ದೆ. ಆದರೆ ನನಗೇ ಮೊದಲು ಸಾವೇ’ ಎಂದು ಪ್ರಶ್ನಿಸುತ್ತಾನೆ. ‘ಅಲ್ಲಯ್ಯ ಭಕ್ತ! ನೀನು ನಿನ್ನ ವಿರೋಧಿಗೆ ಕೊಡುವುದಕ್ಕಿಂತ ಎರಡುಪಟ್ಟು ವರ ಬೇಕೆಂದು ಕೇಳಿದೆಯಲ್ಲವೆ? ನಿನ್ನ ವಿರೋಧಿಯ ಒಂದು ಕಣ್ಣು ಹೋಗಿದೆ; ನಿನ್ನ ಅಪೇಕ್ಷೆಯಂತೆ ನಿನ್ನ ಎರಡೂ ಕಣ್ಣು ಹೋಗಿರುತ್ತವೆ. ನಾನೇನು ಮಾಡಲಿ’ ಅನ್ನುತ್ತಾನೆ ಶಿವ.

ನಮಗೆ ಸಿಗದಿದ್ದರೂ ತೊಂದರೆಯಿಲ್ಲ; ಇನ್ನೊಬ್ಬರಿಗೆ ಸಿಗಬಾರದು ಎಂದು ಕೆಲವರು ಬಯಸಿದಂತಿದೆ. ಸರ್ಕಾರವು ತಜ್ಞರ ಸಮಿತಿಯನ್ನು ರಚಿಸುವ ಮುನ್ನ ಎರಡೂ ಬಣದವರು ಕುಳಿತುಕೊಂಡು ಚರ್ಚಿಸಿ, ತಜ್ಞರ ಸಮಿತಿರಚಿಸಲು ಮುಂದಾಗಿದ್ದರು. ಆ ಉದ್ದೇಶಕ್ಕಾಗಿ ಸೇರಿದ್ದರು.  ಆದರೂ ಸಮಿತಿ ರಚನೆ ಆಗಲೇ ಇಲ್ಲ. ರಾಜ್ಯ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿದೆ. ಈಗ ಮತ್ತೊಂದು ಬಣವು ತಜ್ಞರ ಈ ಸಮಿತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸುತ್ತಿದೆ. ಶಿವನು ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದಾಗ, ಆ ಭಕ್ತನು- ‘ನಾನೂ ಬದುಕಬೇಕು; ಬೇರೆಯವರೂ ಬದುಕಬೇಕು’ ಎಂಬ ಆಶಯದ ವರವನ್ನು ಕೇಳಿಕೊಂಡಿದ್ದರೆ, ತಾನೂ ಬದುಕುತ್ತಿದ್ದ; ಅವನ ಶತ್ರುವೂ ಬದುಕುತ್ತಿದ್ದ. ಕಷ್ಟಪಟ್ಟು ತಪಸ್ಸನ್ನೇನೋ ಮಾಡಿದ. ಆ ತಪಸ್ಸಿನ ಒಳಗೆ ತಮಸ್ಸು (ಅಂಧಕಾರ) ಇತ್ತು. ರಾಗ–ದ್ವೇಷ, ಒಂದಷ್ಟು ಹುಂಬತನ, ಅಜ್ಞಾನ ಮನೆಮಾಡಿಕೊಂಡಿತ್ತು. ಇದರಿಂದಾಗಿ ಸರಿಯಾದ ವರವನ್ನು ಕೇಳಲು ಆಗಲಿಲ್ಲ.

ನಮ್ಮಲ್ಲಿ ಎಷ್ಟೋ ಜನರಿಗೆ ವಿಶಾಲ ಹೃದಯವೇ ಇಲ್ಲ. ಉತ್ತಮ ದೃಷ್ಟಿಯೂ ಇಲ್ಲ. ರಾಜಕಾರಣದ ಮೂಲ ಉದ್ದೇಶವೇ ಲೋಕಕಲ್ಯಾಣ. ಬುದ್ಧ, ಬಸವಣ್ಣ, ಅಶೋಕ ಚಕ್ರವರ್ತಿ, ಹರ್ಷವರ್ಧನ, ನಾಲ್ವಡಿ ಕೃಷ್ಣರಾಜೇಂದ್ರ, ಎಸ್.ನಿಜಲಿಂಗಪ್ಪ ಮೊದಲಾದವರು ಜನಕಲ್ಯಾಣವನ್ನು ಸಾಧಿಸಿದ್ದಾರೆ. ನಿರ್ಲಕ್ಷಿತರನ್ನೆಲ್ಲ ಒಟ್ಟುಗೂಡಿಸಿ, ಅವರ ಹಕ್ಕು-ಬಾಧ್ಯತೆಗಳಿಗೆ ಹೋರಾಡಿದ ಬಸವಣ್ಣನವರನ್ನು ಕೊನೆಗಳಿಗೆಯಲ್ಲಿ ಗಡಿಪಾರು ಶಿಕ್ಷೆಗೆ ಒಳಪಡಿಸಲಾಯಿತು. ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲಲಾಯಿತು. ಇಂದಿನ ರಾಜಕಾರಣದಲ್ಲಿ ಆದರ್ಶ ರಾಜ್ಯ ನಿರ್ಮಾಣವನ್ನು ಮೂಲೆಗೆ ಒತ್ತಲಾಗಿದ್ದು, ಸ್ವಜನಪಕ್ಷಪಾತ, ಪರಸ್ಪರ ಹಗೆತನ, ಲಂಚಗುಳಿತನ, ಕುಟುಂಬ ರಾಜಕಾರಣ, ಅತ್ಯಾಚಾರದ ಪ್ರಕರಣಗಳು ಸುದ್ದಿ ಆಗುತ್ತಿವೆ.

ಬಸವಣ್ಣನವರ ಭಕ್ತರಲ್ಲಿ ಸಂಯಮ ಇರಬೇಕಾಗುತ್ತದೆ; ಒಂದಷ್ಟು ವಿವೇಚನೆ ಮತ್ತು ಸಹನೆ ಸೇರಿಕೊಂಡರೆ ಒಳ್ಳೆಯದು.  ಸಿದ್ಧಾಂತಕ್ಕೆ ಅಪಚಾರವಾದಲ್ಲಿ ಗಣಾಚಾರ ಹಿಡಿದು ಹೋರಾಡಬೇಕು ಎನ್ನುತ್ತದೆ ಶರಣ ಸಿದ್ಧಾಂತ.

ವೈಚಾರಿಕತೆ ಇರುವೆಡೆ ವೈಯಕ್ತಿಕ ಭಿನ್ನಾಭಿಪ್ರಾಯಗಳು ಸಾಮಾನ್ಯ. ಬಸವತತ್ತ್ವವಾದಿಗಳಲ್ಲೂ ಭಿನ್ನಾಭಿಪ್ರಾಯ, ಒಂದಷ್ಟು ಪ್ರತಿಷ್ಠೆ. ಇಷ್ಟೆಲ್ಲ ಭಿನ್ನಾಭಿಪ್ರಾಯ ಮತ್ತು ಪ್ರತಿಷ್ಠೆಯ ನಡುವೆಯೂ ಲಿಂಗಾಯತ ಸಮಾವೇಶದಲ್ಲಿ ಭಾಗವಹಿಸುತ್ತ, ಸಂಘಟನೆಯನ್ನು ತೋರಿಸುತ್ತಿರುವುದು ಸ್ವಾಗತಾರ್ಹ. ಪ್ರಬುದ್ಧತೆ ಇಡೀ ಆಂದೋಲನವನ್ನು ನಿರ್ದೇಶಿಸಬೇಕಾಗುತ್ತದೆ. ಒಮ್ಮೊಮ್ಮೆ ಭಾವಾವೇಶದಿಂದ ವಿರೋಧಿಗಳನ್ನು ಟೀಕಿಸಲು ಮುಂದಾಗುತ್ತಾರೆ. ಭಾವಾವೇಶವು  ಮಾತುಗಳಿಗೆ ಮಾತ್ರ ಸಂಬಂಧಿಸಿರಲಾರದು. ಆವೇಶದ ಮುಂದಿನ ಹಂತವೇ ಆಕ್ರೋಶ. ಆಕ್ರೋಶವು ಕೆಲವರ ಕೈಗಳಿಗೆ ಚಪ್ಪಲಿ ಬರುವಂತೆ ಮಾಡಿದೆ. ಅದು ಹೀಗೇ ಮುಂದುವರಿದರೆ, ಕೆಲವರ ಕೈಗಳಿಗೆ ಶಸ್ತ್ರಾಸ್ತ್ರಗಳು ಬರಬಹುದು. ಅದು ಆಗ ವೈಚಾರಿಕ (ಕ್ರಾಂತಿ) ಸಂಘರ್ಷವಾಗಿ ಉಳಿಯಲಾರದು. ಹೋರಾಟವು ಇಂಥ ಸ್ಥಿತಿಯನ್ನು ತಲುಪದಂತೆ ನೋಡಿಕೊಳ್ಳಬೇಕಾಗುತ್ತದೆ.

ಲಿಂಗಾಯತ ಸ್ವತಂತ್ರ ಧರ್ಮದ ನೇತೃತ್ವ ವಹಿಸಿಕೊಂಡವರಲ್ಲಿ ಮಾತ್ರ ಭಾವಾವೇಶ ಇದೆಯೆಂದು ಹೇಳಲಾಗದು; ಕೆಲ ವೀರಶೈವ ಮುಖಂಡರಲ್ಲದೆ ಇನ್ನುಳಿದ ಮುಖಂಡರಲ್ಲೂ ಆವೇಶ. ಎರಡೂ ಕಡೆ ಆವೇಶವಿದ್ದು, ಆಕ್ರೋಶವಾಗಿ ಪರಿವರ್ತನೆ ಆಗದಿರಲಿ. ಪ್ರಜ್ಞಾವಂತಿಕೆಯ ಸಂಗಡ ಹೋರಾಟ ಸಾಗುವಂತಾಗಲಿ. ಭಾವಾವೇಶವು ವಿಚಾರಹೀನವಾಗಿದ್ದು, ವಿವೇಕದ ಕಡಿವಾಣ ಬೇಕಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಹೋರಾಟವು ಮುಂದುವರಿಯಬೇಕಾಗುತ್ತದೆ. ಮಾನವೀಯ ನೆಲೆಯ ಜನಕಲ್ಯಾಣವೇ ನಮ್ಮ ಎಲ್ಲ ಹೋರಾಟಗಳ ಸೆಲೆಯಾಗಿರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT