ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ

2016ರ ತೀರ್ಪನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್‌
Last Updated 9 ಜನವರಿ 2018, 20:02 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿನಿಮಾ ಆರಂಭಕ್ಕೆ ಮೊದಲು ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯ ಧ್ವನಿಮುದ್ರಿಕೆ ಪ್ರಸಾರ ಐಚ್ಛಿಕ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ. ಚಲನಚಿತ್ರ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಕಡ್ಡಾಯ ಎಂದು 2016ರ ನವೆಂಬರ್‌ 30ರಂದು ನೀಡಿದ್ದ ತೀರ್ಪನ್ನು ಈ ಮೂಲಕ ಮಾರ್ಪಡಿಸಿದೆ.

ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರವು 12 ಸದಸ್ಯರ ಅಂತರಸಚಿವಾಲಯ ಸಮಿತಿಯೊಂದನ್ನು ರಚಿಸಿದೆ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಧ್ವನಿಮುದ್ರಿಕೆ ಪ್ರಸಾರಕ್ಕೆ ಸಂಬಂಧಿಸಿ ಈ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯ ನ್ಯಾಯ
ಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

‘ಜನರು ತಮ್ಮ ದೇಶಪ್ರೇಮವನ್ನು ಸದಾ ಪ್ರದರ್ಶಿಸಬೇಕಾದ ಅಗತ್ಯ ಇಲ್ಲ. ರಾಷ್ಟ್ರಗೀತೆ ಹಾಕಿದಾಗ ವ್ಯಕ್ತಿ ಎದ್ದು ನಿಲ್ಲದಿದ್ದರೆ ಆತನಿಗೆ ಅಥವಾ ಅವಳಿಗೆ ದೇಶಪ್ರೇಮ ಕಡಿಮೆ ಇದೆ ಎಂದು ಹೇಳಲಾಗದು’ ಎಂದು ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಅದಾದ ಬಳಿಕ, ಈ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತ್ತು.

‘ದೇಶದಲ್ಲಿ ಅನೈತಿಕ ಪೊಲೀಸ್‌ಗಿರಿಯ ಅಗತ್ಯ ಇಲ್ಲ’ ಎಂದು ನಂತರದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಅಷ್ಟಲ್ಲದೆ, ‘ಚಿತ್ರಮಂದಿ
ರಕ್ಕೆ ಬರುವ ಜನರು ಟಿ–ಶರ್ಟ್‌ ಅಥವಾ ಶಾರ್ಟ್ಸ್‌ (ಚಡ್ಡಿ) ಧರಿಸಬಾರದು. ಇಂತಹ ದಿರಿಸಿನಿಂದ ರಾಷ್ಟ್ರಗೀತೆಗೆ ಅವಮಾನವಾಗುತ್ತದೆ ಎಂದೂ ಸರ್ಕಾರ ಹೇಳಬಹುದು’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು.

‘ಜನರು ಮನರಂಜನೆಗಾಗಿ ಚಿತ್ರಮಂದಿರಕ್ಕೆ ಬರುತ್ತಾರೆ. ಸಮಾಜಕ್ಕೆ ಮನರಂಜನೆ ಅಗತ್ಯವಿದೆ. ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರವಾಗುವಾಗ ಎದ್ದು ನಿಲ್ಲುವ ಮೂಲಕ ಜನರು ತಮ್ಮ ದೇಶಭಕ್ತಿಯನ್ನು ಸಾಬೀತು ಮಾಡಬೇಕಿಲ್ಲ. ಕೇಂದ್ರ ಸರ್ಕಾರವು ತನ್ನ ಕಾರ್ಯಸೂಚಿ
ಯನ್ನು ಜಾರಿಗೆ ತರಲು ನ್ಯಾಯಾಲಯವನ್ನು ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ’ ಎಂದು ಕಳೆದ ಅಕ್ಟೋಬರ್‌ 24ರಂದು ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ಸಿನಿಮಾ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆಯನ್ನು  ಕಡ್ಡಾಯ ಮಾಡಬೇಕು ಎಂದು ಕೋರಿ ಶ್ಯಾಮ ನಾರಾಯಣ್‌ ಚೌಕ್ಸೆ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಬಳಿಕ, ನವೆಂಬರ್‌ 30ರಂದು ‘ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ವ್ಯಕ್ತಿಯು ತಾಯ್ನಾಡಿನ ಬಗ್ಗೆ ಹೊಂದಿರುವ ಪ್ರೇಮವನ್ನು ತೋರಿಸುತ್ತದೆ’ ಎಂದು ಹೇಳಿತ್ತು.

ಸಮಿತಿಗೆ ಹೊಣೆ

* ರಾಷ್ಟ್ರಗೀತೆ ಹಾಡುವುದು ಮತ್ತು ನುಡಿಸುವುದಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನೂ ಸಮಿತಿ ಪರಿಶೀಲನೆಗೆ ಒಳಪಡಿಸಬೇಕು

* ಈ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದವರ ಅಭಿಪ್ರಾಯವನ್ನು ಸಮಿತಿ ಕೇಳಬೇಕು

* ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಧ್ವನಿಮುದ್ರಿಕತೆ ಪ್ರಸಾರ ಮಾಡುವಾಗ ಎದ್ದು ನಿಲ್ಲುವುದರಿಂದ ಅಂಗವಿಲಕಲರಿಗೆ ನೀಡಿದ ವಿನಾಯಿತಿ ಸಮಿತಿಯ ಅಂತಿಮ ವರದಿಯವರೆಗೆ ಮುಂದುವರಿಯಲಿದೆ

* ರಾಷ್ಟ್ರಗೌರವಕ್ಕೆ ಅವಮಾನ ತಡೆ ಕಾಯ್ದೆ 1971ಕ್ಕೆ ತಿದ್ದುಪಡಿ ಸೂಚಿಸಲು 12 ಸದಸ್ಯರ ಸಮಿತಿ ರಚಿಸಲಾಗಿದೆ

* ಸಮಿತಿಯು ಆರು ತಿಂಗಳಲ್ಲಿ ವರದಿ ನೀಡಲಿದೆ ಎಂದು ಕೋರ್ಟ್‌ಗೆ ಸರ್ಕಾರ ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT